ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಹಲೋಕ ತ್ಯಜಿಸಿದ ಮೇರು ಯಕ್ಷಗಾನ ಕಲಾವಿದ ಜಲವಳ್ಳಿ ವೆಂಕಟೇಶ ರಾವ್‌

By ದೇವರಾಜ ನಾಯಿಕ
|
Google Oneindia Kannada News

ಕಾರವಾರ, ಮಾರ್ಚ್ 5: ಪ್ರಖ್ಯಾತ ಯಕ್ಷಗಾನ ಕಲಾವಿದ, ಹೊನ್ನಾವರ ತಾಲೂಕಿನ ಜಲವಳ್ಳಿ ವೆಂಕಟೇಶ ರಾವ್‌ (86) ಅವರು ಮಂಗಳವಾರ (ಮಾ 5) ಇಹಲೋಕ ತ್ಯಜಿಸಿದ್ದಾರೆ. ಅನಾರೋಗ್ಯದಿಂದ ಶಿರಸಿಯ ಟಿಎಸ್ಎಸ್ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.

ಹೊನ್ನಾವರ ತಾಲೂಕಿನ ಜಲವಳ್ಳಿ ಎಂಬಲ್ಲಿ ಜನಿಸಿದ ಇವರು ತಮ್ಮ 18ನೇ ವಯಸ್ಸಿನಲ್ಲಿ ಯಕ್ಷಗಾನವನ್ನು ಕಂಡು ಕೇಳಿ ಗುಂಡಬಾಳ ಮೇಳದಲ್ಲಿ ಗೆಜ್ಜೆ ಕಟ್ಟಿದರು. ಅಲ್ಲಿ ಒಂದೆರಡು ತಿರುಗಾಟದಲ್ಲೇ ಸತ್ವಶಾಲಿ ಕಲಾವಿದನಾಗಿ ಗುರುತಿಸಿಕೊಂಡು ಬಳಿಕ ಇಡಗುಂಜಿ ಮೇಳ ಸೇರಿದರು.

ಮೋದಿ ಹೆಸರು ಉಲ್ಲೇಖಿಸಿದ ಯಕ್ಷಗಾನ ಪಾತ್ರಧಾರಿ ವಿರುದ್ಧ ಕಾಂಗ್ರೆಸ್ ಕೆಂಗಣ್ಣುಮೋದಿ ಹೆಸರು ಉಲ್ಲೇಖಿಸಿದ ಯಕ್ಷಗಾನ ಪಾತ್ರಧಾರಿ ವಿರುದ್ಧ ಕಾಂಗ್ರೆಸ್ ಕೆಂಗಣ್ಣು

ಕೆರೆಮನೆಯ ಘಟಾನುಘಟಿ ಕಲಾವಿದರ ಒಡನಾಟದಿಂದ ಪ್ರಬುದ್ಧ ಕಲಾವಿದನಾಗಿ ಮೂಡಿಬಂದ ಜಲವಳ್ಳಿ, ಸಮಕಾಲೀನರಾದ ಚಿಟ್ಟಾಣಿಯವರಿಗೆ ನಾಯಕ ಮತ್ತು ಪ್ರತಿನಾಯಕರಾಗಿ ಮಿಂಚ ತೊಡಗಿದರು. ಕೀಚಕ ವಧೆಯಲ್ಲಿ ಚಿಟ್ಟಾಣಿಯವರ ಕೀಚಕನಿಗೆ ವಲಲ, ಗದಾಯುದ್ಧದ ಕೌರವನಿಗೆ ಭೀಮ, ರುದ್ರಕೋಪನಿಗೆ ರಕ್ತಜಂಘ, ಭಸ್ಮಾಸುರನಿಗೆ ಈಶ್ವರ, ಕಾರ್ತವೀರ್ಯನಿಗೆ ರಾವಣ, ಕೃಷ್ಣನಿಗೆ ಬಲರಾಮ ಮುಂತಾದ ಇವರೀರ್ವರ ಜೋಡಿ ವೇಷಗಳು ಇನ್ನಿಲ್ಲವೆಂಬಷ್ಟು ಪ್ರಸಿದ್ಧಿ ಪಡೆದಿತ್ತು.

Noted Yakshagana artist Jalavalli Venkateshwara Rao no more

ಇದೇ ಹೊತ್ತಿನಲ್ಲಿ ತೆಂಕುತಿಟ್ಟಿನ ಸುರತ್ಕಲ್‌ ಮೇಳ ಸೇರುವ ಮೂಲಕ ಜಲವಳ್ಳಿಯವರ ಯಕ್ಷ ಬದುಕು ಇನ್ನೊಂದು ತಿರುವು ಪಡೆಯಿತು. ಅಲ್ಲಿ ಶೇಣಿ ಗೋಪಾಲಕೃಷ್ಣ ಭಟ್‌, ತೆಕ್ಕಟ್ಟೆ ಆನಂದ ಮಾಸ್ತರ್‌, ಮಲ್ಪೆ ರಾಮದಾಸ ಸಾಮಗ, ಎಂ.ಕೆ. ರಮೇಶ ಅಚಾರ್ಯ ಮುಂತಾದವರ ಒಡನಾಟದಿಂದ ಶ್ರೇಷ್ಠ ಮಾತುಗಾರರಾಗಿ ರೂಪುಗೊಂಡರು.

ಅಲ್ಲಿ ಅಗರಿ ಭಾಗವತರ ಹಿಮ್ಮೇಳದಲ್ಲಿ ಇವರ ಶನೀಶ್ವರ ಮಹಾತ್ಮೆಯ ಶನಿ, ಶೇಣಿಯವರ ವಿಕ್ರಮಾದಿತ್ಯ ಆನಂದ ಮಾಸ್ತರರ ನಂದಿ ಶೆಟ್ಟಿ ಪಾತ್ರದೊಂದಿಗೆ ಪ್ರಸಂಗ ಅಪೂರ್ವ ಯಶಸ್ಸನ್ನು ಪಡೆದು ಇವರಿಗೆ ಯಕ್ಷಗಾನದ ಶನೀಶ್ವರ ಎಂಬ ಹೆಸರು ಅನ್ವರ್ಥವಾಗಿತ್ತು. ಬಡಗುತಿಟ್ಟಿನ ಸಾಲಿಗ್ರಾಮ ಮೇಳದ ಸೇರ್ಪಡೆ ಜಲವಳ್ಳಿಯವರ ಯಕ್ಷಗಾನದ ಸುವರ್ಣ ಯುಗ. ದೀರ್ಘಕಾಲ ಎರಡನೇ ವೇಷಧಾರಿಯಾಗಿ ಕಾಳಿಂಗ ನಾವಡರ ಹಿಮ್ಮೇಳಕ್ಕೆ ಹೆಜ್ಜೆ ಹಾಕಿದ ಅವರು ಮರವಂತೆ ನರಸಿಂಹ ದಾಸ, ನೆಲ್ಲೂರು ಮರಿಯಪ್ಪಾಚಾರ್‌, ಕಾಳಿಂಗ ನಾವಡ , ನಾರಾಯಣ ಶಬರಾಯ ಸಹಿತ ಇಂದಿನ ಯುವ ಭಾಗವತರವರೆಗೆ ಮೂರೂ ತಲೆಮಾರಿನ ಭಾಗವತರ ಪದ್ಯಕ್ಕೆ ಹೆಜ್ಜೆ ಹಾಕಿದ ಕೀರ್ತಿಗೆ ಭಾಜನರಾಗಿದ್ದಾರೆ.

ಮಂಗಳೂರು ಪತ್ರಕರ್ತರು ಪ್ರದರ್ಶಿಸುತ್ತಿದ್ದ ಯಕ್ಷಗಾನಕ್ಕೆ ಅವಮಾನ ಮಂಗಳೂರು ಪತ್ರಕರ್ತರು ಪ್ರದರ್ಶಿಸುತ್ತಿದ್ದ ಯಕ್ಷಗಾನಕ್ಕೆ ಅವಮಾನ

ಕಾಳಿಂಗ ನಾವಡರ ಭಾಗವತಿಕೆಯ ಉತ್ತುಂಗದಲ್ಲಿ ನಾಗಶ್ರೀ ಪ್ರಸಂಗದ ಇವರ ಸುದರ್ಶನ, ಅರಾಟೆಯವರ ಪ್ರಭಾಂಗಿ, ಚೆಲುವೆ ಚಿತ್ರಾವತಿಯ ಕೀರ್ತಿವರ್ಮ-ಮದನಾಂಗಿ ಜೋಡಿ ಪಾತ್ರಗಳು ಅಪಾರ ಜನ ಮೆಚ್ಚುಗೆ ಪಡೆದಿದ್ದವು.ರತಿರೇಖಾ, ಚೈತ್ರಪಲ್ಲವಿ, ಬಾನುತೇಜಸ್ವಿ, ಕಾಂಚನಶ್ರೀ, ಪದ್ಮಪಾಲಿ, ವಸುವರಾಂಗಿ ಮುಂತಾದ ಪ್ರಸಂಗಗಳ ಅವರ ವೇಷಗಳನ್ನು ಇನ್ನೊಬ್ಬ ಮಾಡಿ ಸೈ ಎನಿಸಿಕೊಳ್ಳಲಾರ.

Noted Yakshagana artist Jalavalli Venkateshwara Rao no more

ಬಡಗು ಮತ್ತು ಬಡಾಬಡಗಿನ ಅನೇಕ ಖ್ಯಾತನಾಮರಾದ ಶಿರಿಯಾರ ಮಂಜು ನಾಯಕ್‌, ಐರೋಡಿ ಗೋವಿಂದಪ್ಪ, ಅರಾಟೆ ಮಂಜುನಾಥ,ಕೋಟ ವೈಕುಂಠ, ರಾಮ ನಾಯರಿ, ಕಿನ್ನಿಗೋಳಿ ಮುಖ್ಯಪ್ರಾಣ, ಹಳ್ಳಾಡಿ ಜಯರಾಮಶೆಟ್ಟಿ, ಚಿಟ್ಟಾಣಿಯವರು,ಬಳ್ಕೂರು ಕೃಷ್ಣಯಾಜಿ, ಕೊಂಡದಕುಳಿ ರಾಮಚಂದ್ರ ಹೆಗಡೆ, ವಾಸುದೇವ ಸಾಮಗ , ಕುಮಟಾ ಗೋವಿಂದ ನಾಯಕ್‌ ಇನ್ನೂ ಅನೇಕರು ಸಾಲಿಗ್ರಾಮ ಮೇಳದಲ್ಲಿ ಅವರೊಂದಿಗೆ ರಂಗಸ್ಥಳ ಹಂಚಿಕೊಂಡ ಪ್ರಮುಖರು. ತಿರುಗಾಟದ ಕೊನೆಯ ಕೆಲವು ವರ್ಷ ಪೆರ್ಡೂರು ಮೇಳದ ಪ್ರಧಾನ ಕಲಾವಿದರಾಗಿ ತನ್ನ 70ನೇ ವಯಸ್ಸಿನಲ್ಲಿ ಜಲವಳ್ಳಿ ನಿವೃತ್ತರಾದರು.

ಶಾಲೆಯ ಮೆಟ್ಟಲನ್ನೇ ಏರದೆ ಅನುಭವಗಳನ್ನೇ ಬಂಡವಾಳವಾಗಿರಿಸಿ ಯಕ್ಷಗಾನ ರಂಗದಲ್ಲಿ ಅಗ್ರಮಾನ್ಯರಾಗಿ ಮೆರೆದ ಅಪರೂಪ ಕಲಾವಿದ ಜಳವಳ್ಳಿಯವರು, ರಾಜ್ಯ ಪ್ರಶಸ್ತಿ ಪುರಸ್ಕೃತರಾಗಿರುವ ಜಳವಳ್ಳಿ ಯಕ್ಷಗಾನದ ಶನೀಶ್ವರನೆಂದೇ ಪ್ರಸಿದ್ಧರಾಗಿದ್ದರು. ಮಾತುಗಾರಿಕೆಯಲ್ಲಿ ಅವರು ಸಾಧಿಸಿದ ಸಿದ್ಧಿಯನ್ನು ನೋಡುವಾಗ ಎಂತಹ ಪದವೀಧರರೂ ನಾಚುವಂತಿತ್ತು. ನಾಲ್ಕು ಸುತ್ತು ಒಂದು ಗತ್ತಿನ ಮೂಲಕ ಅವರ ಮಾತಿನ ವೈಖರಿಯನ್ನು ಕೇಳಿದವರು ಅವರು ನಿರಕ್ಷರಿ ಎಂದರೆ ನಂಬುತ್ತಿರಲಿಲ್ಲ. ಬಡತನದಲ್ಲೇ ಬೆಳೆದ ಅವರಿಗೆ ಅಕ್ಷರ ವಿದ್ಯೆಯೂ ವೈಭೋಗವಾಗಿತ್ತು.

ಅವರ ಕೇದಗೆ ಮುಂದಲೆ ವೇಷಗಳನ್ನು ನೋಡಿರದವರೇ ವಿರಳ ಎನ್ನಬಹುದು. ವಿಶಾಲವಾದ ಹಣೆ ಹುಬ್ಬುಗಳು, ಹೊಳೆಯುವ ಕಣ್ಣುಗಳೇ ಜಲವಳ್ಳಿಯವರ ಆಸ್ತಿ. ಮಾತುಗಾರಿಕೆಯಲ್ಲಿ ತನಗೆ ಗೊತ್ತಿಲ್ಲದ ವಿಷಯವನ್ನು ವಿಸ್ತರಿಸಿ ಗೊಂದಲಕ್ಕೆ ಹೋಗುವುದಿಲ್ಲ. ತನಗೆ ಒಗ್ಗದ ಕೀಚಕ, ಕೃಷ್ಣ ಮುಂತಾದ ವೇಷಗಳ ಗೋಜಿಗೆ ಹೋಗುತ್ತಿರಲಿಲ್ಲ. ವ್ಯಾಕರಣ ಶುದ್ಧ ಭಾಷೆ, ಶಬ್ದದ ಮೂಲ ಸ್ವರೂಪ ಕೆಡಿಸದೆ ಕಿವಿಗೆ ಹಿತವಾಗಿ ಕೇಳುವಂತೆ ಮಾತನಾಡುವುದು ಇವರ ಹೆಚ್ಚುಗಾರಿಕೆ.

ಜಲವಳ್ಳಿಯವರು ಉತ್ತಮ ನೃತ್ಯಪಟು ಎಂದು ಎಲ್ಲಿಯೂ ಗುರುತಿಸಿಕೊಂಡಿಲ್ಲ.ರಂಗದಲ್ಲಿ ವೈವಿದ್ಯಮಯ ಹೆಜ್ಜೆ ಬಳಸುವುದು ಕಡಿಮೆ.ಅದೊಂದು ಕೊರತೆಯಾಗಿ ಅವರನ್ನು ಕಾಡಲೇ ಇಲ್ಲ.ಹಾಗೆಂದು ಅವರ ನೃತ್ಯ ಕೋಶ ಬರಿದಾದುದಲ್ಲ. ರಂಗದಲ್ಲಿ ಗತ್ತಿನ ನಾಲ್ಕು ಸುತ್ತು ಬರುವುದರಲ್ಲೇ ಎಲ್ಲ ಕೊರತೆಯನ್ನು ತುಂಬಿಕೊಳ್ಳುತ್ತಿದ್ದರು.

ಕರ್ನಾಟಕ ಜಾನಪದ ಪ್ರಶಸ್ತಿ, ಕರ್ನಾಟಕ ರಾಜ್ಯ ಪ್ರಶಸ್ತಿ, ಉಡುಪಿ ಯಕ್ಷಗಾನ ಕಲಾರಂಗ ಪ್ರಶಸ್ತಿ, ಪಳ್ಳಿ ಸೋಮನಾಥ ಹೆಗ್ಡೆ ಪ್ರಶಸ್ತಿ ಸೇರಿ ಹಲವು ಪ್ರಮುಖ ಪ್ರಶಸ್ತಿಗಳಿಗೆ ಇವರು ಭಾಜನರಾಗಿದ್ದರು. ಜಲವಳ್ಳಿ ವಿದ್ಯಾಧರ ರಾವ್‌ ಇವರ ಪುತ್ರರಾಗಿದ್ದು, ಕಲಾಧರ ಯಕ್ಷ ಬಳಗ ಎಂಬ ಸ್ವಂತ ಮೇಳದ ಯಜಮಾನ ಹಾಗೂ ಕಲಾವಿದರಾಗಿ ಮುಂದುವರಿಯುತಿದ್ದಾರೆ.

English summary
Noted Yakshagana artist Jalavalli Venkateshwara Rao no more, he was 86. Jalavalli died in a private hospital in Karwar on March 5.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X