ಸರ್ಕಾರದ ಉದ್ಯೋಗ ಮೇಳ: ಭಾಗವಹಿಸಿದ್ದು 44,000 ಮಂದಿ, ಸ್ಥಳದಲ್ಲೇ ಕೆಲಸ ಸಿಕ್ಕಿದ್ದು 9,000 ಮಂದಿಗೆ!
ಬೆಂಗಳೂರು, ಫೆಬ್ರವರಿ.29: ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಬೃಹತ್ ಉದ್ಯೋಗ ಮೇಳ ಯುವ ಸಮೃದ್ಧಿ ಸಮ್ಮೇಳನ 2024 ಯಶಸ್ವಿಯಾಗಿದೆ ಎಂದು ಕರ್ನಾಟಕ ಸರ್ಕಾರ ಹೇಳಿಕೊಂಡಿದೆ. ಆದರೆ, ಈ ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದ 44,527 ಅಭ್ಯರ್ಥಿಗಳ ಪೈಕಿ ಕೆಲಸ ಸಿಕ್ಕಿರುವುದು ಕೇವಲ 9,654 ಅಭ್ಯರ್ಥಿಗಳಿಗೆ!.
ಹೌದು, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಪ್ರಕಾರ ಅರಮನೆ ಮೈದಾನದಲ್ಲಿ ನಡೆದ ಎರಡು ದಿನಗಳ ಉದ್ಯೋಗ ಮೇಳದ ಕೊನೆಯಲ್ಲಿ ಕೇವಲ 9,654 ಅಭ್ಯರ್ಥಿಗಳಿಗೆ ಆಫರ್ ಲೆಟರ್ ನೀಡಲಾಗಿದೆ. ಮುಂದಿನ ಸುತ್ತಿನ ಸಂದರ್ಶನಕ್ಕೆ 16,865 ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದೆ. 2,547 ಅಭ್ಯರ್ಥಿಗಳನ್ನು ತಿರಸ್ಕರಿಸಲಾಗಿದೆ. 15,000 ಕ್ಕೂ ಹೆಚ್ಚು ಅಭ್ಯರ್ಥಿಗಳು ಉದ್ಯೋಗದಾತರಿಂದ ತಮ್ಮ ಉದ್ಯೋಗದ ದೃಢೀಕರಣಕ್ಕಾಗಿ ಕಾಯುತ್ತಿದ್ದಾರೆ.

ಉದ್ಯೋಗ ಮೇಳಕ್ಕೆ ಒಟ್ಟು 86,451 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದು ಅವರಲ್ಲಿ 53,915 ಪುರುಷರು ಮತ್ತು 32,494 ಮಹಿಳೆಯರು ಇದ್ದಾರೆ. 86,000 ಮಂದಿ ನೋಂದಣಿ ಮಾಡಿಕೊಂಡಿದ್ದು, ಇದರಲ್ಲಿ ಪ್ರಮುಖ ಅಭ್ಯರ್ಥಿಗಳು ಬೆಂಗಳೂರು ನಗರದಿಂದ ಬಂದವರು 18,644 ಮಂದಿ. ಎರಡನೇ ಸ್ಥಾನದಲ್ಲಿ ಧಾರವಾಡ (5802), ಬಳ್ಳಾರಿ (5229), ಕಲಬುರ್ಗಿ (3396) ಮತ್ತು ತುಮಕೂರು (3385), ಯಾದಗಿರಿ (866), ಉಡುಪಿ (1129) ಮತ್ತು ಚಾಮರಾಜನಗರ (1214) ಜಿಲ್ಲೆಗಳಿಂದ ಅಭ್ಯರ್ಥಿಗಳು ನೊಂದಣಿ ಮಾಡಿಕೊಂಡಿದ್ದರು.
ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಪ್ರಕಾರ, ನೋಂದಾಯಿಸಿದ ಅಭ್ಯರ್ಥಿಗಳಲ್ಲಿ 23,000 ಮಂದಿ ಪದವಿಪೂರ್ವ ವಿದ್ಯಾರ್ಥಿಗಳು, 11,809 ಮಂದಿ ತಮ್ಮ ಸ್ನಾತಕೋತ್ತರ ಪದವಿಗಳನ್ನು ಪೂರ್ಣಗೊಳಿಸಿದ್ದಾರೆ. 10,080 ತಮ್ಮ ಪಿಯುಸಿ/ಮಧ್ಯಂತರ ಹಂತಗಳನ್ನು ಪೂರ್ಣಗೊಳಿಸಿದ್ದಾರೆ ಮತ್ತು 19,721 ಅಭ್ಯರ್ಥಿಗಳು ಬಿ ಟೆಕ್/ಬಿಇ ವಿದ್ಯಾರ್ಥಿಗಳು.
ಇನ್ನು, ಉದ್ಯೋಗ ಮೇಳದಲ್ಲಿ ಭಾಗವಹಿಸಿದ 598 ಕಂಪನಿಗಳ ಪೈಕಿ 26 ಕಂಪನಿಗಳು ಏರೋಸ್ಪೇಸ್ ಮತ್ತು ವಾಯುಯಾನ ವಲಯದಿಂದ ಬಂದಿದ್ದವು. 80 ಕಂಪನಿಗಳು ಐಟಿ-ಐಟಿಇಎಸ್ ವಿಭಾಗದಿಂದ, 91 ಬ್ಯಾಂಕಿಂಗ್ ಹಣಕಾಸು ಸೇವೆಗಳು ಮತ್ತು ವಿಮಾ ವಲಯದಿಂದ, 59 ಉತ್ಪಾದನಾ ವಲಯದಿಂದ ಮತ್ತು 74 ಆಟೋಮೋಟಿವ್ ವಲಯದಿಂದ ಬಂದಿದ್ದವು.

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಶರಣಪ್ರಕಾಶ ಪಾಟೀಲ್ ಮಾತನಾಡಿ, "ಕಲಬುರಗಿ, ಬೆಳಗಾವಿ ಮತ್ತು ಮೈಸೂರಿನಲ್ಲಿ ಉದ್ಯೋಗ ಮೇಳ ನಡೆಸಲು ಸಿದ್ಧತೆ ನಡೆದಿದೆ. ಉದ್ಯೋಗಾಕಾಂಕ್ಷಿಗಳಿಗೆ ಕಲ್ಯಾಣ ಕರ್ನಾಟಕ ಪ್ರದೇಶದ ಕೊಪ್ಪಳ ಮತ್ತು ಮೈಸೂರಿನಲ್ಲಿ ಕೌಶಲ್ಯ ಶಿಕ್ಷಣ ಕೇಂದ್ರಗಳನ್ನು ಸ್ಥಾಪಿಸುತ್ತೇವೆ. ಉದ್ಯೋಗ ಆಧಾರಿತ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ 25,000 ಕ್ಕೂ ಹೆಚ್ಚು ಯುವಕರಿಗೆ ಉದ್ಯೋಗ ನೀಡಲು ನಮ್ಮ ಇಲಾಖೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ" ಎಂದಿದ್ದಾರೆ.
ಕೇರಳ ಸರ್ಕಾರದ ಯೋಜನೆಗಳಿಂದ ಪ್ರೇರಿತರಾದ ಸಚಿವ ಶರಣಪ್ರಕಾಶ ಪಾಟೀಲ್, ಕರ್ನಾಟಕವು ಕೇರಳ ಸರ್ಕಾರ ಕೈಗೊಳ್ಳುತ್ತಿರುವ ಸಾಗರೋತ್ತರ ಅಭಿವೃದ್ಧಿ ಮತ್ತು ಉದ್ಯೋಗ ಉತ್ತೇಜನಾ ಕನ್ಸಲ್ಟೆಂಟ್ಸ್ ಲಿಮಿಟೆಡ್ (ODEPC) ಮಾದರಿಯಲ್ಲಿ ಕಂಪನಿಯನ್ನು ಪ್ರಾರಂಭಿಸುತ್ತದೆ ಎಂದು ಹೇಳಿದ್ದಾರೆ.
"ಅಗತ್ಯವಿರುವ ಮಾನವ ಸಂಪನ್ಮೂಲಗಳನ್ನು ಹುಡುಕಲು ಬಹುರಾಷ್ಟ್ರೀಯ ಕಂಪನಿಗಳಿಗೆ ಅನುಕೂಲವಾಗುವಂತೆ ರಾಜ್ಯ ಸರ್ಕಾರವು ಕೇರಳ ಮಾದರಿಯಂತೆ ಸಾಗರೋತ್ತರ ಉದ್ಯೋಗ ಪ್ರಚಾರ ಕಂಪನಿಯನ್ನು ಪ್ರಾರಂಭಿಸುತ್ತದೆ. ಈ ಸಂಸ್ಥೆಯು ಎಂಜಿನಿಯರಿಂಗ್, ಡಿಪ್ಲೊಮಾ, ಐಟಿಐ ಮತ್ತು ಇತರ ಉದ್ಯೋಗ ಆಧಾರಿತ ಕೋರ್ಸ್‌ಗಳನ್ನು ಪೂರ್ಣಗೊಳಿಸಿದವರಿಗೆ ಮಾಹಿತಿಯನ್ನು ನೀಡುತ್ತದೆ. 49 ಕಂಪನಿಗಳು ಈಗಾಗಲೇ ಆಸಕ್ತಿ ತೋರಿಸಿವೆ. 5,000 ಉದ್ಯೋಗಾಕಾಂಕ್ಷಿಗಳಿಗೆ ತರಬೇತಿ ನೀಡಲು ಐಬಿಎಂ ಮುಂದೆ ಬಂದಿದೆ" ಎಂದಿದ್ದಾರೆ.












Click it and Unblock the Notifications