• search
  • Live TV
ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಾರವಾರದಲ್ಲಿ "ಟ್ಯುಪೊಲೆವ್' ಮ್ಯೂಸಿಯಂ; ಒಪ್ಪಂದಕ್ಕೆ ಸಹಿ

By ಕಾರವಾರ ಪ್ರತಿನಿಧಿ
|

ಕಾರವಾರ, ಮಾರ್ಚ್ 03: ನೌಕಾಪಡೆಯ ಕಾರ್ಯಾಚರಣೆಗಳಿಂದ ನಿವೃತ್ತಿ (ಡಿ- ಕಮಿಷನ್) ಹೊಂದಿರುವ ಟ್ಯುಪೊಲೆವ್- 142-ಎಂ ಯುದ್ಧ ವಿಮಾನದ ಬಿಡಿ ಭಾಗಗಳನ್ನು ನಗರಕ್ಕೆ ತಂದು, ಜೋಡಿಸಿ ಕೊಡುವ ಒಪ್ಪಂದ ಪತ್ರಕ್ಕೆ ನೌಕಾಪಡೆಯ ಕರ್ನಾಟಕ ನೌಕಾ ಪ್ರದೇಶದ ಧ್ವಜ ಅಧಿಕಾರಿ (ಕರ್ನಾಟಕ ನೇವ್ ಏರಿಯಾ ಫ್ಲ್ಯಾಗ್ ಆಫೀಸರ್ (ಎಫ್‌ಒಕೆ) ರಿಯರ್ ಅಡ್ಮಿರಲ್ ಮಹೇಶ್‌ಸಿಂಗ್ ಹಾಗೂ ಜಿಲ್ಲಾಧಿಕಾರಿ ಡಾ.ಕೆ.ಹರೀಶ ಕುಮಾರ್ ಅವರು ಮಂಗಳವಾರ ಸಹಿ ಮಾಡಿ, ವಿನಿಮಯ ಮಾಡಿಕೊಂಡರು.

ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ""ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರದ ಚಾಪೆಲ್ ಯುದ್ಧನೌಕೆ ವಸ್ತು ಸಂಗ್ರಹಾಲಯದ ಬಳಿ ಟ್ಯುಪೊಲೆವ್ ವಸ್ತು ಸಂಗ್ರಹಾಲಯವನ್ನು ನಿರ್ಮಾಣ ಮಾಡಲಾಗುವುದು. ಚೆನ್ನೈನಿಂದ ವಿಮಾನದ ಬಿಡಿ ಭಾಗಗಳನ್ನು ನಗರಕ್ಕೆ ತಂದು, ನೌಕಾಪಡೆಯಿಂದಲೇ ಜೋಡಿಸಿಕೊಡುವ ಕಾರ್ಯ ಮಾಡಲಾಗುತ್ತದೆ'' ಎಂದರು.

ಕಾರವಾರದ ಕಪ್ಪು ಮರಳಿನ ಕಡಲತೀರಕ್ಕೆ ಸೇತುವೆ ಭಾಗ್ಯ ಯಾವಾಗ?

"ಬಳಿಕ ಅದರಲ್ಲಿ ನೌಕಾಪಡೆಯ ಕಾರ್ಯಾಚರಣೆಗೆ ಸಂಬಂಧಿಸಿದ ವಿವಿಧ ಮಾದರಿಗಳನ್ನು ಇಟ್ಟು ವಸ್ತು ಸಂಗ್ರಹಾಲಯವನ್ನಾಗಿ ರೂಪಿಸಲಾಗುವುದು. ಈ ವರ್ಷದ ಡಿಸೆಂಬರ್‌ನಲ್ಲಿ ನಡೆಯಲಿರುವ ನೌಕಾ ದಿನಾಚರಣೆಯ ಸಂದರ್ಭದಲ್ಲಿ ಕೇಂದ್ರದ ಸಚಿವರನ್ನು, ನೌಕಾನೆಲೆಯ ಹಿರಿಯ ಅಧಿಕಾರಿಗಳನ್ನು ಕರೆಯಿಸಿ, ಉದ್ಘಾಟಿಸಲು ಯೋಚಿಸಿದ್ದೇವೆ' ಎಂದು ತಿಳಿಸಿದರು.

ಈ ಯುದ್ಧ ವಿಮಾನವನ್ನು ನಗರಕ್ಕೆ ತಂದು ಪ್ರತಿಷ್ಠಾಪಿಸಬೇಕೆಂಬ ಉದ್ದೇಶದಿಂದ ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ನೌಕಾಪಡೆಯೊಂದಿಗೆ ಸಂಪರ್ಕದಲ್ಲಿದ್ದೆವು. ಟ್ಯುಪೊಲೆವ್ ಗೆ ಸಂಬಂಧಿಸಿದ ನಮ್ಮ ರಾಜ್ಯ ಸರ್ಕಾರದ ಬೇಡಿಕೆಗಳೆಲ್ಲವನ್ನೂ ನೌಕಾಪಡೆ ಇದೀಗ ಪುರಸ್ಕರಿಸಿ, ಒಪ್ಪಂದ ಮಾಡಿಕೊಂಡಿದೆ ಎಂದು ಕಾರವಾರ ಜಿಲ್ಲಾಧಿಕಾರಿ ಡಾ. ಕೆ.ಹರೀಶ್ ಕುಮಾರ ಹೇಳಿದರು.

ಪ್ರತ್ಯೇಕ ನೀರು ಪೂರೈಕೆ ಯೋಜನೆಗೆ ಬೇಡಿಕೆ ಇಟ್ಟ 'ಸೀಬರ್ಡ್’

ಈ ಹಿಂದೆ ಮಾಡಿಕೊಂಡಿದ್ದ ಒಪ್ಪಂದದಂತೆ, ಯುದ್ಧ ವಿಮಾನಕ್ಕೆ ಸಂಬಂಧಿಸಿದ ರಾಜ್ಯ ಸರ್ಕಾರ ಶೇ. 50 ರಷ್ಟು ಹಾಗೂ ನೌಕಾಪಡೆ ಶೇ. 50 ರಷ್ಟು ಪಾಲುದಾರಿಕೆಯನ್ನು ವಹಿಸಿಕೊಳ್ಳಬೇಕು ಎಂದಾಗಿತ್ತು. ಅಂದು ಯೋಜನೆ ರೂಪಿಸಿದ್ದಾಗ ವಿಮಾನವನ್ನು ಇಲ್ಲಿಗೆ ತರಲು 4 ಕೋಟಿ ಖರ್ಚು ಬರಬಹುದು ಎಂಬ ನಿರೀಕ್ಷೆ ಇತ್ತು.

""ಅದರಂತೆ ರಾಜ್ಯ ಸರ್ಕಾರದ 2 ಕೋಟಿ ರೂ. ಹಣ ಕೂಡ ಇತ್ತೀಚಿಗೆ ಬಿಡುಗಡೆಯಾಗಿತ್ತು. ಆದರೆ, ಈಗಿನ ಪರಿಸ್ಥಿತಿಗೆ ಆ ವೆಚ್ಚ ಸುಮಾರು 10 ಕೋಟಿ ರೂ. ಗೆ ಹೆಚ್ಚಳವಾಗಿದೆ. ಹೀಗಾಗಿ ರಾಜ್ಯ ಸರ್ಕಾರ 5 ಕೋಟಿ ಕೊಡಬೇಕಾಯಿತು. ನೌಕಾಪಡೆಯು ಕೂಡ ಹಣ ನೀಡಲು ರಕ್ಷಣಾ ಪಡೆಯ ಪ್ರಧಾನ ಕಚೇರಿಯಿಂದಲೇ (ಡಿಫೆನ್ಸ್ ಹೆಡ್‌ಕ್ವಾರ್ಟರ್) ಅನುಮತಿ ಪಡೆಯಬೇಕಾದ್ದರಿಂದ ಈ ಪ್ರಕ್ರಿಯೆ ವಿಳಂಬವಾಗಿತ್ತು'' ಎಂದು ವಿವರಿಸಿದರು.

ನೌಕಾಪಡೆಯ ಕರ್ನಾಟಕ ನೌಕಾ ಪ್ರದೇಶದ ಧ್ವಜ ಅಧಿಕಾರಿ (ಎಫ್‌ಒಕೆ) ರಿಯರ್ ಅಡ್ಮಿರಲ್ ಮಹೇಶ್‌ಸಿಂಗ್ ಮಾತನಾಡಿ, ಟ್ಯುಪೊಲೆವ್ ಯುದ್ಧ ವಿಮಾನ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಲು ಮುಂದಾಗಿರುವುದು ವಿಶೇಷವಾಗಿದ್ದು, ಇದು ಟರ್ಬೊಪ್ರಾಪ್ ಹೊಂದಿರುವ ಜಗತ್ತಿನ ಅತಿದೊಡ್ಡ ಯುದ್ಧವಿಮಾನ ಇದಾಗಿದೆ.

ಒಮ್ಮೆ ಇದು ಇಲ್ಲಿ ಸ್ಥಾಪನೆಗೊಂಡ ಬಳಿಕ ಕಾರವಾರಕ್ಕೆ ಒಂದು ಐತಿಹಾಸಿಕ ಗುರುತು ನೀಡಲಿದೆ. ಇದನ್ನು ನೌಕಾಪಡೆಯಿಂದ ವಿಶಾಖಪಟ್ಟಣಂ, ಕೊಲ್ಕತ್ತಕ್ಕೆ ಉಡುಗೊರೆಯಾಗಿ ನೀಡಲಾಗಿದ್ದು, ಕಾರವಾರ ಇದನ್ನು ಪಡೆಯುತ್ತಿರುವ ಮೂರನೇ ನಗರವಾಗಿದೆ. ಕಾರವಾರದ ಜನರ ಸಹಕಾರದಿಂದಾಗಿ ಇದು ಸಾಧ್ಯವಾಗಿದೆ. ಕಾರವಾರದ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡಲು ನೌಕಾಪಡೆಯೂ ಬದ್ಧವಾಗಿದೆ ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೇರ್, ನೌಕಾನೆಲೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅಜಯ್ ಕಪೂರ್ ಹಾಗೂ ನೌಕಾಪಡೆಯ ಇತರ ಅಧಿಕಾರಿಗಳು ಇದ್ದರು.

English summary
The Tupolev Museum will be built near the Chapel Battleship Museum on Rabindranath Tagore beach.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X