ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Stories Of Strength: ಇದು ಒಬ್ಬನೇ ಒಬ್ಬ ಕೋವಿಡ್ ಸೋಂಕಿತನಿಲ್ಲದ ಗ್ರಾಮ!

|
Google Oneindia Kannada News

ಕಾರವಾರ, ಜೂನ್ 17: ಇಡೀ ರಾಷ್ಟ್ರವೇ ಕಳೆದೆರಡು ವರ್ಷದಿಂದ ಕೊರೊನಾ ಅಟ್ಟಹಾಸಕ್ಕೆ ನಲುಗಿಹೋಗಿದೆ. ಕಳೆದ ಬಾರಿ ನಗರಗಳನ್ನು ಹೊಕ್ಕಿದ್ದ ಮಹಾಮಾರಿ, ಈ ಬಾರಿ ಹಳ್ಳಿಗಳನ್ನೇ ಟಾರ್ಗೆಟ್ ಮಾಡಿ ಅಟ್ಟಹಾಸ ಮೆರೆದಿತ್ತು.

ಅದರಲ್ಲೂ ಈ ಬಾರಿ ಕೊರೊನಾಕ್ಕೆ ಬಲಿಯಾದವರ ಸಂಖ್ಯೆ ಹೆಚ್ಚಳವಾಗಿದ್ದು, ಜನರು ಬೆಚ್ಚಿ ಬೀಳುವಂತೆ ಮಾಡಿತ್ತು. ಆದರೆ ಉತ್ತರ ಕನ್ನಡ ಜಿಲ್ಲೆ ಹಳಿಯಾಳ ತಾಲ್ಲೂಕಿನ ಕೋಲೆರಂಗ ಗ್ರಾಮ ಮಾತ್ರ ಕೊರೊನಾ ಕಪಿಮುಷ್ಟಿಗೆ ಸಿಗದೇ ಸುರಕ್ಷಿತವಾಗಿ ಉಳಿದಿದೆ.

ಕೊರೊನಾ ಸೋಂಕು ಹತ್ತಿರಕ್ಕೂ ಸುಳಿದಿಲ್ಲ

ಕೊರೊನಾ ಸೋಂಕು ಹತ್ತಿರಕ್ಕೂ ಸುಳಿದಿಲ್ಲ

ಹಳಿಯಾಳ ತಾಲ್ಲೂಕಿನ ಕೋಲೆರಂಗ ಗ್ರಾಮದಲ್ಲಿ ಈವರೆಗೆ ಯಾವುದೇ ಕೊರೊನಾ ಪ್ರಕರಣಗಳು ಪತ್ತೆಯಾಗಿಲ್ಲ. ಗ್ರಾಮಸ್ಥರೇ ಕಟ್ಟುನಿಟ್ಟಿನ ಮುಂಜಾಗ್ರತೆ ವಹಿಸಿ ಕೊರೊನಾ ಚೈನ್ ಬ್ರೇಕ್ ಮಾಡಿ ಊರಿನಿಂದ ಹೊರಗಿಟ್ಟಿದ್ದಾರೆ. ಕೊರೊನಾ ಮೊದಲ ಹಾಗೂ ಎರಡನೇ ಅಲೆಯಲ್ಲೂ ಗ್ರಾಮದ ಯಾರೊಬ್ಬರಿಗೂ ಕೊರೊನಾ ಸೋಂಕು ಹತ್ತಿರಕ್ಕೂ ಸುಳಿದಿಲ್ಲ. ಗ್ರಾಮದಲ್ಲಿ ದನಗರ ಗೌಳಿ ಸಮುದಾಯದವರೇ ಇದ್ದು, ಸುಮಾರು 250ಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿದೆ.

Stories Of Strength: ಕೊರೊನಾ ಮಣಿಸಿದ ಬೆಳ್ತಂಗಡಿಯ 13 ಜನರ ಅವಿಭಕ್ತ ಕುಟುಂಬStories Of Strength: ಕೊರೊನಾ ಮಣಿಸಿದ ಬೆಳ್ತಂಗಡಿಯ 13 ಜನರ ಅವಿಭಕ್ತ ಕುಟುಂಬ

ಹೈನುಗಾರಿಕೆಯೇ ಪ್ರಮುಖ ಕಸುಬು

ಹೈನುಗಾರಿಕೆಯೇ ಪ್ರಮುಖ ಕಸುಬು

ಹೈನುಗಾರಿಕೆಯೇ ಪ್ರಮುಖ ಕಸುಬಾಗಿರುವ ಈ ಗ್ರಾಮದ ಜನರು ಕೊರೊನಾ ಎರಡನೇ ಅಲೆಯನ್ನು ಕಂಡು ಆತಂಕಕ್ಕೊಳಗಾಗಿದ್ದರು. ಆದರೆ ಈ ವೇಳೆ ಕೈಕಟ್ಟಿ ಕೂರದೇ ಗ್ರಾಮಕ್ಕೆ ತಮಗೆ ತಾವೇ ನಿರ್ಬಂಧ ವಿಧಿಸಿಕೊಂಡು ಗ್ರಾಮದಿಂದ ಹೊರಹೋಗುವುದನ್ನು ಸ್ಥಗಿತಗೊಳಿಸಿದರು. ಅಲ್ಲದೇ ಊರಿನ ಒಳಗೂ ಸಹ ಯಾರಿಗೂ ಪ್ರವೇಶ ನೀಡಿಲ್ಲವಾಗಿದ್ದು, ಗ್ರಾಮದ ಭಾಗವತಿ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಲ್ಲಿ ಕೊರೊನಾ ಪತ್ತೆಯಾದರೂ ಸಹ ಕೋಲೆರಂಗ ಗ್ರಾಮಕ್ಕೆ ಸೋಂಕು ಹೊಕ್ಕದಂತೆ ನೋಡಿಕೊಳ್ಳುವಲ್ಲಿ ಗ್ರಾಮಸ್ಥರು ಯಶಸ್ವಿಯಾಗಿದ್ದಾರೆ.

ಕೋವಿಡ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ

ಕೋವಿಡ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ

ಇನ್ನು ಉದ್ಯೋಗ ಅರಸಿ ಕೋಲೆರಂಗ ಗ್ರಾಮದಿಂದ ಹೊರಹೋಗುವವರ ಸಂಖ್ಯೆ ಕಡಿಮೆ ಇದ್ದು, ಲಾಕ್‌ಡೌನ್ ಇದ್ದಿದ್ದರಿಂದ ಹಾಲಿನ ವ್ಯಾಪಾರ ಸಹ ಇಲ್ಲವಾಗಿತ್ತು. ಹೀಗಾಗಿ ಯಾರೊಬ್ಬರೂ ಸಹ ಗ್ರಾಮದಿಂದ ಹೊರಕ್ಕೆ ಓಡಾಡುವ ಅಗತ್ಯತೆ ಇರಲಿಲ್ಲ. ಗ್ರಾಮದ ನಿವಾಸಿಗಳಿಗೆ ಅಗತ್ಯವಿದ್ದ ದಿನಸಿ, ದಿನಬಳಕೆ ವಸ್ತುಗಳನ್ನು ಪೂರೈಕೆ ಮಾಡಲು ಗ್ರಾಮದ ಇಬ್ಬರನ್ನು ನಿಯೋಜಿಸಿಕೊಂಡಿದ್ದು, ಅವರೂ ಸಹ ಗ್ರಾಮಕ್ಕೆ ಬರದೇ ಹೊರಗಡೆಯೇ ಉಳಿದುಕೊಳ್ಳುತ್ತಿದ್ದರು. ಅಲ್ಲದೇ ಗ್ರಾಮದ ಸಂಬಂಧಿಕರಿಗೂ ಸಹ ಎರಡು ತಿಂಗಳುಗಳ ಕಾಲ ಗ್ರಾಮಕ್ಕೇ ಬರದಂತೆ ತಿಳಿಸಿದ್ದು, ಇದರಿಂದ ಗ್ರಾಮದಲ್ಲಿ ಒಂದೂ ಕೊರೊನಾ ಪ್ರಕರಣಗಳು ಇಲ್ಲದಂತಾಗಿದೆ. ಅಲ್ಲದೇ ಬಹುತೇಕ ಗ್ರಾಮಸ್ಥರು ಇದೀಗ ಕೋವಿಡ್ ಲಸಿಕೆಯನ್ನು ಪಡೆದುಕೊಂಡಿದ್ದು, ಮೂರನೇ ಅಲೆ ಪ್ರಾರಂಭವಾದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಕೂಡ ಈಗಾಗಲೇ ಗ್ರಾಮಸ್ಥರು ಸೇರಿ ಚರ್ಚಿಸಿದ್ದಾರೆ.

ಅನಕ್ಷರಸ್ಥರಾಗಿದ್ದರೂ ಅಕ್ಷರಸ್ಥರಿಗಿಂತ ಹೆಚ್ಚಿನ ಮುಂಜಾಗ್ರತೆ

ಅನಕ್ಷರಸ್ಥರಾಗಿದ್ದರೂ ಅಕ್ಷರಸ್ಥರಿಗಿಂತ ಹೆಚ್ಚಿನ ಮುಂಜಾಗ್ರತೆ

ಇನ್ನು ಕೊರೊನಾ ಸಂದರ್ಭದಲ್ಲಿ ವ್ಯಾಪಾರವಿಲ್ಲದೇ ಆರ್ಥಿಕ ತೊಂದರೆಯಾಗಿದ್ದರೂ ಸಹ ಗ್ರಾಮಸ್ಥರೇ ಒಬ್ಬರಿಗೊಬ್ಬರು ಸಹಕರಿಸಿಕೊಂಡು ನಿಭಾಯಿಸಿದ್ದಾರೆ. ಇದೀಗ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದ್ದರೂ ಸಹ ನಾವು ಮೈಮರೆಯೋದಿಲ್ಲ ಎನ್ನುತ್ತಾರೆ ಗ್ರಾಮದ ಯುವಕ ವಿಠ್ಠಲ.

ಒಟ್ಟಾರೆ ಕೊರೊನಾ ಮಹಾಮಾರಿ ಎಲ್ಲೆಡೆ ಅಟ್ಟಹಾಸ ಬೀರುತ್ತಿದ್ದರೂ ಸಹ ಕೋಲೆರಂಗ ಗ್ರಾಮ ಸೋಂಕನ್ನು ಕಟ್ಟಿಹಾಕಿ ಗ್ರಾಮದ ಹೊರಗಿಡುವಲ್ಲಿ ಯಶಸ್ವಿಯಾಗಿದ್ದಾರೆ. ಅನಕ್ಷರಸ್ಥರಾಗಿದ್ದರೂ ಅಕ್ಷರಸ್ಥರಿಗಿಂತ ಹೆಚ್ಚಿನ ಮುಂಜಾಗ್ರತೆಯೊಂದಿಗೆ ಸೋಂಕಿನಿಂದ ಬಚಾವಾಗಿದ್ದು ಎಲ್ಲರಿಗೂ ಮಾದರಿಯಾಗಿದೆ.

English summary
No coronavirus cases have been found in Koleranga village of Haliyala Taluk in Uttar Kannada district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X