Bengaluru: ಬನ್ನೇರುಘಟ್ಟ ರಸ್ತೆ ದುರಸ್ತಿ ಕಾರ್ಯ ಪ್ರಾರಂಭ - ಪ್ರಾಥಮಿಕವಾಗಿ 1.5 ಕಿ.ಮೀ ಡಾಂಬರೀಕರಣ: ಜಿಬಿಎ ಅಪ್ಡೇಟ್ಸ್
Bengaluru: ಬನ್ನೇರುಘಟ್ಟ ರಸ್ತೆ ದುರಸ್ತಿ ಕಾರ್ಯ ಪ್ರಾರಂಭ - ಪ್ರಾಥಮಿಕವಾಗಿ 1.5 ಕಿ.ಮೀ ಡಾಂಬರೀಕರಣ ಮಾಡಲಾಗುವುದು ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಆಯುಕ್ತರಾದ ಕೆ.ಎನ್ ರಮೇಶ್ ಅವರು ಮಾಹಿತಿ ನೀಡಿದ್ದಾರೆ.
ಬೆಂಗಳೂರು ನಗರದ ಪ್ರಮುಖ ಸಂಪರ್ಕ ರಸ್ತೆಗಳಲ್ಲಿ ಒಂದಾದ ಬನ್ನೇರಘಟ್ಟ ರಸ್ತೆಯು ಬಿಡಬ್ಲ್ಯುಎಸ್‌ಎಸ್‌ಬಿ ವತಿಯಿಂದ ಕೈಗೊಳ್ಳಲಾಗಿದ್ದ ಒಳಚರಂಡಿ ಪೈಪ್‌ಲೈನ್ ಅಳವಡಿಕೆ ಕಾಮಗಾರಿಗಳಿಂದಾಗಿ ತೀವ್ರವಾಗಿ ಹದಗೆಟ್ಟಿತ್ತು. ಈ ಕಾಮಗಾರಿಯಿಂದ ರಸ್ತೆಯ ಮೇಲ್ಮೈ ಹಾಳಾಗಿ ದಿನನಿತ್ಯ ಸಂಚರಿಸುವ ಸಾವಿರಾರು ವಾಹನ ಸವಾರರು ಮತ್ತು ಸ್ಥಳೀಯ ನಿವಾಸಿಗಳು ತೀವ್ರ ಧೂಳಿನ ಸಮಸ್ಯೆ ಹಾಗೂ ಗುಂಡಿಗಳಿಂದ ಕೂಡಿದ ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಪಡುವಂತಾಗಿತ್ತು.

ಸಾರ್ವಜನಿಕ ದೂರಿನ ಮೇರೆಗೆ ಆಯುಕ್ತರಿಂದ ತಪಾಸಣೆ
ಇನ್ನು ಬನ್ನೇರುಘಟ್ಟ ಮುಖ್ಯರಸ್ತೆಯ ಅಸ್ತವ್ಯಸ್ಥತೆ ಕುರಿತಂತೆ ಸಾರ್ವಜನಿಕರ ದೂರುಗಳು ಹಾಗೂ ಮಾಧ್ಯಮಗಳ ವರದಿಗಳನ್ನು ಗಂಭೀರವಾಗಿ ಪರಿಗಣಿಸಿದ ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಆಯುಕ್ತರಾದ ಕೆ.ಎನ್ ರಮೇಶ್ ಅವರು ತಪಾಸಣೆ ನಡೆಸಿದರು. ಸ್ಥಳದಲ್ಲಿದ್ದ ವಾಸ್ತವ ಪರಿಸ್ಥಿತಿಯನ್ನು ಅವಲೋಕಿಸಿದ ಆಯುಕ್ತರು, ಸಾರ್ವಜನಿಕರ ಸುರಕ್ಷತೆ ಮತ್ತು ಸುಗಮ ಸಂಚಾರವನ್ನು ಗಮನದಲ್ಲಿಟ್ಟುಕೊಂಡು ತಕ್ಷಣವೇ ರಸ್ತೆಯನ್ನು ಡಾಂಬರೀಕರಣಗೊಳಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.
ಬನ್ನೇರುಘಟ್ಟ ಮುಖ್ಯರಸ್ತೆಯ ಡಾಂಬರೀಕರಣ ಕಾರ್ಯ ಪ್ರಾರಂಭ
ಆಯುಕ್ತರ ಆದೇಶದ ಮೇರೆಗೆ, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಕಾರ್ಯಪ್ರವೃತ್ತರಾಗಿ ಕಾಮಗಾರಿಯನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಂಡು, ಪ್ರಾಥಮಿಕವಾಗಿ ರಸ್ತೆಯ ಒಟ್ಟು 1.5 ಕಿ.ಮೀ ಉದ್ದದ ಅತೀ ಹೆಚ್ಚು ಹಾನಿಗೊಳಗಾದ ಭಾಗದಲ್ಲಿ ದುರಸ್ತಿ ಕಾರ್ಯವನ್ನು ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬನ್ನೇರುಘಟ್ಟ ಮುಖ್ಯರಸ್ತೆ ಡಾಂಬರೀಕರಣ ಆಯುಕ್ತರು ಹೇಳಿದ್ದೇನು
ಬನ್ನೇರುಘಟ್ಟ ಮುಖ್ಯರಸ್ತೆಯ ಕಲ್ಯಾಣಿ ಚೌಲ್ಟ್ರಿಯಿಂದ ಆರಂಭಗೊಂಡು ಐಐಎಂಬಿ (IIMB) ಮೆಟ್ರೋ ನಿಲ್ದಾಣದವರೆಗಿನ ಸುಮಾರು 1 ಕಿ.ಮೀ ರಸ್ತೆಯ ಡಾಂಬರೀಕರಣದ ಕಾಮಗಾರಿ ನಡೆಸಲಾಗಿದ್ದು, ವಾಹನ ಸವಾರರಿಗೆ ಸಂಚಾರಕ್ಕೆ ಸುಗಮವಾಗಿದೆ. ಬಾಕಿ ಉಳಿದಿರುವ ರಸ್ತೆಯ ಭಾಗದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ನಾಳೆ ರಾತ್ರಿಯೊಳಗೆ ಸಂಪೂರ್ಣವಾಗಿ ಡಾಂಬರೀಕರಣವನ್ನು ಮುಗಿಸಿ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗುವುದು.
ಸಾರ್ವಜನಿಕರ ಹಿತದೃಷ್ಟಿಯಿಂದ ಈ ಡಾಂಬರೀಕರಣ ಕಾಮಗಾರಿಯನ್ನು ತುರ್ತಾಗಿ ಕೈಗೊಂಡಿದ್ದು, ಆದಷ್ಟು ಬೇಗ ಪೂರ್ಣಗೊಳಿಸಲಾಗುವುದು. ಇದರಿಂದ ಬನ್ನೇರುಘಟ್ಟ ಮುಖ್ಯರಸ್ತೆ ಧೂಳು ಮುಕ್ತ ರಸ್ತೆಯಾಗಿ, ಸುಗಮ ವಾಹನ ಸಂಚಾರಕ್ಕೆ ಅವಕಾಶ ದೊರೆಯಲಿದೆ ಎಂದು ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಆಯುಕ್ತರಾದ ಕೆ.ಎನ್ ರಮೇಶ್ ಅವರು ಮಾಹಿತಿ ನೀಡಿದ್ದಾರೆ.
ಇನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಭಿವೃದ್ಧಿ ಕಾಮಗಾರಿಗಳಿಂದ ಈ ಭಾಗದ ಜನರು ನಿಟ್ಟುಸಿರುವ ಬಿಡುವಂತೆ ಆಗಿದೆ.












Click it and Unblock the Notifications