ಉತ್ತರ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: ಒಂದೇ ತಾಲೂಕಿಗೆ ಹೆಚ್ಚಿನ ಆದ್ಯತೆ, ಕಸಾಪ ಆಕ್ಷೇಪ
ಕಾರವಾರ, ಅಕ್ಟೋಬರ್ 31: ನವೆಂಬರ್ 1 ರಂದು ನಡೆಯುವ ಜಿಲ್ಲಾ ಕನ್ನಡ ರಾಜ್ಯೋತ್ಸವ ದಿನದಂದು, ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 17 ಮಂದಿ ಸಾಧಕರುಗಳಿಗೆ ಹಾಗೂ 9 ಮಂದಿ ಅಧಿಕಾರಿಗಳನ್ನು ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಕ್ರೀಡಾ ಕ್ಷೇತ್ರದಲ್ಲಿ ಹೊನ್ನಾವರದ ರಾಜೇಶ.ಕೆ.ಮಡಿವಾಳ, ಸಂಗೀತದಲ್ಲಿ ಹೊನ್ನಾವರದ ಗಜಾನನ ಸುಬ್ರಾಯ ಭಂಡಾರಿ, ಕೃಷಿಯಲ್ಲಿ ಶಿರಸಿಯ ಅಬ್ದುಲ್ ಕರೀಮ ಮಹ್ಮದ ಅಲಿ ಹಾಗೂ ಕುಮಟಾದ ಚಿದಾನಂದ ಗಣಪತಿ ಹೆಗಡೆ, ಸಾಹಿತ್ಯದಲ್ಲಿ ಹಳಿಯಾಳದ ಸಂತೋಷ ಕುಮಾರ ಮಹೆಂದಳೆ, ಸಮಾಜಸೇವೆಯಲ್ಲಿ ಕುಮಟಾದ ದಿವಾಕರ ನಾಗೇಶ ನಾಯ್ಕ, ಕಾರವಾರದ ಎಸ್.ವಿ.ನಾಯ್ಕ ರಾಣೆ,ಇಬ್ರಾಹಿಂ ಕಲ್ಲೂರ, ಹಾಗೂ ಯಮುನಾ ಗಾಂವ್ಕರ , ಶಿಲ್ಪಕಲೆಯಲ್ಲಿ ಕುಮಟಾದ ಶಿವಮೂರ್ತಿ.ಎಸ್.ಭಟ್ ಹಾಗೂ ಭಟ್ಕಳದ ಲಕ್ಷ್ಮಣ ಮಂಜುನಾಥ ನಾಯ್ಕ ಆಯ್ಕೆ ಮಾಡಲಾಗಿದೆ.

ಇನ್ನು ಜಾನಪದ ಕ್ಷೇತ್ರದಲ್ಲಿ ಭಟ್ಕಳದ ಕಾಳಿ ಸಂಕಯ್ಯ ಗೊಂಡ, ಪತ್ರಿಕೋದ್ಯಮದಲ್ಲಿ ಕುಮಟಾದ ಎಂ.ಜಿ.ನಾಯ್ಕ, ಯಕ್ಷಗಾನದಲ್ಲಿ ಕುಮಟಾದ ಬೋಮ್ಮಯ್ಯ.ವಿ.ಗಾಂವಕರ, ನಾಟಕ,ಸಂಗೀತದಲ್ಲಿ ಭಟ್ಕಳದ ರಾಜಾರಾಮ ಸುರೇಶ ಪ್ರಭು, ಕಲೆಯಲ್ಲಿ ಅಂಕೋಲಾದ ಶಿವಾನಂದ ಸಾತು ನಾಯ್ಕ, ಶಿಕ್ಷಣ ಕ್ಷೇತ್ರದಲ್ಲಿ ಯಲ್ಲಾಪುರದ ಬೀರಣ್ಣ ನಾಯ್ಕ ಮೊಗಟಾ ಆಯ್ಕೆಯಾಗಿದ್ದಾರೆ.
ಅಧಿಕಾರಿಗಳ ಪೈಕಿ ಶಿರಸಿ ಸಹಾಯಕ ಆಯುಕ್ತರಾದ ದೇವರಾಜ, ಕಾರವಾರ ತಹಶೀಲ್ದಾರ್ ನಿಚಲ್ ನೋರೊನ್ಹಾ, ಭಟ್ಕಳ ತಾಲೂಕು ಆರೋಗ್ಯಾಧಿಕಾರಿ ಸವಿತಾ ಕಾಮತ, ಹಳಿಯಾಳ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಗಸ್ತೆ, ಕಾರವಾರ ಜಿಲ್ಲಾ ಮಾಲಿನ್ಯ ನಿಯಂತ್ರಣಾಧಿಕಾರಿ ಬಿ.ಕೆ. ಸಂತೋಷ, ಕೃಷಿ ಇಲಾಖೆ ಜಂಟಿ ನಿರ್ದೇಶಕರು ಹೊನ್ನಪ್ಪ ಗೌಡ, ಭಟ್ಕಳ ಬೆಳಕೆ ದೈಹಿಕ ಶಿಕ್ಷಣ ಶಿಕ್ಷಕರು ಸರಕಾರಿ ಪ್ರೌಢಶಾಲೆ, ಬೆಳಕೆ ಭಟ್ಕಳ, ಪ್ರಕಾಶ ಶಿರಾಲಿ ಸವಿತಾ ಎಮ್. ನಾಯ್ಕ ಶಾಖಾಧೀಕ್ಷಕರು ಜಿಲ್ಲಾ ಪೊಲೀಸ್ ಇಲಾಖೆ, ಆನಂದ ಬಡಕುಂದ್ರಿ, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ, ಜೋಯಡಾ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಜಿಲ್ಲಾ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಯ್ಕೆ ಸಮಿತಿ ಕಡೆಗಣಿಸಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ
ಜಿಲ್ಲಾ ಮಟ್ಟದಲ್ಲಿ ನೀಡಲ್ಪಡುವ ರಾಜ್ಯೋತ್ಸವ ಪ್ರಶಸ್ತಿಯ ಆಯ್ಕೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಆಯ್ಕೆ ಸಮಿತಿಯ ಗಮನಕ್ಕೂ ತಾರದೇ, ಕೇವಲ ಅಧಿಕಾರಿಗಳ ಸಭೆ ನಡೆಸಿ ಆಯ್ಕೆಪ ಟ್ಟಿ ಪ್ರಕಟಿಸಿರುವುದು ಪ್ರಜಾಪ್ರಭುತ್ವ ವಿರೋಧಿ ಧೋರಣೆ ಎಂದು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಖಂಡಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎನ್ ವಾಸರೆ "ಜಿಲ್ಲಾಧಿಕಾರಿ ನೇತೃತ್ವದಲ್ಲಿ ಆಯ್ಕೆ ಸಮಿತಿ ರಚಿಸಿದ್ದರೂ ಸಭೆ ನಡೆಸದೆ ಆಯ್ಕೆ ಸಮಿತಿಯ ಎಲ್ಲ ಸದಸ್ಯರನ್ನೂ ಕತ್ತಲಲ್ಲಿಟ್ಟು, ಒಂದು ದಿನ ಮುಂಚಿತವಾಗಿಯೇ ಅಧಿಕಾರಿಗಳು ತಮ್ಮ ಕಾರ್ಯಾಲಯದಲ್ಲಿ ಪ್ರಶಸ್ತಿಯ ಆಯ್ಕೆ ಪ್ರಕ್ರಿಯೆ ನಡೆಸಿದ್ದಾರೆ.
ಪ್ರಕಟವಾಗಿರುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯಲ್ಲಿ ಪ್ರಾದೇಶಿಕ ಅಸಮಾನತೆ ಕಂಡುಬರುತ್ತಿದೆ. ಕರಾವಳಿ ಭಾಗಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಿ ಘಟ್ಟದ ಮೇಲಿನ ತಾಲೂಕುಗಳನ್ನು ಕಡೆಗಣಿಸಲಾಗಿದೆ. ಸಾರ್ವಜನಿಕ ಕ್ಷೇತ್ರದ 17 ಪ್ರಶಸ್ತಿಗಳಲ್ಲಿ ಕರಾವಳಿ ತಾಲೂಕಿನ ಒಂದೇ ತಾಲೂಕಿಗೆ ಐದು ಪ್ರಶಸ್ತಿಗಳು ಬಂದಿವೆ. ದಾಂಡೇಲಿ, ಹಳಿಯಾಳ, ಜೋಯಿಡಾ, ಮುಂಡಗೋಡ, ಸಿದ್ದಾಪುರಕ್ಕೆ ಒಂದೇ ಒಂದು ಪ್ರಶಸ್ತಿ ಬಂದಿರುವುದಿಲ್ಲ. ಇದು ರಾಜಕೀಯ ಅಥವಾ ಆಳುವವರ ಒತ್ತಡವೋ, ಸಚಿವರ, ಶಾಸಕರ ಹಸ್ತಕ್ಷೇಪವೋ ಸ್ಪಷ್ಠಪಡಿಸಬೇಕಾಗಿದೆ.
ರಂಗಭೂಮಿ ಕ್ಷೇತ್ರವನ್ನು ಕಡೆಗಣಿಸಲಾಗಿದೆ. ಯಾವುದೇ ಸಂಘಟನೆಗಳಿಗೆ ಪ್ರಶಸ್ತಿಯನ್ನು ನೀಡಿಲ್ಲ. ನಮ್ಮ ಜಿಲ್ಲೆಯಿಂದ ಹೊರಗಿರುವ ವ್ಯಕ್ತಿಗಳಿಗೂ ಕೂಡ ಪ್ರಶಸ್ತಿ ನೀಡಲಾಗಿದೆ. ಇದರ ಜೊತೆಗೆ ಕಳೆದ ವರ್ಷ ರಾಜ್ಯೋತ್ಸವ ಪ್ರಶಸ್ತಿಯನ್ನು ಇಲಾಖೆ ಮತ್ತು ಇಲಾಖೆ ಅಧಿಕಾರಿಗಳಿಗೆ ನೀಡಿರಲಿಲ್ಲ. ಈ ವರ್ಷ ಇಲ್ಲಿ ಅಗತ್ಯಕ್ಕಿಂತ ಹೆಚ್ಚಾಗಿ ಇಲಾಖೆ ಅಧಿಕಾರಿಗಳಿಗೆ ಪ್ರಶಸ್ತಿ ನೀಡಲಾಗಿದೆ. ಜಿಲ್ಲೆಗೆ ಕೇವಲ ಆರು ತಿಂಗಳ ಹಿಂದಷ್ಟೇ ವರ್ಗವಾಗಿ ಬಂದಿರುವ ಅಧಿಕಾರಿ ಕೂಡಾ ಪ್ರಶಸ್ತಿ ನೀಡಿರುವುದು ವಿಪರ್ಯಾಸವಾಗಿದೆ.
ಆದರೆ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಪುರಸ್ಕೃತರಾಗಿರುವರಲ್ಲಿ ಕೆಲವರು ಯೋಗ್ಯರು ಮತ್ತು ಪ್ರಶಸ್ತಿಗೆ ಅರ್ಹತೆಯಿದ್ದವರಿದ್ದಾರೆ. ಪ್ರಶಸ್ತಿ ಪುರಸ್ಕೃತರನ್ನು ಕನ್ನಡ ಸಾಹಿತ್ಯ ಪರಿಷತ್ತು ಅಭಿನಂದಿಸುತ್ತದೆ. ಇದು ಪ್ರಸ್ತಿಗೆ ಆಯ್ಕೆಯಾದವರ ಬಗೆಗಿನ ಅಸಮಾಧಾನವಲ್ಲ. ಜಿಲ್ಲಾಧಿಕಾರಿಗಳ ನಡೆಯ ಬಗೆಗಿನ ಆಕ್ಷೇಪ ಎಂಬುದನ್ನು ಸ್ಪಷ್ಟಪಡಿಸುತ್ತಿದ್ದೇವೆ" ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಬಿ. ಎನ್. ವಾಸರೆ ತಿಳಿಸಿದ್ದಾರೆ.












Click it and Unblock the Notifications