ದಾಂಡೇಲಿಯ ಹೋರಾಟಗಾರ, ವಕೀಲ ಅಜಿತ್ ನಾಯ್ಕ ಮೇಲೆ ಹಲ್ಲೆ, ಸಾವು
ಕಾರವಾರ, ಜುಲೈ 27: ದಾಂಡೇಲಿ ತಾಲೂಕು ಹೋರಾಟಗಾರ, ವಕೀಲ ಅಜಿತ್ ನಾಯ್ಕ (57) ಅವರ ಮೇಲೆ ವ್ಯಕ್ತಿಯೊಬ್ಬ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದು, ಗಂಭೀರ ಗಾಯಗೊಂಡ ಅವನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.
ಪಟ್ಟಣದ ಬಸ್ ನಿಲ್ದಾಣದ ಸಮೀಪದ ಜೆ.ಎನ್.ರಸ್ತೆಯಲ್ಲಿರುವ ತಮ್ಮ ಕಚೇರಿಯಿಂದ ಕೆಳಗಿಳಿದು ಬರುವಾಗ ಅಪರಿಚಿತ ವ್ಯಕ್ತಿಯೊಬ್ಬ ಏಕಾಏಕಿ ಬಂದು ಕತ್ತಿಯಿಂದ ಹಲ್ಲೆ ನಡೆಸಿದ್ದಾನೆ. ರಕ್ತದ ಮಡುವಿನಲ್ಲಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವ ಮುನ್ನವೇ ಮೃತಪಟ್ಟಿದ್ದಾರೆ.
ಅಜಿತ್ ನಾಯ್ಕ, ಸಾಮಾಜಿಕವಾಗಿ ಗುರುತಿಸಿಕೊಂಡಿದ್ದರು. ದಾಂಡೇಲಿಯನ್ನು ತಾಲೂಕನ್ನಾಗಿಸಲು ನಡೆಸಿದ ಹೋರಾಟಗಳಲ್ಲಿ ಅವರು ಮುಂಚೂಣಿಯಲ್ಲಿದ್ದರು. ನಗರ ಸಭೆಯ ಮಾಜಿ ಅಧ್ಯಕ್ಷರು, ದಾಂಡೇಲಿ ತಾಲೂಕು ರಚನಾ ಸಮಿತಿಯ ಅಧ್ಯಕ್ಷರಾಗಿ ಅವರು ಸೇವೆ ಸಲ್ಲಿಸಿದ್ದರು.

ಈ ಹಿಂದೆ ಸಂಸದರಾಗಿದ್ದ ಮಾರ್ಗರೆಟ್ ಆಳ್ವಾ ಮತ್ತು ಮಾಜಿ ಮುಖ್ಯಮಂತ್ರಿ ದಿ.ಎಸ್.ಬಂಗಾರಪ್ಪನವರ ಪ್ರೀತಿಯ ಶಿಷ್ಯರಾಗಿ ಗಮನ ಸೆಳೆದಿದ್ದರು. ಅನೇಕ ವರ್ಷಗಳ ಕಾಲ ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು.
2007ನೇ ಸಾಲಿನಲ್ಲಿ ದಾಂಡೇಲಿ ಬಚಾವೋ ಸಮಿತಿಯ ಮೂಲಕ ದಾಂಡೇಲಿ ತಾಲೂಕು ರಚನೆಗಾಗಿ ಅಮೂಲಾಗ್ರ ಹೋರಾಟವನ್ನು ನಡೆಸಿ, ರಾಜ್ಯ ಮಟ್ಟದ ನಾಯಕರನ್ನು ಕರೆಸಿ ಸಂಚಲನ ಮೂಡಿಸಿದ್ದ ಅವರು, ನಗರ ಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಅವರಿಗೆ ಬೆಂಬಲಿಗರ ಬಹುದೊಡ್ಡ ಪಡೆ ಇತ್ತು.
ಅವರಿಗೆ ಪತ್ನಿ ಭಾರತಿ, ಪ್ರಜ್ವಲ್ ಮತ್ತು ಅಶೀಸ್ ಎಂಬ ಇಬ್ಬರು ಪುತ್ರರಿದ್ದಾರೆ.












Click it and Unblock the Notifications