‘ಕೊರೊನಾ ಮುಕ್ತ’ ಜಿಲ್ಲೆಯತ್ತ ಉತ್ತರ ಕನ್ನಡ!
ಕಾರವಾರ, ಡಿಸೆಂಬರ್ 13: ಉತ್ತರ ಕನ್ನಡ ಜಿಲ್ಲೆಯಲ್ಲಿ ಅಟ್ಟಹಾಸ ಮೆರೆದಿದ್ದ ಕೊರೊನಾ ಸೋಂಕು ಇದೀಗ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಲೇ ಇದೆ. ಹಲವು ತಾಲೂಕುಗಳಲ್ಲಿ ಶೂನ್ಯ ಪ್ರಕರಣಗಳು ವರದಿಯಾಗುತ್ತಿದ್ದು, ಹೀಗೇ ಮುಂದುವರೆದರೆ ಇನ್ನು ಕೆಲ ದಿನಗಳಲ್ಲಿಯೇ ಉತ್ತರ ಕನ್ನಡ 'ಕೊರೊನಾ ಮುಕ್ತ' ಜಿಲ್ಲೆಯಾಗುವ ಸಾಧ್ಯತೆ ಇದೆ.
ಮಾರ್ಚ್ ತಿಂಗಳ ವೇಳೆ ದೇಶಕ್ಕೆ ಕೊರೊನಾ ಕಾಲಿಟ್ಟಿತ್ತು. ವಿಶ್ವದ ಹಲವು ದೇಶಗಳಲ್ಲಿ ಕೊರೊನಾ ಸೋಂಕು ಪ್ರಕರಣ ಹೆಚ್ಚಾಗುತ್ತಿದ್ದ ಹಿನ್ನಲೆಯಲ್ಲಿ ವಿದೇಶಗಳಲ್ಲಿ ಉದ್ಯೋಗ ಹಾಗೂ ಅನ್ಯ ಕಾರಣಕ್ಕೆ ನೆಲೆಸಿದ್ದ ಜಿಲ್ಲೆಯವರು ಭಟ್ಕಳ ಸೇರಿದಂತೆ ಹಲವು ತಾಲೂಕುಗಳಿಗೆ ವಾಪಸ್ಸಾಗಿದ್ದರು. ಹೀಗಾಗಿ ಜಿಲ್ಲೆಯಲ್ಲೇ ಮೊದಲ ಬಾರಿಗೆ ಭಟ್ಕಳದಲ್ಲಿ ಸೋಂಕಿತ ಪ್ರಕರಣ ಪತ್ತೆಯಾಗಿದ್ದಲ್ಲದೇ, ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದರಿಂದ ಜಿಲ್ಲೆ 'ಕೊರೋನಾ ಹಾಟ್‌ಸ್ಪಾಟ್' ಅಂತಲೂ ಗುರುತಿಸಿಕೊಳ್ಳುವಂತಾಗಿತ್ತು.

ರೆಡ್ ಝೋನ್ ಜಿಲ್ಲೆಗಳ ಪಟ್ಟಿಗೆ ಸೇರಿತ್ತು
ಇನ್ನು ಲಾಕ್‌ಡೌನ್ ಸಡಿಲಗೊಳಿಸಿದ ನಂತರ ದಿನವೊಂದಕ್ಕೆ ನೂರಕ್ಕೂ ಅಧಿಕ ಪ್ರಕರಣ ದಾಖಲಾಗುವ ಮೂಲಕ ಜಿಲ್ಲೆಯಲ್ಲಿ ಆತಂಕವನ್ನೇ ಸೃಷ್ಟಿ ಮಾಡಿತ್ತು. ಜಿಲ್ಲೆಯ ಬಹುತೇಕ ಎಲ್ಲಾ ತಾಲೂಕುಗಳಲ್ಲೂ ಪ್ರತಿನಿತ್ಯ ಹತ್ತಾರು ಪ್ರಕರಣಗಳು ಪತ್ತೆಯಾಗುವ ಮೂಲಕ ರೆಡ್ ಝೋನ್ ಜಿಲ್ಲೆಗಳ ಪಟ್ಟಿಗೆ ಸೇರಿತ್ತು. ಆದರೆ ಕಳೆದ ಕೆಲ ದಿನಗಳಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದ್ದು, ಹಲವು ದಿನಗಳಿಂದ ಪ್ರತಿ ದಿನ ಪತ್ತೆಯಾಗುವ ಒಟ್ಟಾರೆ ಪ್ರಕರಣವೂ ಎರಡಂಕಿಯನ್ನು ದಾಟುತ್ತಿಲ್ಲ. ಕೇವಲ ಬೆರಳೆಣಿಕೆಯಷ್ಟು ಪ್ರಕರಣಗಳು ಮಾತ್ರ ಪತ್ತೆಯಾಗುತ್ತಿದ್ದು, ಜನಜೀವನ ಸಹ ಈ ಹಿಂದಿನಂತೆಯೇ ಸಾಗುತ್ತಿದೆ.

ಅಂಕೋಲಾ ತಾಲೂಕಿನಲ್ಲಿ ಒಂದೂ ಪ್ರಕರಣ ದಾಖಲಾಗಿಲ್ಲ
ಇನ್ನು ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರಕರಣ ಭಟ್ಕಳ ಹಾಗೂ ಹಳಿಯಾಳ ತಾಲ್ಲೂಕು ವ್ಯಾಪ್ತಿಯಲ್ಲಿ ಪತ್ತೆಯಾಗಿತ್ತು. ಆದರೆ ಕಳೆದ ಒಂದು ವಾರದಿಂದ ಭಟ್ಕಳದಲ್ಲಿ ಕೇವಲ ನಾಲ್ಕು ಪ್ರಕರಣ ಪತ್ತೆಯಾಗಿದ್ದರೆ, ಹಳಿಯಾಳದಲ್ಲಿ ಐದು ಪ್ರಕರಣ ಮಾತ್ರ ಪತ್ತೆಯಾಗಿದೆ. ಇನ್ನು ಮುಂಡಗೋಡ ತಾಲೂಕಿನಲ್ಲಿ ಕೇವಲ ಒಂದೇ ಒಂದು ಪ್ರಕರಣ ಪತ್ತೆಯಾಗಿದ್ದರೆ, ಅಂಕೋಲಾ ತಾಲೂಕಿನಲ್ಲಿ ಒಂದೂ ಪ್ರಕರಣ ಪತ್ತೆಯಾಗದೇ ಕೊರೊನಾ ಮುಕ್ತ ತಾಲೂಕಾಗಿದೆ.

ಪ್ರವಾಸೋದ್ಯಮದ ಮೇಲೆ ಸಾಕಷ್ಟು ಪರಿಣಾಮ
ಇದಲ್ಲದೇ ಹಲವು ತಾಲೂಕುಗಳಲ್ಲಿ ಕೆಲ ದಿನ ಒಂದೇ ಒಂದು ಪ್ರಕರಣ ಸಹ ಪತ್ತೆಯಾಗಿಲ್ಲ. ಸೋಂಕಿತರ ಸಂಖ್ಯೆ ಸಂಪೂರ್ಣ ಕ್ಷೀಣಿಸುತ್ತಿದ್ದು, ಜನರಲ್ಲಿ ಸಹ ಕೊರೊನಾ ಬಗ್ಗೆ ಇದ್ದ ಆತಂಕ ಸಂಪೂರ್ಣ ದೂರವಾದಂತಾಗಿದೆ. ಇನ್ನೊಂದೆಡೆ ಕೊರೊನಾದಿಂದ ಜಿಲ್ಲೆಯ ಪ್ರವಾಸಿ ತಾಣಕ್ಕೆ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿ ಪ್ರವಾಸೋದ್ಯಮದ ಮೇಲೆ ಸಾಕಷ್ಟು ಪರಿಣಾಮ ಬೀರಿತ್ತು. ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿರುವುದರಿಂದ ಪ್ರವಾಸಿಗರು ಕೂಡ ಜಿಲ್ಲೆಯತ್ತ ಧೈರ್ಯದಿಂದ ಬರುತ್ತಿದ್ದು, ಪ್ರವಾಸಿ ತಾಣಗಳು ಭರ್ತಿಯಾಗುತ್ತಿವೆ. ಹೀಗೆ ಕೊರೋನಾ ಸಂಖ್ಯೆ ಇಳಿಮುಖವಾದರೆ ಇನ್ನು ಕೆಲವೇ ದಿನಗಳಲ್ಲಿ ಉತ್ತರ ಕನ್ನಡ ಜಿಲ್ಲೆ ಕೊರೊನಾ ಮುಕ್ತವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ವ್ಯಾಕ್ಸಿನ್ ಬರುವವರೆಗೂ ಎಚ್ಚರ ಇರಲೇಬೇಕು
ಕೊರೋನಾ ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ ಇಳಿಮುಖವಾಗುತ್ತಿದೆ. ಆದರೆ ವ್ಯಾಕ್ಸಿನ್ ಬರುವವರೆಗೂ ಜನರು ಎಚ್ಚರ ವಹಿಸಲೇಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ತಿಳಿಸಿದ್ದಾರೆ.
ಜಿಲ್ಲಾಡಳಿತ ಸೋಂಕಿತರ ಸಂಖ್ಯೆ ಕಡಿಮೆಯಾದರೂ ಮುಂಜಾಗ್ರತೆ ವಹಿಸುತ್ತಿದೆ. ನಿರಂತರ ಶ್ರಮ ಹಾಗೂ ಸಾರ್ವಜನಿಕರ ಸಹಕಾರದಿಂದ ಸೋಂಕಿತರ ಸಂಖ್ಯೆ ಕಡಿಮೆಯಾಗಿದೆ. ಆದರೆ ಜನರು ಕೊರೊನಾ ಇಲ್ಲವೆಂದು ನಿರ್ಲಕ್ಷ್ಯ ವಹಿಸಬಾರದು. ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ವ್ಯಾಕ್ಸಿನ್ ಬರುವವರೆಗೂ ಮುಂಜಾಗ್ರತೆ ವಹಿಸಬೇಕು ಎಂದು ಕಿವಿಮಾತು ಹೇಳಿದ್ದಾರೆ.

ಸೋಂಕು ಹರಡದಂತೆ ಮುಂಜಾಗ್ರತೆ
ಜಿಲ್ಲೆಯಲ್ಲಿ ಗ್ರಾಮ ಪಂಚಾಯತಿ ಚುನಾವಣೆ ನಡೆಯುತ್ತಿದ್ದು, ಕೊರೊನಾ ಕಡಿಮೆಯಾಗಿದೆ ಎಂದು ಪ್ರಚಾರದಲ್ಲಿ ತೊಡಗುವವರು ಮೈಮರೆಯಬಾರದು. ಜಿಲ್ಲಾಡಳಿತ ಚುನಾವಣೆ ಸಂದರ್ಭದಲ್ಲಿ ಸೋಂಕು ಹರಡದಂತೆ ಮುಂಜಾಗ್ರತೆ ವಹಿಸಿದೆ. ಚುನಾವಣೆ ಹಿನ್ನಲೆಯಲ್ಲಿ ಕೊರೊನಾ ನಿಯಾಮಾವಳಿಗಳಿಗೆ ಯಾವುದೇ ರಿಯಾಯಿತಿ ಇಲ್ಲ. ಎಲ್ಲರೂ ಕಡ್ಡಾಯವಾಗಿ ಕೊರೊನಾ ನಿಯಮಾವಳಿ ಪಾಲಿಸಬೇಕು. ಒಂದೊಮ್ಮೆ ಪಾಲಿಸದಿದ್ದರೆ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.











Click it and Unblock the Notifications