ಹೊನ್ನಾವರ: ಎರಡು ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ, ಮುರಿದು ಬಿದ್ದ ಮದುವೆ
ಕಾರವಾರ, ಜುಲೈ 30: ದೇವರ ವಂತಿಗೆ ಹಣ ಬಡ್ಡಿಗೆ ಪಡೆದು ವಾಪಸ್ ನೀಡದ ಕಾರಣಕ್ಕೆ ಎರಡು ಕುಟುಂಬವನ್ನು ಕಳೆದ 6 ವರ್ಷಗಳಿಂದ ಬಹಿಷ್ಕರಿಸಿರುವ ಗಂಭೀರ ಆರೋಪ ಹೊನ್ನಾವರದ ಕರಿಕುರ್ವಾ ಗ್ರಾಮದ ಅಂಬಿಗ ಸಮಾಜದಲ್ಲಿ ಕೇಳಿಬಂದಿದ್ದು, ಇದೀಗ ಎರಡು ಕುಟುಂಬದವರು ನ್ಯಾಯಕ್ಕಾಗಿ ಜಿಲ್ಲಾಡಳಿತದ ಮೆಟ್ಟಿಲು ಏರಿದ್ದಾರೆ.
ಹೊನ್ನಾವರದ ಕರಿಕುರ್ವಾ ಗ್ರಾಮದ ಲಕ್ಷ್ಮಿ ಬೋಳ ಅಂಬಿಗ ಎಂಬುವವರ ಇಬ್ಬರು ಮಕ್ಕಳು ಹಾಗೂ ಕುಟುಂಬದ ಸದಸ್ಯರಿಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ. ಇದರಿಂದ ಇವರೊಂದಿಗೆ ಸಮಾಜದ ಯಾರೊಬ್ಬರು ಮಾತನಾಡುವಂತಿಲ್ಲ. ಬಾವಿಯ ನೀರು ಕೊಡುವುದಿಲ್ಲ. ಅಂಗಡಿಯಲ್ಲಿ ಸಾಮಗ್ರಿ, ಮೀನು ಕೂಡ ನೀಡುವುದಿಲ್ಲ. ಒಂದೊಮ್ಮೆ ಯಾರಾದರು ತಪ್ಪಿದ್ದಲ್ಲಿ 1 ಸಾವಿರ ದಂಡ ಕೂಡ ಹಾಕಲಾಗುತ್ತದೆ ಎಂದು ಬಹಿಷ್ಕಾರಕ್ಕೊಳಗಾದ ಕುಟುಂಬಸ್ಥರು ಆರೋಪಿಸಿದ್ದಾರೆ.

ಸಮಾಜ ಸುಮಾರು 34 ಮನೆಗಳಿದೆ. ಆದರೆ ಎರಡು ಮನೆಗಳಿಗೆ ಮಾತ್ರ ಸಮಾಜದಲ್ಲಿ ನಡೆಯುವ ಮದುವೆ, ದೇವರ ಕಾರ್ಯ ಹೀಗೆ ಇತರೆ ಕಾರ್ಯಕ್ರಮಗಳಿಗೆ ಕರೆಯುವುದಿಲ್ಲ. ಸ್ಥಳೀಯವಾಗಿ ನದಿ ದಾಟಲು ದೋಣಿ ಹಾಕಲಾಗುತ್ತದೆ. ಅಲ್ಲಿ ಕೂಡ ಹತ್ತಲು ಅವಕಾಶ ನೀಡುವುದಿಲ್ಲ ಎಂದು ಆರೋಪಿಸಿದ್ದಾರೆ.
ಸಮಾದವರು ಶ್ರೀ ಗಂಗೆದೇವರಿಗೆ ವಂತಿಗೆ ಸಂಗ್ರಹಿಸಿ ಅದನ್ನು ಬಳಿಕ ಅಗತ್ಯವಿದ್ದವರಿಗೆ ಬಡ್ಡಿಗೆ ಹಂಚಿಕೆ ಮಾಡುತ್ತಿದ್ದರು. ಅದರಂತೆ ಧರ್ಮ ಬೋಳ ಅಂಬಿಗ ಈತನಿಗೆ 2017ರಲ್ಲಿ ವಂತಿಗೆ ಹಣದ 14 ಸಾವಿರ ಹಣವನ್ನು ನೀಡಲಾಗಿತ್ತು. ಬಡ್ಡಿ ಸೇರಿ ಈತ 18,200 ಹಣ ತುಂಬಬೇಕಿತ್ತು. ಆದರೆ ಅಂಗವೀಕಲನಾಗಿದ್ದ ಈತ ಸಮಾಜದವರು ಸೂಚಿಸಿದ ಸಮಯಕ್ಕೆ ತುಂಬಿರಲಿಲ್ಲ. ಸಮಯಾವಕಾಶ ಕೇಳಿದರು ನೀಡದೆ ಇದ್ದಾಗ ಬಹುಷ್ಕಾರ ಹಾಕಿದ್ದಾರೆ. ಬಳಿಕ ಒಂದು ವರ್ಷದಲ್ಲಿ ಬಡ್ಡಿ ಸೇರಿ ಹಣವನ್ನು ನೀಡಲಾಗಿದೆ. ಇಷ್ಟಾದರೂ ನಮ್ಮ ಮೇಲಿನ ಬಹಿಷ್ಕಾರವನ್ನು ಮುಂದುವರಿಸಲಾಗಿದೆ ಎಂದು ಮಂಜುನಾಥ ಅಂಬಿಗ ಆರೋಪಿಸಿದ್ದಾರೆ.
ಇನ್ನು ಊರಿನ ಮುಖಂಡರ ಈ ಅನ್ಯಾಯದ ಬಗ್ಗೆ ನಮ್ಮದೆ ಸಮಾಜದ 18 ಹಳ್ಳಿಯ ಮುಖಂಡರಿಗೆ ದೂರು ನೀಡಲಾಗಿತ್ತು. ಇದರಿಂದ ಸಿಟ್ಟಿಗೆದ್ದಿದ್ದ ಊರಿನ ಮುಖಂಡರು ನಮ್ಮನ್ನು ಸಂಪೂರ್ಣವಾಗಿ ಬಹಿಷ್ಕಾರ ಮಾಡಿದ್ದಾರೆ. ಈ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಗೂ ದೂರು ನೀಡಲಾಗಿತ್ತು. ಅಂದು ಪೊಲೀಸರು ಕರೆಸಿ ಸಭೆ ನಡೆಸಿ ಮುಚ್ಚಳಿಕೆ ಪತ್ರ ಕೂಡ ಬರೆಸಿಕೊಂಡಿದ್ದರು. ಆದರೂ ಕೂಡ ಮತ್ತದೆ ರೀತಿಯಲ್ಲಿ ಬಹಿಷ್ಕಾರ ಮುಂದುವರಿಸಿದ್ದಾರೆ. ಆದ್ದರಿಂದ ಕೂಡಲೇ ಸಮಸ್ಯೆ ಬಗೆಹರಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ದೂರು ನೀಡಿದ್ದಾರೆ.
ಮುರಿದು ಬಿದ್ದ ಮದುವೆ!
ಇನ್ನು ಬಹಿಷ್ಕಾರಕ್ಕೊಳಗಾದ ಮನೆಯ ಮಂಜು ಅಂಬಿಗ ಎನ್ನುವವರಿಗೆ ಧಾರೇಶ್ವರದ ಹುಡುಗಿಯೊಬ್ಬರನ್ನು ನೋಡಿ ಮದುವೆ ಮಾತುಕತೆ ನಡೆಸಲಾಗಿತ್ತು. ಅಲ್ಲದೇ ಜೂನ್ 6ರಂದು ಮದುವೆ ಕೂಡ ನಿಶ್ಚಯ ಮಾಡಲಾಗಿತ್ತು. ಆದರೆ ಊರಿನ ಮುಖಂಡರು ಹುಡುಗಿ ಮನೆಯವರಿಗೆ ಕರೆ ಮಾಡಿ ಬಹಿಷ್ಕಾರಕ್ಕೊಳಗಾಗಿರುವುದಾಗಿ ತಿಳಿಸಿದ್ದರಿಂದ ಇದೀಗ ಮದುವೆ ಮುರಿದು ಬಿದ್ದಿದೆ. ಇದರಿಂದ ನಮಗೆ ತೀವ್ರ ತೊಂದರೆಯಾಗಿದ್ದು, ಕೂಡಲೇ ಸಮಸ್ಯೆ ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತಕ್ಕೆ ನೀಡಿದ ಮನವಿಯಲ್ಲಿ ಆಗ್ರಹಿಸಿದ್ದಾರೆ.












Click it and Unblock the Notifications