ಉತ್ತರ ಕನ್ನಡ: ಭಾರಿ ಮಳೆಯನಂತರ ಎಲ್ಲೆಂದರಲ್ಲಿ ಪ್ರತ್ಯಕ್ಷವಾಗುತ್ತಿವೆ ಹಾವುಗಳು, ಬೆಸ್ತು ಬಿದ್ದ ಜನ !
ಕಾರವಾರ, ಜುಲೈ 22: ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದ್ದು ಕರಾವಳಿಯಲ್ಲಿ ಎದುರಾಗಿದ್ದ ನೆರೆ ಆತಂಕ ದೂರಾಗಿದೆ. ಆದರೆ ಇದೀಗ ವಾರಗಳಿಗೂ ಹೆಚ್ಚು ಕಾಲ ಸುರಿದ ಭಾರಿ ಮಳೆ ಬಳಿಕ ಅಂಕೋಲಾ ತಾಲ್ಲೂಕಿನ ಕೆಲವೆಡೆ ಹಾವುಗಳ ಕಾಟ ವಿಪರೀತವಾಗಿದ್ದು, ಜನ ಮನೆಯಲ್ಲಿಯೂ ಭಯದಲ್ಲಿಯೇ ಬದುಕಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ವಾರದ ಹಿಂದೆ ಬಿಟ್ಟು ಬಿಡದೆ ಅಬ್ಬರಿಸಿದ ಮಳೆ ಇದೀಗ ಕಡಿಮೆಯಾಗಿದೆ. ನದಿಗಳಲ್ಲಿ ನೀರಿನ ಪ್ರಮಾಣ ಇಳಿಕೆಯಾಗಿದ್ದು ಇದ್ದ ಪ್ರವಾಹದ ಭೀತಿ ದೂರಾಗಿದೆ. ಆದರೆ ಮಳೆ ಕಡಿಮೆಯಾದ ಬೆನ್ನಲ್ಲೇ ಅಂಕೋಲಾ ತಾಲೂಕಿನ ಕೇಣಿ, ಆವರ್ಸಾ, ಬೇಲಿಕೇರಿ ಸೇರಿದಂತೆ ಸುತ್ತಮುತ್ತಲಿನ ಭಾಗಗಳಲ್ಲಿ ನಿತ್ಯವೂ ಹಾವುಗಳ ಕಾಟ ಹೆಚ್ಚಾಗುತ್ತಿದೆ.
ಮಳೆಯಿಂದ ಹಲವಾರು ಗುಡ್ಡಗಳು ಕುಸಿದಿವೆ, ಅಲ್ಲದೆ ಕೆಲವು ಕಡೆ ಹೆಚ್ಚಿನ ಮಳೆಯಾಗಿರುವುದರಿಂದ ಬಿರುಸಿನಲ್ಲಿ ಹರಿಯುವ ನೀರಿನಲ್ಲಿ ಹಾವುಗಳು ಕೊಚ್ಚಿ ಬಂದಿರುವ ಹಾವುಗಳು ಸುರಕ್ಷಿತ ಜಾಗ ಹುಡುಕಿಕೊಂಡು ಮನೆ, ಗುಡಿಸಲು,ಕೊಟ್ಟಿಗೆ, ಜಮೀನು ಮುಂತಾದ ಪ್ರದೇಶಗಳಿಗೆ ನುಗ್ಗಿ ಆಶ್ರಯ ಪಡೆದುಕೊಳ್ಳಲು ಯತ್ನಿಸಿವೆ. ನೀರು ಹಾವು, ನಾಗರಹಾವು, ಕೆರೆ ಹಾವು, ನಾಗರ, ಹೆಬ್ಬಾವು ಹಾಗೂ ಕಾಳಿಂಗ ಸೇರಿದಂತೆ ನಾನಾ ಹಾವುಗಳು ಜನರ ನಿದ್ದೆಗೆಡಿಸುತ್ತಿವೆ.

ಆಸ್ಪತ್ರೆ ಸೇರಿದ 5 ಮಂದಿ
ಅಲ್ಲದೆ ಎಲ್ಲೆಂದರಲ್ಲಿ ಓಡಾಡಿಕೊಂಡಿರುವ ಹಾವುಗಳು ಇರುವುದನ್ನು ತಿಳಿಯದೇ ತುಳಿದು 5 ಕ್ಕೂ ಹೆಚ್ಚು ಮಂದಿ ಹಾವಿನ ಕಡಿತಕ್ಕೊಳಗಾಗಿ ಆಸ್ಪತ್ರೆ ಸೇರಿದ್ದಾರೆ. ಪ್ರತಿ ಮಳೆಗಾಲದ ವೇಳೆ ಹಾವುಗಳ ಕಾಟ ಇದೇಯಾದರೂ ಈ ಭಾರಿ ಹೆಚ್ಚಾಗಿದೆ. ಮನೆಯ ಒಳಭಾಗದಲ್ಲಿ ಯಾರಿಗೂ ಗೊತ್ತಿಲ್ಲದಂತೆ ಸೇರಿಕೊಂಡು ಆತಂಕ ಸೃಷ್ಟಿಸುತ್ತಿವೆ. ಇದರಿಂದ ಮನೆಯಲ್ಲಿ ಇರುವುದಕ್ಕೂ ಭಯಪಡುವ ಸ್ಥಿತಿ ನಿರ್ಮಾಣವಾಗಿದೆ.

ಜನವಸತಿ, ಗದ್ದೆಗಳಲ್ಲಿ ಹಾವು
ಇನ್ನು ಭಾರಿ ಮಳೆಯಿಂದಾಗಿ ಹಳ್ಳ ಕೊಳ್ಳಗಳು ತುಂಬಿ ಗಂಗಾವಳಿ ನದಿ ಈ ಭಾರಿಯೂ ತುಂಬಿಕೊಂಡಿತ್ತು. ಇದರ ಮೂಲಕ ತೇಲಿ ಬಂದ ಕಸ ಕಡ್ಡಿಗಳ ಜೊತೆಗೆ ಹಾವುಗಳು ತೇಲಿ ಬಂದು ನದಿ ತೀರದ ಪ್ರದೇಶಗಳನ್ನು ಸೇರಿಕೊಂಡಿರುವ ಸಾಧ್ಯತೆ ಇದೆ. ಇದೀಗ ಈ ಹಾವುಗಳು ಮನೆ ಜಮೀನುಗಳನ್ನು ಸೇರಿಕೊಂಡಿವೆ. ಇದೀಗ ಬಿಸಿಲು ಬಿದ್ದಿದ್ದರಿಂದ ನಿಧಾನವಾಗಿ ಹೊರಬರಲಾರಂಭಿಸಿವೆ ಎನ್ನುತ್ತಾರೆ ಈ ಭಾಗದ ಜನ.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯೂ ಕಾರಣ
ಇನ್ನು ಪ್ರತಿ ಮಳೆಗಾಲದಲ್ಲಿಯೂ ಈ ಭಾಗದಲ್ಲಿ ಹಾವುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಆದರೆ ಈ ಭಾರಿ ಕಳೆದ ವರ್ಷಗಳಿಗಿಂತಲೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಜನಸಮಾನ್ಯರ ಆತಂಕಕ್ಕೆ ಕಾರಣವಾಗಿದೆ. ಇದಲ್ಲದೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕಳೆದ ಹಲವು ವರ್ಷಗಳಿಂದ ಅಭಿವೃದ್ಧಿಪಡಿಸಲಾಗುತ್ತಿದೆ. ಇದರ ಪಕ್ಕದ ಗುಡ್ಡಗಳನ್ನು ತೆರವುಗೊಳಿಸಲಾಗಿದೆ. ಇದರಿಂದ ಹಾವಿನ ಬಿಲಗಳು ನಾಶವಾಗಿದ್ದು ಇದೀಗ ಹಾವುಗಳು ರಸ್ತೆ ಮೇಲೆ, ಊರಿನ ಕಡೆ ಬರತೊಡಗಿವೆ ಎನ್ನಲಾಗುತ್ತಿದೆ.
Recommended Video

ಹೆಬ್ಬಾವು,ನಾಗರ, ಕಾಳಿಂಗ ಸರ್ಪಗಳೇ ಹೆಚ್ಚು
ವಾರಕ್ಕೆ 4-5 ಹಾವುಗಳನ್ನು ಹಿಡಿಯಲಾಗುತ್ತಿದೆ. ಅದರಲ್ಲಿ ಹೆಚ್ಚು ಹೆಬ್ಬಾವು ಹಾಗೂ ನಾಗರ ಹಾವು, ಕಾಳಿಂಗ ಸರ್ಪ ಸೇರಿದಂತೆ ಇತರೆ ಹಾವುಗಳನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದೇವೆ. ಹಾವುಗಳು ಆಹಾರ ಹುಡುಕಿಯೂ ಊರುಗಳತ್ತ ಮುಖಮಾಡುವುದು ಇದೆ. ಆದರೆ ಇಂತಹ ಸಂದರ್ಭದಲ್ಲಿ ಯಾರು ಕೂಡ ಅವುಗಳಿಗೆ ಏನು ಮಾಡದೇ ಸಂಬಂಧಪಟ್ಟ ಅರಣ್ಯ ಇಲಾಖೆ ಇಲ್ಲವೆ ಉರಗಗಳನ್ನು ರಕ್ಷಣೆ ಮಾಡುವವರಿಗೆ ತಿಳಿಸಬೇಕು. ಅವು ನಮ್ಮಂತೆಯೇ ಬದುಕುವ ಅರ್ಹತೆ ಹೊಂದಿವೆ. ಎಲ್ಲ ಹಾವುಗಳು ವಿಷಕಾರಿಯಲ್ಲ. ಯಾವುದೇ ಹಾವುಗಳು ಅವುಗಳಿಗೆ ತೊಂದರೆ ನೀಡದೆ ಇದ್ದಲ್ಲಿ ಅವುಗಳ ಪಾಡಿಗೆ ಅವು ಹೊರಟು ಹೋಗುತ್ತವೆ. ಆದರೆ ನಮಗೆ ತಾಳ್ಮೆ ಬೇಕು ಎನ್ನುತ್ತಾರೆ ಉರಗ ಪ್ರೇಮಿ ಮಹೇಶ ನಾಯ್ಕ.
ಒಟ್ಟಾರೆ ಕಳೆದ ಮೂರು ವರ್ಷಗಳಿಂದ ನೆರೆ ಹಾವಳಿಯಿಂದ ತತ್ತರಿಸಿ ಹೋಗಿದ್ದ ಅಂಕೋಲಾ ಜನ ಈ ಭಾರಿಯೂ ಭಾರಿ ಮಳೆಯಾಗುತ್ತಿರುವ ಕಾರಣ ಮತ್ತೆ ನೆರೆಯ ಭೀತಿಯಲ್ಲಿದ್ದರು. ಸದ್ಯ ಮಳೆ ಕಡಿಮೆಯಾಗಿದ್ದು ಗಾಂಗಾವಳಿಯಲ್ಲ್ಲಿ ನೀರಿನ ಮಟ್ಟ ಕೂಡ ಇಳಿಕೆಯಾಗಿದೆ. ಆದರೆ ಇದೀಗ ಹಾವುಗಳ ಕಾಟ ಜೋರಾಗಿರುವುದು ಜನಸಾಮಾನ್ಯರ ಆತಂಕಕ್ಕೆ ಕಾರಣವಾಗಿದೆ.












Click it and Unblock the Notifications