ಕಾರವಾರದಲ್ಲಿ ತ್ಯಾಜ್ಯ ಸಂಗ್ರಹಿಸಿದ ನಟ ಅರುಣ್ ಸಾಗರ್
ಕಾರವಾರ, ಜನವರಿ 23: ಕಾರವಾರ ನಗರದಲ್ಲಿ ಪ್ರತಿ ವಾರ ಸ್ವಚ್ಛತಾ ಕಾರ್ಯ ಹಮ್ಮಿಕೊಂಡು ಇಂದಿಗೆ ಆರು ವರ್ಷಗಳನ್ನು ಪೂರೈಸಿರುವ ಇಲ್ಲಿನ ಪಹರೆ ವೇದಿಕೆಯ ಈ ದಿನದ ಸ್ವಚ್ಛತಾ ಕಾರ್ಯದಲ್ಲಿ ನಟ, ನಿರ್ಮಾಪಕ ಅರುಣ್ ಸಾಗರ್ ಕೂಡ ಭಾಗವಹಿಸಿದ್ದರು.
ಕಾಳಿ ಸಂಗಮದ ಕಡಲತೀರದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ಕೆ ಶಾಸಕಿ ರೂಪಾಲಿ ನಾಯ್ಕ ಚಾಲನೆ ನೀಡಿದರು. ಬಳಿಕ ನೂರಾರು ಕಾರ್ಯಕರ್ತರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು.
ಇದೇ ವೇಳೆ ನಟ ಅರುಣ್ ಸಾಗರ್ ಕೂಡ ಪಾಲ್ಗೊಂಡು ತೀರದ ತ್ಯಾಜ್ಯಗಳನ್ನು ಆಯ್ದರು. ಬೆಳಿಗ್ಗೆ 7.15ರಿಂದ ಆರಂಭವಾದ ಈ ಕಾರ್ಯ ಸತತ ಮೂರು ತಾಸುಗಳ ನಡೆದು, ಒಂದು ಲಾರಿಯಷ್ಟು ತ್ಯಾಜ್ಯ ಸಂಗ್ರಹ ಮಾಡಲಾಯಿತು.

ಈ ತ್ಯಾಜ್ಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ಲಾಸ್ಟಿಕ್ ಬಾಟಲಿ, ಕವರ್ ಗಳು, ಬಿಯರ್ ಬಾಟಲಿಗಳಿದ್ದವು. ಕಾರ್ಯಕರ್ತರಿಗೆ ಗ್ಲೌಸ್, ಸ್ವಚ್ಛತಾ ಪರಿಕರ, ಸ್ಯಾನಿಟೈಸರ್ ಗಳನ್ನು ವಿವರಿಸಲಾಗಿತ್ತು.
ಈ ವೇಳೆ ಪಹರೆಯ ಕಾರ್ಯ ಶ್ಲಾಘಿಸಿದ ಅರುಣ್ ಸಾಗರ್, ಟ್ಯಾಗೋರ್ ನಡೆದಾಡಿದಂಥ ಕಡಲತೀರದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದು ಸಂತೋಷವೆನಿಸಿತು. ಇದು ನನ್ನ ಜೀವನದ ಒಳ್ಳೆಯ ದಿನಗಳಲ್ಲಿ ಒಂದು ಎಂದರು.
ಜಾತಿ-ಮತ, ಪಕ್ಷ-ಭೇದ ಮರೆತು, ಭಾರತೀಯರಾಗಿ ಸ್ವಚ್ಛ ಭಾರತಕ್ಕೆ ಅರ್ಥ ಕೊಟ್ಟಿದ್ದಾರೆ. ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ತ್ಯಾಜ್ಯಗಳನ್ನು ಹಾಗೆಯೇ ಎಸೆದು ಹೋಗುತ್ತಾರೆ. ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.

ಸಂಜೆ ಸಭಾ ಕಾರ್ಯಕ್ರಮ
ಆರು ವರ್ಷದ ಸಭಾ ಕಾರ್ಯಕ್ರಮವನ್ನು ಕಾರವಾರದ ಮಯೂರವರ್ಮ ವೇದಿಕೆಯಲ್ಲಿ ಸಂಜೆ 6 ಗಂಟೆಗೆ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಅರುಣ್ ಸಾಗರ್ ಜೊತೆಗೆ ಕೃಷಿ ಸಾಧಕಿ ಕವಿತಾ ಮಿಶ್ರಾ ಕೂಡ ಪಾಲ್ಗೊಳ್ಳುವವರಿದ್ದಾರೆ. ಇದೇ ವೇಳೆ ಕೃಷಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.











Click it and Unblock the Notifications