Ugadi 2025: ಕಾರವಾರ-ಮೈಸೂರು ವಿಶೇಷ ರೈಲು, ವೇಳಾಪಟ್ಟಿ
ಕಾರವಾರ, ಮಾರ್ಚ್ 22: ಯುಗಾದಿ ಮತ್ತು ರಂಜಾನ್ ಹಬ್ಬಗಳು ಒಟ್ಟಾಗಿ ಬಂದಿವೆ. ಅಲ್ಲದೇ ವಾರಾಂತ್ಯವೂ ಆದ ಕಾರಣ ಪ್ರಯಾಣ ನಡೆಸುವ ಜನರ ಸಂಖ್ಯೆ ಹೆಚ್ಚಾಗಿರುತ್ತದೆ. ಸಾಲು ಸಾಲು ರಜೆ ಹಿನ್ನಲೆಯಲ್ಲಿ ಪ್ರಯಾಣಿಕರ ದಟ್ಟಣೆ ತಪ್ಪಿಸಲು ನೈಋತ್ಯ ರೈಲ್ವೆ ಒಂದು ಟ್ರಿಪ್ ವಿಶೇಷ ರೈಲು ಓಡಿಸುತ್ತಿದೆ. ಮೈಸೂರು-ಕಾರವಾರ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರ ನಡೆಸಲಿದೆ, ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಯುಗಾದಿ ಮತ್ತು ರಂಜಾನ್ ಹಬ್ಬಗಳ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಸರಿದೂಗಿಸಲು ಮೈಸೂರು ಮತ್ತು ಕಾರವಾರ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್‌ಪ್ರೆಸ್ ರೈಲು ಓಡಿಸಲಾಗುತ್ತದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ಹೇಳಿದೆ. ಪ್ರಯಾಣಿಕರು ವಿಶೇಷ ರೈಲು ಉಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.

ವಿಶೇಷ ರೈಲು ವೇಳಾಪಟ್ಟಿ: ರೈಲು ಸಂಖ್ಯೆ 06203 ಮೈಸೂರು-ಕಾರವಾರ ವಿಶೇಷ ಎಕ್ಸ್‌ಪ್ರೆಸ್ ರೈಲು ಮಾರ್ಚ್ 28ರಂದು ರಾತ್ರಿ 9.35ಕ್ಕೆ ಮೈಸೂರಿನಿಂದ ಹೊರಟು, ಮರುದಿನ ಸಂಜೆ 4.15ಕ್ಕೆ ಕಾರವಾರ ತಲುಪಲಿದೆ. ರೈಲು ಸಂಖ್ಯೆ 06204 ಮಾರ್ಚ್ 29ರಂದು ರಾತ್ರಿ 11.30ಕ್ಕೆ ಕಾರವಾರದಿಂದ ಹೊರಟು, ಮರುದಿನ ಸಂಜೆ 4.40ಕ್ಕೆ ಮೈಸೂರು ತಲುಪಲಿದೆ ಎಂದು ಪ್ರಕಟಣೆ ತಿಳಿಸಿದೆ.
ಈ ರೈಲು ಎರಡೂ ಮಾರ್ಗಗಳಲ್ಲಿ ಮಂಡ್ಯ, ಕೆಎಸ್‌ಆರ್ ಬೆಂಗಳೂರು, ಯಶವಂತಪುರ, ಕುಣಿಗಲ್, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕಪುತ್ತೂರು, ಬಂಟ್ವಾಳ, ಸುರತ್ಕಲ್, ಮೂಲ್ಕಿ, ಉಡುಪಿ, ಬಾರ್ಕೂರು, ಕುಂದಾಪುರ, ಬೈಂದೂರು, ಭಟ್ಕಳ, ಮುರುಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರೋಡ್ ಮತ್ತು ಅಂಕೋಲಾ ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ.
ಈ ವಿಶೇಷ ಎಕ್ಸ್‌ಪ್ರೆಸ್ ರೈಲು 1 ಎಸಿ 2 ಟೈರ್ ಕಮ್ ಎಸಿ 3 ಟೈರ್, 3 ಎಸಿ 3 ಟೈರ್, 13 ಸ್ಲೀಪರ್ ಕ್ಲಾಸ್, 2 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 2 ಎಸ್‌ಎಲ್‌ಆರ್ / ಡಿ ಬೋಗಿಗಳು ಸೇರಿದಂತೆ 21 ಬೋಗಿಗಳನ್ನು ಒಳಗೊಂಡಿರುತ್ತದೆ.
ರೈಲು ಮುಂಗಡ ಟಿಕೆಟ್ ಕಾಯ್ದಿರಿಸುವಿಕೆ, ಆಗಮನ ಮತ್ತು ನಿರ್ಗಮನ ಸಮಯ ಮತ್ತು ಹೆಚ್ಚಿನ ವಿವರಗಳಿಗಾಗಿ, ಪ್ರಯಾಣಿಕರು ಅಧಿಕೃತ ರೈಲ್ವೆ ವೆಬ್‌ಸೈಟ್‌ಗೆ ಭೇಟಿ ನೀಡಿ ಅಥವಾ ಹತ್ತಿರದ ರೈಲ್ವೆ ಬುಕಿಂಗ್ ಕೌಂಟರ್‌ಗಳನ್ನು ಸಂಪರ್ಕಿಸಿ ಎಂದು ಮನವಿ ಮಾಡಲಾಗಿದೆ.
ಬೆಂಗಳೂರು-ಚೆನ್ನೈ ವಿಶೇಷ ರೈಲು: ಯುಗಾದಿ ಮತ್ತು ರಂಜಾನ್ ಹಬ್ಬಗಳ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ಕಡಿಮೆ ಮಾಡಲು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ಬೆಂಗಳೂರು ಮತ್ತು ಪುರಚ್ಚಿ ತಲೈವರ್ ಡಾ. ಎಂ. ಜಿ. ರಾಮಚಂದ್ರನ್ ಸೆಂಟ್ರಲ್ ರೈಲ್ವೆ ನಿಲ್ದಾಣ (ಚೆನ್ನೈ) ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ನಡೆಸಲಿದೆ.
ರೈಲು ಸಂಖ್ಯೆ 07319 ಮಾರ್ಚ್ 28ರಂದು ಕೆಎಸ್‌ಆರ್ ಬೆಂಗಳೂರು ನಿಲ್ದಾಣದಿಂದ ಬೆಳಗ್ಗೆ 8:05ಕ್ಕೆ ಹೊರಟು, ಅದೇ ದಿನ ಮಧ್ಯಾಹ್ನ 2:40ಕ್ಕೆ ಡಾ. ಎಂ. ಜಿ. ಆರ್. ಚೆನ್ನೈ ಸೆಂಟ್ರಲ್ ತಲುಪಲಿದೆ. ಮಾರ್ಚ್ 28, 2025 ರೈಲು ಸಂಖ್ಯೆ 07320 ಡಾ. ಎಂ. ಜಿ. ಆರ್. ಚೆನ್ನೈ ಸೆಂಟ್ರಲ್ ನಿಲ್ದಾಣದಿಂದ ಮಧ್ಯಾಹ್ನ 3.40ಕ್ಕೆ ಹೊರಟು, ಅದೇ ದಿನ ರಾತ್ರಿ 10.50ಕ್ಕೆ ಕೆಎಸ್‌ಆರ್ ಬೆಂಗಳೂರು ನಿಲ್ದಾಣ ತಲುಪಲಿದೆ.
ಈ ರೈಲು ಎರಡೂ ಮಾರ್ಗಗಳಲ್ಲಿ ಯಶವಂತಪುರ, ಕೃಷ್ಣರಾಜಪುರಂ, ಬಂಗಾರಪೇಟೆ, ಜೋಲಾರ್‌ಪೆಟ್ಟೈ, ಅಂಬೂರು, ಗುಡಿಯಾಟ್ಟಂ, ಕಟಪಾಡಿ, ಶೋಲಿಂಗೂರ್, ಅರಕ್ಕೋಣಂ, ತಿರುವಳ್ಳೂರು ಮತ್ತು ಪೆರಂಬೂರು ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ.
ಈ ರೈಲಿನಲ್ಲಿ 1 ಎಸಿ 2-ಟೈರ್ ಬೋಗಿ, 2 ಎಸಿ 3-ಟೈ ಬೋಗಿಗಳು, 11 ಸ್ಲೀಪರ್ ಬೋಗಿಗಳು, 4 ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಮತ್ತು 2 ಎಸ್‌ಎಲ್‌ಆರ್ ಡಿ ಬೋಗಿಗಳು ಸೇರಿದಂತೆ 20 ಬೋಗಿಗಳು ಇರಲಿವೆ.












Click it and Unblock the Notifications