ಉತ್ತರ ಕನ್ನಡ ಜಿ.ಪಂ ಮೀಸಲಾತಿ: ಕ್ಷೇತ್ರ ಹುಡುಕಾಟಕ್ಕೆ ಮುಂದಾದ ಮುಖಂಡರುಗಳು
ಕಾರವಾರ, ಜುಲೈ 3: ರಾಜ್ಯ ಸರ್ಕಾರ ಜಿಲ್ಲಾ ಪಂಚಾಯತಿ ಚುನಾವಣೆಗೆ ಮೀಸಲಾತಿ ಪ್ರಕಟಿಸಿದೆ. ಉತ್ತರ ಕನ್ನಡ ಜಿಲ್ಲೆಯ 40 ಕ್ಷೇತ್ರಗಳಿಗೆ ಮೀಸಲಾತಿ ಪ್ರಕಟವಾದ ಬೆನ್ನಲ್ಲೇ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಚುನಾವಣೆಯಲ್ಲಿ ಸ್ಪರ್ಧಿಸಲು ಹಲವು ನಾಯಕರು ಕ್ಷೇತ್ರ ಹುಡುಕಾಟದಲ್ಲಿ ನಿರತರಾಗಿದ್ದಾರೆ.
ಏಪ್ರಿಲ್ ಅಂತ್ಯದ ವೇಳೆಗೆ ಹಾಲಿ ಇದ್ದ ಜಿಲ್ಲಾ ಪಂಚಾಯತಿ ಸದಸ್ಯರ ಅಧಿಕಾರಾವಧಿ ಮುಕ್ತಾಯವಾಗಿತ್ತು. ಮೇ ಅಥವಾ ಜೂನ್ ವೇಳೆಗೆ ಚುನಾವಣೆ ಆಗಬಹುದು ಎನ್ನಲಾಗಿದ್ದರಿಂದ ಜಿಲ್ಲಾ ಪಂಚಾಯತಿ ಚುನಾವಣೆಯಲ್ಲಿ ಕಣಕ್ಕೆ ಇಳಿದು ಗೆಲುವು ಪಡೆಯಲು ವಿವಿಧ ಪಕ್ಷದ ನಾಯಕರು ಪ್ರಯತ್ನಕ್ಕೆ ಇಳಿದಿದ್ದರು. ಸರ್ಕಾರ ಪ್ರಕಟಿಸುವ ಮೀಸಲಾತಿಗಾಗಿ ಕಾಯುತ್ತಿದ್ದರು. ಆದರೆ ಕೊರೊನಾ ಹಿನ್ನಲೆಯಲ್ಲಿ ಚುನಾವಣೆ ಮುಂದೂಡಲಾಗಿತ್ತು.
ಆದರೆ ಇದೀಗ ಕ್ಷೇತ್ರಗಳ ಮೀಸಲಾತಿ ಪ್ರಕಟವಾಗಿದ್ದು, ಮೀಸಲಾತಿ ಪ್ರಕಾರ ಈ ಹಿಂದೆ ಆಯ್ಕೆಯಾಗಿದ್ದ ಬಹುತೇಕ ಸದಸ್ಯರು ತಮ್ಮ ಕ್ಷೇತ್ರದಲ್ಲಿ ಚುನಾವಣೆಗೆ ಸ್ವರ್ಧಿಸಲು ಅವಕಾಶ ವಂಚಿತರಾಗಿದ್ದಾರೆ. ಮೀಸಲಾತಿ ಅನ್ವಯ ಬೇರೆ ಕ್ಷೇತ್ರಗಳಿಗಾಗಿ ಹುಡುಕಾಟ ಶುರು ಮಾಡಿದ್ದಾರೆ.

ತೆರಗಾಂವ ಕ್ಷೇತ್ರದಲ್ಲಿ 'ಸಾಮಾನ್ಯ ಮಹಿಳೆ' ಮೀಸಲಾತಿ
ಕಳೆದ ಬಾರಿ ಜಿಲ್ಲಾ ಪಂಚಾಯತಿಯ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಎರಡು ಬಾರಿ ಸ್ಥಾಯಿ ಸಮಿತಿ ಅಧ್ಯಕ್ಷರುಗಳಾಗಿದ್ದವರಲ್ಲಿ ಶಿವಾನಂದ ಹೆಗಡೆ ಕಡತೋಕಾ ಹೊರತುಪಡಿಸಿ ಉಳಿದೆಲ್ಲರ ಕ್ಷೇತ್ರದಲ್ಲೂ ಮೀಸಲಾತಿ ಬದಲಾಗಿದೆ. ಈ ಹಿಂದೆ ಅಧ್ಯಕ್ಷರಾಗಿದ್ದ ಜಯಶ್ರೀ ಮೊಗೇರ ಪ್ರತಿನಿಧಿಸಿದ್ದ ಭಟ್ಕಳ ತಾಲೂಕಿನ ಹೆಬಳೆ ಕ್ಷೇತ್ರ ಈ ಬಾರಿ ಹಿಂದುಳಿದ ವರ್ಗ 'ಅ' ಮೀಸಲಾತಿಗೆ ನಿಗದಿಯಾಗಿದೆ. ಉಪಾಧ್ಯಕ್ಷರಾಗಿದ್ದ ಸಂತೋಷ್ ರೇಣಕೆ ಪ್ರತಿನಿಧಿಸಿದ್ದ ಹಳಿಯಾಳ ತಾಲೂಕಿನ ತೆರಗಾಂವ ಕ್ಷೇತ್ರದಲ್ಲಿ 'ಸಾಮಾನ್ಯ ಮಹಿಳೆ' ಮೀಸಲಾತಿ ನಿಗದಿಯಾಗಿದೆ.

ಪಾಳಾ ಕ್ಷೇತ್ರ ಹಿಂದುಳಿದ ವರ್ಗ ‘ಅ’ ಮಹಿಳೆಗೆ ಮೀಸಲು
ಇನ್ನು ಮೊದಲ ಬಾರಿ ಜಿಲ್ಲಾ ಪಂಚಾಯತಿಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಮೂವರಲ್ಲಿ ಇಬ್ಬರ ಕ್ಷೇತ್ರ ಬದಲಾಗಿದ್ದರೆ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಶಿವಾನಂದ ಹೆಗಡೆ ಕಡತೋಕಾ ಸ್ಪರ್ಧಿಸುತ್ತಿದ್ದ ಹೊನ್ನಾವರ ತಾಲೂಕಿನ ಸಾಲಕೋಡು ಕ್ಷೇತ್ರ ಮಾತ್ರ ಸಾಮಾನ್ಯ ಮೀಸಲಾತಿ ನಿಗದಿಯಾಗುವ ಮೂಲಕ ಅವರಿಗೆ ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಸಿಕ್ಕಂತಾಗಿದೆ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಎಲ್.ಟಿ. ಪಾಟೀಲ್ ಸ್ಪರ್ಧಿಸಿದ್ದ ಮುಂಡಗೋಡ ತಾಲೂಕಿನ ಚಿಗಳ್ಳಿ ಕ್ಷೇತ್ರ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಜಯಶ್ರೀ ಹಿರೇಳ್ಳಿ ಸ್ಪರ್ಧಿಸಿದ್ದ ಪಾಳಾ ಕ್ಷೇತ್ರ ಹಿಂದುಳಿದ ವರ್ಗ 'ಅ' ಮಹಿಳೆಗೆ ಮೀಸಲಾಗಿದೆ. ಹೀಗಾಗಿ ಈ ಇಬ್ಬರಿಗೂ ಚುನಾವಣೆಯಲ್ಲಿ ಕ್ಷೇತ್ರದಿಂದ ನಿಲ್ಲಲು ಅವಕಾಶ ತಪ್ಪಿದಂತಾಗಿದೆ.

ಮಾಜಿ ಉಪಾಧ್ಯಕ್ಷ ಉದಯ ನಾಯ್ಕ ಮತ್ತೆ ಕಣಕ್ಕೆ
ಎರಡನೇ ಅವಧಿಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಮೂವರು ಈ ಬಾರಿ ತಮ್ಮ ಕ್ಷೇತ್ರದಿಂದ ಚುನಾವಣೆಗೆ ನಿಲ್ಲದಂತಾಗಿದೆ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಚೈತ್ರಾ ಕೊಠಾರಕರ್ ಸ್ಪರ್ಧಿಸುತ್ತಿದ್ದ ಚೆಂಡಿಯಾ ಕ್ಷೇತ್ರ ಅನುಸೂಚಿತ ಜಾತಿಗೆ ಮೀಸಲಾಗಿದೆ. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾಗಿದ್ದ ಬಸವರಾಜ್ ದೊಡ್ಮನಿ ಸ್ಪರ್ಧಿಸಿದ್ದ ಶಿರಸಿ ತಾಲೂಕಿನ ಬದನಗೋಡ ಕ್ಷೇತ್ರ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಉಷಾ ನಾಯ್ಕ ಸ್ಪರ್ಧಿಸಿದ್ದ ಅಂಕೋಲಾ ತಾಲೂಕಿನ ಅವರ್ಸಾ ಕ್ಷೇತ್ರ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಇಲ್ಲಿ ಅವರ ಪತಿ, ಜಿ.ಪಂ ಮಾಜಿ ಉಪಾಧ್ಯಕ್ಷ ಉದಯ ನಾಯ್ಕ ಮತ್ತೆ ಕಣಕ್ಕೆ ಇಳಿಯಲಿದ್ದಾರೆ ಎನ್ನಲಾಗಿದೆ.
ಸದ್ಯ ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಕ್ಷೇತ್ರಗಳಲ್ಲಿ ಯಾರು ಪ್ರಮುಖ ಪಕ್ಷದಿಂದ ಅಭ್ಯರ್ಥಿಯಾಗಲಿದ್ದಾರೆ ಎಂಬ ಕುತೂಹಲ ಮೂಡಿದ್ದು, ಇನ್ನೊಂದೆಡೆ ಆಕಾಂಕ್ಷಿಗಳು ಟಿಕೆಟ್‌ಗಾಗಿ ತೆರೆಮರೆಯ ಪ್ರಯತ್ನ ಪ್ರಾರಂಭಿಸಿದ್ದಾರೆ. ಮೀಸಲಾತಿ ಪ್ರಕಟದ ಬಗ್ಗೆ ಆಕ್ಷೇಪಣೆ ಸಲ್ಲಿಸುವುದಕ್ಕೆ ಏಳು ದಿನಗಳ ಕಾಲ ಅವಕಾಶ ನೀಡಿದ್ದು, ಅಂತಿಮವಾಗಿ ಯಾವೆಲ್ಲ ಕ್ಷೇತ್ರದಲ್ಲಿ ಮೀಸಲಾತಿ ಬದಲಾಗಲಿದೆ ಎನ್ನುವುದನ್ನು ಕಾದು ನೊಡಬೇಕಾಗಿದೆ.
ಡಿಸೆಂಬರ್ ನಂತರವೇ ಚುನಾವಣೆ ಸಾಧ್ಯತೆ!
ಜಿಲ್ಲಾ ಪಂಚಾಯತಿ ಹಾಗೂ ತಾಲೂಕು ಪಂಚಾಯತಿ ಮೀಸಲಾತಿ ಪ್ರಕಟವಾದರೂ ಚುನಾವಣೆ ಮಾತ್ರ ಡಿಸೆಂಬರ್ ನಂತರವೇ ನಡೆಯಲಿದೆ ಎನ್ನಲಾಗಿದೆ. ಅವಧಿ ಮುಗಿದ ಜಿಲ್ಲಾ ಪಂಚಾಯತಿ ಹಾಗೂ ತಾಲೂಕು ಪಂಚಾಯತಿಗಳಿಗೆ ಈಗಾಗಲೇ ಆಡಳಿತಾಧಿಕಾರಿಯನ್ನು ನೇಮಿಸಲಾಗಿದೆ. ಇನ್ನು ಚುನಾವಣೆಯಲ್ಲಿ ರಾಜ್ಯದ 3.5 ಕೋಟಿ ಜನ ಭಾಗವಹಿಸುವ ಹಿನ್ನಲೆಯಲ್ಲಿ ಕೊರೊನಾ ಸಾಂಕ್ರಾಮಿಕ ರೋಗದ ನಡುವೆ ಚುನಾವಣೆ ಮಾಡಿದರೆ ಅಪಾಯಕ್ಕೆ ಆಹ್ವಾನ ನೀಡಿದಂತಾಗಲಿದೆ.
ಈ ನಿಟ್ಟಿನಲ್ಲಿ ಡಿಸೆಂಬರ್‌ವರೆಗೆ ಚುನಾವಣೆ ಮಾಡಲು ಸರ್ಕಾರ ಸಿದ್ಧವಾಗಿಲ್ಲ ಎನ್ನಲಾಗಿದ್ದು, ಈ ಬಗ್ಗೆ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಸಹ ಸ್ಪಷ್ಟಪಡಿಸಿದ್ದರು. ಡಿಸೆಂಬರ್ ನಂತರ ಕೊರೊನಾ ಸೋಂಕು ಕಡಿಮೆಯಾದರೆ ಚುನಾವಣೆ ನಡೆಸಲು ಸರ್ಕಾರ ನಿರ್ಧರಿಸಿದೆ ಎನ್ನಲಾಗಿದ್ದು, ಮೀಸಲಾತಿ ಪ್ರಕಟವಾದರೂ ಆಕಾಂಕ್ಷಿಗಳು ಡಿಸೆಂಬರ್‌ವರೆಗೆ ಕಾಯಲೇ ಬೇಕಾಗಿದೆ.












Click it and Unblock the Notifications