25 ವರ್ಷ ಸೇವೆ ಸಲ್ಲಿಸಿ ವಾಪಸ್ಸಾದ ಯೋಧ; ಭೋವಿವಾಡದ ಗ್ರಾಮಸ್ಥರಿಂದ ಅದ್ದೂರಿ ಸ್ವಾಗತ!
ಕಾರವಾರ, ಸೆಪ್ಟೆಂಬರ್, 06: ಕಾರವಾರ ತಾಲೂಕಿನ ಭೋವಿವಾಡದ ಯೋಧ ಬಾಲಕೃಷ್ಣ ಭೋವಿ ಅವರು ಭಾರತೀಯ ಸೇನೆಯಲ್ಲಿ 25 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಬಳಿಕ ಸ್ವ ಗ್ರಾಮಕ್ಕೆ ಆಗಮಿಸಿದ್ದರು. ಅವರಿಗೆ ಗ್ರಾಮಸ್ಥರೆಲ್ಲ ಸೇರಿ ಹಾರ ಹಾಕಿ ಅದ್ಧೂರಿಯಾಗಿ ಸ್ವಾಗತಿಸಿ, ಮೆರವಣಿಗೆಯೊಂದಿಗೆ ಊರಿಗೆ ಬರಮಾಡಿಕೊಂಡಿದ್ದಾರೆ.
ಕಾರವಾರ ತಾಲೂಕಿನ ಭೋವಿವಾಡದ ಯೋಧ ಬಾಲಕೃಷ್ಣ ಭೋವಿ ನಿವೃತ್ತಿಯಾಗಿ ಶಿರವಾಡದ ರೈಲ್ವೇ ನಿಲ್ದಾಣಕ್ಕೆ ಆಗಮಿಸಿದ್ದರು. ಈ ಬಗ್ಗೆ ಮಾಹಿತಿ ಪಡೆದ ಗ್ರಾಮಸ್ಥರು ರೈಲ್ವೇ ನಿಲ್ದಾಣಕ್ಕೆ ಜಮಾಯಿಸಿದ್ದರು. ನಿವೃತ್ತ ಯೋಧ ಬಾಲಕೃಷ್ಣ ಆಗಮಿಸುತ್ತಿದ್ದಂತೆ ನೂರಕ್ಕೂ ಹೆಚ್ಚು ಗ್ರಾಮಸ್ಥರು ಜೈಕಾರ ಕೂಗುತ್ತಾ, ಹೂವಿನ ಹಾರಗಳನ್ನು ಹಾಕಿ ಅವರಿಗೆ ಸ್ವಾಗತ ಕೋರಿದರು. ಬಳಿಕ ರೈಲು ನಿಲ್ದಾಣದಿಂದ ಭೋವಿವಾಡ ಗ್ರಾಮದವರೆಗೂ ತೆರೆದ ಜೀಪಿನಲ್ಲಿ ಮೆರವಣಿಗೆ ನಡೆಸಲಾಯಿತು.
ಸೇನೆಯಲ್ಲಿ ಯೋಧನ ಸಾಧನೆಗಳು
1997ರಲ್ಲಿ ಬಿಎಸ್‌ಎಫ್ ಸೇರಿದ್ದ ಬಾಲಕೃಷ್ಣ ಅವರು, ಬಳಿಕ ಇಂದೋರ್‌ನಲ್ಲಿ ತರಬೇತಿ ಪಡೆದುಕೊಂಡಿದ್ದರು. ತರಬೇತಿ ಬಳಿಕ ಪಶ್ಚಿಮ ಬಂಗಾಳ, ಶಿಲ್ಲಾಂಗ್, ಜಮ್ಮು ಕಾಶ್ಮೀರ, ಗುಜರಾತ್, ಪಂಜಾಬ್, ಛತ್ತೀಸ್‌ಗಢ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ 25 ವರ್ಷ ಸೇವೆ ಸಲ್ಲಿಸಿದ್ದರು. ಅಲ್ಲದೇ 1999ರಲ್ಲಿ ನಡೆದಿದ್ದ ಕಾರ್ಗಿಲ್ ಯುದ್ಧದಲ್ಲಿಯೂ ಸಹ ಬಾಲಕೃಷ್ಣ ಅವರು ಭಾಗಿ ಆಗಿದ್ದರು. ಇನ್ನು ನಿವೃತ್ತ ಯೋಧ ಬಾಲಕೃಷ್ಣ ಗಡಿ ಭದ್ರತೆಯ ಜೊತೆಗೆ, ಭಾರತೀಯ ಸೇನೆಯ ಭದ್ರತಾ ವಾಹನ ಚಾಲನೆಯನ್ನು ಸಹ ಮಾಡಿದ್ದಾರೆ. ಯುದ್ಧದ ಸಂದರ್ಭದಲ್ಲಿ ಗುಂಡುಗಳು ವಾಹನಕ್ಕೆ ಬಡಿದು ವಾಹನ ಜಖಂಗೊಂಡಿತ್ತು. ಗುಂಡು ನಿರೋಧಕ ವಾಹನಗಳಿಂದಾಗಿ ನಾವು ಸುರಕ್ಷಿತವಾಗಿರಲು ಸಾಧ್ಯವಾಯಿತು. ಅಲ್ಲದೇ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಭದ್ರತೆ ಕೈಗೊಂಡಿದ್ದಾಗ ಮೈಯೆಲ್ಲಾ ಕಣ್ಣಾಗಿಸಿಕಂಡು ಕಾಯಬೇಕಾಗಿತ್ತು. ಅಂತಹ ಪರಿಸ್ಥಿತಿಗಳನ್ನು ಹೊರತುಪಡಿಸಿದರೆ ಉಳಿದ ಸಂದರ್ಭಗಳಲ್ಲಿ ಹೆಚ್ಚಿನ ತೊಂದರೆ ಅಗಿಲ್ಲ ಎಂದು ನಿವೃತ್ತ ಯೋಧ ತಮ್ಮ ಅನುಭವವನ್ನ ಹಂಚಿಕೊಂಡರು.

ನಿವೃತ್ತ ಯೋಧನಿಗೆ ಭರ್ಜರಿ ಸ್ವಾಗತ
ಇನ್ನು ಗ್ರಾಮಕ್ಕೆ ಮರಳಿದ ಯೋಧನಿಗೆ ಭೋವಿವಾಡದ ಗಜಾನನ ಯುವಕ ಮಂಡಳಿ ನೇತೃತ್ವದಲ್ಲಿ ಸ್ವಾಗತವನ್ನು ಮಾಡಲಾಯಿತು. ಬಾಲಕೃಷ್ಣ ಅವರಿಗೆ ಗ್ರಾಮಸ್ಥರು ಸ್ವಾಗತವನ್ನು ಕೋರಿದ್ದು, ರೈಲ್ವೇ ನಿಲ್ದಾಣದಿಂದ ತೆರೆದ ಜೀಪಿನಲ್ಲಿ ಅವರನ್ನು ಹತ್ತಿಸಿ, ಬೈಕ್ ರ್‍ಯಾಲಿ ಮಾಡಿಕೊಂಡು ಗ್ರಾಮದವರೆಗೆ ಕರೆದೊಯ್ದರು. ದೇಶದ ಜನರ ಸುರಕ್ಷತೆಗಾಗಿ ಗಡಿಯಲ್ಲಿ ಪ್ರಾಣವನ್ನು ಒತ್ತೆಯಿಟ್ಟು ಕಾಯುವ ಯೋಧರ ಸೇವೆಗೆ ಸರಿಸಾಟಿ ಯಾವುದೂ ಇಲ್ಲವಾಗಿದ್ದು, ಅಂತಹವರಿಗೆ ಸನ್ಮಾನಿಸುವುದು ನಾವು ತೋರಿಸುವ ಅಳಿಲು ಸೇವೆ ಎಂದು ಯುವಕ ಮಂಡಳಿ ಸದಸ್ಯ ಪ್ರಸಾದ್ ಭೋವಿ ಅಭಿಪ್ರಯವನ್ನು ಹೊರಹಾಕಿದ್ದಾರೆ. ಹೀಗೆ 25 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸುವುದು ಸುಲಭದ ಮಾತಲ್ಲ. ಬಿಸಿಲು, ಮಳೆ, ಚಳಿ ಅನ್ನದೇ 24 ಗಂಡೆಯೂ ಮೈಯಲ್ಲ ಕಣ್ಣಾಗಿರಿಸಿಕೊಂಡು ಇವರು ದೇಶದ ಗಡಿಯನ್ನು ಕಾಯಬೇಕಾಗುತ್ತದೆ. ಯಾವುದೇ ಸಂದರ್ಭದಲ್ಲಾದರೂ ಯುದ್ಧಗಳು ಸಂಭವಿಸಬಹುದು. ಎಲ್ಲದಕ್ಕೂ ಯೋಧರು ತಯಾರಿರಬೇಕಾಗುತ್ತದೆ.

ಸೇನೆಯಲ್ಲಿ ಯಾರಿಗಾದರೂ ಅವಕಾಶ ಸಿಕ್ಕಿತೆಂದರೆ ಅವರ ಮನೆಯವರು ಹೆದರಿಬಿಡುತ್ತಾರೆ. ಇದರಿಂದ ಹಿಂದೆ ಸರಿ ಎನ್ನುವ ಮಾತುಗಳು ಕೇಳಿಬರುತ್ತವೆ. ಇದರ ನಡುವೆಯೇ ಎಷ್ಟೋ ಜನರು ದೇಶಕ್ಕೆ ಸೇವೆ ಸಲ್ಲಿಸಬೇಕು ಎನ್ನುವ ಹಠಕ್ಕೆ ಬಿದ್ದು, ಮನೆಯವರ ಮಾತುಗಳನ್ನು ಬಹಿಷ್ಕರಿಸಿದ ಉದಾಹರಣೆಗಳನ್ನು ನೋಡಬಹುದು. ಕೊನೆಗೆ ಸೇನೆಯಿಂದ ನಿವೃತ್ತಿ ಹೊಂದಿದರೆ ಅವರಿಗೆ ಸಿಗುವ ಗೌರವನೇ ಬೇರೆ ಆಗಿರುತ್ತದೆ. ಹಾಗೆಯೇ ಕಾರವಾರ ತಾಲೂಕಿನ ಬಾಲಕೃಷ್ಣ ಎಂಬಾತ ಸೇನೆಯಿಂದ ನಿವೃತ್ತಿ ಹೊಂದಿ ತನ್ನ ಊರಿನೆಡೆಗೆ ಮರಳುತ್ತಿದ್ದ. ಇನ್ನು ಊರಿಗೆ ಬರುವುದೇ ತಡ ಗ್ರಾಮಸ್ಥರೆಲ್ಲ ಆತನನ್ನು ಭರ್ಜರಿ ಮೆರವಣಿಗೆ ಮೂಲಕ ಬರಮಾಡಿಕೊಂಡಿದ್ದಾರೆ.












Click it and Unblock the Notifications