ಪರೀಕ್ಷೆ ಫಲಿತಾಂಶ ಪ್ರಕಟವಾಗುವ ಮುನ್ನವೇ ಸಾವನ್ನಪ್ಪಿದ ಬಾಲಕ
Recommended Video

ಕಾರವಾರ, ಏಪ್ರಿಲ್ 30 : ಶನಿವಾರ ಸ್ನೇಹಿತರ ಜತೆ ಸ್ನಾನಕ್ಕೆಂದು ತೆರಳಿ, ನದಿಯ ಆಳದಲ್ಲಿ ಬಿದ್ದು ಮೃತಪಟ್ಟಿದ್ದ ಮೂಲತಃ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮಾಲಗತ್ತಿಯ ದೇವಪ್ಪ ಬಸವಂತಪ್ಪ ಪೂಜಾರಿ (17) ಎಂಬಾತನ ಮೃತದೇಹ ಭಾನುವಾರ ತಾಲೂಕಿನ ಕುರ್ನಪೇಟ ಗ್ರಾಮದ ಅರಣ್ಯ ಇಲಾಖೆ ವಸತಿ ಗೃಹದ ಬಳಿಯ ಕಾಳಿ ನದಿಯಲ್ಲಿ ಪತ್ತೆಯಾಗಿದೆ.
ಶಾಲೆಗೆ ರಜೆಯಿದ್ದ ಕಾರಣ ಇಲ್ಲಿನ ತಮ್ಮ ಸಂಬಂಧಿಕರ ಮನೆಗೆ ಈತ ಬಂದು ವಾಸವಿದ್ದ. ಶನಿವಾರ ತನ್ನಿಬ್ಬರು ಸ್ನೇಹಿತರೊಂದಿಗೆ ಬಂದರು ರಸ್ತೆಯಲ್ಲಿರುವ ಅರಣ್ಯ ಇಲಾಖೆ ವಸತಿ ಗೃಹಕ್ಕೆ ಸಮೀಪದಲ್ಲಿ ಕಾಳಿನದಿಗೆ ಸ್ನಾನಕ್ಕೆಂದು ತೆರಳಿದ್ದ. ಈ ಸಂದರ್ಭದಲ್ಲಿ ನದಿಯ ಪಕ್ಕದಲ್ಲಿದ್ದ ಮರವನ್ನೇರಿ ಟೊಂಗೆಯಿಂದ ನೀರಿಗೆ ಜಿಗಿದಿದ್ದು, ನೀರಿನ ಆಳ ತಿಳಿಯದೆ ಬಿದ್ದಿದ್ದರಿಂದ ಆಳದಲ್ಲಿ ಸಿಲುಕಿ ಸಾವನ್ನಪ್ಪಿದ್ದಾನೆ.
ಮೃತದೇಹಕ್ಕೆ ಶೋಧ ಕಾರ್ಯ ನಡೆಸಿದ್ದ ಮಲ್ಲಾಪುರ ಠಾಣೆ ಪೊಲೀಸರು ರವಿವಾರ ಶವವನ್ನು ಪತ್ತೆಹಚ್ಚಿದ್ದು, ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ. ಫಲಿತಾಂಶಕ್ಕೂ ಮುನ್ನವೇ ಇಹಲೋಕ ತ್ಯಜಿಸಿದ ಮೃತ ಬಾಲಕ ದೇವಪ್ಪ ಈ ಬಾರಿಯ ಎಸ್.ಎಸ್.ಎಲ್.ಸಿ.ಪರೀಕ್ಷೆ ಬರೆದಿದ್ದ.

ಇನ್ನೊಂದು ವಾರದಲ್ಲಿ ಬರುವ ಫಲಿತಾಂಶಕ್ಕೆ ಕಾಯುತ್ತಿದ್ದ ಈತ ಬೇಸಿಗೆ ರಜೆ ಹಿನ್ನೆಲೆಯಲ್ಲಿ ಸಂಬಂಧಿಕರ ಮನೆಗೆ ಬಂದು ಉಳಿದುಕೊಂಡಿದ್ದ. ಹೊಟ್ಟೆಪಾಡಿಗೆ ಕೂಲಿ ಮಾಡುತ್ತಿದ್ದ ಈತ ಪೇಂಟಿಂಗ್ ಕೆಲಸಕ್ಕೆ ತೆರಳುತ್ತಿದ್ದ ಎನ್ನಲಾಗಿದೆ. ತನ್ನ ಊರಿನಿಂದ ನೂರಾರು ಕಿ.ಮೀ.ದೂರಕ್ಕೆ ಬಂದು ಭವಿಷ್ಯದ ಕನಸು ಕಾಣುತ್ತಿದ್ದ ಬಾಲಕ ಕಣ್ಮುಚ್ಚಿದ್ದಾನೆ. ಪರೀಕ್ಷೆ ಬರೆದವನು ಫಲಿತಾಂಶವನ್ನೂ ಕಾಣದೆ ಪರಲೋಕಕ್ಕೆ ತೆರಳಿದ್ದಾನೆ.











Click it and Unblock the Notifications