ಚುನಾವಣೆ ಅಸ್ತ್ರವಾಗಲಿದೆಯಾ ಪ್ರತ್ಯೇಕ ಜಿಲ್ಲೆಯ ಕೂಗು: ಜೋರಾದ ಪರ-ವಿರೋಧ ಚರ್ಚೆ
ಕಾರವಾರ, ಡಿಸೆಂಬರ್ 14: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನು ನಾಲ್ಕು ತಿಂಗಳುಗಳು ಬಾಕಿ ಉಳಿದಿರುವ ಬೆನ್ನಲ್ಲೇ ರಾಜಕೀಯ ಚಟುವಟಿಕೆಗಳು ರಂಗೇರತೊಡಗಿದೆ. ಇನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಚುನಾವಣೆಯಲ್ಲಿ ಪ್ರತ್ಯೇಕ ಜಿಲ್ಲೆ ವಿಚಾರ ಅಸ್ತ್ರವಾಗುವ ಎಲ್ಲ ಲಕ್ಷಣಗಳು ಗೋಚರವಾಗಿದ್ದು, ಇದಕ್ಕೆ ಪೂರಕ ಎಂಬಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಹೇಳಿಕೆ ಜಿಲ್ಲೆಯಲ್ಲಿ ಪರ ವಿರೋಧದ ಚರ್ಚೆಗೆ ಕಾರಣವಾಗಿದೆ.
ರಾಜಕೀಯ ಪಕ್ಷಗಳು ಒಂದೆಡೆ ಈ ಬಾರಿ ಅಧಿಕಾರಕ್ಕೆ ಬರಲೇ ಬೇಕು ಎಂದು ಪ್ರಯತ್ನ ನಡೆಸುತ್ತಿದ್ದರೆ, ಇನ್ನೊಂದೆಡೆ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಗೆಲುವಿಗಾಗಿ ಜನರ ಮುಂದೆ ನಾನಾ ಪ್ರಯತ್ನಕ್ಕೆ ಇಳಿದಿದ್ದಾರೆ. ಸದ್ಯ ಉತ್ತರ ಕನ್ನಡ ಜಿಲ್ಲೆಯಲ್ಲೂ ಚುನಾವಣಾ ಕಾವು ರಂಗೇರಿದೆ. ಈ ಬಾರಿ ಜಿಲ್ಲೆಯಲ್ಲಿ ಕೆಲ ರಾಜಕಾರಣಿಗಳು ಪ್ರತ್ಯೇಕ ಜಿಲ್ಲೆಯ ಅಸ್ತ್ರವನ್ನು ಚುನಾವಣೆಯಲ್ಲಿ ಬಳಸಿಕೊಳ್ಳಲಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಅದಕ್ಕೆ ಪೂರಕ ಎಂಬಂತೆ ಶಿರಸಿ ಕ್ಷೇತ್ರದ ಶಾಸಕ ವಿಧಾನಸಭಾ ಸ್ಪೀಕರ್ ಆಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಶಿರಸಿಯ ಕಾರ್ಯಕ್ರಮವೊಂದರಲ್ಲಿ ಪ್ರತ್ಯೇಕ ಜಿಲ್ಲೆಯ ಧ್ವನಿಯನ್ನು ಎತ್ತಿದ್ದರು.
ಈ ಬಗ್ಗೆ ಮಾತನಾಡಿದ್ದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ" ಭೌಗೋಳಿಕವಾಗಿ ದೊಡ್ಡದಾಗಿರುವ ಪ್ರತ್ಯೇಕ ಜಿಲ್ಲೆ ಅಗತ್ಯವಿದೆ. ಈಗಾಗಲೇ ರಾಜ್ಯದ ವಿವಿಧ ಜಿಲ್ಲೆ ವಿಭಜಿಸಿ ಪ್ರತ್ಯೇಕ ಜಿಲ್ಲೆ ರಚನೆಯಾಗಿದೆ. ಘಟ್ಟದ ಮೇಲಿನ ತಾಲೂಕುಗಳನ್ನು ಒಳಗೊಂಡ ಶಿರಸಿ ಪ್ರತ್ಯೇಕ ಜಿಲ್ಲೆಯ ಬೇಡಿಕೆ ಬಗ್ಗೆ ಸಾರ್ವಜನಿಕರು ನನ್ನ ಹಾಗೂ ಸಚಿವ ಶಿವರಾಮ ಹೆಬ್ಬಾರ್ ಅವರನ್ನು ಕೇಳುತ್ತಿದ್ದಾರೆ. ಈ ಸಂಬಂಧ ಈಗಾಗಲೇ ಮುಖ್ಯಮಂತ್ರಿ ಬಳಿ ಚರ್ಚಿಸಲಾಗಿದೆ. ಪ್ರತ್ಯೇಕ ಜಿಲ್ಲೆಯಾಗಲು ಸಚಿವ ಹೆಬ್ಬಾರ ಅವರ ಸಹಕಾರವೂ ಮುಖ್ಯ. ಈ ಬಗ್ಗೆ ಮತ್ತೊಮ್ಮೆ ಮುಖ್ಯಮಂತ್ರಿ ಅವರಲ್ಲಿ ಇಬ್ಬರೂ ಚರ್ಚಿಸುತ್ತೇವೆ. ಸಮಯ, ಸಂದರ್ಭ ನೋಡಿ ಮುಂದಿನ ಕ್ರಮ ಕೈಗೊಳ್ಳುವುದಾಗಿ " ತಿಳಿಸಿದ್ದರು.

ಪ್ರತ್ಯೇಕ ಜಿಲ್ಲೆ ಚುನಾವಣೆ ಅಸ್ತ್ರವಾಗಿ ಬಿಜೆಪಿ ಬಳಸಲು ಸಜ್ಜು
ಉತ್ತರ ಕನ್ನಡ ಜಿಲ್ಲೆಯಲ್ಲಿ ಘಟ್ಟದ ಮೇಲಿನ ಹಾಗೂ ಘಟ್ಟದ ಕೆಳಗಿನ ಭಾಗ ಸೇರಿ ಒಟ್ಟು ಹನ್ನೆರಡು ತಾಲೂಕುಗಳಿದ್ದು, ಘಟ್ಟದ ಮೇಲಿನ ತಾಲೂಕುಗಳನ್ನು ಒಂದು ಜಿಲ್ಲೆ ಹಾಗೂ ಕರಾವಳಿ ಭಾಗದಲ್ಲಿ ಒಂದು ಜಿಲ್ಲೆಯನ್ನು ಮಾಡಬೇಕು ಎನ್ನುವ ಬೇಡಿಕೆ ಹಲವು ವರ್ಷಗಳಿಂದ ಘಟ್ಟದ ಮೇಲ್ಭಾಗದ ತಾಲೂಕಿನ ಜನರಿಂದ ಕೇಳಿಬರುತ್ತಿದೆ. ದೂರವಾದ ಜಿಲ್ಲಾಕೇಂದ್ರ, ದೊಡ್ಡದಾದ ಜಿಲ್ಲೆ, ಕಡಿಮೆ ಅನುದಾನ, ಅಭಿವೃದ್ಧಿ ದೃಷ್ಟಿಯಿಂದ ಶಿರಸಿಯಲ್ಲಿ ಹೋರಾಟ ಸಮಿತಿ ರಚಿಸಿ ದಶಕಗಳಿಂದಲೂ ಹೋರಾಟ ನಡೆಸಲಾಗುತ್ತಿದೆ. ಆದರೆ ಈವರೆಗೂ ಪ್ರತ್ಯೇಕ ಜಿಲ್ಲೆ ಬಗ್ಗೆ ಸ್ಪೀಕರ್ ಮಾತಾಡದೆ ಇದೀಗ ಚುನಾವಣೆ ಹೊತ್ತಿನಲ್ಲಿ ಮೌನ ಮುರಿದುರುವುದು ಇದು ಚುನಾವಣೆ ಅಸ್ತ್ರವಾಗಿ ಬಿಜೆಪಿ ಬಳಸಲು ಮುಂದಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

ಪ್ರತ್ಯೇಕ ಜಿಲ್ಲೆ ಬಗ್ಗೆ ಶಿವರಾಮ್ ಹೆಬ್ಬಾರ್ ಹೇಳಿದ್ದೇನು..?
ಸ್ಪೀಕರ್ ಈ ಹೇಳಿಕೆ ಬೆನ್ನಲ್ಲೆ ಜಿಲ್ಲೆಯಲ್ಲಿ ಪರ ವಿರೋಧದ ಚರ್ಚೆಗೆ ಕಾರಣವಾಗಿದೆ. ಜಿಲ್ಲೆಯಲ್ಲಿನ ಸಮಸ್ಯೆಗಳನ್ನು ಚುನಾವಣೆ ವೇಳೆ ಮುಚ್ಚಿ ಹಾಕಲು ಜಿಲ್ಲೆ ವಿಭಜನೆ ಅಸ್ತ್ರವನ್ನ ಬಳಸಲಾಗುತ್ತಿದೆ. ಜಿಲ್ಲೆಯಲ್ಲಿ ಮೊದಲು ಅಭಿವೃದ್ದಿ ಕಾರ್ಯಗಳಿಗೆ ಆದ್ಯತೆ ಕೊಡಲಿ. ಜಿಲ್ಲೆ ಅಖಂಡವಾಗಿರಬೇಕು ಎಂದು ಸಿಐಟಿಯು ಪ್ರಧಾನ ಕಾರ್ಯದರ್ಶಿ ಯಮುನಾ ಗಾಂವಕರ್ ಆಗ್ರಹಿಸಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ "ಜಿಲ್ಲೆ ಇಬ್ಭಾಗ ಮಾಡುವ ಕುರಿತು ನಾನು ಯಾವತ್ತು ಪ್ರಸ್ತಾಪ ಮಾಡಿಲ್ಲ. ಸದ್ಯ ಜಿಲ್ಲಾ ಉಸ್ತುವಾರಿ ಸಚಿವನಾಗಿ ನಾನು ಮಾತನಾಡದೆ ಇದ್ದರೂ ಜಿಲ್ಲೆಯ ಶಾಸಕನಾಗಿ ಹೇಳುವುದಾದರೇ, ಜಿಲ್ಲೆ ಇಬ್ಭಾಗದ ಕುರಿತು ಬುದ್ಧಿ ಜೀವಿಗಳ ಸಾರ್ವಜನಿಕರ ಜೊತೆ ಚರ್ಚೆಯಾಗಬೇಕಿದೆ. ಈ ಬಗ್ಗೆ ನಮ್ಮೆಲ್ಲ ಶಾಸಕರ ಜೊತೆ ಚರ್ಚೆ ಮಾಡುತ್ತೇನೆ. ಪ್ರಜಾಪ್ರಭುತ್ವದಲ್ಲಿ ಎಲ್ಲರ ಅಭಿಮತ ಮುಖ್ಯವಾಗಿರುವುದರಿಂದ ಕಾಲಕ್ಕೆ ತಕ್ಕಂತೆ ಬದಲಾವಣೆ ಆಗಬೇಕು" ಎಂದು ಹೇಳಿದ್ದಾರೆ.

ಜಿಲ್ಲೆ ಅಭಿವೃದ್ಧಿ ಆಗಿಲ್ಲ ಎನ್ನುವುದನ್ನು ಒಪ್ಪಿಕ್ಕೊಳ್ಳುವುದಿಲ್ಲ
"ಶಿರಸಿ ಪ್ರತ್ಯೇಕ ಜಿಲ್ಲೆಯನ್ನಾಗಿಸುವ ವಿಷಯದಲ್ಲಿ ರಾಜಕಾರಣಿಗಳಿಗಿಂತ ಜಿಲ್ಲೆಯ ಜನರ ಅಭಿಪ್ರಾಯ ಮುಖ್ಯವಾಗಿದೆ. ಜಿಲ್ಲೆ ದೊಡ್ಡದಾಗಿರುವ ಕಾರಣ ಅಭಿವೃದ್ಧಿ ಆಗಿಲ್ಲ ಎನ್ನುವುದನ್ನು ಒಪ್ಪಿಕ್ಕೊಳ್ಳುವುದಿಲ್ಲ. ಹಲವು ವರ್ಷಗಳ ಕಾಲ ನಾನೇ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೆ. ಹಲವು ಯೋಜನೆ ಅಭಿವೃದ್ಧಿ ಕಾರ್ಯಗಳು ಆಗಿದೆ. ಕೆಲ ಭಾಗಗಳಲ್ಲಿ ಅಭಿವೃದ್ಧಿ ಆಗದೆ ಇರಬಹುದು. ಆದರೆ ಶಿರಸಿ ಪ್ರತ್ಯೇಕ ಜಿಲ್ಲೆಗೆ ಇತ್ತೀಚಿನ ದಿನಗಳಲ್ಲಿ ಬೇಡಿಕೆ ಕೇಳಿಬರುತ್ತಿದೆ. ಈ ಸಂಬಂಧ ಜನರ ಅಭಿಪ್ರಾಯ ಸಂಗ್ರಹ ಮಾಡಬೇಕು" ಎಂದು ಮಾಜಿ ಸಚಿವ ಹಾಲಿ ಶಾಸಕ ಆರ್.ವಿ ದೇಶಪಾಂಡೆ ಹೇಳಿದ್ದಾರೆ.

ಜಿಲ್ಲೆ ವಿಭಜನೆಯಾದರೆ ಅಭಿವೃದ್ಧಿಯಾಗುತ್ತದೆ
ಇನ್ನು ಜಿಲ್ಲೆಯ ವಿಭಜನೆ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ "ಜಿಲ್ಲೆ ವಿಭಜನೆಯಾದರೆ ಅಭಿವೃದ್ಧಿಯಾಗುತ್ತದೆ. ಯೋಜನೆಗಳು ಬರುತ್ತವೆ ಎನ್ನುವ ಭಾವನೆ ಕೆಲವರಿಗೆ ಇರಬಹುದು. ಆದರೆ ಉತ್ತರ ಕನ್ನಡ ಜಿಲ್ಲೆ ಒಂದಾಗಿರಬೇಕು ಎನ್ನುವ ವಿಚಾರವೂ ಇದೆ. ಇದು ಭಾವನಾತ್ಮ ವಿಷಯವಾಗಿದ್ದರಿಂದ ಶಾಸಕರೊಂದಿಗೆ ಚರ್ಚೆ ನಡೆಸಲಾಗುವುದು. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ವಿಭಜನೆಯದಾಗ ಅಭಿವೃದ್ಧಿಯ ದೃಷ್ಟಿಯಿಂದ ಉತ್ತಮವಾಗಿದೆ. ಇಲ್ಲಿಯೂ ಭಾವನಾತ್ಮಕ ಅಂಶಗಳು ಇರುವುದರಿಂದ ಉತ್ತರ ಕನ್ನಡ ಜಿಲ್ಲೆಯ ವಿಭಜನೆಯಲ್ಲಿ ಕೆಲವರ ವಿರೋಧ ಇದೆ. ಹೀಗಾಗಿ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಶಿವರಾಮ ಹೆಬ್ಬಾರ ಸೇರಿದಂತೆ ಶಾಸಕರೊಂದಿಗೆ ಪ್ರತ್ಯೇಕ ಚರ್ಚೆ ನಡೆಸಿ ತೀರ್ಮಾನಕ್ಕೆ ಬರುತ್ತೇವೆ" ಎಂದು ತಿಳಿಸಿದ್ದಾರೆ.
ಸದ್ಯ ಶಿರಸಿ ಪ್ರತ್ಯೇಕ ಜಿಲ್ಲೆಯ ಬಗ್ಗೆ ಕಾಗೇರಿಯವರು ಧ್ವನಿ ಎತ್ತಿದ ಬೆನ್ನಲ್ಲೆ ಪರ ವಿರೋಧದ ಚರ್ಚೆಗಳು ಜೋರಾಗಿದೆ. ಜಿಲ್ಲೆಯ ಘಟ್ಟದ ಮೇಲ್ಬಾಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜಿಲ್ಲೆ ವಿಭಜನೆ ಅನಿವಾರ್ಯ ಎಂದು ಒಂದಿಷ್ಟು ಮಂದಿಯ ಅಭಿಪ್ರಾಯವಾದರೆ, ಹನ್ನೆರಡು ತಾಲೂಕುಗಳಿದ್ದರು ಕ್ಷೇತ್ರಗಳು ಮಾತ್ರ ಕೇವಲ ಆರು ಇದೆ. ಮೂರು ಮೂರು ಕ್ಷೇತ್ರಕ್ಕೆ ಒಂದು ಜಿಲ್ಲೆಯಾದರೆ ಹೇಗೆ ಎನ್ನುವುದು ಎನ್ನುವುದು ಇನ್ನು ಕೆಲವರ ಅಭಿಪ್ರಾಯವಾಗಿದೆ.












Click it and Unblock the Notifications