ಗೋವಾ ಗಡಿಯಲ್ಲಿ ಅಕ್ರಮ ಮದ್ಯಸಾಗಾಟ: ಸಿಎಂ ಸೂಚನೆ ಬೆನ್ನಲ್ಲೇ ಅಬಕಾರಿ ಇಲಾಖೆ ಹೈ ಅಲರ್ಟ್
ಕಾರವಾರ, ಸೆಪ್ಟೆಂಬರ್, 21: ಗೋವಾದೊಂದಿಗೆ ಗಡಿ ಹಂಚಿಕೊಂಡಿರುವ ಕಾರವಾರ ಸೇರಿದಂತೆ ಜೋಯಿಡಾದ ಅನಮೋಡು ಮಾರ್ಗದ ಮೂಲಕ ಗೋವಾ ಮದ್ಯ ಅಕ್ರಮವಾಗಿ ಸಾಗಾಟ ನಡೆಯುತ್ತಲೆ ಇರುತ್ತದೆ. ಆದರೆ ಇಂತಹ ಅಕ್ರಮ ತಡೆಯಲು ಸಿಎಂ ಇತ್ತೀಚೆಗೆ ಸಭೆ ನಡೆಸಿ ಕಟ್ಟುನಿಟ್ಟಿನ ಸೂಚನೆ ನೀಡಿದ ಬೆನ್ನಲ್ಲೇ ಗಡಿ ಜಿಲ್ಲೆಗಳಲ್ಲಿ ತಪಾಸಣೆ ಬಿಗಿಗೊಳಿಸಿದ್ದು, ಅಕ್ರಮ ಸಾಗಾಟದ ಮೇಲೆ ಹದ್ದಿನ ಕಣ್ಣಿಡಲಾಗಿದೆ.
ಅಕ್ರಮ ಮದ್ಯ ತಡೆಗಟ್ಟುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಸಭೆ ನಡೆಸಿ ಸೂಚನೆ ನೀಡಿದ ಬೆನ್ನಲ್ಲೇ ಗಡಿ ಚೆಕ್ ಪೋಸ್ಟ್‌ಗಳಲ್ಲಿ ಅಧಿಕಾರಿಗಳು ಹೈ ಅಲರ್ಟ್ ಆಗಿದ್ದಾರೆ. ಗೋವಾ ರಾಜ್ಯಕ್ಕೆ ಹೊಂದಿಕೊಂಡಿರುವ ಗಡಿ ಚೆಕ್ ಪೋಸ್ಟ್‌ಗಳಾದ ಕಾರವಾರದ ಮಾಜಾಳಿ ಮತ್ತು ಅನಮೋಡ ಚೆಕ್ ಗಡಿಯಲ್ಲಿ ಅಬಕಾರಿ, ಪೊಲೀಸ್, ಅರಣ್ಯ ಸಿಬ್ಬಂದಿಯಿಂದ ಕಳೆದೊಂದು ವಾರದಿಂದ ಪ್ರತಿ ವಾಹನಗಳನ್ನು ತಡೆದು ತಪಾಸಣೆ ಬಿಗಿಗೊಳಿಸಲಾಗಿದೆ.

ಗೋವಾ ಮದ್ಯ ಅಕ್ರಮವಾಗಿ ರಾಜ್ಯಕ್ಕೆ ಸರಬರಾಜಾಗುತ್ತಿರುವ ಬಗ್ಗೆ ಮತ್ತು ಇದರಿಂದ ರಾಜ್ಯದ ಬೊಕ್ಕಸಕ್ಕೆ ಹೊಡೆತ ಬೀಳುವ ಬಗ್ಗೆ ಅಧಿಕಾರಿಗಳನ್ನು ಸಿಎಂ ತರಾಟೆ ತೆಗೆದುಕೊಂಡಿದ್ದರು. ಇದೇ ಕಾರಣದಿಂದ ಗೋವಾ ಮಾರ್ಗವಾಗಿ ಬರುವ ಕಾರು, ಲಾರಿ, ಬಸ್, ಕ್ಯಾಂಟರ್‌ಗಳನ್ನು ಬಿಡದೇ ಪರಿಶೀಲಿಸಿ, ಮದ್ಯ ಸಾಗಾಟವಾಗುತ್ತಿರುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.
ಇನ್ನು ಗಣೇಶ ಚತುರ್ಥಿ ಈ ಸಮಯದಲ್ಲಿಯೂ ಬಿಗಿ ತಪಾಸಣೆಯಿಂದ ವಾಹನ ಸವಾರರು ಕೂಡ ಪರದಾಡುವಂತಾಗಿತ್ತು. ವಾಹನಗಳನ್ನು ತಪಾಸಣೆ ನೆಪದಲ್ಲಿ ಹಬ್ಬದ ಸಮಯದಲ್ಲಿ ನಿಲ್ಲಿಸುವುದರಿಂದ ತೊಂದರೆಯಾಗುತ್ತದೆ. ಅಲ್ಲದೆ ಫ್ಯಾಮಿಲಿಗಳ ಜೊತೆ ತೆರಳುತ್ತಿದ್ದರೂ ಅಧಿಕಾರಿಗಳು ತಪಾಸಣೆ ನಡೆಸುತ್ತಿರುವುದು ತೊಂದರೆಯಾಗುತ್ತದೆ ಎಂದು ಪ್ರಯಾಣಿಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕ-ಗೋವಾ ಗಡಿ ಭಾಗವಾದ ಮಾಜಾಳಿ ಚೆಕ್ ಪೋಸ್ಟ್ ಮೂಲಕ ವಾಹನ ಸಂಚಾರ ಮಾಡುವುದರಿಂದ ಈ ಮಾರ್ಗದಲ್ಲಿ ಅಕ್ರಮ ಮದ್ಯ ಸಾಗಾಟ ಸಾಧ್ಯತೆ ಹೆಚ್ಚಾಗಿರುವ ಕಾರಣಕ್ಕೆ ಸಿಎಂ ಸೂಚನೆ ಬೆನ್ನಲ್ಲೇ ಬಿಗಿ ತಪಾಸಣೆ ನಡೆಸಲಾಗಿದೆ. ಒಂದು ಚೆಕ್ ಪೋಸ್ಟ್‌ನಲ್ಲಿ 5 ಅಬಕಾರಿ, ಓರ್ವ ಪೊಲೀಸ್, ಓರ್ವ ಅರಣ್ಯ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ಸಿಎಂ ಸೂಚನೆ ಬೆನ್ನಲ್ಲೇ ಹೋಂ ಗಾರ್ಡ್‌ಗಳ ನಿಯೋಜನೆ ಮಾಡುವಂತೆಯೂ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ. ಈಗಿರುವ ಸಿಬ್ಬಂದಿಗಳಿಂದ ಪ್ರತಿ ವಾಹನಗಳ ತಪಾಸಣೆ ಕಷ್ಟವಾಗುತ್ತಿದ್ದು, ಮತ್ತಷ್ಟು ಸಿಬ್ಬಂದಿ ನಿಯೋಜನೆ ಮಾಡಿದಲ್ಲಿ ಹೆಚ್ಚು ಅನುಕೂಲವಾಗಲಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ.
ಜಿಲ್ಲೆಯಲ್ಲಿ ಕಳೆದ ನಾಲ್ಕು ತಿಂಗಳಲ್ಲಿ 1,981 ಕಡೆ ದಾಳಿ ಮಾಡಿ 32,371 ಲೀಟರ್ ಅಕ್ರಮ ಮದ್ಯ ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.
ಇವುಗಳಲ್ಲಿ 3,992 ಲೀಟರ್ ಗೋವಾ ಮದ್ಯ, 1569 ಗೋವಾ ಪೆನ್ನಿ, ವೈನ್, ಕಳ್ಳಬಟ್ಟಿ, ಬೆಲ್ಲದ ಕೊಳೆ ಸಹ ಸೇರಿವೆ. ಇನ್ನು ಕರಾವಳಿಯ ಜಲ ಮಾರ್ಗದಲ್ಲೂ ಸಹ ಹದ್ದಿನ ಕಣ್ಣಿಟ್ಟಿದ್ದು, ಅಕ್ರಮ ದಂಧೆಕೋರರು ಕರ್ನಾಟಕದತ್ತ ಗೋವಾ ಮದ್ಯ ಸಾಗಾಟ ಮಾಡದಂತೆ ತಡೆಯಲು ಅಬಕಾರಿ ಇಲಾಖೆ ಕಠಿಣ ಕ್ರಮ ಜರುಗಿಸಿದೆ.












Click it and Unblock the Notifications