ಸಾಲು ಸಾಲು ರಜೆ, ಉತ್ತರ ಕನ್ನಡದತ್ತ ಪ್ರವಾಸಿಗರ ದಂಡು:ಹೋಟೆಲ್, ಹೋಮ್ ಸ್ಟೇ ದರ ದುಪ್ಪಟ್ಟು
ಕಾರವಾರ, ಡಿಸೆಂಬರ್ 25: ಕ್ರಿಸ್‌ಮಸ್ ಹಾಗೂ ವಾರಾಂತ್ಯದ ರಜೆ ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳತ್ತ ಪ್ರವಾಸಿಗರ ದಂಡೆ ಹರಿದುಬರುತ್ತಿದೆ. ಜಿಲ್ಲೆಯ ಬಹುತೇಕ ಪ್ರವಾಸಿ ತಾಣಗಳು ಪ್ರವಾಸಿಗರಿಂದಲೇ ಗಿಜುಗುಡುವಂತಾಗಿದೆ. ಅಲ್ಲದೆ ಹೊಸ ವರ್ಷ ಕೂಡ ಸಮೀಪಿಸಿದ ಕಾರಣ ಜಿಲ್ಲೆಯ ಬಹುತೇಕ ಹೋಟೆಲ್‌ಗಳು ಹಾಗೂ ಹೋಮ್ ಸ್ಟೇಗಳು ಹೌಸ್‌ಫುಲ್ ಆಗಿದ್ದು, ದರ ಕೂಡ ದುಪ್ಪಟ್ಟಾಗುವಂತಾಗಿದೆ.
4ನೇ ಶನಿವಾರ, ಭಾನುವಾರ ಹಾಗೂ ಸೋಮವಾರ ಕ್ರಿಸ್‌ಮಸ್ ಸರ್ಕಾರಿ ರಜೆ ಇರುವ ಕಾರಣ ಜಿಲ್ಲೆ ಮಾತ್ರವಲ್ಲದೆ ರಾಜ್ಯದ ನಾನಾ ಭಾಗಗಳಿಂದ ಪ್ರವಾಸಿಗರು ಇದೀಗ ಉತ್ತರ ಕನ್ನಡ ಜಿಲ್ಲೆಯತ್ತ ಮುಖ ಮಾಡಿದ್ದಾರೆ. ಜಿಲ್ಲೆಯ ಕರಾವಳಿ, ಮಲೆನಾಡಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಇದೀಗ ಪ್ರವಾಸಿಗರೇ ದಂಡೆ ಸೇರುತ್ತಿದೆ.

ಅಲ್ಲದೆ ಶಾಲಾ ಮಕ್ಕಳು ಪ್ರವಾಸ ಕೈಗೊಂಡ ಕಾರಣ ಜಿಲ್ಲೆಯ ಮುರುಡೇಶ್ವರದ ಸ್ಕೂಬಾ ಡೈವಿಂಗ್, ಸೀ ವಾಕ್, ದಾಂಡೇಲಿಯಲ್ಲಿ ಜಲಸಾಹಸ ಕ್ರೀಡೆ, ಯಾಣದ ಭೈರವೇಶ್ವರ ಶೀಖರ, ಯಲ್ಲಾಪುರದ ವಿಭೂತಿ, ಮಾಗೋಡ, ಸಿದ್ದಾಪುರದ ಉಂಚಳ್ಳಿ ಜಲಪಾತ, ಶಿರಸಿಯ ಮಾರಿಕಾಂಬಾ, ಬನವಾಸಿಯ ಮಧುಕೇಶ್ವರ, ಮುರುಡೇಶ್ವರ, ಗೋಕರ್ಣದ ಆತ್ಮಲಿಂಗ, ಶಿರಸಿಯ ಸಹಸ್ರಲಿಂಗ, ಕಡಲತೀರಗಳು, ದಾಂಡೇಲಿ ಜನಸಾಹಸಿ ಚಟುವಟಿಕೆ ನಡೆಯುವ ಸ್ಥಳಗಳಲ್ಲಿ ಜನ ಜಾತ್ರೆಯೇ ಸೇರುವಂತಾಗಿದೆ.
ಇನ್ನು ಸಾಮಾನ್ಯವಾಗಿ ಪ್ರತಿ ವರ್ಷವೂ ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರವಾಸಿಗರು ಆಗಮಿಸುವುದು ಸಾಮಾನ್ಯ. ಆದರೆ ಕಳೆದ ಕೆಲ ವರ್ಷದಿಂದ ಕೋವಿಡ್ ಕಾರಣದಿಂದ ಪ್ರವಾಸಿಗರ ಸಂಖ್ಯೆ ಸಂಪೂರ್ಣ ಇಳಿಮುಖವಾಗಿತ್ತು. ಆದರೆ ಇದೀಗ ಯಾವುದೇ ನಿರ್ಭಂಧಗಳಿಲ್ಲದ ಕಾರಣ ಪ್ರವಾಸಿಗರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ಕಡಲತೀರಗಳು ಸೇರಿದಂತೆ ಪ್ರಮುಖ ತಾಣಗಳಿಗೆ ತೆರಳಿ ಎಂಜಾಯ್ ಮಾಡತೊಡಗಿದ್ದಾರೆ.

ಇನ್ನು ಪ್ರವಾಸಿಗರ ಆಗಮನ ಹೆಚ್ಚಾದಂತೆ ಜಿಲ್ಲೆಯ ಪ್ರಮುಖ ನಗರಗಳಲ್ಲಿನ ಹೊಟೆಲ್, ರೆಸಾರ್ಟ್, ಹೋಮ್‌ಸ್ಟೆ, ಲಾಡ್ಜ್‌ಗಳು ಹೌಸ್ ಫುಲ್ ಆಗುವಂತಾಗಿದೆ. ವಾರಗಳ ಹಿಂದೆ ಬುಕ್ಕಿಂಗ್ ಆಗಿದ್ದ ಹೊಟೆಲ್‌ಗಳಲ್ಲಿ ಇದ್ದ ಕೆಲ ರೂಮಗಳು ಕೂಡ ಬುಕ್ ಆದ ಕಾರಣ ಪ್ರವಾಸಿಗರು ತಂಗಲು ಪರದಾಡುವಂತಾಗಿದೆ.
ಗೋವಾದಲ್ಲಿಯೂ ಹೌಸ್‌ಫುಲ್
ವಾರಾಂತ್ಯದ ರಜೆ ಜೊತೆಗೆ ಕ್ರಿಸ್‌ಮಸ್ ಹಾಗೂ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಜಿಲ್ಲೆಯತ್ತ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಗೋವಾಗೆ ತೆರಳುವ ಪ್ರವಾಸಿಗರು ಕೂಡ ಗೋವಾದಲ್ಲಿ ಹೊಟೆಲ್‌ಗಳು ಹೌಸ್ ಫುಲ್ ಆದ್ದರಿಂದ ಹಾಗೂ ಹೆಚ್ಚಿನ ದರ ಆಕರಿಸುತ್ತಿರುವ ಕಾರಣ ಕಾರವಾರದಲ್ಲಿ ರೂಮ್‌ಗಳನ್ನು ಬುಕ್ಕಿಂಗ್ ಮಾಡಲಾಗುತ್ತಿದೆ. ಇನ್ನು ಕೆಲವು ರೆಸಾರ್ಟ್, ಹೊಟೇಲ್‌ಗಳಲ್ಲಿ ರೂಮ್‌ಗಳು ತಿಂಗಳ ಹಿಂದೆಯೇ ಬುಕ್ಕಿಂಗ್ ಆಗಿದೆ. ಇದೀಗ ಇರುವ ಸಣ್ಣಪುಟ್ಟ ಲಾಡ್ಜ್ಗಳಲ್ಲಿ ಪ್ರವಾಸಿಗರು ತುಂಬಿಕೊಂಡಿರುವುದರಿಂದ ಕರಾವಳಿ ಭಾಗದಲ್ಲಿ ರೂಮುಗಳೇ ಸಿಗದ ಪರಿಸ್ಥಿತಿ ಇದೆ ಎಂದು ಸ್ಥಳೀಯರಾದ ಮಂಜುನಾಥ್ ಹೇಳಿದ್ದಾರೆ.

ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಪ್ರವಾಸಿಗರು!
ಇನ್ನು ಜಿಲ್ಲೆಗೆ ಕೋವಿಡ್ ಕಡಿಮೆಯಾದ ಬಳಿಕವೂ ವಿದೇಶಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆಯಾದರೂ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಪ್ರವಾಸೋದ್ಯಮ ಇಲಾಖೆ ಅಂಕಿ ಅಂಶದಂತೆ 2017ರಲ್ಲಿ 42.60 ಲಕ್ಷ, 2018ರಲ್ಲಿ 43.90 ಲಕ್ಷ, 2019ರಲ್ಲಿ 48.77ಲಕ್ಷ, 2020 ರಲ್ಲಿ 18.53 ಲಕ್ಷ, 2021 ರಲ್ಲಿ 35.19 ಲಕ್ಷ ಪ್ರವಾಸಿಗರು ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡಿದ್ದರು. 2022ರಲ್ಲಿ ದಾಖಲೆಯ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸಿದ್ದು ಬರೊಬ್ಬರಿ ಒಂದುವರೆ ಕೋಟಿ ಜನರು ಭೇಟಿ ನೀಡಿದ್ದರು. ಆದರೆ ಪ್ರಸಕ್ತ ಸಾಲಿನಲ್ಲಿಯೂ 1.02 ಕೋಟಿ ಪ್ರವಾಸಿಗರು ಭೇಟಿ ನೀಡಿದ್ದು ವರ್ಷಾಂತ್ಯದ ಬಳಿಕ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಪ್ರವಾಸಿ ತಾಣಗಳಲ್ಲಿ ಪಾರ್ಕಿಂಗ್ ಸಮಸ್ಯೆ
ಪುರಾಣ ಪ್ರಸಿದ್ಧ ಮುರುಡೇಶ್ವರ, ಗೋಕರ್ಣ ಸೇರಿದಂತೆ ಇನ್ನಿತರೆ ಪ್ರವಾಸಿ ತಾಣಗಳಲ್ಲಿ ಪಾರ್ಕಿಂಗ್ ಸಮಸ್ಯೆ ತಲೆನೋವಾಗಿದೆ. ಗೋಕರ್ಣ ಮುರುಡೇಶ್ವರದಲ್ಲಿ ವಾಹನಗಳ ನಿಲುಗಡೆಗೆ ಸ್ಥಳಾವಕಾಶವಿಲ್ಲದ ಕಾರಣ ಪ್ರವಾಸಿಗರು ತೊಂದರೆ ಅನುಭವಿಸುವಂತಾಗಿದೆ. ಮುರುಡೇಶ್ವರದಲ್ಲಿ ವಾಹನಗಳನ್ನು ಕಡಲತೀರಕ್ಕೆ ಕೊಂಡೊಯ್ಯುತ್ತಿದ್ದು, ಪ್ರವಾಸಿಗರಿಗೂ ಇದು ಕಿರಿಕಿರಿಯಾಗುವಂತಾಗಿದೆ. ಅಲ್ಲದೆ ಕಳೆದ ಕೆಲವು ತಿಂಗಳ ಹಿಂದೆ ತೀರದ ಸಮೀಪ ನಿಲ್ಲಿಸಿದ್ದ ಕಾರೊಂದು ಅಲೆಗಳ ಅಬ್ಬರಕ್ಕೆ ತೇಲಿ ಹೋಗಿ ಮರಳಿನಲ್ಲಿ ಹೂತುಕ್ಕೊಳ್ಳುವಂತಾಗಿತ್ತು. ಗೋಕರ್ಣದಲ್ಲಿಯೂ ಮುಖ್ಯ ಕಡಲ ತೀರ, ಸಾರಿಗೆ ಸಂಸ್ಥೆ ಬಸ್ ನಿಲ್ದಾನದ ಬಳಿ ಪ್ರವಾಸಿ ವಾಹನಗಳನ್ನು ನಿಲ್ಲಿಸಲಾಗುತ್ತದೆ. ಆದರೆ ಸಾವಿರಾರು ಪ್ರವಾಸಿಗರು ಬರುವುದರಿಂದ ಟ್ರಾಫಿಕ್ ಜ್ಯಾಮ್ ಉಂಟಾಗುತ್ತಿದೆ.












Click it and Unblock the Notifications