ಕುಮಟಾ-ಶಿರಸಿ ಹೆದ್ದಾರಿ ಬಂದ್, ಪರ್ಯಾಯ ರಸ್ತೆಗಳ ಮಾಹಿತಿ
ಕಾರವಾರ, ನವೆಂಬರ್ 28: ಉತ್ತರ ಕನ್ನಡ ಜಿಲ್ಲಾ ಪ್ರವಾಸ ಕೈಗೊಳ್ಳುವ ಜನರಿಗೆ ಮಹತ್ವದ ಮಾಹಿತಿಯೊಂದಿದೆ. ಕುಮಟಾ-ಶಿರಸಿ ರಸ್ತೆಯಲ್ಲಿ ಉನ್ನತೀಕರಣ ಕಾಮಗಾರಿ ಸಲುವಾಗಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುತ್ತದೆ. ಆದ್ದರಿಂದ ಪರ್ಯಾಯ ಮಾರ್ಗವನ್ನು ಬಳಕೆ ಮಾಡುವಂತೆ ಉತ್ತರ ಕನ್ನಡ ಜಿಲ್ಲಾ ಪೊಲೀಸರು ಮಾಹಿತಿ ನೀಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಾಷ್ಟ್ರೀಯ ಹೆದ್ದಾರಿ-766 ಇ ಕುಮಟಾ- ಶಿರಸಿ ರಸ್ತೆಯಲ್ಲಿ ಉನ್ನತೀಕರಣ ಕಾಮಗಾರಿಯನ್ನು ದಿನಾಂಕ 02-12-2024ರಿಂದ ಪ್ರಾರಂಭಿಸಲಿದೆ. ಸದರಿ ಕಾಮಗಾರಿಯು ನಿಗದಿತ ಸಮಯದೊಳಗೆ ಮುಕ್ತಾಯಗೊಳಸಬೇಕಾಗಿರುವುದರಿಂದ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಬಂದ್ ಮಾಡಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

ವಾಹನ ಸಂಚಾರ ಬಂದ್ ಆಗಿರುವ ಅವಧಿಯಲ್ಲಿ ಬದಲಿ ಮಾರ್ಗದಲ್ಲಿ ಸಂಚಾರ ನಡೆಸಬೇಕಿದೆ. ಬದಲಿ ಮಾರ್ಗದ ಮಾಹಿತಿಯನ್ನು ಪೊಲೀಸರು ನೀಡಿದ್ದು, ವಾಹನ ಸವಾರರು ಸಹಕಾರ ನೀಡಬೇಕು ಎಂದು ಮನವಿ ಮಾಡಲಾಗಿದೆ.
ಬದಲಿ ಮಾರ್ಗಗಳು
* ಕುಮಟಾ-ಶಿರಸಿ ಮೂಲಕ ಸಿದ್ದಾಪುರ ರಾಷ್ಟ್ರೀಯ ಹೆದ್ದಾರಿ 766-ಇ ಲಘು ವಾಹನಗಳು ಸಂಚರಿಸಬಹುದು.
* ಅಂಕೋಲಾ-ಶಿರಸಿ ಮೂಲಕ ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿ 63 ಮತ್ತು ರಾಜ್ಯ ಹೆದ್ದಾರಿ-93 ಮಾರ್ಗವಾಗಿ ಎಲ್ಲಾ ವಿಧದ ವಾಹನಗಳು ಸಂಚರಿಸಬಹುದು.
* ಮಂಗಳೂರು-ಹೊನ್ನಾವರ-ಶಿರಸಿ ಮೂಲಕ ಸಿದ್ದಾಪುರ-ಮಾವಿನಗುಂಡಿ ಮಾರ್ಗವಾಗಿ ಎಲ್ಲಾ ವಿಧದ ವಾಹನಗಳು ಸಂಚರಿಸಬಹುದು.
ರಾಷ್ಟ್ರೀಯ ಹೆದ್ದಾರಿ-766 ಇ ಕುಮಟಾ-ಶಿರಸಿ ರಸ್ತೆಯಲ್ಲಿ ಉನ್ನತೀಕರಣ ಕಾಮಗಾರಿ ಸಮಯದಲ್ಲಿ ಉತ್ತರ ಕನ್ನಡ ಜಿಲ್ಲಾಧಿಕಾರಿಗಳ ಆದೇಶದಂತೆ ಈ ಸೂಚಿಸಿರುವ ಬದಲಿ ಮಾರ್ಗದಲ್ಲಿ ಸಂಚರಿಸಿ, ಸಹಕರಿಸುವಂತೆ ಮನವಿ ಮಾಡಲಾಗಿದೆ.
ಕುಮಟಾ-ಶಿರಸಿ ಹೆದ್ದಾರಿ ಉತ್ತರ ಕರ್ನಾಟಕ ಮತ್ತು ಕರಾವಳಿ ನಡುವಿನ ಸಂಪರ್ಕ ಕೊಂಡಿಯಾಗಿದೆ. ಭಾರತ್ ಮಾಲಾ ಯೋಜನೆಯಡಿ ಈ ರಸ್ತೆಯನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. ಬೇಸಿಗೆಯಲ್ಲಿ ಈ ರಸ್ತೆಯ ಕಾಮಗಾರಿ ಪೂರ್ಣಗೊಳಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಗುರಿ ಹೊಂದಿದೆ. ಆದ್ದರಿಂದ ವಾಹನ ಸಂಚಾರ ಬಂದ್ ಮಾಡಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ.
ಅಕ್ಟೋಬರ್ ತಿಂಗಳಿನಲ್ಲಿಯೇ ಈ ಮಾರ್ಗದಲ್ಲಿ ವಾಹನ ಸಂಚಾರ ಬಂದ್ ಆಗಲಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ವಾಹನ ಸಂಚಾರ ಬಂದ್ ಮಾಡಿಲ್ಲ, ಬಂದ್ ಮಾಡುವ ಬಗ್ಗೆ ಅಧಿಕೃತ ತೀರ್ಮಾನ ಕೈಗೊಂಡ ಬಳಿಕ ಮಾಹಿತಿ ನೀಡಲಾಗುತ್ತದೆ ಎಂದು ಹೇಳಿದ್ದರು.
ಕುಮಟಾ-ಶಿರಸಿ ರಸ್ತೆಯಲ್ಲಿ 8ಕ್ಕೂ ಅಧಿಕ ದೊಡ್ಡ ಸೇತುವೆಗಳ ನಿರ್ಮಾಣ ನಡೆಯುತ್ತಿದೆ. ಅಲ್ಲದೇ ಇನ್ನೂ ಹಲವು ಕಾಮಗಾರಿಗಳು ಬಾಕಿ ಇದೆ. ಮೊದಲು ಮಾರ್ಗದಲ್ಲಿ ಅಕ್ಟೋಬರ್ 15 ರಿಂದ 2025ರ ಫೆಬ್ರವರಿ ತನಕ ವಾಹನ ಸಂಚಾರ ಬಂದ್ ಮಾಡಲು ತೀರ್ಮಾನಿಸಲಾಗಿತ್ತು. ಬಳಿಕ ವಾಹನ ಸಂಚಾರ ಬಂದ್ ಮಾಡುವ ಅವಧಿಯನ್ನು ಮುಂದೂಡಿಕೆ ಮಾಡಲಾಯಿತು.
ಈ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಬಾರದು. ನಾಲ್ಕು ವರ್ಷಗಳಿಂದ ಕಾಮಗಾರಿ ಮಾಡುತ್ತಿದ್ದರೂ ಅದನ್ನು ಪೂರ್ಣಗೊಳಿಸಲು ಆಗಿಲ್ಲ. ಸಂಚಾರ ನಿಷೇಧಿಸಿದರೆ ಪ್ರತಿಭಟನೆ ನಡೆಸುತ್ತೇವೆ ಎಂದು ವಿವಿಧ ಸಂಘಟನೆಗಳು ಎಚ್ಚರಿಕೆ ನೀಡಿದ್ದರು. ಆದರೆ ಈಗ ಗಡುವಿನೊಳಗೆ ಕಾಮಗಾರಿ ಪೂರ್ಣಗೊಳಿಸಬೇಕಾದ ಕಾರಣ ವಾಹನ ಸಂಚಾರ ಬಂದ್ ಮಾಡಲಾಗುತ್ತಿದೆ.












Click it and Unblock the Notifications