Shiroor Landslide: ಶಿರೂರು ಗುಡ್ಡ ಕುಸಿತ ಅರ್ಜುನ್ ಲಾರಿ, ಎರಡು ಶವ ಪತ್ತೆ
ಕಾರವಾರ, ಸೆಪ್ಟೆಂಬರ್ 25: ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿತದಿಂದ ನಾಪತ್ತೆಯಾಗಿದ್ದ ಕೇರಳ ಮೂಲದ ಅರ್ಜುನ್ ಲಾರಿ ಪತ್ತೆಯಾಗಿದೆ. ಲಾರಿಯಲ್ಲಿ ಎರಡು ಶವಗಳು ಸಿಕ್ಕಿದ್ದು, ಶವಗಳ ಗುರುತು ಪತ್ತೆಯಾಗಬೇಕಿದೆ. ಜುಲೈ 16ರಂದು ಭಾರೀ ಮಳೆ ಕಾರಣಕ್ಕೆ ಗುಡ್ಡ ಕುಸಿತವಾಗಿತ್ತು. 9ಕ್ಕೂ ಅಧಿಕ ಜನರು ಈ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಮೂವರು ನಾಪತ್ತೆಯಾಗಿದ್ದರು.
ಶನಿವಾರದ ಕಾರ್ಯಾಚರಣೆ ವೇಳೆ ಅರ್ಜುನ್‌ಗೆ ಸೇರಿದ ಲಾರಿಯ ಕೆಲವು ಭಾಗಗಳು ಪತ್ತೆಯಾಗಿತ್ತು. ಬುಧವಾರ ಗಂಗಾವಳಿ ನದಿಯಿಂದ ಲಾರಿ ಹೊರ ತೆಗೆಯಲಾಗುತ್ತಿದ್ದು, ಲಾರಿಯಲ್ಲಿ ಎರಡು ಶವಗಳು ಪತ್ತೆಯಾಗಿವೆ. ಸೋಮವಾರ ಅರ್ಜುನ್ ಕುಟುಂಬದವರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಕಾರ್ಯಾಚರಣೆ ಕುರಿತು ಮಾಹಿತಿ ಪಡೆದಿದ್ದರು.

ಗುಡ್ಡ ಕುಸಿತವಾದಾಗ ಲಾರಿ ಸಮೇತರಾಗಿ ಕೇರಳ ಮೂಲದ ಲಾರಿ ಚಾಲಕ ಅರ್ಜುನ್ ನಾಪತ್ತೆಯಾಗಿದ್ದರು. ಲಾರಿಯಲ್ಲಿ ಇರುವ ಎರಡು ಶವಗಳ ಪೈಕಿ ಅವರುದ್ದು ಒಂದು ಇರಬಹುದು ಎಂದು ಅಂದಾಜಿಸಲಾಗಿದೆ. ಸುಮಾರು 70 ದಿನಗಳ ಬಳಿಕ ಶವ ಪತ್ತೆಯಾಗಿದ್ದು, ಗುರುತು ಇನ್ನೂ ಪತ್ತೆಯಾಗಬೇಕಿದೆ.
ಲಾರಿ ಚಾಲಕ ಅರ್ಜುನ್ ಪತ್ತೆಗಾಗಿ ಕಾರ್ಯಾಚರಣೆ ನಡೆಸಬೇಕು ಎಂದು ಕೇರಳ ಸರ್ಕಾರ ಕರ್ನಾಟಕ್ಕೆ ಮನವಿ ಮಾಡಿತ್ತು. ಆದ್ದರಿಂದ ಈಗ ಮಳೆ ಕಡಿಮೆಯಾಗಿ ಗಂಗಾವಳಿ ನದಿಯಲ್ಲಿ ನೀರಿನ ಮಟ್ಟ ಇಳಿಕೆಯಾದ ಬಳಿಕ ಕಾರ್ಯಾಚರಣೆಯನ್ನು ಪುನಃ ಆರಂಭಿಸಲಾಗಿತ್ತು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತವಾಗಿ ಲಾರಿಯ ಜೊತೆ ಚಾಲಕ ಅರ್ಜುನ್ ನಾಪತ್ತೆಯಾದ ಬಳಿಕ ಗಂಗಾವಳಿ ನದಿಯಲ್ಲಿ 3ನೇ ಬಾರಿಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ಕಾರ್ಯಾಚರಣೆಗಾಗಿ ಗೋವಾದಿಂದ ಬೃಹತ್ ಬಾರ್ಜ್ ಸಹಿತ ಡ್ರಜ್ಜಿಂಗ್ ಮಷಿನ್ ಮತ್ತು ಈಜುಗಾರರನ್ನು ಕರೆಸಲಾಗಿದೆ. ಶನಿವಾರ ಈಶ್ವರ ಮಲ್ಪೆ ನೇತೃತ್ವದ ಮುಳುಗು ತಜ್ಞರು ಸಹ ಪಾಲ್ಗೊಂಡಿದ್ದರು. ಬಳಿಕ ಅವರು ವಾಪಸ್ ಆಗಿದ್ದಾರೆ.
ಸೆಪ್ಟೆಂಬರ್ 21ರಂದು ಕಾರ್ಯಾಚರಣೆ ವೇಳೆ ನದಿಯಲ್ಲಿ ಮುಳುಗಿದ ಲಾರಿಯ 2 ಚಕ್ರ ದೊರೆತಿರುತ್ತದೆ. ಶೋಧ ಕಾರ್ಯಾಚರಣೆ ಮುಂದುವರೆದಿದೆ ಎಂದು ಉತ್ತರ ಕನ್ನಡ ಎಸ್‌ಪಿ ಮಾಹಿತಿ ನೀಡಿದ್ದರು. ಬೃಹತ್ ಬಾರ್ಜ್ ಸಹಿತ ಡ್ರಜ್ಜಿಂಗ್ ಮಷಿನ್ ಮೂಲಕ ಶಿರೂರು ಗುಡ್ಡ ಕುಸಿತದಲ್ಲಿ ಕಾಣೆಯಾದವರ ಶೋಧ ಮುಂದುವರಿದಿದೆ.
ಶಿರೂರಿನಲ್ಲಿ ಗುಡ್ಡ ಕುಸಿತವಾದಾಗ 11 ಜನರು ನಾಪತ್ತೆಯಾಗಿದ್ದರು. ಇವರಲ್ಲಿ 9 ಶವಗಳು ಪತ್ತೆಯಾಗಿತ್ತು. ಗುಡ್ಡ ಕುಸಿತವಾದಾಗ ಲಾರಿಯಲ್ಲಿ ಮರದ ದಿಮ್ಮಿಗಳನ್ನು ತುಂಬಿಕೊಂಡು ಬರುತ್ತಿದ್ದ ಅರ್ಜುನ್ ಮಣ್ಣಿನ ಜೊತೆ ಲಾರಿಯೊಂದಿಗೆ ಗಂಗಾವಳಿ ನದಿಗೆ ಕೊಚ್ಚಿಕೊಂಡು ಹೋಗಿದ್ದರು.
ಮಳೆಗಾಲದಲ್ಲಿ ನದಿ ತುಂಬಿ ಹರಿಯುತ್ತಿದ್ದಾಗ ನಡೆಸಿದ ಕಾರ್ಯಾಚರಣೆ ವೇಳೆಯಲ್ಲಿ ಅರ್ಜುನ್ ಬಗ್ಗೆ ಆಗಲಿ, ಲಾರಿಯ ಬಗ್ಗೆಯಾಗಲಿ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೆ ಈಗ ನದಿಯಲ್ಲಿ ನೀರಿನ ಮಟ್ಟ ಇಳಿಕೆಯಾದ ಬಳಿಕ ಮತ್ತೆ ಕಾರ್ಯಾಚರಣೆ ಆರಂಭಿಸಲಾಗಿದೆ.
ಲಾರಿಯನ್ನು ನದಿಯಿಂದ ಸಂಪೂರ್ಣವಾಗಿ ಮೇಲೆತ್ತಿದ ಬಳಿಕ ಶವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ಮಾಡಲಾಗುತ್ತದೆ. ಬಳಿಕ ಲಾರಿಯಲ್ಲಿರುವ ಶವಗಳು ಯಾರದ್ದು? ಎಂಬ ಮಾಹಿತಿ ತಿಳಿಯಲಿದೆ.












Click it and Unblock the Notifications