ದಾಂಡೇಲಿಯ ಮನೆಯಲ್ಲಿ 14 ಕೋಟಿ ರೂ. ಮೌಲ್ಯದ ನೋಟುಗಳು ಪತ್ತೆ, ಪೊಲೀಸರಿಗೆ ಅಚ್ಚರಿ
ಕಾರವಾರ, ಏಪ್ರಿಲ್ 09: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಮನೆಯಲ್ಲಿ ಸಿಕ್ಕ 500 ರೂ. ನೋಟುಗಳು ಪೊಲೀಸರಿಗೆ ಅಚ್ಚರಿ ಮೂಡಿಸಿದೆ. ಸುಮಾರು 14 ಕೋಟಿ ರೂ.ಗಳಷ್ಟು ಮೌಲ್ಯದ ನೋಟುಗಳು ಸಿಕ್ಕಿದ್ದು, ಇದು ಮಾತ್ರವಲ್ಲದೇ ಮನೆಯಲ್ಲಿ ನೋಟು ಎಣಿಸುವ ಯಂತ್ರ ಸಹ ಸಿಕ್ಕಿದೆ. ಈ ಮನೆಯಲ್ಲಿ ವಾಸವಾಗಿದ್ದ ಗೋವಾ ಮೂಲದ ಅರ್ಷದ್ ಖಾನ್ ಎಂಬಾತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ದಾಂಡೇಲಿಯ ಗಾಂಧಿನಗರದ ನೂರಜಾನ್ ಜುಂಜುವಾಡ್ಕರ ಎಂಬುವವರ ಮನೆಯಲ್ಲಿ 500 ರೂ. ಮುಖಬೆಲೆಯ ನೋಟುಗಳು ಪತ್ತೆಯಾಗಿವೆ. ನೋಟುಗಳ ಮೇಲೆ ಸಂಖ್ಯೆಗಳ ಜಾಗದಲ್ಲಿ ಕೇವಲ '0' ಎಂದು ನಮೂದಿಸಲಾಗಿದ್ದು, ಯಾವುದೇ ನೋಟಿನ ಮೇಲೆ ಆರ್‌ಬಿಐ ಗೌರ್ನರ್ ಸಹಿ ಇಲ್ಲ.

ನೂರಜಾನ್ ಜುಂಜುವಾಡ್ಕರ ಅವರ ಮನೆಯನ್ನು ಗೋವಾ ಮೂಲದ ಅರ್ಷದ್ ಖಾನ್ ಎಂಬುವವರಿಗೆ ಬಾಡಿಗೆಗೆ ನೀಡಲಾಗಿತ್ತು. ಸುಮಾರು ಒಂದು ತಿಂಗಳಿನಿಂದ ಅರ್ಷದ್ ಖಾನ್ ಮನೆಯಲ್ಲಿ ಇರಲಿಲ್ಲ. ಅಲ್ಲದೇ ಮನೆಯಲ್ಲಿ ಅನುಮಾಸ್ಪದ ಚಟುವಟಿಕೆ ನಡೆಯುತ್ತಿರಬಹುದು ಎಂದು ನೂರಜಾನ್ ಜುಂಜುವಾಡ್ಕರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಂಗಳವಾರ ಪೊಲೀಸರು ದಾಳಿ ಮಾಡಿದ್ದರು.
ಸಿನಿಮಾ ಶೂಟಿಂಗ್‌ಗೆ ಮಾತ್ರ: ಪೊಲೀಸರು ದಾಳಿ ಮಾಡಿದಾಗ ಅರ್ಷದ್ ಖಾನ್ ಮನೆಯಲ್ಲಿ ಇರಲಿಲ್ಲ, 500 ರೂ. ಬೆಲೆಯ ಸುಮಾರು 14 ಕೋಟಿ ರೂ. ಮೌಲ್ಯದ ನೋಟುಗಳು ಮನೆಯಲ್ಲಿ ಸಿಕ್ಕಿವೆ. ನೋಟು ಎಣಿಸುವ ಯಂತ್ರ ಸಹ ಸಿಕ್ಕಿದೆ. ನೋಟಿನ ಮೇಲೆ ಸಿನಿಮಾ ಶೂಟಿಂಗ್‌ಗಾಗಿ ಮಾತ್ರ ಎಂದು ಬರೆಯಲಾಗಿದೆ. ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಅರ್ಷದ್ ಖಾನ್‌ಗಾಗಿ ಹುಡುಕಾಟ ಆರಂಭವಾಗಿದೆ.
ಮನೆಯನ್ನು ಬಾಡಿಗೆಗೆ ಪಡೆದಿದ್ದ ಗೋವಾ ಮೂಲದ ಅರ್ಷದ್ ಖಾನ್ ಒಂದು ತಿಂಗಳಿನಿಂದ ಮನೆಯಲ್ಲಿ ಇಲ್ಲ ಎಂಬುದು ಅನುಮಾನಕ್ಕೆ ಕಾರಣವಾಗಿದೆ. ಪೊಲೀಸರು ಹಣ, ಹಣ ಎಣಿಸುವ ಯಂತ್ರವನ್ನು ವಾಪಸ್ ಪಡೆದಿದ್ದಾರೆ. ಮನೆಯಲ್ಲಿ ನಕಲಿ ನೋಟು ಮುದ್ರಣ ಮಾಡಲಾಗುತ್ತಿದೆಯೇ? ಎಂದು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಅರ್ಷದ್ ಖಾನ್ ಸಿಕ್ಕಿದ ಬಳಿಕ ಪ್ರಕರಣದ ಕುರಿತು ಮಾಹಿತಿ ತಿಳಿಯಲಿದೆ.











Click it and Unblock the Notifications