ಹೊಸ ವರ್ಷಾಚರಣೆ: ಕಾರವಾರ ಕಡಲ ತೀರ ಖಾಲಿ, ಗೋವಾ ಫುಲ್
ಕಾರವಾರ, ಡಿಸೆಂಬರ್ 31: ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಸೇರುತ್ತಿದ್ದ ಕಾರವಾರದ ರವೀಂದ್ರನಾಥ ಟಾಗೋರ್ ಕಡಲತೀರದಲ್ಲಿ ಕೊರೊನಾ ಭೀತಿಯಿಂದಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಇದರಿಂದ ಕಡಲತೀರ ಜನರಿಲ್ಲದೆ ಬೀಕೋ ಎನ್ನುತ್ತಿದೆ.
ರೂಪಾಂತರ ವೈರಸ್ ಆತಂಕದಿಂದಾಗಿ ಹೊಸ ವರ್ಷದ ಸಂಭ್ರಮಾಚರಣೆಗೆ ಉತ್ತರ ಕನ್ನಡ ಜಿಲ್ಲೆಯ ಕರಾವಳಿಯ ಬೀಚ್ ಸೇರಿದಂತೆ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಾಜ್ಞೆ ಹೇರಲಾಗಿದೆ. ಬೀಚ್ ನಲ್ಲಿ ಹೊಸ ವರ್ಷ ಆಚರಣೆಗೆ ಬಂದಿದ್ದ ಜನರಿಗೆ ನಿರಾಸೆಯಾಗಿದೆ.
ಪ್ರತಿನಿತ್ಯ ಸಂಜೆ ಕಾರವಾರದ ಕಡಲತೀರದಲ್ಲಿ ಅನೇಕ ಸೇರುತ್ತಿದ್ದರು. ಆದರೆ ಇಂದು ನಿಷೇಧಾಜ್ಞೆ ಇರುವುದರಿಂದ ಸಾರ್ವಜನಿಕರ ಪ್ರವೇಶಕ್ಕೆ ಪೊಲೀಸರು ತಡೆಯೊಡ್ಡಿದ್ದಾರೆ. ಇದರ ಪರಿಣಾಮ ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರ ಜನರಿಲ್ಲದೆ ಖಾಲಿ ಖಾಲಿಯಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ಮಾತ್ರವಲ್ಲದೆ, ಗೋಕರ್ಣ, ಮುರುಡೇಶ್ವರ, ಹೊನ್ನಾವರದಂತಹ ಪ್ರಮುಖ ಕಡಲತೀರಗಳಿಗೂ ಜನರ ಪ್ರವೇಶ ನಿಷೇಧಿಸಲಾಗಿದೆ. ಹೀಗಾಗಿ ಹೊಸ ವರ್ಷಾಚರಣೆಗೆ ಜಿಲ್ಲೆಯಲ್ಲಿ ಸಂಪೂರ್ಣ ಬ್ರೇಕ್ ಬಿದ್ದಿದ್ದು, ಕಡಲತೀರಗಳಿಗೆ ಬರುತ್ತಿದ್ದ ಜನರನ್ನು ಪೊಲೀಸರು ವಾಪಸ್ ಕಳುಹಿಸುತ್ತಿದ್ದಾರೆ.
ಇನ್ನು ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡುತ್ತಿದ್ದಂತೆ ಜಿಲ್ಲೆಗೆ ಆಗಮಿಸಿದ ಹೊರ ಜಿಲ್ಲೆಯ ಪ್ರವಾಸಿಗರು ಸೇರಿದಂತೆ ಜಿಲ್ಲೆಯ ಜನರು ಪಕ್ಕದ ರಾಜ್ಯ ಗೋವಾ ಬೀಚ್ ಗಳತ್ತ ಹೋಗುತ್ತಿದ್ದಾರೆ. ಇದರಿಂದಾಗಿ ಗೋವಾದ ಎಲ್ಲ ಕಡಲ ತೀರಗಳು ತುಂಬಿ ತುಳುಕುತ್ತಿದ್ದು, ಹೊಸ ವರ್ಷವನ್ನು ಸಂಭ್ರಮಾಚರಣೆ ಮೂಲಕ ಸ್ವಾಗತಿಸಲು ಕಾತರರಾಗಿದ್ದಾರೆ.