ಕುಮಟಾ ಕಾಂಗ್ರೆಸ್ ಟಿಕೆಟ್‌ಗಾಗಿ ನಿವೇದಿತ್ ಆಳ್ವ ಯತ್ನ: ಉಳಿದ ಆಕಾಂಕ್ಷಿಗಳಿಗೆ ಆತಂಕ
ಕಾರವಾರ, ಮಾರ್ಚ್ 23: ರಾಜ್ಯದಲ್ಲಿ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ. ಉತ್ತರ ಕನ್ನಡ ಜಿಲ್ಲೆಯ ಪಾಲಿಗೆ ಹೈವೋಲ್ಟೇಜ್ ಕ್ಷೇತ್ರವಾಗಿ ಗುರುತಿಸಿಕೊಂಡಿರುವ ಕುಮಟಾದಲ್ಲಿ ಕಾಂಗ್ರೆಸ್‌ನಿಂದ 15ಕ್ಕೂ ಹೆಚ್ಚು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿ ಈಗಾಗಲೇ ಚುನಾವಣಾ ತಯಾರಿ ನಡೆಸಿದ್ದಾರೆ. ಆದರೆ ಮಾಜಿ ಸಂಸದೆ ಮಾರ್ಗರೇಟ್ ಆಳ್ವ ತಮ್ಮ ಪುತ್ರನಿಗೆ ಕುಮಟಾದಿಂದ ಟಿಕೆಟ್ ಕೊಡಿಸಲು ಮುಂದಾಗಿರುವುದು ಇತರೆ ಆಕಾಂಕ್ಷಿಗಳಲ್ಲಿ ಗೊಂದಲಕ್ಕೆ ಕಾರಣವಾಗಿದೆ.
ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆ ರಂಗೇರಿದೆ. ಇನ್ನು ಜಿಲ್ಲೆಯಲ್ಲಿ ಈ ಬಾರಿ ಕುಮಟಾ ಕ್ಷೇತ್ರ ಸಾಕಷ್ಟು ಗಮನ ಸೆಳೆದಿತ್ತು. ಕುಮಟಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್‌ಗಾಗಿ ಹದಿನೈದು ಮುಖಂಡರು ತಲಾ 2 ಲಕ್ಷವನ್ನು ಕೆಪಿಸಿಸಿಗೆ ತುಂಬಿ ಅರ್ಜಿ ಸಲ್ಲಿಸಿದ್ದರು.

ಇನ್ನು ಟಿಕೆಟ್‌ಗಾಗಿ ತಮಗೆ ಪರಿಚಯ ಇರುವ ನಾಯಕರುಗಳೊಂದಿಗೆ ಬಹುತೇಕ ಎಲ್ಲಾ ಮುಖಂಡರು ಪ್ರಯತ್ನ ನಡೆಸಿದ್ದು ಕ್ಷೇತ್ರದಲ್ಲಿ ಟಿಕೆಟ್ ರಾಜಕೀಯ ಸಾಕಷ್ಟು ರಂಗ ಪಡೆದಿತ್ತು. ಆದರೆ ಇದರ ನಡುವೆ ನಡೆದ ಬೆಳವಣಿಗೆ ಎಲ್ಲಾ ಟಿಕೆಟ್ ಆಕಾಂಕ್ಷಿಗಳಿಗೂ ಶಾಕ್ ಆಗುವಂತೆ ಮಾಡಿದೆ. ಮಾಜಿ ರಾಜ್ಯಪಾಲೆ ಕಾಂಗ್ರೆಸ್ ಮುಖಂಡೆ ಮಾರ್ಗರೇಟ್ ಆಳ್ವ ಪುತ್ರ ವಾತ್ಸಲ್ಯದಿಂದ ತಮ್ಮ ಮಗ ನಿವೇದಿತ್ ಆಳ್ವರನ್ನು ಕುಮಟಾ ಕ್ಷೇತ್ರದಿಂದ ನಿಲ್ಲಿಸಲು ಮುಂದಾಗಿದ್ದಾರೆ.
ಹೈಕಮಾಂಡ್ ನಿರ್ಧಾರಕ್ಕೆ ಕಾರ್ಯಕರ್ತರು ಬದ್ಧ
ಕುಮಟಾದಿಂದ ಟಿಕೆಟ್‌ಗಾಗಿ ಅರ್ಜಿಯೇ ಸಲ್ಲಿಸದ ನಿವೇದಿತ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ಮುಂದಾಗಿರುವುದು ಪಕ್ಷದ ವಲಯದಲ್ಲಿಯೇ ದೊಡ್ಡ ಅಸಮಾಧಾನಕ್ಕೆ ಕಾರಣವಾಗಿದೆ. ಇನ್ನು ಈ ಬಗ್ಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಸಾಯಿ ಗಾಂವಕರ್ ಅವರನ್ನು ಈ ಬಗ್ಗೆ ಕೇಳಿದರೆ ಕುಮಟಾದಲ್ಲಿ 14 ಮಂದಿ ಅರ್ಜಿ ಸಲ್ಲಿಕೆ ಮಾಡಿದ್ದು, ಈಗಾಗಲೇ ಮೂರ್ನಾಲ್ಕು ಮಂದಿ ಹೆಸರು ಎಐಸಿಸಿಗೆ ಕಳುಹಿಸಿದ್ದಾರೆ ಎಂದು ತಿಳಿಸಿದರು.
ನಿವೇದಿತ್ ಆಳ್ವ ಕೂಡ ಕುಮಟಾದ ಆಕಾಂಕ್ಷಿಯಾಗಿದ್ದಾರೆ. ಟಿಕೆಟ್ ನೀಡುವ ಜವಾಬ್ದಾರಿಯನ್ನು ಹೈಕಮಾಂಡ್ ಮಾಡುತ್ತದೆ. ನಿವೇದಿತ್ ಆಳ್ವಾ ಅವರಿಗೂ ಸಿಗಬಹುದು ಇಲ್ಲವೇ ಶಾರದಾ ಶೆಟ್ಟಿ ಇನ್ನಿತರ ಆಕಾಂಕ್ಷಿಗಳಿಗೂ ಸಿಗಬಹುದು. ಇದು ಹೈಕಮಾಂಡ್ ನಿರ್ಧಾರವಾಗಿರುವುದರಿಂದ ಅದಕ್ಕೆ ಕಾರ್ಯಕರ್ತರಾದ ನಾವೆಲ್ಲರೂ ಬದ್ಧರಾಗಿರಬೇಕು. ಅರ್ಜಿ ಸಲ್ಲಿಸಿದವರು ಹಾಗೂ ಈ ಹಿಂದೆ ಪಕ್ಷಕ್ಕಾಗಿ ದುಡಿದವರು ಎಲ್ಲರೂ ಪಕ್ಷಕ್ಕಾಗಿ ಕೆಲಸ ಮಾಡಲೇಬೇಕು ಎಂದಿದ್ದಾರೆ.

ಮಾಜಿ ಸಂಸದೆ ಮಾರ್ಗರೇಟ್ ಆಳ್ವಾ ಅವರ ಮಗ ನಿವೇದಿತ್ ಆಳ್ವ ಕೂಡ ಜಿಲ್ಲೆಯಲ್ಲಿ ಕೆಲಸ ಮಾಡಿದವರು. ಅವರಿಗೆ ಜಿಲ್ಲೆಯಲ್ಲಿ ಯಾವ ಕ್ಷೇತ್ರವನ್ನಾದರೂ ಆಯ್ಕೆ ಮಾಡಿಕೊಳ್ಳುವ ಹಕ್ಕು ಇದೆ. ಅವರು ಕುಮಟಾ ಕ್ಷೇತ್ರ ಕೇಳಿರಬಹುದು. ಆದರೆ ಈ ಹಿಂದೆ ಶಿರಸಿ ಕ್ಷೇತ್ರದ ಆಕಾಂಕ್ಷಿಯಾಗಿದ್ದರು. ಏನೇ ಇದ್ದರೂ ಕೂಡ ಹೈಕಮಾಂಡ್ ಏನು ನಿರ್ಧಾರ ಕೈಗೊಳ್ಳುವುದೋ ಕಾರ್ಯಕರ್ತರೆಲ್ಲರೂ ಅದಕ್ಕೆ ಬದ್ಧರಾಗಿರಬೇಕು. ಅದೇ ಅಭ್ಯರ್ಥಿಯನ್ನೇ ಬೆಂಬಲಿಸಬೇಕು ಎಂದು ಕಾರ್ಯಕರ್ತರಿಗೆ ತಿಳಿಸಿದ್ದಾರೆ.
ಇನ್ನು ಕುಮಟಾದಲ್ಲಿ ಟಿಕೆಟ್ ಗಾಗಿ ಅರ್ಜಿ ಹಾಕಿದ ಮುಖಂಡರು ಕಳೆದ ಎರಡು ಮೂರು ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿ ತೊಡಗಿದ್ದು ಈ ಬಾರಿ ತನಗೆ ಟಿಕೆಟ್ ಸಿಗಲಿದೆ ಎನ್ನುವ ನಿರೀಕ್ಷೆಯಲ್ಲಿದ್ದರು. ಅಲ್ಲದೇ ಆರ್ಥಿಕವಾಗಿಯೂ ಟಿಕೆಟ್ ಸಿಗುತ್ತದೆ ಎಂದು ಕ್ಷೇತ್ರದಲ್ಲಿ ಸಾಕಷ್ಟು ಖರ್ಚು ಮಾಡಿಕೊಂಡಿದ್ದರು.
ಇಷ್ಟು ದಿನಗಳ ಕಾಲ ನಿವೇದಿತ್ ಆಳ್ವ ಜಿಲ್ಲೆಯ ಶಿರಸಿ ಕ್ಷೇತ್ರದಿಂದ ಕಣಕ್ಕೆ ಇಳಿಯಲಿದ್ದಾರೆ ಎನ್ನಲಾಗಿತ್ತು. ಅಲ್ಲದೇ ಟಿಕೆಟ್‌ಗಾಗಿ ಶಿರಸಿ ಕ್ಷೇತ್ರದಿಂದಲೇ ನಿವೇದಿತ್ ಅರ್ಜಿ ಸಲ್ಲಿಸಿದ್ದರು. ಆದರೆ ಈಗ ಏಕಾಏಕಿ ಶಿರಸಿಯಿಂದ ಕುಮಟಾಕ್ಕೆ ನಿವೇದಿತ್ ಮುಖ ಮಾಡಿರಿವುದು ಟಿಕೆಟ್ ಆಕಾಂಕ್ಷಿಗಳಿಗೆ ತಲೆನೋವಾಗಿದೆ.

ನಿವೇದಿತ್ ಆಳ್ವಾ ಕಳೆದ ಐದು ವರ್ಷದಿಂದ ಪಕ್ಷ ಸಂಘಟನೆಯಲಿಲ್ಲ
ಇನ್ನು ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡಿರುವ ಟಿಕೆಟ್ ಆಕಾಂಕ್ಷಿ ಮಂಜುನಾಥ ನಾಯ್ಕ, "ನಿವೇದಿತ್ ಆಳ್ವಾ ಅವರು ಕುಮಟಾ ಕ್ಷೇತ್ರಕ್ಕೆ ಬರುವ ಬಗ್ಗೆ ಮಾಹಿತಿ ಇಲ್ಲ. ಆದರೆ ಆಳ್ವಾ ಕುಟುಂಬ ಕಾಂಗ್ರೆಸ್ ಪಕ್ಷದ ನಿಷ್ಟಾವಂತ ಕುಟುಂಬ. ಈ ರೀತಿ ಅರ್ಜಿ ಹಾಕದ ಕ್ಷೇತ್ರದಲ್ಲಿ ಟಿಕೆಟ್‌ಗೆ ಪ್ರಯತ್ನ ಮಾಡುವುದಿಲ್ಲ. ಅಲ್ಲದೆ ನಿವೇದಿತ್ ಆಳ್ವಾ ಅವರು ಕಳೆದ ಐದು ವರ್ಷದಿಂದ ಪಕ್ಷ ಸಂಘಟನೆಯಲ್ಲೇನು ತೊಡಗಿಕೊಂಡಿಲ್ಲ ಎಂದರು.
ಅಲ್ಲದೇ ನಿವೇದಿತ್ ಆಳ್ವ ಅವರು ಹೈಲಿ ಕ್ವಾಲಿಫೈಡ್. ಇವರು ವಕ್ತಿಗಿಂತ ಪಕ್ಷ ಮುಖ್ಯ ಎಂದುಕೊಂಡವರು. ಇವರ ಉದ್ದೇಶ ಪಕ್ಷವೇ ಅಧಿಕಾರಕ್ಕೆ ಬರಬೇಕು ಎಂಬುದು ಇರುತ್ತದೆ. ಇದೆಲ್ಲವೂ ಊಹಾಪೋಹಗಳು. ಮಾರ್ಗರೇಟ್ ಆಳ್ವ ಅವರು ಕೂಡ ಪಕ್ಷ ಸಿದ್ಧಾಂತಕ್ಕೆ ಬದ್ಧರಾಗಿರುವ ಕಾರಣ ತನ್ನ ಮಗನಿಗಾಗಿ ಈ ರೀತಿ ರಾಜಕಾರಣ ಮಾಡುವವರಲ್ಲ ಎಂದು ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಇನ್ನು ಜಿಲ್ಲೆಯಲ್ಲಿ ಕುಟುಂಬ ರಾಜಕಾರಣಕ್ಕೆ ಇಷ್ಟು ದಿನಗಳ ಕಾಲ ಆದ್ಯತೆ ಕೊಟ್ಟಿರಲಿಲ್ಲ. ಇದೀಗ ಕಾಂಗ್ರೆಸ್‌ನಲ್ಲಿ ಆಳ್ವ ಪುತ್ರನನ್ನು ಕಣಕ್ಕೆ ಇಳಿಸಿದರೆ ಈ ಬಾರಿ ಜಿಲ್ಲೆಯ ಇತರೇ ಕ್ಷೇತ್ರದ ಮೇಲೂ ಪರಿಣಾಮ ಬೀಳುವ ಸಾಧ್ಯತೆ ಇದೆ ಎನ್ನುವುದು ಕೆಲ ಕಾಂಗ್ರೆಸ್ಸಿಗರ ಅಭಿಪ್ರಾಯ. ಒಟ್ಟಿನಲ್ಲಿ ಕುಮಟಾ ಕ್ಷೇತ್ರದಲ್ಲಿ ಸದ್ಯ ಕಾಂಗ್ರೆಸ್ ಟಿಕೆಟ್ ಅನ್ನುವುದು ದೊಡ್ಡ ಚರ್ಚೆಯ ವಿಚಾರವಾಗಿದ್ದು ಪಕ್ಷ ಅಂತಿಮವಾಗಿ ಯಾರಿಗೆ ಮಣೆ ಹಾಕಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.











Click it and Unblock the Notifications