Earthquake: ಶಿರಸಿ, ಕುಮಟಾ ಸೇರಿ ಹಲವೆಡೆ ಭೂಕಂಪನ; ಭಯಭೀತರಾದ ಜನ
ಉತ್ತರ ಕನ್ನಡ ಜಿಲ್ಲೆಯ ಕುಮಟಾ, ಶಿರಸಿಯ ಹಲವು ಕಡೆಗಳಲ್ಲಿ ಭಾನುವಾರ ಭೂಕಂಪನದ ಅನುಭವವಾಗಿದ್ದು ಜನ ಭಯಭೀತರಾಗಿದ್ದಾರೆ. ಕುಮಟಾ ತಾಲೂಕಿನ ಪಶ್ಚಿಮ ಘಟ್ಟ ಪ್ರದೇಶದ ದೇವಿಮನೆ ಘಟ್ಟ, ಶಿರಸಿ ತಾಲೂಕಿನ ರಾಗಿಹೊಸಹಳ್ಳಿ, ಕಸಗೆ ಮತ್ತು ಬಂಡಳದಲ್ಲಿ ಭೂಕಂಪನದ ಅನುಭವವಾಗಿದೆ. 3 ಸೆಕೆಂಡ್‌ಗಳ ಕಾಲ ಭೂಮಿ ಕಂಪಿಸಿದ್ದು ಅನೇಕ ಜನ ಒಂದು ಕ್ಷಣ ಕಂಗಾಲಾಗಿದ್ದಾರೆ.
ಕುಮಟಾ-ಶಿರಸಿ ನಡುವೆ ರಾಷ್ಟ್ರೀಯ ಹೆದ್ದಾರಿ ಕೆಲಸ ನಡೆಯುತ್ತಿದ್ದು, ರಸ್ತೆ ನಿರ್ಮಾಣಕ್ಕಾಗಿ ಗುಡ್ಡಗಳನ್ನು ಕೊರೆಯುತ್ತಿರುವುದರಿಂದ ಬಂಡೆ ಕಲ್ಲುಗಳನ್ನು ಸಿಡಿಸಿರಬಹುದು ಎಂದು ಆರಂಭದಲ್ಲಿ ಅಂದುಕೊಳ್ಳಲಾಗಿತ್ತು, ಆದರೆ ಇದು ಭೂಕಂಪನ ಎನ್ನುವುದು ಬಳಿಕ ತಿಳಿದುಬಂದಿದೆ.

ಹಿಂದೂ ಮಹಾಸಾಗರದಲ್ಲಿ 10 ಕಿಲೋಮೀಟರ್ ಆಳದ ರಿಡ್ಜ್ ಮಧ್ಯದಲ್ಲಿ ಭೂಕಂಪನವಾಗಿದ್ದು ಅದರ ಪರಿಣಾಮ ಉತ್ತರ ಕನ್ನಡ ಜಿಲ್ಲೆಯ ಹಲವು ಕಡೆ ಕಂಪನದ ಅನುಭವವಾಗಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.
ಕೈಗಾ ಅಣುವಿದ್ಯುತ್ ಘಟಕದ ಆತಂಕ
ಇದೇ ಪ್ರದೇಶದಲ್ಲಿ ಕೈಗಾ ಅಣುವಿದ್ಯುತ್ ಸ್ಥಾವರ ಇರುವುದು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಪಶ್ಚಿಮಘಟ್ಟದಂತಹ ಸೂಕ್ಷ್ಮ ಪ್ರದೇಶದಲ್ಲಿ ಅಣುವಿದ್ಯುತ್ ಘಟಕ ಸ್ಥಾಪನೆ ಮಾಡಿರುವುದು ಅದರ ಜೊತೆಗೆ ಇತ್ತೀಚೆಗೆ ನಡೆಯುತ್ತಿರುವ ಭೂಕುಸಿತದಂತ ಘಟನೆಗಳು ಇಲ್ಲಿನ ಜನರನ್ನು ಮತ್ತಷ್ಟು ಆತಂಕಗೊಳ್ಳುವಂತೆ ಮಾಡಿವೆ.
Uttara Kannada ghats specifically Sirsi and Siddapura felt earthquake or shake for 2-5seconds with big sound.
— Gurumoorti hegde (@guru3ti) December 1, 2024
Not sure abt the event but everyone felt it.
Scary times as we are carrying ‘KAIGA’ a cruse with us 😔 any damage, can’t imagine what will happen 🙃#Sirsi
ಗುರುಮೂರ್ತಿ ಹೆಗ್ಡೆ ಎನ್ನುವವರು ಎಕ್ಸ್ ಖಾತೆಯಲ್ಲಿ ಭೂಕಂಪನದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. "ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ಧಾಪುರ ಭಾಗದ ಘಟ್ಟಪ್ರದೇಶಗಳಲ್ಲಿ ದೊಡ್ಡ ಶಬ್ದದೊಂದಿಗೆ 2 ರಿಂದ 5 ಸೆಕೆಂಡ್‌ಗಳ ಕಾಲ ಭೂಕಂಪನದ ಅನುಭವವಾಗಿದೆ. ಇದು ಏನು ಎಂದು ಯಾರಿಗೂ ಗೊತ್ತಿಲ್ಲವಾದರೂ, ಎಲ್ಲರಿಗೂ ಭೂಕಂಪನ ಅನುಭವಕ್ಕೆ ಬಂದಿದೆ. 'ಕೈಗಾ ಅಣುಸ್ಥಾವರ ಇಲ್ಲೇ ಇದ್ದು ಆತಂಕದಲ್ಲೇ ಬದುಕುವಂತಾಗಿದೆ, ಏನಾದರೂ ಅನಾಹುತ ಸಂಭವಿಸಿದರೆ ಮುಂದೇನಾಗುತ್ತದೆ ಎನ್ನುವುದನ್ನು ಊಹಿಸಲೂ ಸಾಧ್ಯವಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.












Click it and Unblock the Notifications