ಉತ್ತರ ಕನ್ನಡದಲ್ಲಿ 186 ಜನರಲ್ಲಿ ಕುಡಗೋಲು ಕಾಯಿಲೆ: ರೋಗದ ಬಗ್ಗೆ ತಿಳಿದುಕೊಳ್ಳಲೇ ಬೇಕಾದ ಮಾಹಿತಿ ಇಲ್ಲಿದೆ
ಕಾರವಾರ, ಸೆಪ್ಟೆಂಬರ್ 13: ಉತ್ತರ ಕನ್ನಡ ಜಿಲ್ಲೆಯಲ್ಲಿ ಬುಡಕಟ್ಟು ಜನಾಂಗದಲ್ಲಿ ಸಿಕಲ್ ಸೆಲ್ ಅನಿಮಿಯಾ ಎಂಬ ಅನುವಂಶಿಕವಾಗಿ ಕಂಡುಬರುವ ಕಾಯಿಲೆಯೊಂದು ಪತ್ತೆಯಾಗಿದೆ. ಇದೀಗ ಜಿಲ್ಲೆಯ ಆರೋಗ್ಯ ಇಲಾಖೆ ಆಯುಷ್ಮಾನ್ ಭವ ಕಾರ್ಯಕ್ರಮದಲ್ಲಿ ಪ್ರತಿ ಮನೆಗಳಿಗೆ ತೆರಳಿ ಸಿಕಲ್ ಸೆಲ್ ರೋಗ ಪತ್ತೆಗೆ ಮುಂದಾಗಿದೆ.
ಕೇಂದ್ರ ಆರೋಗ್ಯ ಇಲಾಖೆ ದೇಶದಲ್ಲಿ ಸುಮಾರು 7 ಕೋಟಿ ಜನರಲ್ಲಿ ಈ ರೋಗ ಇರುವ ಬಗ್ಗೆ ಅನುಮಾನ ವ್ಯಕ್ತಪಡಿಸಿತ್ತು. ಅದರಂತೆ ಉತ್ತರಕನ್ನಡದ ಸಿದ್ದಿ ಹಾಗೂ ಇತರೆ ಕೆಲ ಸಮುದಾಯಗಳ ಸುಮಾರು 17 ಸಾವಿರ ಜನರಲ್ಲಿ ಈ ಕಾಯಿಲೆ ಇರುವ ಅನುಮಾನ ವ್ಯಕ್ತಪಡಿಸಿ ಪರಿಶೀಲನೆ ನಡೆಸಲು ಆರೋಗ್ಯ ಇಲಾಖೆಗೆ ಸೂಚಿಸಲಾಗಿತ್ತು.

ಅದರಂತೆ ಆರೋಗ್ಯ ಇಲಾಖೆ 2020-21ರಲ್ಲಿ ಜಿಲ್ಲೆಯ ಅಂಕೋಲಾ, ಮುಂಡಗೋಡ, ಹಳಿಯಾಳ ಹಾಗೂ ಯಲ್ಲಾಪುರ ತಾಲೂಕುಗಳಲ್ಲಿನ 3,846 ಜನರ ರಕ್ತದವಮಾದರಿಗಳನ್ನು ಪಡೆದು ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿತ್ತು. ಅದರಂತೆ ಈ ಪರೀಕ್ಷೆಯಲ್ಲಿ 186 ಜನರಲ್ಲಿ ರೋಗ ಪತ್ತೆಯಾಗಿರುವುದು ಇದೀಗ ತಡವಾಗಿ ಬೆಳಕಿಗೆ ಬಂದಿದೆ.
ಸದ್ಯ ಉತ್ತರ ಕನ್ನಡ ಮಾತ್ರವಲ್ಲದೆ ರಾಜ್ಯದ ಚಾಮರಾಜ ನಗರ, ದಕ್ಷಿಣ ಕನ್ನಡ ಸೇರಿದಂತೆ ಇತರೆ 7 ಜಿಲ್ಲೆಗಳಲ್ಲಿ ಆಯ್ದ ಜನಾಂಗಗಳಲ್ಲಿ ಈ ಕಾಯಿಲೆ ರೋಗ ಲಕ್ಷಣಗಳು ಇರಬಹುದು ಎಂದು ಊಹಿಸಲಾಗಿದೆ. ಅದರಂತೆ ಉತ್ತರ ಕನ್ನಡದಲ್ಲಿ ಡಿಸೆಂಬರ್ ಅಂತ್ಯದವರೆಗೆ ನಡೆಯುವ ಆಯುಷ್ಮಾನ್ ಭವ ಕಾರ್ಯಕ್ರಮದಲ್ಲಿ ಪ್ರತಿ ಮನೆ ಮನೆಗೆ ತೆರಳಿ ಸಿಕಲ್ ರೋಗ ಪತ್ತೆಗೆ ಆರೋಗ್ಯ ಇಲಾಖೆ ಮುಂದಾಗಿದೆ.
ಇನ್ನು ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಕುಷ್ಠರೋಗ ನಿಯಂತ್ರಣ ಅಧಿಕಾರಿ ಡಾ.ಶಂಕರರಾವ್ 'ಅನುವಂಶಿಕವಾಗಿ ಬರುವ ರೋಗ ಇದಾಗಿದೆ. ಈ ರೋಗವನ್ನು ರಕ್ತದ ಮಾದರಿ ಪಡೆದು ಅದನ್ನು ಸೂಕ್ಷ್ಮದರ್ಶಕದಲ್ಲಿ ನೋಡಿದಾಗ ಅವುಗಳು ಕುಡಗೋಲಿನ ಆಕಾರದಲ್ಲಿ ಕಾಣುತ್ತವೆ. ಇದರಿಂದ ಇದನ್ನು ಕುಡಗೋಲು ಕಾಯಿಲೆ ಎಂದು ಕೂಡ ಕರೆಯಲಾಗುತ್ತದೆ. ಕೆಂಪು ರಕ್ತ ಕಣಗಳಲ್ಲಿ ಕಂಡುಬರುವ ಆಮ್ಲಜನಕ ಸಾಗಿಸುವ ಪ್ರೋಟಿನ್, ಹೊಮೋಗ್ಲೊಬಿನ್‌ನಲ್ಲಿ ಅಸಹಜತೆ ಇರುತ್ತದೆ. ಮಗು ಹುಟ್ಟಿದ 5-6 ತಿಂಗಳಿನಲ್ಲಿಯೇ ಕಾಣಿಸಿಕೊಳ್ಳುವ ಈ ಕಾಯಿಲೆ ಬಳಿಕ ರಕ್ತ ಹೀನತೆ, ಕೈ ಕಾಲು ಊತ, ಅನಿಯಮಿತ ರಕ್ತಸ್ರಾವ, ಬ್ಯಾಕ್ಟಿರಿಯಾ ಸೋಂಕು ಕಾಣಿಸಿಕೊಳ್ಳುತ್ತದೆ' ಎಂದು ಮಾಹಿತಿ ನೀಡಿದ್ದಾರೆ.
ಇನ್ನು ಕಾಯಿಲೆಗೆ ಎರಡು ಹಂತದಲ್ಲಿ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತದೆ. ಪ್ರಾಥಮಿಕ ಹಂತವಾದಲ್ಲಿ ಸಿಕಲ್ ಸೆಲ್ ಟ್ರಿಪ್ ಹಾಗೂ ಗಂಭೀರ ಸ್ವರೂಪದಲ್ಲಿದ್ದರೇ ಸಿಕಲ್ ಸೆಲ್ ಡಿಸೀಸ್ ಪರಿಗಣಿಸಿ ಚಿಕಿತ್ಸೆ ನೀಡಲಾಗುತ್ತದೆ. ಗಂಭೀರವಾಗಿದ್ದಲ್ಲಿ ರಕ್ತವನ್ನು ಕೂಡ ಬದಲಾಯಿಸುವ ಪರಿಸ್ಥಿತಿ ಬರುವ ಸಾಧ್ಯತೆ ಇದೆ. ಆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಈವರೆಗೆ ಪತ್ತೆಯಾದವರಲ್ಲಿ ಯಾರಿಗೂ ಗಂಭೀರ ಸ್ವರೂಪದಲ್ಲಿ ಇಲ್ಲ ಎಂದು ಆರೋಗ್ಯಾಧಿಕಾರಿ ಡಾ. ನೀರಜ್ ಮಾಹಿತಿ ನೀಡಿದ್ದಾರೆ.
ಬುಧವಾರ ಆಯುಷ್ಮಾನ್ ಭವ ಕಾರ್ಯಕ್ರಮದಲ್ಲಿ ಮನೆ ಮನೆಗಳಿಗೆ ತೆರಳಿ ತಪಾಸಣೆ ಮಾಡಲಾಗುತ್ತದೆ. ಇಂತಹ ರೋಗ ಕಂಡುಬಂದವರಿಗೆ ಚಿಕಿತ್ಸೆಗೊಳಪಡಿಸುವುದರ ಜೊತೆಗೆ ಅವರಿಗೆ ಅಂಗವಿಕಲರ ಕಾರ್ಡ್ ಹಾಗೂ ವಿಶೇಷ ಸೌಲಭ್ಯಗಳನ್ನು ನೀಡುವ ಕೇಂದ್ರ ಸರ್ಕಾರದ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯ ಪ್ರದೇಶದಲ್ಲಿ ಇತ್ತೀಚೆಗೆ ಚಾಲನೆ ನೀಡಿದ್ದಾರೆ. ಈ ಸೌಲಭ್ಯ ಜಿಲ್ಲೆಯ ರೋಗಿಗಳಿಗೂ ಸಿಗುವ ಸಾಧ್ಯತೆ ಇದೆ ಎಂದು ಅವರು ಮಾಹಿತಿ ನೀಡಿದ್ದಾರೆ.












Click it and Unblock the Notifications