ಮಹಾ ಶಿವರಾತ್ರಿ 2023: ಉತ್ತರ ಕನ್ನಡದಲ್ಲಿ ಮಹಾಶಿವರಾತ್ರಿಗೆ ಸಜ್ಜಾದ ಪಂಚಕ್ಷೇತ್ರಗಳು, ಇಲ್ಲಿದೆ ಸಂಪೂರ್ಣ ಮಾಹಿತಿ
ಉತ್ತರ ಕನ್ನಡ ಜಿಲ್ಲೆಯಲ್ಲಿ ಗೋಕರ್ಣ ಮಹಾಬಲೇಶ್ವರ, ಭಟ್ಕಳದ ಮರುಡೇಶ್ವರ, ಕಾರವಾರದ ಶೆಜ್ಜೇಶ್ವರ, ಹೊನ್ನಾವರದ ಧಾರೇಶ್ವರ ಹಾಗೂ ಗುಣುವಂತೇಶ್ವರ ದೇವಾಲಯಗಳು ಪ್ರಸಿದ್ಧಿ ಪಡೆದಿವೆ. ಮಹಾ ಶಿವರಾತ್ರಿ ಸಮಯದಲ್ಲಿ ಭೇಟಿ ನೀಡಬಹುದಾದ ದೇವಾಲಯಗಳ ಮಾಹಿತಿ ಇಲ್ಲಿದೆ.
ಕಾರವಾರ, ಫೆಬ್ರವರಿ 15: ಪರಶಿವನ ದೇವಾಲಯಗಳು ಜಿಲ್ಲೆಯ ವಿವಿಧೆಡೆ ಸಾಕಷ್ಟಿವೆ. ಆದರೆ ಆತ್ಮಲಿಂಗವಿರುವ ಜಿಲ್ಲೆಯ ಐದು ಕ್ಷೇತ್ರಗಳು ಇಂದಿಗೂ ಭಕ್ತರ ಪಾಲಿಗೆ ಬೇಡಿದ್ದನ್ನು ಕರುಣಿಸುವ ಪುಣ್ಯ ಕ್ಷೇತ್ರಗಳಾಗಿವೆ. ಇದೇ ಕಾರಣಕ್ಕೆ ಪ್ರತಿ ವರ್ಷ ಮಹಾ ಶಿವರಾತ್ರಿಯನ್ನು ಈ ಕ್ಷೇತ್ರಗಳಲ್ಕಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಶಿವನ ಕ್ಷೇತ್ರಗಳು ಸಾಕಷ್ಟಿವೆ. ಅವುಗಳಲ್ಲಿ ಆತ್ಮಲಿಂಗವಿರುವ ಪ್ರಮುಖವಾದ ಗೋಕರ್ಣ ಮಹಾಬಲೇಶ್ವರ, ಭಟ್ಕಳದ ಮರುಡೇಶ್ವರ, ಕಾರವಾರದ ಶೆಜ್ಜೇಶ್ವರ, ಹೊನ್ನಾವರದ ಧಾರೇಶ್ವರ ಹಾಗೂ ಗುಣುವಂತೇಶ್ವರ ದೇವಾಲಯಗಳು ಸಾಕಷ್ಟು ಪ್ರಸಿದ್ಧಿ ಪಡೆದಿವೆ. ಆತ್ಮಲಿಂಗದ ಜೊತೆ ಸಂಬಂಧ ಬೆಸೆದುಕೊಂಡಿರುವ ಈ ಕ್ಷೇತ್ರಗಳ ಬಗೆಗೆ ಪೌರಾಣಿಕ ಹಿನ್ನೆಲೆ ಇದೆ.
ರಾವಣ ಕಿತ್ತೆಸೆದ ಆತ್ಮಲಿಂಗದಿಂದ ಪಂಚ ಕ್ಷೇತ್ರ
ತಾಯಿಗಾಗಿ ರಾವಣೇಶ್ವರನೂ ತಪಸ್ಸು ಮಾಡಿ ಶಿವನಿಂದ ಆತ್ಮಲಿಂಗ ಪಡೆದುಕೊಂಡು ಲಂಕೆಯ ಮಾರ್ಗದಲ್ಲಿ ತೆರಳುವಾಗ ಸಂಧ್ಯಾವಂದನೆ ಸಮಯವಾಗಿ ಅರ್ಘ್ಯಕೊಡಲು ಕೈಯಲ್ಲಿರುವ ಆತ್ಮಲಿಂಗವನ್ನು ಯಾರ ಬಳಿಯಾದರೂ ಕೊಡಲು ಚಿಂತಿಸುತ್ತಿರುವಾಗ ಗಣಪತಿಗೆ ಭೂಮಿಗೆ ಸ್ಪರ್ಶಿಸದಂತೆ ಆತ್ಮಲಿಂಗ ನೀಡಿದ್ದನಂತೆ. ರಾವಣ ಸಂಧ್ಯಾವಂದನೆಗೆ ಸಮುದ್ರದ ಬಳಿ ಹೋಗುತ್ತದ್ದಂತೆ ಗಣಪತಿ ಆತ್ಮ ಲಿಂಗವನ್ನು ನೆಲಕ್ಕೆ ಇಟ್ಟಿದ್ದು, ಆತ್ಮಲಿಂಗ ಆಳಕ್ಕೆ ಇಳಿಯತೊಡಗಿದಾಗ ರಾವಣ ಓಡೋಡಿ ಬಂದು ಕೀಳಲು ಯತ್ನಿಸಿದನಂತೆ, ಆಗ ಆತ್ಮಲಿಂಗ ಐದು ಚೂರುಗಳಾದವಂತೆ. ಅದನ್ನು ಲಂಕೆಗೆ ಎಸೆಯಬೇಕೆಂದು ರಾವಣ ಜೋರಾಗಿ ಎಸೆದಾಗ ಕಾರವಾರ ಸನಿಹದ ಸಜ್ಜೇಶ್ವರ,
ಹೊನ್ನಾವರ ಹಳದೀಪುರ ಸನಿಹದ ಧಾರೇಶ್ವರ, ಗುಣವಂತೆ ಹಾಗೂ ಮುರುಡೇಶ್ವರದ ಸಮುದ್ರದ ಬಳಿ ಬಿದ್ದವಂತೆ. ಹೀಗೆ ರಾವಣನಿಂದ ನಿರ್ಮಿತವಾದ ಪಂಚಕ್ಷೇತ್ರಗಳಲ್ಲಿ ಇಂದಿಗೂ ಶಿವಧ್ಯಾನ, ಪೂಜೆ ಪುರಸ್ಕಾರಗಳು ನಿತ್ಯವೂ ನಡೆಯುತ್ತವೆ.

ಆತ್ಮಲಿಂಗ ಸ್ಪರ್ಶಿಸಿ ವಿಶೇಷ ಪೂಜೆ
ಇನ್ನು ಗೋಕರ್ಣದ ಮಹಾಬಲೇಶ್ವರ ದೇವಾಲಯ ತುಂಬಾ ಪುರಾತನವಾಗಿದ್ದು, ಯಾವಾಗ ನಿರ್ಮಾಣ ಮಾಡಿದರು ಎಂಬ ಸ್ಪಷ್ಟ ಮಾಹಿತಿ ಇಲ್ಲ. ಆದರೆ ಕ್ಷೇತ್ರದಲ್ಲಿ ಮಹಾಗಣಪತಿ ದೇವಾಲಯ, ತಾಮ್ರಗೌರಿ, ಕೋಟಿತೀರ್ಥ, ಭದ್ರಕಾಳಿ, ವೆಂಕಟೇಶ, ಸೂರ್ಯದೇವಾಲಯ ಇಲ್ಲಿವೆ. ಗೋವಿನ ಕಿವಿಯ ಆಕಾರದಲ್ಲಿರುವ ಕಾರಣ ಗೋಕರ್ಣ ಎಂದು ಕರೆಯಲಾಗುತ್ತದೆ ಎನ್ನುವುದು ಸ್ಥಳೀಯರು ನಂಬಿಕೊಂಡು ಬಂದ ಇತಿಹಾಸವಾಗಿದೆ.
ಇನ್ನು ಶ್ರಿ ಕ್ಷೇತ್ರದಲ್ಲಿ ಪ್ರತಿ ನಿತ್ಯವೂ ಭಕ್ತರೇ ಆತ್ಮಲಿಂಗಕ್ಕೆ ಪೂಜೆ, ಅಭಿಷೇಕ ನಡೆಸಲು ಅವಕಾಶವಿದೆ. ಮಹಾಶಿವರಾತ್ರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಈ ವೇಳೆ ಲಕ್ಷಾಂತರ ಭಕ್ತರು ಒಂದೇ ದಿನಕ್ಕೆ ಆಗಮಿಸುತ್ತಾರೆ. ಪ್ರತಿನಿತ್ಯ ಬೆಳಿಗ್ಗೆ 6 ಗಂಟೆಯಿಂದ 12:30 ರವರೆಗೆ ಮತ್ತು 5 ರಿಂದ 8 ಗಂಟೆವರೆಗೆ ಭಕ್ತರು ಆತ್ಮಲಿಂಗವನ್ನು ಸ್ಪರ್ಶಿಸಿ ವಿಶೇಷ ಪೂಜೆ ಸಲ್ಲಿಸಬಹುದಾಗಿದೆ.

ಶೆಜ್ಜೇಶ್ವರನಿಗೆ ವಿಶೇಷ ಪೂಜೆ
ಕಾರವಾರದ ಶೇಜವಾಡದಲ್ಲಿರುವ ಪುರಾಣ ಪ್ರಸಿದ್ಧ ಶೆಜ್ಜೇಶ್ವರ ದೇವಸ್ಥಾನದ ಶಿವಲಿಂಗದ ದರ್ಶನಕ್ಕೆ ಭಕ್ತರು ಶಿವರಾತ್ರಿಯಲ್ಲಿ ತಂಡೋಪ ತಂಡವಾಗಿ ಆಗಮಿಸುತ್ತಾರೆ. ಅಭಿಷೇಕ ಪ್ರಿಯನಾದ ಶಿವನಿಗೆ ವೈವಿಧ್ಯಮಯ ಅಭಿಷೇಕ ನಡೆಸಲಾಗುತ್ತದೆ ಇಲ್ಲಿನ ವಿಶೇಷ. ಭಕ್ತರಿಗೆ ಇಲ್ಲಿನ ಆತ್ಮಲಿಂಗದ ಸಾಮಿಪ್ಯದಲ್ಲಿ ಕ್ಷೀರಾಭಿಷೇಕ, ತುಪ್ಪ, ಜೇನುತುಪ್ಪ , ಮೊಸರು, ಎಳೆನೀರು, ಶಾಲ್ಯದ ಅನ್ನ, ಪಂಚಾಮೃತ ಇತ್ಯಾದಿ ಅಭಿಷೇಕ ಮಾಡಲು ಅವಕಾಶ ನೀಡಲಾಗುತ್ತದೆ.
ಶಿವರಾತ್ರಿಯಲ್ಲದೇ ವಿಶೇಷ ಜಾತ್ರಾ ಮಹೋತ್ಸವದಲ್ಲೂ ಆತ್ಮಲಿಂಗಕ್ಕೆ ಭಕ್ತರು ವಿಧಾನಗಳನ್ನು ನೆರವೇರಿಸುತ್ತಾರೆ. ಭಕ್ತರು ಮೊದಲು ದೇವಸ್ಥಾನದ ಒಳಾವರಣದಲ್ಲಿರುವ ಮಹಾಗಣಪತಿಯನ್ನು ಪೂಜಿಸಿ ನಂತರ ಶೆಜ್ಜೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸುವುದು ವಾಡಿಕೆ. ಪ್ರತಿ ಸೋಮವಾರ ಶಿವನಿಗೆ ಪ್ರಿಯವಾದ ಬಿಲ್ವಪತ್ರೆ ಅರ್ಪಿಸಿ, ಕರ್ಪೂರದಾರತಿ ಬೆಳಗಿ ಭಕ್ತರು ಭಾವುಕ ಭಕ್ತಿ ಮೆರೆಯುತ್ತಾರೆ. ಇನ್ನು ಪ್ರತಿ ವರ್ಷ ಶೆಜ್ಜೇಶ್ವರ ದೇವಾಲಯ ಹಾಗೂ ಹೊರಾವರಣದಲ್ಲಿ ಶಿವರಾತ್ರಿ ಜಾತ್ರೆಯಲ್ಲಿ ವಿಶೇಷ ಹೂವಿನ ಅಲಂಕಾರದಿಂದ ಶೃಂಗರಿಸಲಾಗುತ್ತದೆ.

ಏಷ್ಯಾ ಖಂಡದಲ್ಲಿಯೇ ಅತಿ ಎತ್ತರದ ಶಿವನ ಪ್ರತಿಮೆ ಮುರುಡೇಶ್ವರ
ವಿಶ್ವ ಪ್ರಸಿದ್ಧ ಮುರುಡೇಶ್ವರ ಶಿವನ ಆರಾಧ್ಯ ಕೇಂದ್ರವಾಗಿದೆ. ರಾವಣನು ಎಸೆದ ಆತ್ಮಲಿಂಗದ ಭಾಗ ಇಲ್ಲಿ ಸಹ ಇದೆ. ಇಲ್ಲಿನೆಲೆಸಿರುವ ಮಹಾಶಿವನ ಮೂರ್ತಿ ಏಷ್ಯಾ ಖಂಡದಲ್ಲಿಯೇ ಅತಿ ಎತ್ತರದ ಶಿವನ ಪ್ರತಿಮೆ ಎಂಬ ಕೀರ್ತಿಗೆ ಪಾತ್ರವಾಗಿದೆ. ದೇಶ ವಿದೇಶಗಳಿಂದ ನಿತ್ಯವೂ ಸಾವಿರಾರು ಭಕ್ತರು ಮುರುಡೇಶ್ವರಕ್ಕೆ ಆಗಮಿಸಿ ಶಿವನ ದರ್ಶನ ಪಡೆಯುತ್ತಾರೆ.
ಇನ್ನು ಮಹಾಶಿವರಾತ್ರಿ ಪ್ರಯುಕ್ತ ಅರ್ಚಕ ವಿವಿಧ ಧಾರ್ಮಿಕ ಕಾರ್ಯಗಳನ್ನು ಆಯೋಜಿಸಲಾಗಿದೆ. ಬಿಲ್ವಾರ್ಚನೆ, ವಿಶೇಷ ಪೂಜೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ರಾತ್ರಿ ಪುಷ್ಪರಥೋತ್ಸವ ನಡೆಯಲಿದೆ. ಇದಲ್ಲದೆ ಹೊನ್ನಾವರದ ಗುಣವಂತೇಶ್ವರ ಹಾಗೂ ಧಾರೇಶ್ವರದಲ್ಲಿಯೂ ಶಿವರಾತ್ರಿಯಂದು ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಇಲ್ಲಿಗೆ ಆಗಮಿಸುವ ಭಕ್ತರು ಶಿವನ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ.

ಸಾವಿರಾರರು ಭಕ್ತರಿಂದ ಸಮುದ್ರ ಸ್ನಾನ
ಶಿವನ ಪಂಚ ಕ್ಷೇತ್ರಗಳಿರುವ ಉತ್ತರ ಕನ್ನಡದಲ್ಲಿ ಮಹಾ ಶಿವರಾತ್ರಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಪ್ರತಿ ಮನೆಗಳಲ್ಲಿಯೂ ಶಿವರಾತ್ರಿ ಸಂಭ್ರಮವಿರುತ್ತದೆ. ಮುಂಜಾನೆಯಿಂದಲೇ ಹಬ್ಬದ ಆಚರಣೆ ಆರಂಭವಾಗಲಿದ್ದು, ಮಾರನೆ ದಿನ ಬೆಳಗಿನ ಜಾವ ಜಾಗರಣೆ ಮುಗಿಯುವವರೆಗೂ ಮಹಾ ಶಿವರಾತ್ರಿ ಆಚರಣೆಗಳು ನಿರಂತರವಾಗಿರುತ್ತದೆ. ಶಿವರಾತ್ರಿ ಉಪವಾಸದ ಬಳಿಕ ಶಿವ ದೇವಾಲಯಗಳ ಪೂಜೆ ಬಳಿಕ ಮುರುಡೇಶ್ವರ, ಗೋಕರ್ಣ, ಕಾರವಾರಗಳಲ್ಲಿ ಕಡಲತೀರಕ್ಕೆ ತೆರಳಿ ಸಮುದ್ರಸ್ನಾನ ಮಾಡಲಾಗುತ್ತದೆ. ಅಲ್ಲದೆ ಕೆಲವೆಡೆ ಇದಕ್ಕೂ ಪೂರ್ವದಲ್ಲಿ ರಥೊತ್ಸವ ಕೂಡ ನಡೆಯಲಿದೆ. ಸಾವಿರಾರರು ಭಕ್ತರು ತೆರಳಿ ಸಮುದ್ರ ಸ್ನಾನ ಮಾಡುತ್ತಾರೆ.












Click it and Unblock the Notifications