ಗುಡ್ಡ ಕೊರೆದು ರಸ್ತೆ ಕಾಮಗಾರಿ: ಕಾರವಾರದ ನಿವಾಸಿಗಳಲ್ಲಿ ಆತಂಕ
ಕಾರವಾರ, ಸೆಪ್ಟೆಂಬರ್, 18: ಭಾರೀ ಮಳೆ ಸುರಿದ ಬೆನ್ನಲ್ಲೇ ಉತ್ತರ ಕನ್ನಡ ಜಿಲ್ಲೆಯ ವಿವಿಧೆಡೆ ಗುಡ್ಡ ಕುಸಿದು ಸಾಕಷ್ಟು ಅನಾಹುತ ಸಂಭವಿಸಿದೆ. ಅದರಲ್ಲಿಯೂ ಗುಡ್ಡಗಳನ್ನು ಕೃತಕವಾಗಿ ಕೊರೆದ ಪ್ರದೇಶಗಳಲ್ಲಿಯೇ ಇಂತಹ ಅನಾಹುತಗಳು ಸಂಭವಿಸುತ್ತಿದ್ದು, ಅಮಾಯಕ ಜೀವಗಳು ಬಲಿ ಆಗುವಂತಾಗಿದೆ.
ಆದರೆ ಇದೀಗ ಜಿಲ್ಲಾಧಿಕಾರಿ ಕಚೇರಿ ಸಮೀಪವೇ ನೌಕಾನೆಲೆಯಿಂದ ಬೃಹತ್ ಗುಡ್ಡವನ್ನು ಕೊರೆದು ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಆದ್ದರಿಂದ ಗುಡ್ಡದ ಪಕ್ಕದಲ್ಲಿ ವಾಸವಾಗಿರುವ ನೂರಾರು ಕುಟುಂಬಗಳಿಗೆ ಇದೀಗ ಆತಂಕ ಶುರುವಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಭಾರೀ ಮಳೆರಾಯ ಅಬ್ಬರಿಸುತ್ತಲೇ ಇದ್ದಾನೆ. ಮಳೆರಾಯನ ಆರ್ಭಟದ ಬೆನ್ನಲ್ಲೇ ಜಿಲ್ಲೆಯ ವಿವಿಧೆಡೆ ಗುಡ್ಡಗಳು ಕುಸಿತವಾಗುತ್ತಿದ್ದು, ಇನ್ನು ಕೆಲವೆಡೆ ಗುಡ್ಡಗಳು ಬಿರುಕು ಬಿಟ್ಟು ಕುಸಿಯುವ ಭೀತಿ ಎದುರಾಗಿದೆ. ಇದರ ನಡುವೆಯೇ ಜಿಲ್ಲಾ ಕೇಂದ್ರ ಕಾರವಾರದ ಬೈತಖೋಲದಲ್ಲಿ ನೌಕಾನೆಲೆಯಿಂದ ನಡೆಸುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿಯೊಂದು ಈ ಭಾಗದ ಜನರಲ್ಲಿ ಗುಡ್ಡ ಕುಸಿತದ ಭೀತಿ ಉಂಟು ಮಾಡಿದೆ.
ನೌಕಾನೆಲೆ ವ್ಯಾಪ್ತಿಗೆ ಒಳಪಡುವ ಸುಮಾರು 800 ಎಕರೆಗೂ ಹೆಚ್ಚು ವಿಸ್ತಾರವಾಗಿರುವ ಬೈತಖೋಲದ ಗುಡ್ಡವನ್ನು ಜೆಸಿಬಿಗಳನ್ನು ಉಪಯೋಗಿಸಿ ಕೊರೆಯಲಾಗಿದೆ. ಕಳೆದ ಕೆಲ ದಿನಗಳಿಂದ ಗುಡ್ಡ ಕೊರೆದು ರಸ್ತೆ ಕಾಮಗಾರಿ ನಡೆಸುತ್ತಿದ್ದಾರೆ. ಆದರೆ ಕಾಮಗಾರಿ ನಡೆಯುತ್ತಿರುವ ಗುಡ್ಡದ ಕೆಳ ಭಾಗದಲ್ಲಿಯೇ ಮೀನುಗಾರರು ವಾಸ್ತವ್ಯ ಹೂಡಿದ್ದು, ನೂರಕ್ಕೂ ಹೆಚ್ಚು ಮನೆಗಳ ಜನರಿಗೆ ಆತಂಕ ಶುರುವಾಗಿದೆ.

ರಸ್ತೆ ನಿರ್ಮಾಣ ಗುಡ್ಡದಲ್ಲಿನ ಮಣ್ಣು ತೆರವು
ಗುಡ್ಡದಲ್ಲಿ ಬೃಹತ್ ಪ್ರಮಾಣದಲ್ಲಿ ಮಣ್ಣನ್ನು ತೆರವು ಮಾಡಿ ರಸ್ತೆ ನಿರ್ಮಾಣ ಮಾಡುತ್ತಿದ್ದು, ಗುಡ್ಡ ಕುಸಿಯುವ ಭೀತಿ ಎದುರಾಗಿದೆ. ಒಂದು ವೇಳೆ ಗುಡ್ಡ ಕುಸಿದರೆ ನೂರಾರು ಜನರಿಗೆ ದೊಡ್ಡ ಅನಾಹುತ ಆಗಲಿದೆ ಎಂದು ಸ್ಥಳೀಯರಾದ ವಿನಾಯಕ ಹರಿಕಂತ್ರ ಆತಂಕ ವ್ಯಕ್ತಪಡಿಸಿದ್ದಾರೆ.

ಗುಡ್ಡದ ಪಕ್ಕದಲ್ಲಿ ರಸ್ತೆ ಕಾಮಗಾರಿ
ಇನ್ನು ಈ ಹಿಂದೆಯೇ ನೌಕಾನೆಲೆಯಿಂದ ಗುಡ್ಡದ ಪಕ್ಕದಲ್ಲಿ ರಸ್ತೆ ಕಾಮಗಾರಿಗೆ ಮುಂದಾಗಿದ್ದರು. ಆದರೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕಾಮಗಾರಿ ನಡೆಸಲು ಬಂದಂತಹ ಜೆಸಿಬಿಗಳನ್ನು ವಾಪಾಸ್ ಕಳುಹಿಸಲಾಗಿತ್ತು. ಇದೀಗ ನೌಕಾನೆಲೆಯವರು ತಮ್ಮ ವ್ಯಾಪ್ತಿಗೊಳಪಡುವ ಗುಡ್ಡ ಪ್ರದೇಶದಲ್ಲಿ ಮಣ್ಣನ್ನು ತೆರವು ಮಾಡಿ ರಸ್ತೆಯನ್ನು ಮಾಡುತ್ತಿದ್ದಾರೆ. ಹೀಗೆ ರಸ್ತೆ ಮಾಡಿ ಗುಡ್ಡ ಕುಸಿತವಾದರೆ ಅಲ್ಲಿ ವಾಸವಾಗುವ ನೂರಾರು ಮೀನುಗಾರರ ಕುಟುಂಬಗಳಿಗೆ ಕಂಟಕ ಆಗಲಿದೆ. ಈಗಾಗಲೇ ಅಲೆ ತಡೆಗೋಡೆ ನಿರ್ಮಾಣ ಮಾಡಿದ ವ್ಯಾಪ್ತಿಯ ಗುಡ್ಡ ಕೆಳಗಡೆ ಕುಸಿತವಾಗುತ್ತಿದೆ. ರಸ್ತೆ ಕಾಮಗಾರಿ ಜಿಲ್ಲಾಡಳಿತದ ಸ್ವಲ್ಪ ದೂರದಲ್ಲಿದ್ದರೂ, ಈ ಬಗ್ಗೆ ಯಾವ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಕೂಡಲೇ ಕಾಮಗಾರಿ ಸ್ಥಗಿತಗೊಳಿಸಲು ಸೂಚಿಸಬೇಕು ಎಂಬುದು ಮೀನುಗಾರರ ಆಗ್ರಹವಾಗಿದೆ.

ಗುಡ್ಡ ಕುಸಿತದಿಂದ ಜೀವಗಳಿಗೆ ಹಾನಿ
ಜಿಲ್ಲೆಯಲ್ಲಿ ಗುಡ್ಡ ಕುಸಿತವಾದ ಭಟ್ಕಳದ ಮುಟ್ಟಳ್ಳಿ, ಅರೆಬೈಲ್ ಘಟ್ಟ, ಅಣಶಿ ಘಟ್ಟ, ಕಳಚೆ ಸೇರಿದಂತೆ ಬಹುತೇಕ ಕಡೆ ಕೃತಕವಾಗಿ ಮಣ್ಣು ತೆರವು ಮಾಡಿದ್ದರು. ಇದರ ಪರಿಣಾಮ ಈ ಪ್ರದೇಶದಲ್ಲಿ ಭಾರೀ ಮಳೆಗೆ ಗುಡ್ಡ ಕುಸಿತವಾಗಿದೆ. ಕಳೆದ ಕೆಲ ವರ್ಷದ ಹಿಂದೆಯೂ ಕಡವಾಡದಲ್ಲಿ ಗುಡ್ಡ ಕುಸಿತ ಆದಾಗ 20ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಇದೀಗ ಇಲ್ಲಿ ಗುಡ್ಡ ಕೊರೆದು ರಸ್ತೆ ನಿರ್ಮಾಣ ಮಾಡುತ್ತಿರುವುದು ಸರಿಯಲ್ಲ. ಗುಡ್ಡದ ಸ್ಥಿತಿಗಳ ಅಧ್ಯಯನ ನಡೆಸಿದ್ದಾರೋ ಇಲ್ಲವೋ? ಎಂಬ ಬಗ್ಗೆಯೂ ಮಾಹಿತಿ ಇಲ್ಲ. ನೌಕಾನೆಲೆಯಿಂದ ಇದೀಗ ಕಾಮಗಾರಿ ಮಾಡಲಾಗುತ್ತದೆ. ಆದರೆ ಏನಾದರೂ ಅವಘಡ ಸಂಭವಿಸಿದ್ದಲ್ಲಿ ಸ್ಥಳೀಯರಿಗೆ ತೊಂದರೆ ಆಗಲಿದೆ. ಇಂತಹ ಕಾಮಗಾರಿಯನ್ನು ಅಧಿಕಾರಿಗಳು ತಕ್ಷಣ ಮಧ್ಯ ಪ್ರವೇಶಿಸಿ ನಿಲ್ಲಿಸಬೇಕು ಎಂದು ಮೀನುಗಾರರ ಮುಖಂಡ ಗಣಪತಿ ಮಾಂಗ್ರೆ ಆಗ್ರಹಿಸಿದ್ದಾರೆ.

ನೌಕಾನೆಲೆ ವಿರುದ್ಧ ಜನಾಕ್ರೋಶ
ಒಟ್ಟಾರೆ ಜನವಸತಿ ಪ್ರದೇಶದ ಬಳಿ ನೌಕಾನೆಲೆಯಿಂದ ಗುಡ್ಡ ಕೊರೆದು ರಸ್ತೆ ನಿರ್ಮಾಣಕ್ಕೆ ಮುಂದಾಗಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿಯೂ ಹಲವು ಕಡೆ ಗುಡ್ಡ ಕುಸಿಯುತ್ತಿದ್ದು, ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರ ಆಗ್ರಹವಾಗಿದೆ.












Click it and Unblock the Notifications