ಗೋಕರ್ಣದಲ್ಲಿ ಆಯತಪ್ಪಿ ಬಿದ್ದು ಗಂಭೀರ ಗಾಯಗೊಂಡ ವಿದೇಶಿ ಯುವತಿ
ಗೋಕರ್ಣ, ಫೆಬ್ರವರಿ 27: ಬಂಡೆಯ ಮೇಲೆ ನಡೆದು ಹೋಗುವಾಗ ಆಯತಪ್ಪಿ ಬಿದ್ದು, ವಿದೇಶಿ ಪ್ರವಾಸಿ ಯುವತಿ ಗಂಭೀರವಾಗಿ ಗಾಯಗೊಂಡ ಘಟನೆ ಇಲ್ಲಿನ ಪ್ಯಾರಡೈಸ್ ಬೀಚ್ ನಲ್ಲಿ ನಡೆದಿದೆ.
ಸ್ಪೇನ್ ದೇಶದ ಮಾರ್ತಾ ಮಾರ್ಟಿನ್ (24) ಎಂಬ ಯುವತಿ ಗಾಯಗೊಂಡವಳಾಗಿದ್ದು, ದುರ್ಗಮ ಪ್ರದೇಶವಾದ ಈ ಕಡಲತೀರದಲ್ಲಿ ಯಾವುದೇ ವಾಹನಗಳ ಬರದ ಕಾರಣ ಘಟನೆ ನಡೆದ ತಕ್ಷಣ ಪ್ರವಾಸಿಗರು ಸ್ಥಳೀಯರ ದೋಣಿ ಸಹಾಯದಿಂದ ಬೆಲೇಕಾನಗೆ ತಂದಿದ್ದಾರೆ. ಅಲ್ಲಿಂದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದಾರೆ.
ಈ ಕಡಲತೀರದಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಲು ಬಂಡೆಗಳ ಮೇಲೆ ಸಾಗಬೇಕಾಗಿದ್ದು, ಹೀಗೆ ಸಾಗುವಾಗ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಎರಡು ಮೊಳಕಾಲುಗಳ ಎಲುಬು ಮುರಿದಿದೆ. ಗಂಭೀರವಾಗಿ ಗಾಯಗೊಂಡಿರುವ ಯುವತಿ ಎರಡು ದಿನಗಳ ಹಿಂದೆ ಗೋಕರ್ಣಕ್ಕೆ ಆಗಮಿಸಿದ್ದು ರಥೋತ್ಸವ ವೀಕ್ಷಿಸಿ ನಂತರ ಕಡಲತೀರಕ್ಕೆ ತೆರಳಿ ಅಲ್ಲೇ ವಾಸ್ತವ್ಯ ಮಾಡಿದ್ದಳು. ಮಂಗಳವಾರ ಇಸ್ರೇಲ್‌ನ ಪ್ರಜೆ ಪರಿಚಯವಾಗಿ ಗೆಳತನವಾಗಿದ್ದು, ಇಬ್ಬರು ಒಟ್ಟಾಗಿ ಕಡಲ ಸೌಂದರ್ಯ ಸವಿಯಲು ತೆರಳಿದಾಗ ಈ ದುರ್ಘಟನೆ ನಡೆದಿದೆ.

ನೋವಿನಲ್ಲೂ ಸ್ಪಷ್ಟ ಮಾತು ದಿಟ್ಟ ನಿರ್ಧಾರ: ವೈದ್ಯ ದಂಪತಿ ಮಗಳಾಗಿರುವ ಈ ಯುವತಿ ಸೈಕಾಲಜಿ ಅಂತಿಮ ವರ್ಷದಲ್ಲಿ ಓದುತ್ತಿದ್ದು, ಗಂಭೀರ ಗಾಯಗೊಂಡು ನರಳಾಡುವ ಸ್ಥಿತಿಯಲ್ಲೂ "ನನಗೆ ಅವಶ್ಯ ಚಿಕಿತ್ಸೆ ಎಲ್ಲಿ ದೊರೆಯುತ್ತದೆ ಅಲ್ಲಿಗೆ ತಲುಪಿಸಿ. ನಾನು ತಂದೆ, ತಾಯಿಯೊಂದಿಗೆ ಮಾತನಾಡಿ ಮುಂದಿನ ವ್ಯವಸ್ಥೆ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ. ಇಲ್ಲಿನ ವೈದ್ಯರು ಅಗತ್ಯ ವ್ಯವಸ್ಥೆ ಮಾಡಿಕೊಟ್ಟರು. ಆಕೆ ನಗುತ್ತಲೇ ಕೈಬೀಸಿ ಹೊರಟಾಗ ನೆರಿದಿದ್ದ ಜನರು ಮತ್ತು ವೈದ್ಯಾಧಿಕಾರಿಗಳು ಆಕೆಯ ಧೈರ್ಯ ಕಂಡು ಅಚ್ಚರಿಗೊಂಡರು.












Click it and Unblock the Notifications