ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉತ್ತರ ಕನ್ನಡ: ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಪ್ರಧಾನಿಗೆ ರಕ್ತದಲ್ಲಿ ಪತ್ರ

By ಉತ್ತರ ಕನ್ನಡ ಪ್ರತಿನಿಧಿ
|
Google Oneindia Kannada News

ಉತ್ತರ ಕನ್ನಡ, ಆಗಸ್ಟ್‌, 02: ಉತ್ತರಕನ್ನಡ ಜಿಲ್ಲೆಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುವಂತೆ ಕೂಗು ಜೋರಾಗತೊಡಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಪ್ರತಿಭಟನೆ ನಡೆಸಿ ಇದೀಗ ಪ್ರಧಾನಿ ನರೇಂದ್ರ ಮೋದಿಗೂ ರಕ್ತದಿಂದ ಪತ್ರ ಬರೆಯುವ ಮೂಲಕ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡುವಂತೆ ಆಗ್ರಹಿಸಿದ್ದಾರೆ.

ಆಂಬುಲೆನ್ಸ್ ಭೀಕರ ಅಪಘಾತದ ಬಳಿಕ ಉತ್ತರಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆಗಾಗಿ ಕೂಗು ಜೋರಾಗತೊಡಗಿದೆ. ಟ್ವಿಟ್ಟರ್ ಅಭಿಯಾನ, ಉಪವಾಸ ಸತ್ಯಾಗ್ರಹ, ಅಣಕು ಪ್ರತಿಭಟನೆ ಹೀಗೆ ಹತ್ತಾರು ರೀತಿಯಲ್ಲಿ ಪಕ್ಷಾತೀತವಾಗಿ ಹೋರಾಟ ನಡೆಸಿ ಆಸ್ಪತ್ರೆಗಾಗಿ ಆಗ್ರಹಿಸಿದ್ದರು.

ನಿತ್ಯವೂ ಭಿನ್ನವಾಗಿ ಹೋರಾಟವನ್ನು ನಡೆಸಿ ಜಿಲ್ಲೆಯ ಮೂಲಭೂತ ಸೌಲಭ್ಯಕ್ಕಾಗಿ ಆಗ್ರಹಿಸಲಾಗುತ್ತಿದೆ. ಆದರೆ ಜಿಲ್ಲೆಯ ಜನಪ್ರತಿನಿಧಿಗಳು ಹೋರಾಟದ ಬೆನ್ನಲ್ಲೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಬಗ್ಗೆ ತಮ್ಮದೆ ಆದ ಹೇಳಿಕೆ ಕೊಡುತ್ತಿದ್ದಾರೆ. ಜನ ಸಾಮಾನ್ಯರೆದುರು ಪೋಸ್ ಕೊಟ್ಟಿರುವುದನ್ನು ಬಿಟ್ಟರೆ ಈವರೆಗೂ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡುವ ಬಗ್ಗೆ ಅಧಿಕೃತವಾಗಿ ಎಲ್ಲಿಯೂ ಹೇಳಿಲ್ಲ ಎಂದು ಆಕ್ರೋಶಗಳು ಭುಗಿಲೆದ್ದಿವೆ.

ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡುವ ಬಗ್ಗೆ ಅಧಿಕೃತವಾಗಿ ಮುಖ್ಯಮಂತ್ರಿಗಳು ಹೇಳಿಕೆ ನೀಡಿ, ಮಂಜೂರು ಮಾಡುವವರೆಗೂ ಹೋರಾಟ ನಡೆಸಲು ಜಿಲ್ಲೆಯ ಜನರು ತಿರ್ಮಾನಿಸಿದ್ದಾರೆ. ಕಾರವಾರದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ವಿದ್ಯಾರ್ಥಿಗಳು, ವೃದ್ಧರು, ಮಹಿಳೆಯರು ರಕ್ತದಿಂದ ಪ್ರಧಾನಿಗೆ ಪತ್ರ ಬರೆದು ಉತ್ತರಕನ್ನಡಕ್ಕೆ ಸುಸಜ್ಜಿತ ಆಸ್ಪತ್ರೆ ನಿರ್ಮಿಸಿ ಕೊಡುವಂತೆ ಆಗ್ರಹಿಸಿದ್ದಾರೆ.

 ಪ್ರಧಾನಿಗೆ ರಕ್ತದಲ್ಲಿ ಪತ್ರ ಬರೆದ ಗರ್ಭಿಣಿ

ಪ್ರಧಾನಿಗೆ ರಕ್ತದಲ್ಲಿ ಪತ್ರ ಬರೆದ ಗರ್ಭಿಣಿ

ವಿಶೇಷ ಅಂದರೆ 85 ವರ್ಷದ ವೃದ್ಧೆ ಅಜ್ಮತ್ ಹಾಗೂ 8 ತಿಂಗಳ ಗರ್ಭಿಣಿ ಪ್ರಶಾಂತಿ ನಾಯ್ಕ ಎಂಬುವವರು ಸ್ವಯಂ ಪ್ರೇರಿತವಾಗಿ ಬಂದು ಮೊದಲು ರಕ್ತದಲ್ಲಿ ಪತ್ರ ಬರೆಯುವ ಮೂಲಕ ಚಳವಳಿ ಆರಂಭಿಸಿದ್ದರು. ಈ ವೇಳೆ ಮಾತನಾಡಿದ ಗರ್ಭಿಣಿ ಪ್ರಶಾಂತಿ ನಾಯ್ಕ, ಕಳೆದ ಕೆಲ ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಬೇಕಿದ್ದ ನನ್ನನ್ನು ಮಂಗಳೂರಿಗೆ ಕಳುಹಿಸಿದ್ದರು. ಇಂತಹ ಪರಿಸ್ಥಿತಿ ಯಾರಿಗೂ ಬರದಿರಲಿ ಎಂದು ಅಸಮಾಧಾನ ಹೊರಹಾಕಿದರು. ತುಂಬು ಗರ್ಭಿಣಿಯಾದರೂ ಸ್ವಯಂ ಪ್ರೇರಣೆಯಿಂದ ಬಂದು ರಕ್ತದಲ್ಲಿ ಪತ್ರ ಬರೆದಿದ್ದೇನೆ. ನಮಗೆ ಕೂಡಲೇ ಪ್ರಧಾನಿ ನರೇಂದ್ರ ಮೋದಿ ಅವರು ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

 ಪ್ರಧಾನಿ ಮೋದಿಗೆ ರಕ್ತದಲ್ಲಿ ಪತ್ರ

ಪ್ರಧಾನಿ ಮೋದಿಗೆ ರಕ್ತದಲ್ಲಿ ಪತ್ರ

ರಕ್ತದ ಮೂಲಕ ಪತ್ರ ಬರೆಯುವ ಚಳವಳಿಯಲ್ಲಿ 500ಕ್ಕೂ ಹೆಚ್ಚು ಮಂದಿ ತಮ್ಮ ರಕ್ತವನ್ನು ತೆಗೆದು ಪೋಸ್ಟ್ ಕಾರ್ಡ್ ಮೇಲೆ, ಉತ್ತರಕನ್ನಡ ಜಿಲ್ಲೆಗೆ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಸುಸಜ್ಜಿತ ಆಸ್ಪತ್ರೆ ಇಲ್ಲದ ಕಾರಣ ರಸ್ತೆಯಲ್ಲಿಯೇ ಅದೆಷ್ಟೊ ಮಂದಿ ಪ್ರಾಣ ಬಿಡುತ್ತಿದ್ದಾರೆ. ಇಲ್ಲಿ ದೇಶದ ಪ್ರತಿಷ್ಠಿತ ಹತ್ತಾರು ಯೋಜನೆಗಳಿದ್ದರೂ ನಮಗೆ ಒಂದು ಸುಸಜ್ಜಿತ ಆಸ್ಪತ್ರೆ ಇಲ್ಲದಂತಾಗಿದೆ. ಜನರು ತುರ್ತು ಸಂದರ್ಭದಲ್ಲಿ ಮಂಗಳೂರು, ಗೋವಾ, ಹುಬ್ಬಳ್ಳಿ, ಶಿವಮೊಗ್ಗ ಆಸ್ಪತ್ರೆಗಳಿಗೆ ಹೋಗಬೇಕು. ಹೀಗೆ ಬೇರೆ ಜಿಲ್ಲೆಗೆ ಕೊಂಡೊಯ್ಯುವಾಗ ದಾರಿ ಮಧ್ಯೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆಗಷ್ಟ್ 15ರ ಸ್ವಾತಂತ್ರ್ಯೋತ್ಸವದ ಒಳಗಾಗಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣದ ಘೋಷಣೆ ಮಾಡಬೇಕು. ಇಲ್ಲದಿದ್ದರೆ ಮತದಾನವನ್ನು ಜಿಲ್ಲೆಯಾದ್ಯಂತ ಬಹಿಷ್ಕರಿಸುವುದಾಗಿ ಹೋರಾಟಗಾರ ರಾಘು ನಾಯ್ಕ ಎಚ್ಚರಿಸಿದ್ದಾರೆ.

 ಆಸ್ಪತ್ರೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗ

ಆಸ್ಪತ್ರೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗ

ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಪ್ರತಿಕ್ರಿಯಿಸಿ ಉತ್ತರಕನ್ನಡ ಜಿಲ್ಲೆಯ ಜನತೆಯ ಬೇಡಿಕೆಯಾಗಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕುಮಟಾದಲ್ಲಿ ಜಾಗ ಗುರುತಿಸಲಾಗಿದೆ. ಅದು ಖಾಸಗಿ ಸಹಭಾಗಿತ್ವದಲ್ಲಿ ನಡೆಯಲಿದೆ. ಈ ಬಗ್ಗೆ ಮುಖ್ಯಮಂತ್ರಿಗಳೇ ಜಿಲ್ಲೆಯ ಭೇಟಿಯ ವೇಳೆ ಅಂತಿಮ ತೀರ್ಮಾನ ಪ್ರಕಟಿಸಲಿದ್ದಾರೆ ಎಂದು ತಿಳಿಸಿದರು.

ಕುಮಟಾ ಆಸುಪಾಸಿನಲ್ಲಿ ಸುಮಾರು 17 ಹೆಕ್ಟೇರ್‌ ಜಾಗವಿದ್ದು, ಇದರ ಜೊತೆಗೆ ಅರಣ್ಯ ಪ್ರದೇಶದ ಜಾಗವನ್ನೂ ಬಳಸಿಕೊಂಡು ಅದನ್ನು 25 ಹೆಕ್ಟೇರ್‌ಗೆ ವಿಸ್ತರಿಸಿಕೊಳ್ಳಬಹುದು. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕಾಗಿ ಬಹುದೊಡ್ಡ ಖಾಸಗಿ ಆಸ್ಪತ್ರೆಗಳ ಜೊತೆ ಮಾತುಕತೆ ನಡೆದಿದೆ. ಕೆಲವೇ ದಿನಗಳಲ್ಲಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಈಗಾಗಲೇ ಟ್ರಾಮಾ- ಕ್ರಿಟಿಕಲ್ ಕೇರ್ ಸೆಂಟರ್ ಚಾಮರಾಜನಗರ ಮತ್ತು ಕಾರವಾರಕ್ಕೆ ಮಂಜೂರಾಗಿದೆ. ಅಂಕೋಲಾದ 16.5 ಎಕರೆ ಪ್ರದೇಶದಲ್ಲಿ ಕ್ರಿಟಿಕಲ್ ಕೇರ್ ಸೆಂಟರ್ ಆಗಲಿದೆ. ಈ ಎಲ್ಲವನ್ನೂ ಮುಖ್ಯಮಂತ್ರಿಗಳ ಜೊತೆ ತೀರ್ಮಾನ ಮಾಡಿ ಅಂತಿಮ ಮಾಡುತ್ತೇವೆ ಎಂದರು. ವಾರ ಅಥವಾ ಹತ್ತು ದಿನಗಳಲ್ಲಿ ಆರೋಗ್ಯ ಸಚಿವರು ಜಿಲ್ಲೆಗೆ ಭೇಟಿ ನೀಡಲಿದ್ದಾರೆ.

 ವೈದ್ಯರ ನೇಮಕ ಪ್ರಕ್ರಿಯೆಯ ಬಗ್ಗೆ ಮಾಹಿತಿ

ವೈದ್ಯರ ನೇಮಕ ಪ್ರಕ್ರಿಯೆಯ ಬಗ್ಗೆ ಮಾಹಿತಿ

ಆಗಸ್ಟ್ 15ರ ಬಳಿಕ ಮುಖ್ಯಮಂತ್ರಿಗಳು ಜಿಲ್ಲೆಯ ಕರಾವಳಿ 3 ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ಕೊಡಲಿದ್ದಾರೆ. ಆ ಸಂದರ್ಭದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬಗ್ಗೆ ಅಂತಿಮ ತೀರ್ಮಾನ ಪ್ರಕಟಿಸಲಿದ್ದಾರೆ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆಗಲು ಇನ್ನೂ ಮೂರ್ನಾಲ್ಕು ವರ್ಷಗಳು ಬೇಕಾಗುತ್ತದೆ. ಅದಕ್ಕೂ ಪೂರ್ವ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ 160 ಕೋಟಿ ರೂಪಾಯಿ ವೆಚ್ಚದ ಯೋಜನೆಯಲ್ಲಿ ಟ್ರಾಮಾ ಸೆಂಟರ್ ಹಾಗೂ ತಜ್ಞ ವೈದ್ಯರ ನೇಮಕ ಪ್ರಕ್ರಿಯೆ ತುರ್ತಾಗಿ ನಡೆಯಲಿದೆ ಎಂದು ತಿಳಿಸಿದರು.

English summary
The clamor to build multispecialty hospital in Uttara Kannada district is getting louder. Protesting in state capital Bangalore as well, they have written letter in blood to Prime Minister Narendra Modi demanding construction of multispecialty hospital, Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X