ಉತ್ತರ ಕನ್ನಡದಲ್ಲಿ ಹೆಚ್ಚುತ್ತಿದೆ ಮಹಾಮಾರಿ ಕ್ಯಾನ್ಸರ್, 247ಕ್ಕೂ ಹೆಚ್ಚು ಜನರಲ್ಲಿ ರೋಗ ಪತ್ತೆ: ಕಾರಣವೇನು..?
ಕಾರವಾರ, ಡಿಸೆಂಬರ್ 11: ಉತ್ತರ ಕನ್ನಡದ ಕ್ರೀಮ್ಸ್ ಆಸ್ಪತ್ರೆಗೆ ಆಗಮಿಸುವ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಪ್ರಸಕ್ತ ವರ್ಷದಲ್ಲಿಯೇ 247ಕ್ಕೂ ಹೆಚ್ಚು ರೋಗಿಗಳಲ್ಲಿ ಮಾರಕ ಕ್ಯಾನ್ಸರ್ ಲಕ್ಷಣಗಳು ಗೋಚರವಾಗಿದ್ದು, ಆಸ್ಪತ್ರೆಯಲ್ಲಿ ಕಾಯಿಲೆಗೆ ಸೂಕ್ತ ಚಿಕಿತ್ಸಾ ಸೌಕರ್ಯವಿಲ್ಲದ ಕಾರಣ ಹೊರ ಜಿಲ್ಲೆ ಹಾಗೂ ರಾಜ್ಯಗಳಿಗೆ ಅಲೆಯುವ ಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆಯಲ್ಲಿ ಸದ್ದಿಲ್ಲದೆ ಮಾಹಾಮಾರಿ ಕ್ಯಾನ್ಸರ್ ಕಾಯಿಲೆ ಹೆಚ್ಚಾಗತೊಡಗಿದೆ. ನಗರದ ಕ್ರೀಮ್ಸ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆಸ್ಪತ್ರೆಗೆ ಆಗಮಿಸುವ ಕ್ಯಾನ್ಸರ್ ರೋಗಿಗಳ ಸಂಖ್ಯೆ ಪ್ರತಿ ತಿಂಗಳು ಹೆಚ್ಚಾಗತೊಡಗಿದೆ. ಪ್ರಸಕ್ತ ಸಾಲಿನ ಜನವರಿಯಿಂದ ಈವರೆಗೆ 247 ಮಂದಿಯಲ್ಲಿ ಕ್ಯಾನ್ಸರ್ ಲಕ್ಷಣಗಳು ಕಾಣಿಸಿಕೊಂಡಿದೆ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸೂಕ್ತ ಸೌಲಭ್ಯವಿಲ್ಲದೆ ಬೇರೆ ಆಸ್ಪತ್ರೆಗಳಿಗೆ ಕಳುಹಿಸಲಾಗಿದೆ.

ಜಿಲ್ಲಾ ಆಸ್ಪತ್ರೆಯಲ್ಲಿಯೇ ಚಿಕಿತ್ಸೆಗೆಂದು ಬಂದು ಪರೀಕ್ಷೆಗೊಳಪಟ್ಟು ಕ್ಯಾನ್ಸರ್ ಎಂದು ಧೃಡಪಟ್ಟವರ ಸಂಖ್ಯೆಯಿಂದ ಕಳೆದ ಜನವರಿಯಿಂದ ಈವರೆಗೆ 225ಕ್ಕೂ ಅಧಿಕ ಪ್ರಕರಣಗಳಾಗಿದೆ. ಕಳೆದ ಜನವರಿಯಲ್ಲಿ 24 ಪ್ರಕರಣ ಪತ್ತೆಯಾದರೆ, ಫೆಭ್ರವರಿಯಲ್ಲಿ 48, ಮಾರ್ಚ್ ನಲ್ಲಿ 17, ಏಪ್ರಿಲ್ ನಲ್ಲಿ 17, ಮೇ ನಲ್ಲಿ 25, ಜೂನ್ ನಲ್ಲಿ25, ಜುಲೈ ನಲ್ಲಿ 18, ಆಗಸ್ಟ್ ನಲ್ಲಿ 20, ಸೆಪ್ಟೆಂಬರ್ ನಲ್ಲಿ 25, ಅಕ್ಟೋಬರ್ ನಲ್ಲಿ 11 ಹಾಗೂ ನವೆಂಬರ್ ನಲ್ಲಿ 17 ಪ್ರಕರಣ ಪತ್ತೆಯಾಗಿದೆ.
ಅದರಲ್ಲಿಯೂ ಕ್ರೀಮ್ಸ್ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳ ಪೈಕಿ ಅತಿ ಹೆಚ್ಚು ಸ್ತನ ಕ್ಯಾನ್ಸರ್ ಪ್ರಕರಗಳು ಕಂಡುಬರುತ್ತಿದೆ. ಕಳೆದ ಜನವರಿಯಿಂದ ಇವರೆಗೆ 55 ಪ್ರಕರಣಗಳು ಪತ್ತೆಯಾಗಿದೆ. ಇನ್ನು ಇದಲ್ಲದೆ ಆಯಾ ತಾಲೂಕು ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಿಗೂ ಭೇಟಿ ನೀಡಿ ಬಳಿಕ ಚಿಕಿತ್ಸೆಗೆ ಹೊರ ಜಿಲ್ಲೆಗಳಿಗೆ ತೆರಳುತ್ತಿರುವುದರಿಂದ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇತ್ತೀಚೆಗೆ ಕ್ಯಾನ್ಸರ್ ಪ್ರಕರಣಗಳು ಕಂಡುಬರುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಪ್ರಾರಂಭಕ್ಕೆ ಸರ್ಕಾರ ಹಸಿರು ನಿಶಾನೆ ತೋರಿದೆ. ಸದ್ಯ ಇನ್ನೂ ಕಟ್ಟಡ ಕಾಮಗಾರಿ ನಡೆಯುತ್ತಿದ್ದು ಎರಡು ವರ್ಷಗಳ ನಂತರವೇ ಈ ಚಿಕಿತ್ಸೆ ಪ್ರಾರಂಭವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯ ಕ್ಯಾನ್ಸರ್ ಪತ್ತೆಯಾದವರು ಬೇರೆ ಜಿಲ್ಲೆಗಳಲ್ಲಿನ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುವ ಅನಿವಾರ್ಯತೆ ಎದುರಾಗಿದೆ. ಜಿಲ್ಲೆಯಲ್ಲಿ ಕ್ಯಾನ್ಸರ್ ಪ್ರಕರಣ ಹೆಚ್ಚುತ್ತಿರುವುದನ್ನು ಗಂಭೀರವಾಗಿ ತೆಗೆದುಕೊಂಡು ಜಿಲ್ಲಾ ಆಸ್ಪತ್ರೆಯಲ್ಲಿ ತಜ್ಞರ ನೇಮಕ ಹಾಗೂ ಚಿಕಿತ್ಸೆಗೆ ವ್ಯವಸ್ಥೆಯನ್ನು ಮಾಡಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.
ಜಿಲ್ಲೆಯಲ್ಲಿ ಕ್ಯಾನ್ಸರ್ ಪ್ರಕರಣ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ವಿಕಿರಣ, ತಂಬಾಕು ಸೇವನೆ, ಆಹಾರ ಪದ್ದತಿ ಜೊತೆಗೆ ಅನುವಂಶೀಯ ಕಾರಣ ಇರಬಹುದು. ಕ್ಯಾನ್ಸರ್ ಒಮ್ಮೆಲೇ ಬರುವ ಕಾಯಿಲೆಯಲ್ಲ. ದೇಹದಲ್ಲಿ ಸ್ವಲ್ಪ ವ್ಯತ್ಯಾಸ ಆದರೂ ವೈದ್ಯರ ಬಳಿ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕ್ಯಾನ್ಸರ್ ಬಗ್ಗೆ ಜನರಿಗೆ ಮುಂಜಾಗೃತೆ ಇದ್ದರೆ ಹೋರಾಟ ಮಾಡಿ ಕ್ಯಾನ್ಸರ್ ಗೆದ್ದು ಬರಬಹುದು ಎನ್ನುವುದು ಜಿಲ್ಲಾ ಸರ್ಜನ್ ಶಿವಾನಂದ ಕುಡ್ತಲಕರ್ ಅಭಿಪ್ರಾಯವಾಗಿದೆ.

ಕ್ಯಾನ್ಸರ್ ಎಂದು ಪತ್ತೆಯಾದರೆ ನುರಿತ ವೈದ್ಯರ ಬಳಿಯೇ ಚಿಕಿತ್ಸೆ ಪಡೆಯಬೇಕು. ದೇಹದಲ್ಲಿ ಬದಲಾವಣೆಗಳಾಗುತ್ತಿದ್ದರೂ ನಿರ್ಲಕ್ಷ್ಯ ತೋರಬಾರದು. ಕಾರವಾರ ಜಿಲ್ಲಾ ಆಸ್ಪತ್ರೆಯಲ್ಲಿ ನೂತನ ಕಟ್ಟದಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದ್ದು, ಶೀಘ್ರದಲ್ಲೇ ಆಸ್ಪತ್ರೆ ನಿರ್ಮಾಣವಾಗಲಿದೆ ಎಂದು ಶಿವಾನಂದ ಕುಡ್ತಲಕರ್ ತಿಳಿಸಿದ್ದಾರೆ.
ಕೇವಲ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾದ ಪ್ರಕರಣವೇ 225ಕ್ಕೂ ಅಧಿಕವಾಗಿದ್ದು ಖಾಸಗಿ ಆಸ್ಪತ್ರೆ, ಮೃತಪಟ್ಟ ಪ್ರಕರಣಗಳನ್ನು ಕ್ರೂಡಿಕರಿಸಿದರೆ ಜಿಲ್ಲೆಯಲ್ಲಿ ವರ್ಷಕ್ಕೆ 500ಕ್ಕೂ ಅಧಿಕ ಪ್ರಕರಣ ಪತ್ತೆಯಾಗಿದೆ ಎನ್ನಲಾಗಿದೆ. ಕ್ಯಾನ್ಸರ್‌ನಿಂದ ಚಿಕಿತ್ಸೆ ಸಿಗದೇ ಮನೆಯಲ್ಲಿಯೇ ಹಲವರು ಮೃತಪಟ್ಟರೇ, ಇನ್ನು ಹಲವರು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆಂದು ತೆರಳಿ ಕ್ಯಾನ್ಸರ್ ಧೃಡಪಟ್ಟರೇ ಅಲ್ಲೇ ಚಿಕತ್ಸೆ ಪಡೆಯುತ್ತಿದ್ದಾರೆ. ಇಂತವರ ಲೆಕ್ಕ ಸರ್ಕಾರದ ಬಳಿಯೂ ಸಿಗುತ್ತಿಲ್ಲ. ಸದ್ಯ ಜಿಲ್ಲೆಯಲ್ಲಿ ಈ ಸಂಖ್ಯೆ 500 ದಾಟಿರಬಹುದು ಎನ್ನಲಾಗಿದ್ದು, ಕ್ಯಾನ್ಸರ್ ಹೆಚ್ಚಳಕ್ಕೆ ನಿಗಧಿತ ಕಾರಣ ಕಂಡು ಹಿಡಿಯಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.











Click it and Unblock the Notifications