ಹೊನ್ನಾವರ; ಮಗು ಮುಖ ನೋಡುವ ಮುನ್ನವೇ ಕಣ್ಮುಚ್ಚಿದ ತಾಯಿ
ಹೊನ್ನಾವರ, ಮೇ 31; ಆಕೆಯದು ಸಾಯುವ ವಯಸ್ಸಂತೂ ಅಲ್ಲವೇ ಅಲ್ಲ. ಎಲ್ಲಾ ಹೆಣ್ಣುಮಕ್ಕಳಂತೆಯೇ ಬದುಕಿನಲ್ಲಿ ನೂರಾರು ಕನಸು ಕಟ್ಟಿಕೊಂಡು ವರ್ಷದ ಹಿಂದೆ ಮದುವೆಯಂಬ ಮಧುರ ಬಂಧನಕ್ಕೆ ಒಳಗಾಗಿದ್ದಳು.
ಮಗುವಿಗೆ ಪ್ರಪಂಚದ ಬೆಳಕನ್ನು ಕಾಣಿಸಿದ ಮೂರು ದಿನಲ್ಲಿಯೇ ಹಾಲುಗಲ್ಲದ ಹಸುಗೂಸು, ಕೈ ಹಿಡಿದ ಬಾಳ ಸಂಗಾತಿಯನ್ನು, ಅಪಾರ ಬಂಧುಗಳನ್ನು ಕಣ್ಣೀರಿನ ಕೋಡಿಯಲ್ಲಿ ಮುಳುಗಿಸಿ ಬಾರದ ಲೋಕಕ್ಕೆ ನಡೆದುಬಿಟ್ಟಿದ್ದಾಳೆ.
ಚೊಚ್ಚಲ ಹೆರಿಗೆಯಾದ ಬೆನ್ನಲ್ಲೇ ಮಾಲತಿ ಶೆಟ್ಟಿ (28) ಸಾವನ್ನಪ್ಪಿದ ಘಟನೆ ಹೊನ್ನಾವರದಲ್ಲಿ ನಡೆದಿದೆ. ಹೊನ್ನಾವರ ತಾಲೂಕಿನ ಹಡಿನಬಾಳದವಳಾದ ಮಾಲತಿಗೆ ವರ್ಷದ ಹಿಂದೆ ಕೆಳಗಿನ ಇಡಗುಂಜಿಯ ರವಿ ಶೆಟ್ಟ ಜೊತೆ ಮದುವೆಯಾಗಿತ್ತು.

8 ತಿಂಗಳ ಗರ್ಭಿಣಿಯಾಗಿದ್ದ ಮಾಲತಿಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ನವಮಾಸ ತುಂಬುವ ಮೊದಲೇ ಮಗುವನ್ನು ತಾಯಿ ಒಡಲೊಳಗಿಂದ ಹೊರ ತೆಗೆಯಬೇಕಾದ ಅನಿವಾರ್ಯತೆ ಎದುರಾಗಿತ್ತು.
ಮೇ 27ರಂದು ವೈದ್ಯರು ಮಗುವನ್ನು ಯಶಸ್ವಿಯಾಗಿ ಹೊರ ತೆಗೆದಿದ್ದರು. ಬಾಣಂತಿಗೆ ವಿಪರೀತ ರಕ್ತ ಸ್ರಾವ ಆಗಿದೆ ಎಂಬ ಆರೋಪವಿದೆ. ಉಡುಪಿಯ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಮೂರುದಿನ ಚಿಕಿತ್ಸೆ ನೀಡಿದರೂ ಮಾಲತಿ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಮೃತಪಟ್ಟಿದ್ದಾರೆ. ತಾಯಿಯ ಮುಖವನ್ನೇ ನೋಡದ ಹಸುಳೆಯನ್ನು ಆಸ್ಪತ್ರೆಯಲ್ಲಿಯೇ ಆರೈಕೆ ಮಾಡುತ್ತಿದ್ದಾರೆ ಕುಟುಂಬ ವರ್ಗದವರು.












Click it and Unblock the Notifications