ಜೈಲಿಗೆ ಹೋಗುವಂತವರು ನಶಿಸಿ ಹೋಗ್ತಾರೆ: ಉಮಾಪತಿ ಗೌಡ
ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್ ಜೈಲು ಪಾಲಾಗಿದ್ದ ಸಂದರ್ಭದಲ್ಲಿ ದರ್ಶನ್ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದ್ದ ಕನ್ನಡ ಚಿತ್ರರಂಗದ ನಿರ್ಮಾಪಕ ಉಮಾಪತಿ ಗೌಡ ಮತ್ತೆ ಸುದ್ದಿಯಲ್ಲಿದ್ದಾರೆ. ಇದೀಗ ಅವರ ಮತ್ತೊಂದು ಹೇಳಿಕೆ ವೈರಲ್ ಆಗುತ್ತಿದೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸಿದ್ದಾಪುರದ ಹಲಗಡಿಕೊಪ್ಪದಲ್ಲಿ ನಡೆದ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ನಿರ್ಮಾಪಕ ಉಮಾಪತಿ ಗೌಡ ಭಾಗಿಯಾಗಿದ್ದು, ಈ ವೇಳೆ ವೇದಿಕೆ ಮೇಲೆ ಮಾತನಾಡಿದ ಅವರು ಜೈಲಿಗೆ ಹೋಗುವಂತವರು, ಎಚ್ಚರಿಕೆ ಕೊಡುವವರು ನಶಿಸಿ ಹೋಗುತ್ತಾರೆ ಎನ್ನುವ ಹೇಳಿಕೆ ವೈರಲ್ ಆಗುತ್ತಿದೆ.

'ನಾನು ಅನೇಕ ತಂಟೆ ತಕರಾರುಗಳನ್ನು ಎದುರಿಸಿ ಈ ವೇದಿಕೆ ಮೇಲೆ ನಿಂತಿದ್ದೇನೆ. ದೊಡ್ಡ ದೊಡ್ಡವರನ್ನು ಎದುರು ಹಾಕಿಕೊಂಡು ಏನಪ್ಪಾ ಮಾಡ್ತಿಯಾ ಅಂತಾ ನನ್ನನ್ನು ಅನೇಕ ಜನ ಕೇಳುತ್ತಾರೆ. ನಾನು ಯಾರನ್ನೂ ಎದುರು ಹಾಕಿಕೊಳ್ಳಲ್ಲ, ಅವರೇ ನನ್ನನ್ನು ಎದುರು ಹಾಕಿಕೊಳ್ಳುತ್ತಾರೆ' ಎಂದರು.
'ದಿನದಿಂದ ದಿನಕ್ಕೆ ನಾವು ಒಂದು ವಿಚಾರವನ್ನು ತಲೆಯಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ನಾವು ಗಟ್ಟಿಯಾಗಿದ್ದೇವೆ. ನಾವು ಮಾಡುವ ಕೆಲಸ ಒಳ್ಳೆಯದು ಆಗಿದ್ದರೆ, ನಾವು ಯಾರಿಗೂ ಭಯ ಬೀಳಬೇಕಿಲ್ಲ. ಒಂದು ವೇಳೆ ನಾವು ಭಯ ಪಡಬೇಕು ಅಂದರೆ ಅದು ನಮ್ಮ ತಂದೆ-ತಾಯಿಗೆ, ಬಂಧು ಮಿತ್ರರಿಗೆ, ಗುರು-ಹಿರಿಯರಿಗೆ, ಮತ್ತೆ ಒಳ್ಳೆಯ ಕೆಲಸ ಮಾಡುವವರಿಗೆ ಭಯ ಪಡಬೇಕು' ಎಂದು ಹೇಳಿದರು.

ಮಾತು ಮುಂದುವರಿಸಿದ ನಿರ್ಮಾಪಕ ಉಮಾಪತಿ ಗೌಡ, 'ನಾನು ಯಾರಿಗೂ ಭಯ ಪಡಲ್ಲ, ನನ್ನನ್ನು ಭಯ ಬೀಳಿಸುವ ಶಕ್ತಿ ಯಾರಿಗೂ ಇಲ್ಲ. ಸರಿಯಾದ ದಾರಿಯಲ್ಲಿ ಸಂಪಾದನೆ ಮಾಡುತ್ತಿದ್ದೇನೆ. ಸಾಯುವವರೆಗೂ ಇನ್ನೊಬ್ಬರಿಗೆ ಮಾದರಿಯಾಗಿರುತ್ತೇನೆ ಹೊರತು, ಇನ್ನೊಬ್ಬರಿಗೆ ಎಚ್ಚರಿಕೆಯಾಗುವ ರೀತಿ ನಾನು ಯಾವತ್ತು ಬದುಕಲ್ಲ' ಎಂದರು.
'ಜೀವನದಲ್ಲಿ ಎರಡು ರೀತಿಯ ಬದುಕಿದೆ. ಒಬ್ಬರು ಇನ್ನೊಬ್ಬರಿಗೆ ಮಾದರಿಯಾಗಿರುವವರು. ಇನ್ನೊಂದಿಷ್ಟು ಜನ ಎಚ್ಚರಿಕೆ ಕೊಡುವಂತವರು. ಜೈಲಿಗೆ ಹೋಗುವಂತವರು ಅಥವಾ ಇನ್ನೊಬ್ಬರಿಗೆ ತೊಂದರೆ ಕೊಟ್ಟು ನಶಿಸಿ ಹೋಗುವಂತವರು. ಇದರಲ್ಲಿ ನಿಮ್ಮ ಮಕ್ಕಳನ್ನು ನೀವು ಯಾವ ರೀತಿ ಬೆಳೆಸಬೇಕು ಅಂತಾ ನೀವೇ ಆಯ್ಕೆ ಮಾಡಬೇಕು. ಇಂದಿನ ಮಕ್ಕಳಿಗೆ ಶಿಕ್ಷಣದ ಜೊತೆಗೆ ಬದುಕುವ ಕಲೆಯನ್ನು ಕೂಡ ಕಲಿಸಬೇಕು' ಎಂದು ಹೇಳಿದರು.
ಹಲಗಡಿಕೊಪ್ಪದ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ನಿರ್ಮಾಪಕ ಉಮಾಪತಿ ಗೌಡ ಅವರ ಭಾಷಣದಲ್ಲಿ 'ಜೈಲಿಗೆ ಹೋಗುವಂತವರು, ಎಚ್ಚರಿಕೆ ಕೊಡುವಂತವರು, ಭಯ ಬೀಳಿಸುವವರು, ದೊಡ್ಡವರು' ಎನ್ನುವ ಮಾತುಗಳು ಪರೋಕ್ಷವಾಗಿ ಯಾರಿಗೆ ಹೇಳಿದ್ದಾರೆ ಎನ್ನುವ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ.












Click it and Unblock the Notifications