ಗೃಹಲಕ್ಷ್ಮಿ ಮುಂದುವರಿದ ಸರ್ವರ್ ಸಮಸ್ಯೆ: ಉತ್ತರ ಕನ್ನಡದಲ್ಲಿ ಕನಿಷ್ಠ ಅರ್ಜಿ ಸಲ್ಲಿಕೆ
ಕಾರವಾರ, ಜುಲೈ 22: ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆ ಜಾರಿಗೆ ಅರ್ಜಿ ಪಡೆಯಲಾಗುತ್ತಿದೆ. ಆದರೆ ಸರ್ವರ್ ಸಮಸ್ಯೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಈವರೆಗೆ ಕೇವಲ 2 ಸಾವಿರ ಮಾತ್ರ ಅರ್ಜಿ ಸಲ್ಲಿಕೆಯಾಗಿದ್ದು, ಬಹುತೇಕ ಕಡೆ ಅರ್ಜಿ ಸಲ್ಲಿಕೆಗೆ ಜನ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಸರ್ವರ್ ಸಮಸ್ಯೆಯಿಂದಾಗಿ ಜಿಲ್ಲೆಯಲ್ಲಿ ಮೊದಲ ದಿನ ಕೇವಲ 873 ಮಂದಿ ಮಾತ್ರ ಅರ್ಜಿ ಸಲ್ಲಿಕೆಗೆ ಸಾಧ್ಯವಾಗಿತ್ತು. ಆದರೆ ನಿನ್ನೆ ಸಲ್ಲಿಕೆ ಸಾಧ್ಯವಾಗದವರು ಸೇರಿದಂತೆ ಇಂದು ಮೆಸೆಜ್ ಮೂಲಕ ಮಾಹಿತಿ ಪಡೆದವರು ಸೇವಾ ಸಿಂಧು ಕೇಂದ್ರಗಳಿಗೆ ಅರ್ಜಿ ಸಲ್ಲಿಕೆಗೆ ಮುಂದಾಗಿದ್ದರು. ಆದರೆ ಇಂದು ಕೂಡ ಅದೇ ಸಮಸ್ಯೆ ಎದುರಾದ ಪರಿಣಾಮ ಇಡೀ ದಿನ ಕೇಂದ್ರಗಳಲ್ಲಿ ಕಾಯುವ ಪರಿಸ್ಥಿತಿ ನಿರ್ಮಾಣವಾಯಿತು.

ಜಿಲ್ಲೆಯಲ್ಲಿ ಅರ್ಜಿ ಸಲ್ಲಿಕೆಗೆ ಜಿಲ್ಲೆಯ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿರುವ 207 ಗ್ರಾಮ ಒನ್ ಕೇಂದ್ರ, 229 ಬಾಪೂಜಿ ಸೇವಾ ಕೇಂದ್ರ, 21 ಕರ್ನಾಟಕ ಒನ್ ಕೇಂದ್ರ 31 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೇಂದ್ರ ತೆರೆಯಲಾಗಿದೆ. ಪ್ರತಿ ಕೇಂದ್ರಕ್ಕೆ ದಿನವೊಂದಕ್ಕೆ 60 ಅರ್ಜಿ ಮಾತ್ರ ಸ್ವೀಕಾರದ ಗುರಿ ನಿಗದಿಪಡಿಸಲಾಗಿದೆ. ಆದರೆ ಕಾರವಾರದ ಸೇರಿದಂತೆ ಎಲ್ಲೆಡೆ ಸರ್ವರ್ ಸಮಸ್ಯೆ ಎದುರಾದ ಕಾರಣ ಬೆಳಿಗ್ಗೆಯಿಂದ ಸಂಜವರೆಗೂ ಕಾದು ಕೆಲವರು ಅರ್ಜಿ ಸಲ್ಲಿಕೆ ಮಾಡುವಂತಾಯಿತು.
ಅರ್ಜಿ ಸಲ್ಲಿಕೆಗೆ ಮೆಸೆಜ್ ಬಂದ ಕಾರಣ ಬೆಳಿಗ್ಗೆಯೇ ಬಂದಿದ್ದರೂ ಮಧ್ಯಾಹ್ನವಾದರೂ ಆಗಿಲ್ಲ. ನನ್ನಂತೆ ಹಲವು ಬಂದು ವಾಪಸ್ಸ್ ಹೋಗುತ್ತಿದ್ದಾರೆ. ಬೇಗ ಅರ್ಜಿ ಸಲ್ಲಿಸಿ ಕೆಲಸಕ್ಕೆ ತೆರಳಬೇಕೆಂದುಕೊಂಡಿದ್ದರು ಸರ್ವರ್ ಸಮಸ್ಯೆ ಎನ್ನುತ್ತಿದ್ದಾರೆ. ಆರಂಭದಲ್ಲಿ ಸಮಸ್ಯೆ ಆಗಿರಬಹುದು. ಆದರೆ ಕೂಡಲೇ ಅದನ್ನು ಸರಿಪಡಿಸಿ ಜನರಿಗೆ ತೊಂದರೆಯಾಗುವುದನ್ನು ತಪ್ಪಿಸಬೇಕು ಎಂದು ಅರ್ಜಿ ಸಲ್ಲಿಕೆಗೆ ಆಗಮಿಸಿದ್ದ ಗಿರಿಧರ್ ಗುನಗಿ ಒತ್ತಾಯಿಸಿದರು.
ಇನ್ನು ಅರ್ಜಿ ಸಲ್ಲಿಕೆಗೆ ಮೂರು ಲಿಂಕ್ ನೀಡಿದ್ದಾರೆ. ಆದರೆ ಸರ್ವರ್ ಯಾವುದು ಕೂಡ ಒಪನ್ ಆಗುತ್ತಿಲ್ಲ. ಮೊಬೈಲ್ ಆಫ್ ಕೂಡ ನೀಡಿದ್ದಾರೆ. ಆದರೆ ಇದರಿಂದ ಫಲಾನುಭವಿಗಳಿಗೆ ಒಟಿಪಿ ಹೋಗುತ್ತಿಲ್ಲ. ಎಲ್ಲರು ಬಂದು ಕೇಳಿ ತೆರಳುತ್ತಿದ್ದಾರೆ. ವಯಸ್ಸಾದವರನ್ನು ಸ್ವಲ್ಪ ಹೊತ್ತು ಕೂರಿಸಿ ಸಾಧ್ಯವಾದಷ್ಟು ಮಾಡಿ ಕಳುಹಿಸುತ್ತಿದ್ದೇವೆ. ಅರ್ಜಿ ಸಲ್ಲಿಕೆ ಕೇವಲ ಒಂದೆರಡು ನಿಮಿಷದಲ್ಲಿ ಮುಗಿದು ಹೋಗುತ್ತದೆ. ಆದರೆ ಸರ್ವರ್ ಸರಿಯಾಗಿ ಕೆಲಸ ಮಾಡದ ಕಾರಣ ಮೊಬೈಲ್ ಹಾಗೂ ಸರ್ವ ಸೇರಿ ಗಂಟೆಗೆ ನಾಲ್ಕೈದು ಮಾತ್ರ ಸಾಧ್ಯವಾಗುತ್ತಿದೆ ಎಂದು ಕರ್ನಾಟಕ ಒನ್ ಇನ್ ಕೇಂದ್ರದ ಸಿಬ್ಬಂದಿ ತಿಳಿಸಿದ್ದಾರೆ.

ನಿತ್ಯ ಸಂಜೆ ಅರ್ಜಿ ಸಲ್ಲಿಕೆಗೆ ಅವಕಾಶ
ಅರ್ಜಿಯನ್ನು ಮೊಬೈಲ್ ಸಂಖ್ಯೆಗೆ ಬಂದ ಮಾಹಿತಿ ಆಧರಿಸಿ ಆಯಾ ಸೇವಾ ಕೇಂದ್ರಗಳಲ್ಲಿ ಸಲ್ಲಿಸಬಹುದಾಗಿದೆ. ಎಸ್‌ಎಂಎಸ್ ಬಾರದೆ ಇದ್ದಲ್ಲಿ ಗ್ರಾಮೀಣ ಪ್ರದೇಶದವರು ಗ್ರಾಮ-ಒನ್ ಕೇಂದ್ರ, ಬಾಪೂಜಿ ಸೇವಾ ಕೇಂದ್ರ ಇಲ್ಲವೇ ನಗರ ಪ್ರದೇಶದವರು ಕರ್ನಾಟಕ-ಒನ್, ಸ್ಥಳೀಯ ನಗರಾಡಳಿತ ಸಂಸ್ಥೆಯ ಕಚೇರಿಗಳಲ್ಲಿ ಯಾವುದೇ ದಿನ ಸಂಜೆ 5 ರಿಂದ 7 ಗಂಟೆಯೊಳಗೆ ನೊಂದಾಯಿಸಿಕೊಳ್ಳಬಹುದಾಗಿದೆ.
ಇನ್ನು ಜಿಲ್ಲೆಯಲ್ಲಿ 4.23 ಲಕ್ಷ ಫಲಾನುಭವಿಗಳಿದ್ದಾರೆ. 488 ಸೇವಾ ಸಿಂಧು ಕೇಂದ್ರಗಳಲ್ಲಿ ಪ್ರತಿನಿತ್ಯ ಒಂದು ಕೇಂದ್ರದಲ್ಲಿ 60 ಫಲಾನುಭವಿಗಳಿಗೆ ಗೃಹಲಕ್ಷ್ಮೀಗೆ ಅರ್ಜಿ ಪಡೆಯಲಾಗುತ್ತಿದೆ. ಆದರೆ ಸರ್ವರ್ ಸಮಸ್ಯೆಯಿಂದ ಎರಡು ದಿನದಿಂದ ಸುಮಾರು 2 ಸಾವಿರ ಮಂದಿ ಮಾತ್ರ ಅರ್ಜಿ ಸಲ್ಲಿಸಿದ್ದಾರೆ. ಮುಂದೆ ಸಮಸ್ಯೆ ಬಗೆಹರಿಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಕೆಗೆ ಕ್ರಮವಹಿಸಲಾಗುವುದು ಎಂದು ಗ್ರಹಲಕ್ಷ್ಮಿ ಯೋಜನೆ ಪ್ರೋಗ್ರಾಮ್ ಆಫಿಸರ್ ವಿರೂಪಾಕ್ಷ ಪಾಟೀಲ್ ತಿಳಿದರು.
ಒಟ್ಟಾರೆ ಗ್ರಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆಗೆ ಆರಂಭದಲ್ಲಿಯೇ ಸರ್ವರ್ ವಿಘ್ನ ಎದುರಾಗಿದೆ. ಕೂಡಲೇ ಇತ್ತ ಗಮನ ಹರಿಸಿ ಸಮಸ್ಯೆ ಬಗೆಹರಿಸುವ ಮೂಲಕ ಅರ್ಜಿ ಸಲ್ಲಿಕೆ ಸರಳಿಕರಣಗೊಳಿಸಬೇಕಿದೆ.












Click it and Unblock the Notifications