ಮಂದಿರ ದೇಣಿಗೆ ಭಕ್ತಿಗೆ ಸಂಬಂಧಿಸಿದ್ದು, ಪಕ್ಷ, ಧರ್ಮಕ್ಕಲ್ಲ: ದೇಶಪಾಂಡೆ
ಹಳಿಯಾಳ, ಫೆಬ್ರವರಿ 22: "ಪ್ರಸ್ತುತ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಪ್ರಭು ಶ್ರೀ ರಾಮಚಂದ್ರನ ಮಂದಿರಕ್ಕೆ ಜನರು ದೇಣಿಗೆ ನೀಡುತ್ತಿರುವುದು ಯಾವುದೇ ಜಾತಿ, ಧರ್ಮ, ಪಕ್ಷ, ಸಿದ್ಧಾಂತ, ಬಣಗಳ ಕಾರಣಕ್ಕಲ್ಲ. ಬದಲಾಗಿ ಕೇವಲ ರಾಮನ ಮೇಲಿನ ಭಕ್ತಿಯ ಕಾರಣಕ್ಕೆ" ಎಂದು ಮಾಜಿ ಸಚಿವ ಮತ್ತು ಕಾಂಗ್ರೆಸ್ ಶಾಸಕ ಆರ್. ವಿ. ದೇಶಪಾಂಡೆ ಹೇಳಿದರು.
ಭಾನುವಾರ ಹಳಿಯಾಳ ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, "ಅಯೋಧ್ಯೆಯಲ್ಲಿ ಪ್ರಭು ಶ್ರೀ ರಾಮಚಂದ್ರನ ದೇಗುಲ ನಿರ್ಮಾಣಕ್ಕೆ ದೇಶದ ಉದ್ದಗಲಕ್ಕೂ ಜನ ಮುಕ್ತ ಮನಸ್ಸಿನಿಂದ ದೇಣಿಗೆ ನೀಡಿದ್ದಾರೆ ಮತ್ತು ನೀಡುತ್ತಿದ್ದಾರೆ. ಅದರ ಅರ್ಥ ದೇಣಿಗೆ ನೀಡಿದವರೆಲ್ಲರೂ ಆರ್‌ಎಸ್‌ಎಸ್ ಇಲ್ಲವೇ ಬಿಜೆಪಿಯವರು ಎಂದಾಗಲಿ, ಇಲ್ಲವೇ ಅವರೆಲ್ಲರೂ ಹಿಂದುತ್ವ ಪ್ರತಿಪಾದನೆಯ ಒಲವುಳ್ಳವರೂ ಎಂದಾಗಲಿ ಅಲ್ಲ" ಎಂದಿದ್ದಾರೆ.
"ಶ್ರೀ ರಾಮಚಂದ್ರ ಮನುಷ್ಯನಾಗಿ ಹುಟ್ಟಿದಾಗಲೂ ದೇವರಂತೆ ಬದುಕಿದ್ದರು. ಒಬ್ಬ ರಾಜನಾಗಿ ಎಲ್ಲಾ ಕಾಲ, ಸ್ಥಳ, ಸಂದರ್ಭದಲ್ಲಿಯೂ ಜಗತ್ತು ಮೆಚ್ಚಿ ಕೊಂಡಾಡುವಂತಹ ಆಳ್ವಿಕೆ ನೀಡಿದ್ದರು. ಅವರ ಬದುಕು ಮತ್ತು ಸೇವೆಗಳು ಸೂರ್ಯ ಚಂದ್ರರಿರುವವರೆಗೂ ಅಜರಾಮರವಾಗಿರುವಂತಹವು" ಎಂದರು.
"ಪುರಾಣ, ಪುಣ್ಯ ಕತೆಗಳಲ್ಲಿಯೂ ಅವರಿಗೆ ಪೂಜನೀಯವಾದ ಸ್ಥಾನ-ಮಾನಗಳು ದೊರೆತಿವೆ. ಆ ದೈವಾಂಶ ಸಂಭೂತನನ್ನು ದೇವರೆಂದು ಆರಾಧಿಸುವ ಜನ ಸಹಜವಾಗಿಯೇ ಎಲ್ಲಾ ಜಾತಿ, ಧರ್ಮ, ಪಕ್ಷ, ಸಿದ್ಧಾಂತ, ಬಣ, ದೇಶ ಭಾಷೆಗಳಲ್ಲೂ ಇದ್ದಾರೆ. ಹಾಗಾಗಿಯೇ ಅಯೋಧ್ಯೆಯ ರಾಮ ಮಂದಿರ ನಿರ್ಮಾಣಕ್ಕೆ ದೇಶದ ಮೂಲೆ ಮೂಲೆಯಿಂದಲೂ ಹಣ ಹೊಳೆಯಾಗಿ ಹರಿದು ಹೋಗುತ್ತಿದೆ" ಎಂದು ಆರ್. ವಿ. ದೇಶಪಾಂಡೆ ತಿಳಿಸಿದರು.
"ನಾನೂ ಕೂಡ ಪ್ರಭು ಶ್ರೀರಾಮ ಚಂದ್ರನ ಭಕ್ತ. ನಾನೂ ಕೂಡ ನನ್ನ ಕೈಲಾದ ದೇಣಿಗೆಯನ್ನು ರಾಮ ಮಂದಿರ ನಿರ್ಮಾಣಕ್ಕೆ ನೀಡುತ್ತೇನೆ. ಅದರ ಅರ್ಥ ನಾನೂ ಕೂಡ ಮಾನಸಿಕವಾಗಿ ಬಿಜೆಪಿ, ಇಲ್ಲವೇ ಸಂಘ ಪರಿವಾರವನ್ನು ಒಪ್ಪಿಕೊಂಡಿದ್ದೇನೆ ಎಂದಾಗಲಿ, ಇಲ್ಲವೇ ನಾನೂ ಕೂಡ ಹಿಂದುತ್ವದ ಪ್ರತಿಪಾದಕನಾಗಿದ್ದೇನೆ ಎಂದಾಗಲಿ ಅಲ್ಲ" ಎಂದು ಸ್ಪಷ್ಟಪಡಿಸಿದರು.
"ವೈಯುಕ್ತಿಕವಾಗಿ ನಾನು ಜ್ಯಾತ್ಯಾತೀತ ನಿಲುವಿನ ಮನುಷ್ಯ. ಅದೇ ನಿಲುವಿನ ಕಾಂಗ್ರೆಸ್ ಪಕ್ಷದಲ್ಲಿ ಇದ್ದೇನೆ. ಆದರೂ ದೇಣಿಗೆ ನೀಡಲಿದ್ದೇನೆ. ಈ ವಿಷಯದಲ್ಲಿ ನನ್ನ ಕತೆಗಿಂತ ದೇಣಿಗೆ ಕೊಟ್ಟ ಇತರೇ ಜನಗಳ ಕತೆ ಭಿನ್ನ ಎಂದು ನಾನು ಭಾವಿಸುವುದಿಲ್ಲ" ಎಂದು ಹೇಳಿದರು.