ಇಸ್ಲಾಂ ಕುರಿತ ಹೇಳಿಕೆ; ಅನಂತಕುಮಾರ್ ಹೆಗಡೆ ಆರೋಪ ಮುಕ್ತ
ಶಿರಸಿ, ಡಿಸೆಂಬರ್ 29; "ಎಲ್ಲಿಯವರೆಗೆ ಜಗತ್ತಿನಲ್ಲಿ ಇಸ್ಲಾಂ ಇರುತ್ತದೆಯೋ, ಅಲ್ಲಿಯವರೆಗೆ ಭಯೋತ್ಪಾದನೆ ಇರುತ್ತದೆ" ಎಂದು ಸಂಸದ ಅನಂತಕುಮಾರ್ ಹೆಗಡೆ ಹೇಳಿಕೆ ನೀಡಿದ್ದರು. ಈ ಕುರಿತು ಅವರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣದಿಂದ ಅವರು ಖುಲಾಸೆಗೊಂಡಿದ್ದಾರೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕೆನರಾ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣದಿಂದ ಅವರನ್ನು ಖುಲಾಸೆಗೊಳಿಸಿದೆ. ಶಿರಸಿಯಲ್ಲಿ 2016ರಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಹೇಳಿಕೆಯನ್ನು ಅವರು ನೀಡಿದ್ದರು.
"ಎಲ್ಲಿಯವರೆಗೆ ಜಗತ್ತಿನಲ್ಲಿ ಇಸ್ಲಾಂ ಇರುತ್ತದೆಯೋ, ಅಲ್ಲಿಯವರೆಗೆ ಭಯೋತ್ಪಾದನೆ ಇರುತ್ತದೆ. ಇಸ್ಲಾಂ ಜಗತ್ತಿನ ಶಾಂತಿಗೆ ಇಟ್ಟಿರುವ ಬಾಂಬ್. ಇಸ್ಲಾಂ ಇರುವವರೆಗೆ ಜಗತ್ತಿನಲ್ಲಿ ನೆಮ್ಮದಿ ಇಲ್ಲ. ಭಟ್ಕಳ ಭಯೋತ್ಪಾದನೆಯ ಕೇಂದ್ರವಾಗಿದೆ' ಎಂದು ಹೇಳಿಕೆ ಕೊಟ್ಟಿದ್ದರು.

"ಪತ್ರಿಕೆಗಳಲ್ಲಿ ಬರಿಯೋ ಅವಕಾಶ ಇದ್ದರೆ ಇದೇ ಶಬ್ದಗಳಲ್ಲಿ ಬರೆಯಿರಿ. ಶೇ 100ರಷ್ಟು ನಾನು ನೀಡುವ ಹೇಳಿಕೆಯನ್ನು ಮುಂದೆಯೂ ಒಪ್ಪಿಕೊಳ್ಳುತ್ತೇನೆ. ಮುಂದೆ ನಾನು ಈ ವಾಕ್ಯವನ್ನು ಹೇಳಿಲ್ಲ ಅಂತಲೂ ಹೇಳುವುದಿಲ್ಲ" ಎಂದು ಕೂಡ ಮಾಧ್ಯಮದವರಿಗೆ ಸವಾಲು ಹಾಕಿದ್ದರು.
ಸಂಸದರ ಹೇಳಿಕೆಯಿಂದಾಗಿ ಮುಸಲ್ಮಾನರ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗಿದೆ ಎಂದು ಮುರಾದ್ ಹುಸೇನ್ ಎನ್ನುವವರು ದೂರು ನೀಡಿದ್ದರು. ಆದರೆ, ಸಂಸದರ ಪರ ವಕೀಲ ಸಂತೋಷ್ ನಗರಾಳೆ, "ಈ ಹೇಳಿಕೆಗಳನ್ನು ಅವರು ಉದ್ದೇಶಪೂರ್ವಕವಾಗಿ ನೀಡಿದ್ದಲ್ಲ. ಮುಸ್ಲಿಮರ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶವೂ ಅವರಿಗೆ ಇರಲಿಲ್ಲ" ಎಂದು ವಾದ ಮಂಡನೆ ಮಾಡಿದ್ದರು.
ಕ್ರಿಮಿನಲ್ ಪ್ರಕರಣದ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ತ್ಯಾಗರಾಜ ಎನ್. ಇನವಳ್ಳಿ ಪ್ರಕರಣದಿಂದ ಸಂಸದ ಅನಂತಕುಮಾರ್ ಹೆಗಡೆ ಅವರನ್ನು ಖುಲಾಸೆಗೊಳಿಸಿ ತೀರ್ಪು ನೀಡಿದ್ದಾರೆ.












Click it and Unblock the Notifications