ಉತ್ತರ ಕನ್ನಡ: ಜಲಪಾತಗಳಿಗೆ ಪ್ರವಾಸಕ್ಕೆ ಬರುವವರಿಗೆ ಎಚ್ಚರಿಕೆ!

ಕಾರವಾರ, ಜುಲೈ 18: ಕರಾವಳಿಯಲ್ಲಿ ಮಳೆ ಅಬ್ಬರ ಜೋರಾದ ಬೆನ್ನಲ್ಲೇ ಹಳ್ಳ ಕೊಳ್ಳಗಳಲ್ಲಿ ನೀರು ಉಕ್ಕಿ ಹರಿಯುತ್ತಿದ್ದು ಜಲಪಾತಗಳು ಮೈದುಂಬಿಕೊಂಡಿವೆ. ಇಂತಹ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಇದೀಗ ಪ್ರವಾಸಿಗರ ದಂಡೆ ಜಿಲ್ಲೆಗೆ ಹರಿದುಬರುತ್ತಿದೆ. ಆದರೆ ಭಾರಿ ಮಳೆಯಿಂದಾಗಿ ಕೆಲ ಜಲಪಾತಗಳಲ್ಲಿ ಅಪಾಯಕಾರಿ ಪರಿಸ್ಥಿತಿ ಇರುವ ಹಿನ್ನಲೆಯಲ್ಲಿ ಇಂತಹ ಜಲಪಾತಗಳಿಗೆ ಸದ್ಯಕ್ಕೆ ನಿರ್ಬಂಧ ಹೇರಲಾಗಿದೆ.

ಮಳೆಗಾಲ ಬಂತು ಅಂದ್ರೆ ಸಾಕು ಕರಾವಳಿ ಜಿಲ್ಲೆ ಉತ್ತರಕನ್ನಡದ ಹಲವೆಡೆ ಇರುವ ಹತ್ತಾರು ಜಲಪಾತಗಳು ಮೈದುಂಬಿಕೊಳ್ಳುತ್ತವೆ. ಹಚ್ಚಹಸಿರಿನ ಪರಿಸರದ ನಡುವೆ ಹಾಲ್ನೊರೆಯಂತೆ ಧುಮ್ಮಿಕ್ಕುವ ಜಲಪಾತಗಳ ಮನಮೋಹಕ ದೃಶ್ಯಗಳನ್ನು ಕಣ್ತುಂಬಿಕೊಳ್ಳುವುದೇ ಒಂದು ಭಾಗ್ಯ. ಹೀಗಾಗಿಯೇ ಮಳೆಗಾಲ ಆರಂಭವಾದ ಬಳಿಕ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಜಿಲ್ಲೆಯತ್ತ ಮುಖಮಾಡುತ್ತಾರೆ. ಆದರೆ ಈ ಬಾರಿ ಹೀಗೆ ಪ್ರವಾಸಕ್ಕೆ ಬರುವವರಿಗೆ ನಿರಾಸೆಯಾಗಲಿದೆ. ಯಾಕಂದ್ರೆ ಜಿಲ್ಲೆಯ ಕೆಲವೊಂದು ಜಲಪಾತಗಳ ವೀಕ್ಷಣೆಗೆ ಪ್ರವಾಸಿಗರಿಗೆ ನಿರ್ಭಂದ ಹೇರಲಾಗಿದೆ.

ಜಿಲ್ಲೆಯಲ್ಲಿ ಕಳೆದ ಹದಿನೈದು ದಿನಗಳಿಂದ ಮಳೆಯ ಅಬ್ಬರ ಹೆಚ್ಚಾಗಿದ್ದು, ನದಿಗಳು ಉಕ್ಕಿ ಹರಿಯುತ್ತಿವೆ. ಜೊತೆಗೆ ಜಿಲ್ಲೆಯಲ್ಲಿರುವ ಬಹುತೇಕ ಎಲ್ಲ ಜಲಪಾತಗಳು ಮೈದುಂಬಿಕೊಂಡು ಧುಮ್ಮಿಕ್ಕುತ್ತಿದ್ದು, ನಯನ ಮನೋಹರ ದೃಶ್ಯವನ್ನು ಕಟ್ಟಿಕೊಡುತ್ತಿವೆ. ಆದರೆ ಇದರೊಂದಿಗೆ ಕೆಲವೊಂದು ಜಲಪಾತಗಳ ಬಳಿ ಸೂಕ್ತ ಸುರಕ್ಷತೆ ಇಲ್ಲದಂತಾಗಿದೆ. ನೀರಿನ ಹರಿವು ಹೆಚ್ಚಿಗೆ ಇರುವ ಸಂದರ್ಭದಲ್ಲಿ ಸಣ್ಣ ನಿರ್ಲಕ್ಷ್ಯ ಸಹ ಮಾಡಿದರೂ ಪ್ರಾಣಕ್ಕೇ ಸಂಚಕಾರ ತರುವ ಸಾಧ್ಯತೆಗಳಿರುತ್ತವೆ.

 ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಜಲಪಾತ ವೀಕ್ಷಣೆಗೆ ನಿಷೇಧ

ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಜಲಪಾತ ವೀಕ್ಷಣೆಗೆ ನಿಷೇಧ

ಕಾರವಾರ ತಾಲ್ಲೂಕಿನ ನಾಗರಮಡಿ, ಗೋಲಾರಿ ಹಾಗೂ ಅಂಕೋಲಾ ತಾಲ್ಲೂಕಿನ ವಿಭೂತಿ ಜಲಪಾತ ಸೇರಿದಂತೆ ಕೆಲವೊಂದು ಜಲಪಾತಗಳಿಗೆ ಪ್ರವಾಸಿಗರು ಆಗಮಿಸದಂತೆ ನಿಷೇಧ ಹೇರಲಾಗಿದೆ. ಮಳೆಯ ತೀವ್ರತೆ ಹೆಚ್ಚಿದ್ದು ಜಲಪಾತಗಳು ಅಪಾಯಕಾರಿ ರೀತಿಯಲ್ಲಿ ತುಂಬಿ ಹರಿಯುತ್ತಿರುವ ಹಿನ್ನಲೆಯಲ್ಲಿ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ‌ ಎಂದು ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ್‌ ಮಾಹಿತಿ ನೀಡಿದ್ದಾರೆ.

 ಅಪಾಯಕ್ಕೆ ಆಹ್ವಾನ ಪ್ರವಾಸಿಗರ ಸೆಲ್ಫೀ ಹುಚ್ಚು

ಅಪಾಯಕ್ಕೆ ಆಹ್ವಾನ ಪ್ರವಾಸಿಗರ ಸೆಲ್ಫೀ ಹುಚ್ಚು

ಮಳೆಗಾಲದ ಸಂದರ್ಭದಲ್ಲಿ ಜಲಪಾತಗಳು ನೋಡಲು ಎಷ್ಟು ಸುಂದರವೋ ಅಷ್ಟೇ ಅಪಾಯಕಾರಿಯೂ ಆಗಿರುತ್ತವೆ. ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಜಲಪಾತದಿಂದ ಧುಮ್ಮಿಕ್ಕುವ ನೀರಿನ ವೇಗ ಸಹ ಹೆಚ್ಚಿಗೆ ಇರುವುದರಿಂದ ಈ ಸಂದರ್ಭದಲ್ಲಿ ಮೋಜು ಮಸ್ತಿಗೆ ತೆರಳುವುದು ಅಪಾಯಕ್ಕೆ ಆಹ್ವಾನ ನೀಡಿದಂತಾಗಲಿದೆ. ಅಲ್ಲದೇ ಪ್ರವಾಸಿಗರು ಧುಮ್ಮಿಕ್ಕುವ ಜಲಪಾತದಲ್ಲಿ ಈಜಾಡಲು ತೆರಳುವುದು, ಸೆಲ್ಫೀ ತೆಗೆದುಕೊಳ್ಳಲು ಮುಗಿಬೀಳುವುದು ಸೇರಿದಂತೆ ಅಪಾಯವನ್ನು ಲೆಕ್ಕಿಸದೇ ವರ್ತಿಸುವುದು ಅಪಾಯಕಾರಿಯಾಗಲಿದೆ.

 ಪ್ರವಾಸಿಗರ ನಿರ್ಬಂಧಕ್ಕೆ ಆ ಐವರ ಸಾವು ಕಾರಣ

ಪ್ರವಾಸಿಗರ ನಿರ್ಬಂಧಕ್ಕೆ ಆ ಐವರ ಸಾವು ಕಾರಣ

ಕಳೆದ ಕೆಲ ವರ್ಷಗಳ ಹಿಂದೆ ಕಾರವಾರದ ನಾಗರಮಡಿ ಜಲಪಾತದ ಬಳಿಕ ನೀರಿನಲ್ಲಿ ಪ್ರವಾಸಿಗರು ಆಟವಾಡುತ್ತಿದ್ದ ವೇಳೆ ಧಾರಾಕಾರವಾಗಿ ಮಳೆ ಸುರಿದ ಪರಿಣಾಮ ಏಕಾಏಕಿ ನೀರಿನ ಹರಿವು ಹೆಚ್ಚಾಗಿ ಕೊಚ್ಚಿಹೋಗಿದ್ದು ಐವರು ಸಾವನ್ನಪ್ಪಿದ್ದರು. ಹೀಗಾಗಿ ಮಳೆಗಾಲದಲ್ಲಿ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಜಲಪಾತಗಳಿಗೆ ಪ್ರವೇಶ ನಿರ್ಭಂದಿಸಲಾಗಿದೆ.

 ವಾಪಸ್ ಹೋಗುತ್ತಿರುವ ಪ್ರವಾಸಿಗರು

ವಾಪಸ್ ಹೋಗುತ್ತಿರುವ ಪ್ರವಾಸಿಗರು

ಇಷ್ಟಾದರೂ ಸಮರ್ಪಕ ಮಾಹಿತಿ ಇಲ್ಲದೆ ಮತ್ತು ಕೆಲವರು ಮಾಹಿತಿ ಇದ್ದು ಕದ್ದು ಮುಚ್ಚಿ ಜಲಪಾತಗಳಿಗೆ ತೆರಳುತ್ತಾರೆ. ಇದೇ ಕಾರಣಕ್ಕೆ ವಿಭೂತಿ ಫಾಲ್ಸ್ ನಲ್ಲಿ ರಸ್ತೆಗೆ ಬ್ಯಾರಿಕೇಡ್ ಅಳವಡಿಸಿ ಎಚ್ಚರಿಕೆ ಹಾಗೂ ಪ್ರವಾಸಿಗರಿಗೆ ನಿರ್ಭಂದದ ಮಾಹಿತಿ ಇರುವ ಬ್ಯಾನರ್ ಅಳವಡಿಸಲಾಗಿದೆ. ಇದರಿಂದ ಸಾಕಷ್ಟು ಮಂದಿ ಪ್ರವಾಸಿಗರು ಬಂದು ಜಲಪಾತ ನೋಡಲಾಗದೇ ವಾಪಸ್ಸಾಗುತ್ತಿದ್ದಾರೆ ಎನ್ನುತ್ತಾರೆ ಲೈಫ್‌ಗಾರ್ಡ್ ಸಿಬ್ಬಂದಿ ರಾಜು.

ಸದ್ಯ ಕಡಲತೀರಗಳಲ್ಲಿ ಆಳೆತ್ತರದ ಅಲೆಗಳು ಅಪ್ಪಳಿಸುವುದರಿಂದಾಗಿ ಬೀಚ್‌ಗಳೂ ಸಹ ಅಪಾಯಕಾರಿಯಾಗಿದ್ದು ಸಮುದ್ರಕ್ಕೆ ಇಳಿಯದಂತೆ ಪ್ರವಾಸಿಗರಿಗೆ ಸೂಚನೆ ನೀಡಲಾಗಿದೆ. ಕಡಲತೀರದಲ್ಲಿ ಕೆಂಪು ಬಾವುಟ ಹಾಕಿ ಸಿಬ್ಬಂದಿ ನಿಯೋಜನೆ ಮಾಡುವ ಮೂಲಕ ಎಚ್ಚರಿಸುವ ಕೆಲಸ ಮಾಡುತ್ತಿದ್ದು ಮಳೆ ಆರ್ಭಟ ಮುಗಿಯುವವರೆಗೆ ಪ್ರವಾಸಿಗರು ಕಡಲತೀರ ಹಾಗೂ ಜಲಪಾತಗಳಿಂದ ಕೊಂಚ ದೂರವಿರೋದೇ ಉತ್ತಮ ಎನ್ನುವಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+