ಶಿರಸಿಯಲ್ಲಿ ದೇವಾಲಯದ ಗೋಡೆ ಧ್ವಂಸಗೊಳಿಸಿ ಕಳಶ ಕದ್ದೊಯ್ದ ಕಿಡಿಗೇಡಿಗಳು
ಶಿರಸಿ, ಮಾರ್ಚ್ 28: ಕಿಡಿಗೇಡಿಗಳು ದೇವಸ್ಥಾನದ ಗೋಡೆ ಒಡೆದು ಕಳಶ ಕಿತ್ತುಕೊಂಡು ಹೋದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಕಸ್ತೂರಿ ಬಾ ನಗರದಲ್ಲಿ ನಡೆದಿದೆ.
ನಗರದ ಹೊರ ಭಾಗದಲ್ಲಿರುವ ಬಸವೇಶ್ವರ ದೇವಸ್ಥಾನದಲ್ಲಿ ಈ ಕಳ್ಳತನ ನಡೆದಿದ್ದು, ನಿನ್ನೆ ಬುಧವಾರ (ಮಾ.27) ತಡ ರಾತ್ರಿ ಈ ಕೃತ್ಯ ಎಸಲಾಗಿದೆ ಎಂದು ಹೇಳಲಾಗಿದೆ.
ಕಳಶ ಕಿತ್ತುಕೊಂಡು ಹೋಗಿರುವ ಕಿಡಿಗೇಡಿಗಳು ದೇವಾಲಯದ ಗೋಡೆಯನ್ನು ಹಾರೆ, ಗುದ್ದಲಿಯಿಂದ ಒಡೆದಿದ್ದು, ಇಡೀ ದೇವಾಲಯದ ಭಾಗಕ್ಕೆ ಹಾನಿಯಾಗಿದೆ.ವಿಷಯ ತಿಳಿಯುತ್ತಿದ್ದಂತೆ ದೇವಾಲಯದ ಬಳಿ ನೂರಾರು ಜನರು ಧಾವಿಸಿದ್ದಾರೆ.

ಸ್ಥಳಕ್ಕೆ ನಗರ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಶಿರಸಿ ಶಹರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕಿಡಿಗೇಡಿಗಳು ಬೇರೆ ಬೇರೆ ಕಡೆ ದೇವಸ್ಥಾನದ ವಿಗ್ರಹ, ಕಳಶ, ಬಂಗಾರ, ನಗದನ್ನು ಕದ್ದು ಒಯ್ದಿರುವ ಘಟನೆಗಳನ್ನು ಆಗಾಗ ನಾವು ಕೇಳುತ್ತಲೇ ಇರುತ್ತವೆ. ಇಂತಹ ಪ್ರಕರಣಗಳಲ್ಲಿ ಹೆಚ್ಚಾಗಿ ಬೀಗ ಒಡೆದು ದೋಚುತ್ತಿದ್ದ ಕಳ್ಳರು, ಈ ಬಾರಿ ಕಳಶಕ್ಕಾಗಿ ದೇವಸ್ಥಾನದ ಗೋಡೆಯನ್ನೇ ಅಗೆದಿರುವುದನ್ನು ಕಂಡು ಜನರು ಹಿಡಿಶಾಪ ಹಾಕುತ್ತಿದ್ದಾರೆ.












Click it and Unblock the Notifications