YouTube ಬಿಟ್ಟು ಓದು ಎಂದಿದ್ದ ಅಪ್ಪ-ಅಮ್ಮನಿಗೆ 15 ಲಕ್ಷದ ಕಾರು ಗಿಫ್ಟ್ ನೀಡಿದ ಯೂಟ್ಯೂಬರ್
ಇಂದಿನ ಡಿಜಿಟಲ್ ಯುಗದಲ್ಲಿ ಯುವಜನತೆ ಒಂದೇ ಕ್ಷೇತ್ರಕ್ಕೆ ಸೀಮಿತವಾಗದೆ, ತಮಗೆ ಆಸಕ್ತಿ ಇರುವ ಹೊಸ ಹೊಸ ಕ್ಷೇತ್ರಗಳಲ್ಲಿ ತಮ್ಮ ಭವಿಷ್ಯವನ್ನ ಕಂಡುಕೊಳ್ಳುತ್ತಿದ್ದಾರೆ. ಆದರೆ, ಸಾಂಪ್ರದಾಯಿಕ ಉದ್ಯೋಗಗಳನ್ನ ಮೀರಿ ಡಿಜಿಟಲ್ ಕಂಟೆಂಟ್ ಕ್ರಿಯೇಷನ್‌ನಂತಹ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡಾಗ ಪೋಷಕರಿಗೆ ಆತಂಕವಾಗುವುದು ಸಹಜ.
ಪ್ರತಿಯೊಬ್ಬ ಪೋಷಕರೂ ತಮ್ಮ ಮಕ್ಕಳು ಚೆನ್ನಾಗಿ ಓದಿ, ಒಂದು ಒಳ್ಳೆಯ ಕೆಲಸ ಗಿಟ್ಟಿಸಿಕೊಂಡು ಜೀವನದಲ್ಲಿ ನೆಲೆಗೊಳ್ಳಬೇಕು ಎಂದು ಬಯಸುತ್ತಾರೆ. ಅದರಂತೆ ಈ ಯುವಕನಿಗೂ ಆತನ ಪೋಷಕರು "ಯೂಟ್ಯೂಬ್ ವಿಡಿಯೋ ಮಾಡುವುದನ್ನು ಬಿಟ್ಟು, ನಿನ್ನ ಓದಿನ ಕಡೆ ಗಮನಹರಿಸು" ಎಂದು ಬುದ್ಧಿವಾದ ಹೇಳಿದ್ದರು.

ಆದರೆ, ಅದೇ ಮಗ ಇದೀಗ ತನ್ನ ಕಠಿಣ ಪರಿಶ್ರಮದಿಂದ ಅದೇ ಯೂಟ್ಯೂಬ್‌ನಲ್ಲಿ ದೊಡ್ಡ ಯಶಸ್ಸು ಸಾಧಿಸಿದ್ದಾನೆ. ಕೇವಲ ಯಶಸ್ಸು ಮಾತ್ರವಲ್ಲದೆ, ತನ್ನ ಪೋಷಕರಿಗೆ ಅಚ್ಚರಿಯ ಉಡುಗೊರೆಯೊಂದನ್ನ ಸಹ ನೀಡಿ ಅವರ ಕಣ್ಣಲ್ಲಿ ಆನಂದಭಾಷ್ಪ ತರಿಸಿದ್ದಾನೆ.
ಹೌದು, ಸುಮಾರು 9 ಲಕ್ಷ (900K) ಸಬ್‌ಸ್ಕ್ರೈಬರ್‌ಗಳನ್ನ ಹೊಂದಿರುವ ಈ ಯೂಟ್ಯೂಬರ್, ಎರಡು ದಿನಗಳ ಹಿಂದೆಯಷ್ಟೇ ತನ್ನ ತಂದೆ-ತಾಯಿಗೆ ಐಷಾರಾಮಿ ಕಾರೊಂದನ್ನ ಉಡುಗೊರೆಯಾಗಿ ನೀಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.
ತಂದೆ ತಾಯಿಗೆ 15 ಲಕ್ಷದ ಕಿಯಾ ಸೆಲ್ಟೋಸ್ ಕಾರು ಗಿಫ್ಟ್
ಎರಡು ದಿನಗಳ ಹಿಂದೆ, ಈ ಯೂಟ್ಯೂಬರ್ ಮಗ ತನ್ನ ಪೋಷಕರನ್ನ ಕಾರು ಶೋರೂಮ್‌ಗೆ ಕರೆದುಕೊಂಡು ಹೋಗಿದ್ದಾನೆ. ಆದರೆ, ಮುಂದಿನ ಕೆಲವೇ ನಿಮಿಷಗಳಲ್ಲಿ ಅಲ್ಲಿ ಏನಾಗಲಿದೆ ಎಂಬ ಬಗ್ಗೆ ಆತನ ಪೋಷಕರಿಗೆ ಯಾವುದೇ ಸುಳಿವು ಇರಲಿಲ್ಲ. ಇದು ಕೇವಲ ಸಾಮಾನ್ಯ ಭೇಟಿ ಎಂದುಕೊಂಡಿದ್ದ ಪೋಷಕರಿಗೆ, ಮಗ ತಮಗಾಗಿಯೇ ಬರೋಬ್ಬರಿ 15 ಲಕ್ಷ ರೂಪಾಯಿ ಮೌಲ್ಯದ ಕಿಯಾ ಸೆಲ್ಟೋಸ್ ಕಾರನ್ನು ಖರೀದಿಸಿದ್ದಾನೆ ಎಂದು ತಿಳಿದಾಗ ಅವರ ಅಚ್ಚರಿಗೆ ಪಾರವೇ ಇರಲಿಲ್ಲ.
ವಿಶೇಷವೆಂದರೆ, ಈ ಐಷಾರಾಮಿ ಕಾರುನ್ನು ಆತ ತನ್ನ ಯೂಟ್ಯೂಬ್ ವಿಡಿಯೋಗಳ ಮೂಲಕ ಸಂಪಾದಿಸಿದ ಹಣದಿಂದಲೇ ಖರೀದಿಸಿದ್ದಾನೆ. ತನ್ನ ಸ್ವಂತ ಸಂಪಾದನೆಯಿಂದ ಪೋಷಕರಿಗೆ ಇಷ್ಟು ದೊಡ್ಡ ಉಡುಗೊರೆ ನೀಡಿದ್ದು ಆತನ ಶ್ರದ್ಧೆ ಹಾಗೂ ಪರಿಶ್ರಮಕ್ಕೆ ಸಿಕ್ಕ ದೊಡ್ಡ ಪ್ರತಿಫಲವಾಗಿದೆ.
ಪೋಷಕರಿಗೆ ಹೆಮ್ಮೆಯ ಕ್ಷಣ
ಯಾವ ಮಗನ ಭವಿಷ್ಯದ ಬಗ್ಗೆ ಪೋಷಕರು ಒಂದು ಕಾಲದಲ್ಲಿ ಹೆಚ್ಚು ಚಿಂತಿತರಾಗಿದ್ದರೋ, ಅದೇ ಮಗ ಇಂದು ಅವರಿಗೆ ಹೆಮ್ಮೆ ಪಡುವಂತೆ ಮಾಡಿದ್ದಾನೆ. ಸಮಾಜದಲ್ಲಿ ಯೂಟ್ಯೂಬ್ ನಲ್ಲಿ ವಿಡಿಯೋ ಮಾಡುವುದು ಒಂದು ವೃತ್ತಿಯೇ ಅಲ್ಲ ಎಂಬ ಭಾವನೆ ಇಂದಿಗೂ ಹಲವರಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ವಿಮರ್ಶೆಗಳನ್ನ ಮೆಟ್ಟಿನಿಂತು, ಕಂಟೆಂಟ್ ಕ್ರಿಯೇಷನ್ ಮೂಲಕವೇ ಲಕ್ಷಾಂತರ ಜನರ ಮನಸ್ಸು ಗೆದ್ದಿರುವುದು ಸಾಮಾನ್ಯ ಸಾಧನೆಯಲ್ಲ.
ಶೋರೂಮ್‌ನಲ್ಲಿ ಹೊಸ ಕಾರಿನ ಕೀಲಿಕೈಯನ್ನು ಪೋಷಕರ ಕೈಗಿಡುತ್ತಿದ್ದಂತೆ ಅವರ ಕಣ್ಣುಗಳು ಆನಂದಭಾಷ್ಪದಿಂದ ತುಂಬಿದ್ದವು. ಮಗನ ಈ ಸಾಧನೆ ಮತ್ತು ಆತನ ಮೇಲಿದ್ದ ನಂಬಿಕೆಗೆ ಸಿಕ್ಕ ಈ ಪ್ರತಿಫಲ ಅವರ ಎಲ್ಲಾ ಆತಂಕಗಳನ್ನು ದೂರ ಮಾಡಿದೆ.
ಯುವಜನತೆಗೆ ಸ್ಫೂರ್ತಿ
ನಿಜವಾದ ಯಶಸ್ಸು ಎಂದರೆ ಏನು ಎಂಬುದಕ್ಕೆ ಈ ಘಟನೆ ಒಂದು ಅತ್ಯುತ್ತಮ ಉದಾಹರಣೆ. ಏಕೆಂದರೆ ಕೇವಲ ಕೋಟಿಗಟ್ಟಲೆ ಹಣ ಸಂಪಾದನೆ ಮಾಡುವುದಷ್ಟೇ ಯಶಸ್ಸಲ್ಲ; ನಮ್ಮ ಕಠಿಣ ಪರಿಶ್ರಮದಿಂದ ಸಿಗುವ ಪ್ರತಿಫಲವು ಮೊಟ್ಟಮೊದಲ ಬಾರಿಗೆ ನಮ್ಮ ಪೋಷಕರ ಮುಖದಲ್ಲಿ ಮಂದಹಾಸ ಮೂಡಿಸಿದಾಗ ಮಾತ್ರ ಅದು ನಿಜವಾದ ಯಶಸ್ಸು ಎನಿಸಿಕೊಳ್ಳುತ್ತದೆ.
ತನ್ನಿಷ್ಟದ ಕ್ಷೇತ್ರದಲ್ಲಿ ಶ್ರದ್ಧೆಯಿಂದ ಕೆಲಸ ಮಾಡಿ, ಪೋಷಕರ ಕನಸುಗಳನ್ನ ನನಸು ಮಾಡಿದ ಈ ಯೂಟ್ಯೂಬರ್‌ನ ಕಥೆ ಇಂದು ತಮ್ಮ ಕನಸುಗಳನ್ನ ಬೆನ್ನಟ್ಟುತ್ತಿರುವ ಅನೇಕ ಯುವಜನತೆಗೆ ಸ್ಫೂರ್ತಿಯಾಗಿದೆ. ಯಾವುದೇ ಕ್ಷೇತ್ರವಾದರೂ, ಅದರಲ್ಲಿ ಸಂಪೂರ್ಣ ಶ್ರಮ ಹಾಗೂ ಪ್ರಾಮಾಣಿಕತೆ ಇದ್ದರೆ ಖಂಡಿತವಾಗಿಯೂ ಯಶಸ್ಸು ಒಲಿಯುತ್ತದೆ.


Click it and Unblock the Notifications
