• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿದ್ದರಾಮಯ್ಯ ಭಾಷಣಕ್ಕೆ ಅಡ್ಡಿ ಪಡಿಸಿದ್ದು ಯಾರು? ಯಾಕೆ?

|
Google Oneindia Kannada News

ಬೆಂಗಳೂರು, ನ. 17 : ಸಿದ್ದರಾಮಯ್ಯ ಭಾಷಣ ಅಂದ್ರೆ ಸಾಕು ಜನರಿಗೆ ಖಷಿಯೋ ಖುಷಿ. ಸಿದ್ದು ಭಾಷಣದ ವೇಳೆ ಉಟ್ಟಿಕೊಂಡ 'ಹೌದು ಹುಲಿಯಾ' ರಾಜ್ಯಮಟ್ಟದಲ್ಲಿ ದೊಡ್ಡ ಟ್ರೆಂಡ್ ಕ್ರಿಯೇಟ್ ಆಗಿತ್ತು. ಸಾರ್ವಜನಿಕ ಸಮಾರಂಭದಲ್ಲಿ ಸಿದ್ದು ಆಡುವ ಮಾತುಗಳಿಗೆ ಜನ ಸಿಳ್ಳೆ ಹೊಡೀತಾರೆ. ಚಪ್ಪಾಳೆ ತಟ್ಟುತ್ತಾರೆ. ಲಾಜಿಕ್ ಇಟ್ಟುಕೊಂಡು ಸಿದ್ದು ಆಡುವ ಪ್ರತಿ ಮಾತೂ ಜನ ಸಾಮಾನ್ಯರನ್ನು ತಾಕುತ್ತವೆ. ಅದೇ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಪಕ್ಷದ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷರ ಪದ ಗ್ರಹಣ ಸಮಾರಂಭದಲ್ಲಿ ಅವಮಾನ! ಸಿದ್ದು ಭಾಷಣ ಅಂದ್ರೆ ವಿರೋಧಿಗಳು ಸಿಳ್ಳೆ ಹೊಡೀತಾರೆ. ಆದ್ರೆ ಪಕ್ಷದ ಕಾರ್ಯಕ್ರಮದಲ್ಲಿ ಯಾಕೆ ಸಿದ್ದು ಭಾಷಣಕ್ಕೆ ಅಡ್ಡಿ ಪಡಿಸಿದ್ದು? ಅರ್ಧಕ್ಕೆ ಭಾಷಣ ಮೊಟಕು ಗೊಳಿಸಿ ಸಿದ್ದರಾಮಯ್ಯ ಹೊರ ಬಂದ ಅರ್ಥ ಏನು?

ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷರ ಪದ ಗ್ರಹಣ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಷಣ ಮಾಡಲು ಆರಂಭಿಸುತ್ತಿದ್ದಂತೆ ಪಕ್ಷದ ಕೆಲ ಕಾರ್ಯಕರ್ತರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಭಾವಚಿತ್ರ ಹಿಡಿದು ಕೂಗಿದ್ದಾರೆ. ಸಿದ್ದರಾಮಯ್ಯ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಚಾಮರಾಜಪೇಟೆ ಶಾಸಕ ಬಿ.‍ ಝಡ್ ಜಮೀರ್ ಅಹಮದ್ ಖಾನ್ ಅವರ ಬೆಂಬಲಿಗರೂ ಅಡ್ಡಿ ಪಡಿಸಿದ್ದಾರೆ. ಜಮೀರ್ ಭಾವಚಿತ್ರ ತೋರಿಸಿ ಘೋಷಣೆ ಕೂಗಿದ್ದಾರೆ. ಒಂದು ಮಾತು ಆಡಲು ಅವಕಾಶ ಕೊಡದ ಕೈ ಕಾರ್ಯಕರ್ತರ ಬಗ್ಗೆ ಸಿದ್ದು ಗುಟುರು ಹಾಕಿದ್ದಾರೆ. ನಿಶಬ್ಧವಾಗಿರುವಂತೆ ಸೂಚಿಸಿದರೂ ಸಿದ್ದು ಮಾತಿಗೆ ಕೇರ್ ಮಾಡಿಲ್ಲ. ಇದರಿಂದ ಸಿಟ್ಟಾದ ಸಿದ್ದು ಒಂದೇ ಮಾತಿನಲ್ಲಿ ಭಾಷಣ ಮುಗಿಸಿ ಅರ್ಧದಲ್ಲೆ ವೇದಿಕೆಯಿಂದ ನಿರ್ಗಮಿಸಿದ್ದಾರೆ. ಇದು ಬಣ ರಾಜಕೀಯೋ? ಅಥವಾ ಸಿದ್ದರಾಮಯ್ಯ ಅವರನ್ನು ವರ್ಚಸ್ಸು ಕಡಿಮೆ ಮಾಡುವ ತಂತ್ರವೋ? ಸಿಎಂ ರೇಸ್ ನಿಂದ ಸಿದ್ದು ವೈಯಕ್ತಿಕವಾಗಿ ನಿರ್ಗಮಿಸುವಂತೆ ರೂಪಗೊಂಡ ಯೋಜನೆಯೋ ಗೊತ್ತಿಲ್ಲ. ಅಂತೂ ಅಲ್ಪ ಸಂಖ್ಯಾತ ಅಧ್ಯಕ್ಷರ ಪದ ಗ್ರಹಣ ಸಮಾರಂಭದಲ್ಲಿಕೈ ನಾಯಕರ ನಡುವಿನ ಆಂತರಿಕ ಭಿನ್ನಮತ ಸ್ಫೋಟಗೊಂಡಿದೆ.

ದೊಡ್ಡ ಚರ್ಚೆ: ಜೆಡಿಎಸ್ ತೊರೆದು ಚಾಮರಾಜಪೇಟೆ ಶಾಸಕ ಬಿ.ಝಡ್ ಜಮೀರ್ ಕಾಂಗ್ರೆಸ್ ಸೇರಿದ್ದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಂದ. ಸಿದ್ದು ಅವರೇ ನಮ್ಮ ನಾಯಕರು. ಸಿದ್ದರಾಮಯ್ಯ ಅವರೇ ಮುಂದಿನ ಸಿಎಂ. ಅವರು ಇಚ್ಛಿಸಿದರೆ ಚಾಮರಾಜಪೇಟೆ ಕ್ಷೇತ್ರವನ್ನೇ ಬಿಟ್ಟು ಕೊಡುತ್ತೇನೆ. ಸಿದ್ದರಾಮಯ್ಯ ಅವರಿಗೆ ಪರ್ಯಾಯ ನಾಯಕರು ಯಾರೂ ಇಲ್ಲ ಎಂದು ಶಾಸಕ ಜಮೀರ್ ಹೋದ ಕಡೆಯಲ್ಲಿ ಭಾಷಣ ಮಾಡುತ್ತಿದ್ದರು. ಸಿದ್ದು ಕೂಡ ನನಗೊಬ್ಬ ಬಲಗೈ ಬಂಟ ಅಲ್ಪ ಸಂಖ್ಯಾತ ನಾಯಕ ಇದ್ದಾನೆ ಎಂದು ನಂಬಿದಿದ್ದರು. ಜಮೀರ್ ಅಹಮದ್ ಮನೆ ಮೇಲೆ ಇಡಿ ದಾಳಿ ಮಾಡುವ ವರೆಗೂ ಜಮೀರ್ ಸಿದ್ದುಗೆ ಅಂಟಿ ಕೊಂಡಿಯೇ ಇದ್ದರು. ಸಿದ್ದು ಪರ ಬ್ಯಾಟಿಂಗ್ ಮಾಡುತ್ತಿದ್ದ ಜಮೀರ್ ಅಹಮದ್ ಖಾನ್ ಇಡಿ ದಾಳಿಗೆ ಒಳಗಾದ ಬಳಿಕ ಬದಲಾಗಿದ್ದಾರೆ.

ಇಡಿ ದಾಳಿ ವೇಳೆ ಸಿದ್ದು ಸೈಲೆಂಟ್: ಶಿವಾಜಿನಗರ ಸಮೀಪ ಅರಮನೆ ನಾಚಿಸುವ ಜಮೀರ್ ಬಂಗಲೆ ವೈರಲ್ ಆಗುತ್ತಿದ್ದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ಮಾಡಿದ್ದರು. ಇಡಿ ದಾಳಿಗೆ ಒಳಗಾಗಿದ್ದ ಜಮೀರ್ ಕೂಡ ನಡುಗಿ ಹೋಗಿದ್ದರು. ಜಮೀರ್ ಮನೆ ಮೇಲೆ ಇಡಿ ದಾಳಿಯಾದ ವೇಳೆ ಸಿದ್ದರಾಮಯ್ಯ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಕೇಂದ್ರೀಯ ತನಿಖಾ ಸಂಸ್ಥೆಗಳ ಬಗ್ಗೆ ಚಕಾರ ಎತ್ತಲಿಲ್ಲ. ಜಮೀರ್ ಮನೆಗೆ ಹೋಗಿ ಸಂತೈಸುವ ಕೆಲಸವನ್ನೂ ಸಿದ್ದು ಮಾಡಲಿಲ್ಲ. ಭ್ರಷ್ಟಾಚಾರ ಆರೋಪ ವಿಚಾರ ಬಂದರೆ ಸಿದ್ದರಾಮಯ್ಯ ಯಾರನ್ನೂ ಹತ್ತಿರ ಬಿಟ್ಟುಕೊಂಡವರಲ್ಲ. ಅವರ ಈ ಕ್ಲೀನ್ ಇಮೇಜ್ ನಡೆಯೇ ಎದುರಾಳಿ ಪಕ್ಷದ ನಾಯಕರ ಮೇಲೆ ಸವಾರಿ ಮಾಡುವ ಅರ್ಹತೆಯೂ ಉಳಿಸಿಕೊಳ್ಳಲು ಆಗುತ್ತಿರಲಿಲ್ಲ. ಜಮೀರ್ ಅವರ ಮನೆಗೆ ಕೆಲ ನಾಯಕರು ಖುದ್ದು ಹೋಗಿ ಸಾಂತ್ವನ ಹೇಳಿದ್ದರು. ಅಂದಿನಿಂದ ಸಿದ್ದರಾಮಯ್ಯ ಮತ್ತು ಆಪ್ತ ಬಂಟ ಜಮೀರ್ ನಡುವಿನ ಸಂಬಂಧ ಮೊದಲಿನಂತೆ ಇದೆ ಎಂದು ನಿರೂಪಿಸುವ ಒಂದು ಘಟನೆ ಕೂಡ ಸಾರ್ವಜನಿಕವಾಗಿ ನಡೆದಿಲ್ಲ. ಹೀಗಾಗಿ ಜಮೀರ್ ಇಡಿ ದಾಳಿ ಬಳಿಕ ಪಥ ಬದಲಿಸಿದರೇ ಎಂಬುದು ಕಾಂಗ್ರೆಸ್ ಪಾಳಯದಲ್ಲಿ ದೊಡ್ಡ ಚರ್ಚೆ ನಡೆಯುತ್ತಿದೆ.

ಮೋದಿಗೆ ಬೇಕಾದ್ರೂ ಮಾತಲ್ಲಿ ಸಿದ್ದು ತಿವಿಯುತ್ತಾರೆ. ಇನ್ನೂ ಸಿದ್ದು ಆರೋಪ, ಅರ್ಥ ಗರ್ಭಿತ ಮಾತಿನ ವರಸೆಗೆ ಸರಿಸಾಟಿಯಿಲ್ಲ. ನನ್ನ ಮೇಲೆ ಇಡಿ ದಾಳಿ ಮಾಡಿದಾಗ ಸಿದ್ದರಾಮಯ್ಯನವರು ಯಾಕೆ ಮೌನವಾದರು? ನನ್ನ ಮನೆಗೆ ಬಂದು ಸಾಂತ್ವನ ಹೇಳುವ ಕಾಳಜಿ ತೋರಲಿಲ್ಲ. ನನಗೆ ನಾಳೆ ಏನಾದರೂ ಸಮಸ್ಯೆ ಆದರೆ ನನ್ನನ್ನು ರಕ್ಷಣೆ ಮಾಡುತ್ತಾರೆಯೇ ಎಂಬ ಪ್ರಶ್ನೆಗಳು ಜಮೀರ್‌ಗೆ ಕಾಡಿರಬಹುದು. ಒಂದೇ ಸಲ ಅಂತರ ಕಾಯ್ದುಕೊಳ್ಳುವುದಕ್ಕಿಂತಲೂ ತನ್ನನ್ನು ರಕ್ಷಿಸುವವರ ಬಣ ಸೇರುವುದು ಸೂಕ್ತ ಎಂಬ ತೀರ್ಮಾನ ಮಾಡಿ ಜಮೀರ್ ಪಥ ಬದಲಾವಣೆ ಮಾಡಿದರೆ? ಇದನ್ನು ಸಿದ್ದು ಅವರಿಗೆ ಮನವರಿಕೆ ಮಾಡಿಕೊಡುವ ಭಾಗವಾಗಿ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷರ ಪದಗ್ರಹಣ ಸಮಾರಂಭವನ್ನು ವೇದಿಕೆಯನ್ನಾಗಿ ಬಳಸಿಕೊಳ್ಳಲಾಯಿತೇ ಎಂಬ ಪ್ರಶ್ನೆಗಳು ಮೂಡಿವೆ.

Zameer Ahmed Khan Supporters Make Disruption to Siddaramaiah Speech

ಜಮೀರ್ ವೇದಿಕೆಯಲ್ಲಿರುವಾಗ ಜಮೀರ್ ಬೆಂಬಲಿಗ ಕಾರ್ಯಕರ್ತರು ಈ ರೀತಿ ಮಾಡಿದರೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂಬ ಮನೋ ಭಾವನೆಯಿಂದ ಯೋಜನೆಯಂತೆ ಜಮೀರ್ ದೆಹಲಿಗೆ ತೆರಳಿದರೇ? ಕಾಂಗ್ರೆಸ್ ಪಕ್ಷದಲ್ಲಿ ಅಲ್ಪ ಸಂಖ್ಯಾತ ನಾಯಕರ ಪ್ರತಿನಿಧಿಯಾಗಲು ಹೊರಟಿರುವ ಜಮೀರ್ ಅಹಮದ್ ಖಾನ್‌ಗೆ ದೆಹಲಿ ತುರ್ತು ಭೇಟಿ ಏನಿತ್ತು? ಅಲ್ಪ ಸಂಖ್ಯಾತ ಅಧ್ಯಕ್ಷರ ಸಮಾರಂಭದಲ್ಲಿ ಯಾಕೆ ಗೈರು ಹಾಜರಾದರು? ಪರಿಷತ್ ಚುನಾವಣೆಯಲ್ಲಿ ಅಲ್ಪ ಸಂಖ್ಯಾತ ನಾಯಕರಿಗೆ ಆದ್ಯತೆ ನೀಡಿ ಎಂದು ಕೇಳುವುದಕ್ಕಿಂತಲೂ ಈ ಕಾರ್ಯಕ್ರಮ ಮುಖ್ಯ ಎಂಬ ಅರಿವು ಇರಲಿಲ್ಲವೇ?

ಸಿದ್ದರಾಮಯ್ಯ ಬಯಸಿದರೆ ಚಾಮರಾಜಪೇಟೆ ಕ್ಷೇತ್ರವನ್ನೇ ಬಿಟ್ಟುಕೊಡುತ್ತೇನೆ ಎಂದು ಹೇಳಿಕೆ ನೀಡಿದ್ದ ಜಮೀರ್ ಈಗಿನ ಮಾತುಗಳಲ್ಲಿ ಬಣ ಬದಲಿಸಿರುವ ಸೂಕ್ಷ್ಮತೆ ಕಾಣುತ್ತದೆ. ಜೆಡಿಎಸ್ ನನ್ನ ತವರು ಮನೆ, ದೇವೇಗೌಡರು ನಮ್ಮ ದೇವರಿದ್ದಂಗೆ ಎಂದು ಡೈಲಾಗ್ ಬಿಡುತ್ತಿದ್ದ ಜಮೀರ್ ಜೆಡಿಎಸ್ ತೊರೆಯಲಿಲ್ಲವೇ ಕುಮಾರಣ್ಣನ ಕೂಸು ಎಂದು ಹೇಳಿಕೊಂಡಿದ್ದ ಜಮೀರ್ ಪದೇ ಪದೇ ಕುಮಾರಸ್ವಾಮಿ ವಿರುದ್ಧ ಬೇಕಾಬಿಟ್ಟಿ ಅರೋಪ ಮಾಡಿ ಡೈಲಾಗ್ ಹೊಡೆಯಲಿಲ್ಲವೇ? ಅಂತೂ ಸಿದ್ದು ಮೇಲಿನ ಜಮೀರ್ ಮುನಿಸನ್ನು ಬಣ ರಾಜಕೀಯಕ್ಕೆ ಬಳಕೆ ಆಯಿತಾ? ಭವಿಷ್ಯದ ಕೈ ಸಿಎಂ ಪಟ್ಟಕ್ಕಾಗಿ ನಡೆಯುತ್ತಿರುವ ಬಣ ರಾಜಕೀಯ ಮತ್ತೆ ಶುರುವಾಯಿತೇ? ಈ ಬಾರಿಯ ಬಣ ರಾಜಕೀಯಕ್ಕೆ ಜಮೀರ್ ಬೆಂಬಲಿಗರ ಅಸ್ತ್ರ ಪ್ರಯೋಗ ಮಾಡಲಾಯಿತೇ ಎಂಬ ಲೆಕ್ಕಾಚಾರಗಳು ನಡೆಯುತ್ತಲೇ ಇವೆ. ಆದರೆ, ಸಿದ್ದು ಮತ್ತೆ ಸಮಯ ನೋಡಿ ಫೀಲ್ಡಿಗೆ ಇಳಿದು ಘರ್ಜಿಸಿದೇ ಇರುವರೇ? ಎಲ್ಲದಕ್ಕೂ ಕಾಲವೇ ಉತ್ತರ ನೀಡಲಿದೆ.

English summary
Zameer Ahmed Khan Supporters Make Disruption to Siddaramaiah Speech during Minority President Oath Program. Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X