ಕುಮಟಾದಲ್ಲಿ ನಿವೇದಿತ್ ಆಳ್ವಾಗೆ ಕಾಂಗ್ರೆಸ್ ಟಿಕೆಟ್: ಇತರೆ ಆಕಾಂಕ್ಷಿಗಳಿಂದ ಬಂಡಾಯ ಸಾಧ್ಯತೆ
ಕಾರವಾರ, ಏಪ್ರಿಲ್ 15: ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಕುಮಟಾ-ಹೊನ್ನಾವರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೊನೆಗೂ ಮೂರನೇ ಪಟ್ಟಿಯಲ್ಲಿ ಘೋಷಣೆಯಾಗಿದ್ದು, ನಿವೇದಿತ್ ಆಳ್ವಾ ಅವರಿಗೆ ಹೈಕಮಾಂಡ್ ಮಣೆ ಹಾಕಿದೆ.
ಕ್ಷೇತ್ರದಲ್ಲಿ ಮಾಜಿ ಶಾಸಕಿ ಶಾರದಾ ಶೆಟ್ಟಿ, ಮಂಜುನಾಥ ನಾಯಕ, ಶಿವಾನಂದ ಹೆಗಡೆ ಕಡತೋಕಾ ಸೇರಿದಂತೆ 15ಕ್ಕೂಆಂಕಾಕ್ಷಿಗಳನ್ನು ಹೊಂದಿ ತೀವ್ರ ಪೈಪೋಟಿಗೆ ಕಾರಣವಾಗಿದ್ದ ಕುಮಟಾದಲ್ಲಿ ಕೊನೆಗೂ ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವಾ ತಮ್ಮ ಪುತ್ರನಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ಎರಡು ತಿಂಗಳ ಹಿಂದೆ ಟಿಕೆಟ್ ಗಾಗಿ ಅರ್ಜಿಸಲ್ಲಿಸಿದವರ ಹೊರತಾಗಿ ನಿವೇದಿತ್ ಆಳ್ವಾ ಹೆಸರು ಕೇಳಿಬಂದಿತ್ತು. ಅಂದಿನಿಂದಲೂ ಕ್ಷೇತ್ರದಲ್ಲಿ ಸಾಕಷ್ಟು ರಾಜಕೀಯ ಬದಲಾವಣೆ ಗಾಳಿ ಬೀಸಲಾರಂಭಿಸಿತ್ತು. ನಿವೇದಿತ್ ಆಳ್ವಾ ಅವರಿಗೆ ಟಿಕೆಟ್ ನೀಡುವುದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು.
ಅಲ್ಲದೇ, ಕ್ಷೇತ್ರದಲ್ಲಿ ಕೆಲಸ ಮಾಡಿದವರಿಗೆ ಟಿಕೆಟ್ ನೀಡಬೇಕು ಎಂದು ಹೈಕಮಾಂಡ್ ಆಗ್ರಹಿಸಿದ್ದರು. ಹೀಗಾಗಿ ಮೊದಲ ಎರಡು ಪಟ್ಟಿಯಲ್ಲಿ ಕುಮಟಾ ಟಿಕೆಟ್ ಘೋಷಣೆ ಮಾಡದೆ ಹಾಗೆ ಉಳಿಸಲಾಗಿತ್ತು. ಆದರೆ ಇದೀಗ ಕೊನೆಗಳಿಗೆಯಲ್ಲಿ ಕಾಂಗ್ರೆಸ್ ಕುಮಟಾ ಕ್ಷೇತ್ರದದಲ್ಲಿ ನಿವೇದಿತಾ ಆಳ್ವಾ ಅವರನ್ನು ಕಣಕ್ಕೆ ಇಳಿಸಿದೆ.

ಇದರೊಂದಿಗೆ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಮಾಜಿ ಶಾಸಕಿ ಶಾರದಾ ಶೆಟ್ಟಿ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದು, ಅವರು ಇದೀಗ ಬಂಡಾಯ ಏಳುವ ಸಾಧ್ಯತೆ ಇದೆ.
ಕುಮಟಾದಲ್ಲಿ ಕಾಂಗ್ರೆಸ್‌ನಿಂದ 15ಕ್ಕೂ ಹೆಚ್ಚು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿ ಚುನಾವಣಾ ತಯಾರಿ ನಡೆಸಿದ್ದರು. ಈ ನಡುವೆ ಮಾಜಿ ಸಂಸದೆ ಮಾರ್ಗರೇಟ್ ಆಳ್ವ ತಮ್ಮ ಪುತ್ರನಿಗೆ ಕುಮಟಾದಿಂದ ಟಿಕೆಟ್ ಕೊಡಿಸಲು ಪ್ರಯತ್ನಿಸುತ್ತಿರುವ ವಿಚಾರ ಬಹಿರಂಗವಾಗುತ್ತಿದ್ದಂತೆ ಇತರೆ ಆಕಾಂಕ್ಷಿಗಳಲ್ಲಿ ಗೊಂದಲ ಉಂಟಾಗಿತ್ತು.
ಕುಮಟಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್‌ಗಾಗಿ ಹದಿನೈದು ಮುಖಂಡರು ತಲಾ 2 ಲಕ್ಷವನ್ನು ಕೆಪಿಸಿಸಿಗೆ ತುಂಬಿ ಅರ್ಜಿ ಸಲ್ಲಿಸಿದ್ದರು. ಕುಮಟಾದಿಂದ ಟಿಕೆಟ್‌ಗಾಗಿ ಅರ್ಜಿಯೇ ಸಲ್ಲಿಸದ ನಿವೇದಿತ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ಮುಂದಾಗಿರುವುದು ಪಕ್ಷದ ವಲಯದಲ್ಲಿಯೇ ದೊಡ್ಡ ಅಸಮಾಧಾನಕ್ಕೆ ಕಾರಣವಾಗಿತ್ತು. ಆದರೆ ಸದ್ಯ ಕಾಂಗ್ರೆಸ್ ಕುಮಟಾ ಕ್ಷೇತ್ರದಲ್ಲಿ ನಿವೇದಿತ್ ಆಳ್ವಾಗೆ ಟಿಕೆಟ್ ನೀಡಿರುವುದು ಕಾರ್ಯಕರ್ತರು ಮತ್ತಷ್ಟು ಅಸಮಾಧಾನದಿಂದ ಬಂಡಾಯ ಏಳುವ ಸಾಧ್ಯತೆ ಹೆಚ್ಚಿದೆ.
ಕುಮಟಾ ಕ್ಷೇತ್ರದ ಚುನಾವಣೆ ಕಾವು ರಂಗೇರುವ ಮೊದಲು ನಿವೇದಿತ್ ಆಳ್ವ ಜಿಲ್ಲೆಯ ಶಿರಸಿ ಕ್ಷೇತ್ರದಿಂದ ಕಣಕ್ಕೆ ಇಳಿಯಲಿದ್ದಾರೆ ಎನ್ನಲಾಗಿತ್ತು. ಅಲ್ಲದೇ ಟಿಕೆಟ್‌ಗಾಗಿ ಶಿರಸಿ ಕ್ಷೇತ್ರದಿಂದಲೇ ನಿವೇದಿತ್ ಅರ್ಜಿ ಸಲ್ಲಿಸಿದ್ದರು. ಆದರೆ ಈಗ ಕಾಂಗ್ರೆಸ್ ನಾಯಕರು ಕುಮಟಾದಿಂದಲೇ ಸ್ಪರ್ಧೆಗೆ ಅವಕಾಶ ನೀಡಿದ್ದಾರೆ. ಹೀಗಾಗಿ ಕುಮಟಾ ಕಾರ್ಯಕರ್ತರ ಮುಂದಿನ ನಡೆಯೇನು ಎನ್ನುವುದನ್ನು ಕಾದು ನೋಡಬೇಕಿದೆ.












Click it and Unblock the Notifications