ಫೈಟರ್ ಜೆಟ್ ಪತನಗೊಂಡು ಏಳು ದಿನ; ಇನ್ನೂ ಪತ್ತೆ ಇಲ್ಲ ಪೈಲಟ್
ಕಾರವಾರ, ಡಿಸೆಂಬರ್ 03: ಅರಬ್ಬಿ ಸಮುದ್ರದಲ್ಲಿ ಪತನಗೊಂಡಿದ್ದ ಮಿಗ್ -29ಕೆ ಫೈಟರ್ ಜೆಟ್ ನಿಂದ ನಾಪತ್ತೆಯಾಗಿದ್ದ ಪೈಲಟ್ ಲೆಫ್ಟಿನೆಂಟ್ ಕಮಾಂಡರ್ ನಿಶಾಂತ್ ಸಿಂಗ್ ಅವರ ಬಗ್ಗೆ ಏಳು ದಿನ ಕಳೆದರೂ ಯಾವುದೇ ಸುಳಿವು ಲಭ್ಯವಾಗಿಲ್ಲ. ನೌಕಾಪಡೆಯು ತನ್ನ ಶೋಧ ಕಾರ್ಯವನ್ನು ಮುಂದುವರಿಸಿದೆ.
ನವೆಂಬರ್ 26ರಂದು ಅಪಘಾತ ಸಂಭವಿಸಿದ ಕೆಲವೇ ನಿಮಿಷಗಳಲ್ಲಿ ಪೈಲಟ್ ತನ್ನ ಸಹ ಪೈಲಟ್ ಜೊತೆಗೆ ಸಮುದ್ರಕ್ಕೆ ಹಾರಿದ್ದರೆನ್ನಲಾಗಿತ್ತು. ಈ ವೇಳೆ ಸಹ ಪೈಲೆಟ್ ಬದುಕುಳಿದಿದ್ದು, ಅವರನ್ನು ನೌಕಾಪಡೆ ರಕ್ಷಣೆ ಮಾಡಿತ್ತು. ಆದರೆ, ಈವರೆಗೂ ನಿಶಾಂತ್ ಸಿಂಗ್ ಅವರ ಬಗ್ಗೆ ಯಾವುದೇ ಸುಳಿವು ನೌಕಾಪಡೆಗೆ ದೊರೆತಿಲ್ಲ ಎನ್ನಲಾಗಿದೆ.

ಲೊಕೇಟರ್ ಬೀಕನ್ ನಿಂದ ಸಿಗ್ನಲ್ ಬಂದಿಲ್ಲ
ಲೆಫ್ಟಿನೆಂಟ್ ಕಮಾಂಡರ್ ಸಿಂಗ್ ಬಳಸಿದ ಇಜೆಕ್ಷನ್ ಸೀಟ್ ಅಥವಾ ಪ್ಯಾರಾಚೂಟ್ ಬಗ್ಗೆ ಕೂಡ ಯಾವುದೇ ಕುರುಹು ಸಿಕ್ಕಿಲ್ಲ ಎಂದು ಮೂಲಗಳು ತಿಳಿಸಿವೆ. ಇದಲ್ಲದೆ, ಅಪಘಾತ ಸ್ಥಳದ ತುರ್ತು ಸಂದರ್ಭದಲ್ಲಿ ಮಾಹಿತಿ ನೀಡುವ ಫೈಟರ್ ಜೆಟ್ ನ ಲೊಕೇಟರ್ ಬೀಕನ್ ನಿಂದ ಯಾವುದೇ ಸಿಗ್ನಲ್ ಕೂಡ ಬಂದಿಲ್ಲವೆನ್ನಲಾಗಿದೆ.
ಮಿಗ್-29ಕೆ ಪತನ: ಅವಶೇಷ ಪತ್ತೆ ಬೆನ್ನಲ್ಲೇ ಶೋಧಕಾರ್ಯ ಚುರುಕು

ನೌಕಾಪಡೆಗೆ ಸಹ ಪೈಲಟ್ ಹೇಳಿಕೆ
ನಿಶಾಂತ್ ಜೆಟ್‌ನಿಂದ ಹೊರ ಬೀಳುತ್ತಿರುವುದನ್ನು ತಾನು ನೋಡಿರುವುದಾಗಿ ರಕ್ಷಣೆಗೊಂಡ ಸಹ ಪೈಲಟ್ ನೌಕಾಪಡೆಗೆ ತಿಳಿಸಿದ್ದಾರೆ. ಇವರು ಜೆಟ್‌ನ ಹಿಂದಿನ ಸೀಟಿನಲ್ಲಿದ್ದರೆ, ಕಾಣೆಯಾಗಿರುವ ನಿಶಾಂತ್ ಜೆಟ್‌ನ ಮುಂಭಾಗದ ಸೀಟಿನಲ್ಲಿದ್ದರು. ಇಜೆಕ್ಷನ್ ಅನ್ನು ಪ್ರಚೋದಿಸಿದಾಗ, ಎರಡನೇ ಸೀಟಿನಲ್ಲಿದ್ದವರು ಮೊದಲು ಹೊರಹೋಗಲಿದ್ದು, ನಂತರ ಮುಂಭಾಗದಲ್ಲಿರುವವರು ಹೊರ ಹೋಗಲಿದ್ದಾರೆ. ಈ ಪ್ರಕ್ರಿಯೆಯು ಪೂರ್ಣಗೊಳ್ಳಲು ಒಂದು ಸೆಕೆಂಡ್ ತೆಗೆದುಕೊಳ್ಳುತ್ತದೆ ಎನ್ನಲಾಗಿದೆ.

50 ಕಿ.ಮೀ.ದೂರದಲ್ಲಿ ವಿಮಾನದ ಅವಶೇಷ
ಅವಳಿ ಎಂಜಿನ್ ಜೆಟ್ ಸಂಜೆ 4.30ರ ಸುಮಾರಿಗೆ ಐಎನ್ಎಸ್ ವಿಕ್ರಮಾದಿತ್ಯದಿಂದ ಗೋವಾದ ಐಎನ್ಎಸ್ ಹನ್ಸಾಗೆ ತೆರಳಿತ್ತು. ಹನ್ಸಾ, ರಷ್ಯಾ ನಿರ್ಮಿತ 45 ಬಲಶಾಲಿ ಜೆಟ್‌ಗಳ ನೌಕಾಪಡೆಯ ನೆಲೆಯಾಗಿದೆ. ನೌಕಾಪಡೆಯ ಡೈವರ್ ಗಳು ಇಲ್ಲಿಂದ 50 ಕಿ.ಮೀ. ದೂರದಲ್ಲಿ ವಿಮಾನದ ಅವಶೇಷಗಳನ್ನು ಪತ್ತೆ ಮಾಡಿದ್ದಾರೆ.
ಮಿಗ್ 29ಕೆ ವಿಮಾನ ಪತನ; ಪೈಲಟ್ ಗಾಗಿ ತೀವ್ರ ಶೋಧ ಕಾರ್ಯ

ಮೇ ತಿಂಗಳಲ್ಲಿ ವಿವಾಹವಾಗಿದ್ದ ಪೈಲಟ್
ಲೆಫ್ಟಿನೆಂಟ್ ಕಮಾಂಡರ್ ಸಿಂಗ್ ಅವರು ತಮ್ಮ ದೀರ್ಘಕಾಲದ ಸ್ನೇಹಿತೆ ನಯಾಬ್ ರಾಂಧಾವಾ ಅವರನ್ನು ಮೇ ತಿಂಗಳಲ್ಲಿ ವಿವಾಹವಾಗಿದ್ದರು. ಈ ಇಬ್ಬರೂ ನಿವೃತ್ತ ನೌಕಾಧಿಕಾರಿಗಳ ಪುತ್ರರು. ನಯಾಬ್ ಅವರ ತಂದೆ ಮುಂಬೈನಲ್ಲಿ ನೆಲೆಸಿದ್ದು, ಲೆಫ್ಟಿನೆಂಟ್ ಕಮಾಂಡರ್ ಸಿಂಗ್ ಅವರ ತಂದೆ ನೊಯ್ಡಾದಲ್ಲಿದ್ದಾರೆ.