ಕಾಯಂ ಡೀನ್ ಹುದ್ದೆಗೆ ಅರ್ಜಿ ಆಹ್ವಾನ; ‘ಕಿಮ್ಸ್’ ಕುರ್ಚಿಗೆ ಕಸರತ್ತು ಶುರು
ಕಾರವಾರ, ನವೆಂಬರ್ 27: ನಗರದ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಕಿಮ್ಸ್) ಕಾಯಂ ನಿರ್ದೇಶಕ ಹುದ್ದೆಗೆ ಸರ್ಕಾರ ಅರ್ಜಿ ಆಹ್ವಾನಿಸಿದ್ದು, ಡೀನ್ ಹುದ್ದೆಗಾಗಿ ಇದೀಗ ಹಲವರಿಂದ ಕಸರತ್ತು ಪ್ರಾರಂಭವಾಗಿದೆ.
ವೈರಾಣು ಹೆಚ್ಚುವ ಸಾಧ್ಯತೆ; ಕಿಮ್ಸ್ ನಲ್ಲಿ ಮತ್ತೆ 100 ಹಾಸಿಗೆಗಳ ಕೋವಿಡ್- 19 ವಾರ್ಡ್
ಈ ಹಿಂದೆ ಕಾಲೇಜು ಪ್ರಾರಂಭವಾದಾಗಿನಿಂದ ಡಾ.ಶಿವಾನಂದ ದೊಡ್ಮನಿ ನಿರ್ದೇಶಕರಾಗಿದ್ದರು. ಮೂರು ವರ್ಷ ಅಧಿಕಾರ ಪೂರ್ಣಗೊಂಡ ನಂತರ ಅವರನ್ನು ಡೀನ್ ಹುದ್ದೆಯಿಂದ ಬಿಡುಗಡೆ ಮಾಡಲಾಗಿತ್ತು. ಇದಾದ ನಂತರ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಡಾ.ಗಜಾನನ ನಾಯಕ ಅವರಿಗೆ ಪ್ರಭಾರ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿತ್ತು. ಇದೀಗ ನಿರ್ದೇಶಕ ಹುದ್ದೆಗೆ ಖಾಯಂ ನೇಮಕಾತಿ ಮಾಡಲು, ಕೊಪ್ಪಳ, ಗದಗ ಕಾಲೇಜುಗಳ ಜೊತೆ ಕಾರವಾರ ಕಿಮ್ಸ್ ಗೂ ಸರ್ಕಾರ ಅರ್ಜಿ ಆಹ್ವಾನಿಸಿದೆ. ಮುಂದೆ ಓದಿ...

ಹಲವು ಮಾನದಂಡಗಳೊಂದಿಗೆ ಅರ್ಜಿ ಆಹ್ವಾನ
10 ವರ್ಷಗಳ ಕಾಲ ಪ್ರಾಧ್ಯಾಪಕ, ಸಹಪ್ರಾಧ್ಯಾಪಕ, ರೀಡರ್ ಆಗಿ ಸೇವೆ ಸಲ್ಲಿಸಿದ, ವಿಭಾಗವೊಂದಲ್ಲಿ ಐದು ವರ್ಷ ಪ್ರಾಧ್ಯಾಪಕರಾಗಿ ಸೇವೆ ಸೇರಿದಂತೆ ಹಲವು ಅರ್ಹತಾ ಮಾನದಂಡಗಳೊಂದಿಗೆ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಸದ್ಯ ಡೀನ್ ಹುದ್ದೆಗೆ ಅರ್ಜಿ ಆಹ್ವಾನಿಸಿದಂತೆ ನಿರ್ದೇಶಕರಾಗಲು ಹಲವರು ಕಸರತ್ತು ಪ್ರಾರಂಭಿಸಿದ್ದಾರೆನ್ನಲಾಗಿದೆ. ಮೂಲಗಳ ಪ್ರಕಾರ ಹಾಲಿ ಪ್ರಭಾರ ನಿರ್ದೇಶಕ ಡಾ.ಗಜಾನನ ನಾಯಕ ಅವರು ಸಹ ಕಾಯಂ ಡೀನ್ ಆಗಲು ಪ್ರಯತ್ನ ನಡೆಸಿದ್ದಾರೆನ್ನಲಾಗಿದೆ. ಇದಲ್ಲದೇ ಕಾಲೇಜಿನಲ್ಲೇ ಒಂದಿಬ್ಬರು ಪ್ರಾಧ್ಯಾಪಕರು ಪ್ರಯತ್ನ ನಡೆಸಿದ್ದು, ಇವರೊಟ್ಟಿಗೆ ಬೇರೆ ಕಾಲೇಜಿನ ಪ್ರಾಧ್ಯಾಪಕರು ಸಹ ತೆರೆಮರೆಯ ಕಸರತ್ತು ನಡೆಸಿದ್ದಾರೆ ಎನ್ನಲಾಗಿದೆ.

ಯಾರು ಈ ಬಾರಿ ಕಿಮ್ಸ್ ಕಾಯಂ ಡೀನ್?
ಯಾರೇ ಡೀನ್ ಹುದ್ದೆ ಅಲಂಕರಿಸಬೇಕಾದರೆ ಅರ್ಹತಾ ಮಾನದಂಡಗಳಿಗಿಂತ ರಾಜಕೀಯ ಪ್ರಭಾವವೇ ಅಧಿಕವಾಗಿರಬೇಕು. ಸ್ಥಳೀಯ ಶಾಸಕರಿಂದ ಹಿಡಿದು ವೈದ್ಯಕೀಯ ಸಚಿವರವರೆಗೆ ಆಶೀರ್ವಾದವಿದ್ದರೆ ಮಾತ್ರ ಡೀನ್ ಹುದ್ದೆಯನ್ನು ಪಡೆಯಲು ಸಾಧ್ಯವೆನ್ನುತ್ತವೆ ಮೂಲಗಳು. ಈ ಹಿನ್ನೆಲೆಯಲ್ಲಿ ಹೇಗಾದರೂ ಮಾಡಿ ಡೀನ್ ಹುದ್ದೆ ಪಡೆಯಲು ಹಲವರು ರಾಜಕೀಯ ನಾಯಕರ ಹಿಂದೆ ಬಿದ್ದಿದ್ದಾರೆನ್ನುವ ಮಾತು ಸಹ ಕೇಳಿ ಬಂದಿದೆ. ಡೀನ್ ಹುದ್ದೆ ಪಡೆಯಲು ಅರ್ಹತೆಯ ಜೊತೆಗೆ ರಾಜಕಾರಣಿಗಳ ಕಿಸೆಯನ್ನು ಸಹ ತುಂಬಿಸಬೇಕು ಎನ್ನುವ ಆರೋಪವಿದೆ. ಆದರೆ ಯಾರು ಈ ಬಾರಿ ಕಿಮ್ಸ್ ಕಾಯಂ ಡೀನ್ ಆಗಲಿದ್ದಾರೆ ಎನ್ನುವುದು ಕಾದು ನೋಡಬೇಕಾಗಿದೆ.

ಸದಾ ಚರ್ಚೆಯಲ್ಲಿರುವ ಡೀನ್ ಹುದ್ದೆ!
ಕಾಲೇಜಿನ ಡೀನ್ ಹುದ್ದೆಗೆ ಯಾರು ಬರುತ್ತಾರೋ, ಬಿಡುತ್ತಾರೋ. ಆದರೆ, ಸದಾ ಈ ಹುದ್ದೆ ಚರ್ಚೆಯಲ್ಲಿರುತ್ತದೆ. ಈ ಹಿಂದೆ ನಿರ್ದೇಶಕರಾಗಿದ್ದ ಡಾ.ಶಿವಾನಂದ ದೊಡ್ಮನಿ ಹಲವು ವಿಚಾರದಲ್ಲಿ ಚರ್ಚೆಗೆ ಗ್ರಾಸವಾಗಿದ್ದರು. ಆಗ ಆಸ್ಪತ್ರೆಯ ಸರ್ಜನ್ ಆಗಿದ್ದ ಡಾ.ಶಿವಾನಂದ ಕುಡ್ತರಕರ್ ಹಾಗೂ ಶಿವಾನಂದ ದೊಡ್ಮನಿ ನಡುವೆ ಮುಸುಕಿನ ಗುದ್ದಾಟ ನಡೆಯುವ ಮೂಲಕ ಸದಾ ಸುದ್ದಿಯಲ್ಲಿದ್ದರು. ಸದ್ಯ ಡೀನ್ ಪ್ರಭಾರ ಹುದ್ದೆಯಲ್ಲಿರುವ ಡಾ.ಗಜಾನನ ನಾಯಕ ಅವರ ಹೆಸರು ಕೂಡ ಕೋವಿಡ್ ಗಲಾಟೆ ಸೇರಿದಂತೆ ಇತರ ಕೆಲ ವಿಚಾರಗಳಿಂದ ಚರ್ಚೆಗೆ ಗ್ರಾಸವಾಗಿತ್ತು. ಮುಂದೆ ಬರುವ ಡೀನ್ ಸಹ ಚರ್ಚೆಗೆ ಗ್ರಾಸವಾಗಿರದೇ, ಕಾಲೇಜಿನ ಪ್ರಗತಿಗೆ ಹೆಚ್ಚಿನ ಆದ್ಯತೆ ಕೊಡಲಿ ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.

ಆಸ್ಪತ್ರೆ ನಿರ್ಮಾಣಕ್ಕೆ 300 ಕೋಟಿ ಬಿಡುಗಡೆ
ಕಿಮ್ಸ್ ನಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಈಗಾಗಲೇ 300 ಕೋಟಿ ಹಣ ಬಿಡುಗಡೆಯಾಗಿದ್ದು, ನೂತನ ಆಸ್ಪತ್ರೆಯ ಕಟ್ಟಡ ನಿರ್ಮಾಣ ಕಾರ್ಯ ಶೀಘ್ರದಲ್ಲಿಯೇ ಪ್ರಾರಂಭವಾಗಲಿದೆ. ಇದಕ್ಕಾಗಿ ಶಾಸಕಿ ರೂಪಾಲಿ ನಾಯ್ಕ ಅವರು ಈಗಾಗಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನೂ ಆಹ್ವಾನಿಸಿದ್ದಾರೆ. ಈಗ ಡೀನ್ ಹುದ್ದೆಗೆ ಕಾಯಂ ಆಗುವವರು ಈ ಕಾಮಗಾರಿಯ ಮೇಲುಸ್ತುವಾರಿಯಾಗಲಿದ್ದಾರೆ. ದೊಡ್ಡ ಮೊತ್ತದ ಕಾಮಗಾರಿಯಾಗಿರುವುದರಿಂದ ಡೀನ್ ಹುದ್ದೆ ಸಹ ಈ ಬಾರಿ ಲಾಭದಾಯಕವಾಗಿದ್ದು, ಅದಕ್ಕಾಗಿಯೇ ಹೆಚ್ಚಿನ ಕಸರತ್ತನ್ನು ಕೆಲವರು ಮಾಡುತ್ತಿದ್ದಾರೆ ಎನ್ನುತ್ತವೆ ಸುದ್ದಿ ಮೂಲಗಳು.