ಮುಖವೇ ಕಾಣದಂತಾಗಿದ್ದ ಕಂದನ ಆರೋಗ್ಯದಲ್ಲಿ ಚೇತರಿಕೆ: ಮಾಧವ ನಾಯಕರ ಸಹಾಯಕ್ಕೆ ಕಣ್ಣೀರಿಟ್ಟ ಕುಟುಂಬ

ಕಾರವಾರ, ಡಿಸೆಂಬರ್‌ 17: ಚಿಕ್ಕ ಗುಳ್ಳೆಯೊಂದು ಮುಖದ ತುಂಬೆಲ್ಲ ಆವರಿಸಿ, ಗುಣಮುಖವಾಗುವುದೇ ಕಷ್ಟ ಎಂದುಕೊಂಡಿದ್ದ ಮಗು ಚೇತರಿಸಿಕೊಳ್ಳುತ್ತಿರುವುದಾಗಿ ವೈದ್ಯರು ತಿಳಿಸಿದ್ದು, ಎಲ್ಲರ ಹಾರೈಕೆ, ಪ್ರಾರ್ಥನೆ ಫಲಿಸಿದಂತಾಗಿದೆ. ನೆರವಿಗೆ ಬಂದ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕರಿಗೆ ಮಗುವಿನ ಅಜ್ಜಿ ಕೈಮುಗಿದು ಕೃತಜ್ಞತೆ ಸಲ್ಲಿಸಿದ್ದಾರೆ.

ನಗರದ ನಂದನಗದ್ದಾದ ಪ್ರೇಮಾನಂದ ಕಾಂಬ್ಳೆ, ಪ್ರಜ್ಞಾ ಕಾಂಬ್ಳೆ ದಂಪತಿಯ ನಾಲ್ಕು ವರ್ಷದ ಮಗುವಿನ ಕಿವಿಯ ಹಿಂಬದಿಯಲ್ಲಿ ಮೂಡಿದ್ದ ಚಿಕ್ಕ ಗುಳ್ಳೆಯೊಂದು ಮುಖದ ತುಂಬೆಲ್ಲ ಆವರಿಸಿಕೊಂಡು, ಮುಖವನ್ನು ಕಣ್ಣೆತ್ತಿ ನೋಡಲೂ ಆಗದ ಸ್ಥಿತಿಗೆ ತಲುಪಿತ್ತು. ಖಾಸಗಿ ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ಕೊಡಿಸಿದ್ದಷ್ಟೇ ಅಲ್ಲದೇ, ಮಹಾರಾಷ್ಟ್ರದಲ್ಲಿ ನಾಟಿ ಔಷಧಿ ಮಾಡಿದ್ದರೂ, ಮಗುವಿನ ಕಾಯಿಲೆ ಉಲ್ಬಣವಾಗಿತ್ತೇ ವಿನಹಃ ಗುಣಮುಖವಾಗುವ ಯಾವುದೇ ಲಕ್ಷಣ ಗೋಚರಿಸುತ್ತಿರಲಿಲ್ಲ.

ಬಡ ಮೀನುಗಾರ ಕುಟುಂಬದವರಾದ ಮಗುವಿನ ಪಾಲಕರು, ಆರ್ಥಿಕ ಸಮಸ್ಯೆಯಿಂದಾಗಿ ದೊಡ್ಡ ಆಸ್ಪತ್ರೆಗಳಿಗೆ ಮಗುವನ್ನು ಕರೆದುಕೊಂಡು ಹೋಗಲಾಗದೆ ಮನೆಯಲ್ಲೇ ಆರೈಕೆ ಮಾಡಿಕೊಂಡಿದ್ದರು.

ತಮ್ಮ ಕಾರಿನಲ್ಲೇ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದ ಮಾಧವ ನಾಯಕ

ತಮ್ಮ ಕಾರಿನಲ್ಲೇ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದ ಮಾಧವ ನಾಯಕ

ಡಿಸೆಂಬರ್‌ 10 ರಂದು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಅವರಿಗೆ ಸ್ಥಳೀಯರಾದ ಯುವರಾಜ್ ಎನ್ನುವವರು ಕರೆ ಮಾಡಿ, ಮಗುವಿನ ಆರೋಗ್ಯದ ಸ್ಥಿತಿ ಹಾಗೂ ಕುಟುಂಬದ ಪರಿಸ್ಥಿತಿಯನ್ನು ವಿವರಿಸಿದರು. ನಂದನಗದ್ದಾದ ನಾಗನಾಥ್ ದೇವಸ್ಥಾನದ ಸಮೀಪವೇ ಇದ್ದ ಇವರ ಮನೆಗೆ ಭೇಟಿ ನೀಡಿದ ಮಾಧವ ನಾಯಕರು, ತಕ್ಷಣವೇ ಮಗುವನ್ನು ತಮ್ಮದೇ ಕಾರಿನಲ್ಲಿ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದರು. ಜಿಲ್ಲಾ ಆಸ್ಪತ್ರೆಯ ವೈದ್ಯರು, ಮಗು ಗುಣಮುಖವಾಗುವ ಬಗ್ಗೆ ಸಂದೇಹ ಹೊಂದಿದ್ದರು. ಆದರೂ ಮಾಧವ ನಾಯಕರ ಕೋರಿಕೆಯ ಮೇರೆಗೆ ಕ್ರಿಮ್ಸ್ ನಿರ್ದೇಶಕ ಡಾ.ಗಜಾನನ ನಾಯಕ ಅವರು ಹುಬ್ಬಳ್ಳಿ ಕಿಮ್ಸ್ ವೈದ್ಯರೊಂದಿಗೆ ಮಾತುಕತೆ ನಡೆಸಿ, ಇಲ್ಲಿಂದ ತೆರಳಲು ಅಂಬ್ಯುಲೆನ್ಸ್ ಮಾಡಿಕೊಟ್ಟಿದ್ದರು.

ಸದ್ಯ ಭಯಾನಕ ರೋಗದಿಂದ ಚೇತರಿಸಿಕೊಂಡ ಬಾಲಕ

ಸದ್ಯ ಭಯಾನಕ ರೋಗದಿಂದ ಚೇತರಿಸಿಕೊಂಡ ಬಾಲಕ

ಹುಬ್ಬಳ್ಳಿಗೆ ಕಿಮ್ಸ್‌ಗೆ ಮಗುವನ್ನು ದಾಖಲು ಮಾಡಿದ ಬಳಿಕ ಮಾಧವ ನಾಯಕರು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಸೇರಿದಂತೆ ಇನ್ನಿತರರಿಗೂ ಮಾಹಿತಿ ನೀಡಿ, ಮಗುವಿಗೆ ಉತ್ತಮ ಚಿಕಿತ್ಸೆ ದೊರಕಿಸಿಕೊಡಲು ಪ್ರಯತ್ನಿಸಿದ್ದರು. ಕಿಮ್ಸ್ ವೈದ್ಯರ ತಂಡ ಕೂಡ ಹೆಚ್ಚಿನ ಕಾಳಜಿ ವಹಿಸಿ, ತಪಾಸಣೆ ವೈದ್ಯೋಪಚಾರ ನೀಡಿದ್ದರಿಂದ ಇದೀಗ ಮಗು ಕೊಂಚ ಚೇತರಿಸಿಕೊಂಡು, ತಾನೇ ಕುಳಿತು ಊಟ ಮಾಡುವಷ್ಟರ ಮಟ್ಟಿಗೆ ಬಂದಿದೆ. ಮನೆಯಲ್ಲಿ ನರಳುತ್ತಾ, ಅನ್ನಹಾರ ಬಿಟ್ಟಿದ್ದ ಮಗು ಬದುಕುಳಿಯುವ ಬಗ್ಗೆ ಕುಟುಂಬಸ್ಥರು, ವೈದ್ಯರುಗಳಿಗೂ ಅನುಮಾನವಿತ್ತು. ಆದರೆ ಸದ್ಯದ ಮಗು ಹಿಂದಿನ ಆರೋಗ್ಯ ಸ್ಥಿತಿಯಂತೆ ಸಂಪೂರ್ಣ ಚೇತರಿಸಿಕೊಂಡು ಮನೆಗೆ ಮರಳುವ ಆಶಾಭಾವನೆ ಮೂಡಿದೆ.

ಬಾಲಕನಿಗೆ ರಕ್ತ ನೀಡಿ ಪ್ರಾಣ ಕಾಪಾಡಿದ ನರ್ಸ್ ಡೀನಾ

ಬಾಲಕನಿಗೆ ರಕ್ತ ನೀಡಿ ಪ್ರಾಣ ಕಾಪಾಡಿದ ನರ್ಸ್ ಡೀನಾ

ಮಗುವಿನ ತಂದೆ- ತಾಯಿಗಳಿಗೆ ಹೆಚ್ಚೇನು ತಿಳಿವಳಿಕೆ ಇರದ ಕಾರಣ ಮಗುವಿಗೆ ಔಷಧೋಪಚಾರ, ಆರೈಕೆ ನೋಡಿಕೊಳ್ಳಲು ಸಮಸ್ಯೆಯಾಗಿತ್ತು. ಆದರೆ ಮಗುವನ್ನು ಕಾರವಾರದಿಂದ ಹುಬ್ಬಳ್ಳಿ ಕಿಮ್ಸ್‌ ಕರೆದೊಯ್ದಿದ್ದ ಅಂಬ್ಯುಲೆನ್ಸ್ ಚಾಲಕ ವಿನಾಯಕ ಎನ್ನುವವರು ಅವರ ಪರಿಚಯದ ಖಾಸಗಿ ಆಸ್ಪತ್ರೆಯ ನರ್ಸ್ ಡೀನಾ ಎನ್ನುವವರಿಗೆ ಈ ಬಗ್ಗೆ ತಿಳಿಸಿದ್ದಾರೆ. ಮಾತೃ ಹೃದಯಿ ಡೀನಾ, ಪ್ರತಿನಿತ್ಯ ಆಸ್ಪತ್ರೆಗೆ ಭೇಟಿ ನೀಡಿ ಮಗುವಿನ ಆರೋಗ್ಯದ ಬಗ್ಗೆ, ಅಗತ್ಯತೆಗಳ ಬಗ್ಗೆ ಮಾಹಿತಿ ಪಡೆದು, ಮಗುವಿನ ಕುಟುಂಬಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಎರಡು ದಿನಗಳ ಹಿಂದೆ ಮಗುವನ್ನ ಐಸಿಯುವಿನಲ್ಲಿಟ್ಟಿದ್ದ ಸಂದರ್ಭದಲ್ಲಿ ಏಕಾಏಕಿ ರಕ್ತದ ಕೊರತೆ ಇರುವುದಾಗಿಯೂ ಹಾಗೂ ತುರ್ತು ರಕ್ತ ಪೂರೈಸಲು ವೈದ್ಯರು ತಿಳಿಸಿದ್ದಾರೆ. ಆ ಸಂದರ್ಭದಲ್ಲಿ ತುರ್ತಾಗಿ ಯಾರೂ ಸಿಗದಕ್ಕೆ ಸ್ವತಃ ನರ್ಸ್ ಡೀನಾ ಅವರೇ ರಕ್ತ ನೀಡಿ ಮಾನವೀಯತೆ ಮೆರೆದಿದ್ದಾರೆ.

ಯಾರೂ ಇಲ್ಲದ ನಮಗೆ ದೇವರಾಗಿ ಬಂದಿರಿ ಎಂದು ಕೈಮುಗಿದ ಹಿರಿಜೀವ

ಯಾರೂ ಇಲ್ಲದ ನಮಗೆ ದೇವರಾಗಿ ಬಂದಿರಿ ಎಂದು ಕೈಮುಗಿದ ಹಿರಿಜೀವ

ಮಗುವನ್ನ ಬಹಳ ಪ್ರೀತಿಸುತ್ತಿದ್ದ ಅಜ್ಜಿಗೆ ಮಗುವ ಇಂದಿನ ಸ್ಥಿತಿ ಹೇಗಿದೆ ಎಂದು ಮಾಹಿತಿ ಕೊಡುವವರೂ ಯಾರೂ ಇರಲಿಲ್ಲ. ಅಜ್ಜಿಯ ಮನೆಯಲ್ಲಿ ಫೋನ್ ಕೂಡ ಇಲ್ಲ. ಹೀಗಾಗಿ ಮಾಧವ ನಾಯಕ ಅವರೇ ಶುಕ್ರವಾರ ಅಜ್ಜಿಯ ಮನೆಗೆ ತೆರಳಿ, ಮಗು ಕೊಂಚ ಚೇತರಿಸಿಕೊಂಡು ಊಟ ಮಾಡುತ್ತಿದ್ದ ವಿಡಿಯೋ ತೋರಿಸಿದಾಗ ಅಜ್ಜಿಯ ಕಣ್ಣೀರು ಹಾಕಿದ್ದಾರೆ. 'ಯಾರೂ ಇಲ್ಲದ ನಮಗೆ ದೇವರಾಗಿ ಬಂದಿರಿ' ಎಂದು ಮಾಧವ ನಾಯಕರಿಗೆ ಕೈಮುಗಿದು ಕೃತಜ್ಞತೆ ತಿಳಿಸಿದ್ದಾರೆ.

"ವೈದ್ಯರು ಮೊದ ಮೊದಲು ಬಾಲಕನಿಗೆ ಆಗಿರುವುದು ಕ್ಯಾನ್ಸರ್ ಎಂದು ತಿಳಿದಿದ್ದರು. ಆದರೆ ನಾಟಿ ಔಷಧ ಮಾಡಿದ್ದರಿಂದ ದುಷ್ಪರಿಣಾಮ ಆಗಿರುವುದು ಕಿಮ್ಸ್‌ನಲ್ಲಿ ತಪಾಸಣೆ ಮಾಡಿದಾಗ ತಿಳಿದುಬಂದಿದೆ. ಸದ್ಯ ಮಗು ಆರೋಗ್ಯಯುತವಾಗಿ, ಊಟು- ತಿಂಡಿ ಮಾಡುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಗುಣಮುಖನಾಗಿ ಡಿಸ್ಚಾರ್ಜ್ ಆಗುವ ಸಾಧ್ಯತೆಯೂ ಇದೆ. ನಾಗನಾಥನ ಮೇಲೆ ನಂಬಿಕೆ ಇಟ್ಟು ನಡೆಸಿದ ಪ್ರಯತ್ನ ಫಲ ನೀಡಿದಂತಾಗಿದೆ "ಎಂದು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+