Breaking; ಮಂಡ್ಯದ ಕುಂಭಮೇಳ, ಯೋಗಿ ಆದಿತ್ಯನಾಥ್ ಆಗಮಿಸಲ್ಲ
ಬೆಂಗಳೂರು, ಅಕ್ಟೋಬರ್ 16; ಮಂಡ್ಯ ಜಿಲ್ಲೆಯ ಕೆ. ಆರ್. ಪೇಟೆಯ ಅಂಬಿಗರಹಳ್ಳಿಯಲ್ಲಿ ಅಕ್ಟೋಬರ್ 13 ರಿಂದ 16ರ ತನಕ ಕುಂಭಮೇಳ ನಡೆಯುತ್ತಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕುಂಭಮೇಳದಲ್ಲಿ ಭಾಗವಹಿಸುತ್ತಿಲ್ಲ.
ರಾಜ್ಯಸಭಾ ಸದಸ್ಯ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಶುಕ್ರವಾರ ಶ್ರೀ ಶ್ರೀ ಶ್ರೀ ಮಲೈ ಮಹದೇಶ್ವರ ಮಹಾಕುಂಭಮೇಳ ಮಹೋತ್ಸವ ಉದ್ಘಾಟನೆ ಮಾಡಿದ್ದಾರೆ. ವಿವಿಧ ಕಾರ್ಯಕ್ರಮಗಳು ಕುಂಭಮೇಳದ ಅಂಗವಾಗಿ ನಡೆಯುತ್ತಿವೆ.
ಮಹಾಕುಂಭಮೇಳದಲ್ಲಿ ಪಾಲ್ಗೊಳ್ಳುವಂತೆ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ. ನಾರಾಯಣಗೌಡ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಹ್ವಾನಿಸಿದ್ದರು. ಅಕ್ಟೋಬರ್ 16ರಂದು ಅವರ ಭೇಟಿಗೆ ದಿನಾಂಕ ನಿಗದಿಯಾಗಿತ್ತು.

ಆದರೆ ಭಾನುವಾರ ಯೋಗಿ ಆದಿತ್ಯನಾಥ್ ಮಹಾಕುಂಭಮೇಳದಲ್ಲಿ ಪಾಳ್ಗೊಳ್ಳುತ್ತಿಲ್ಲ. ಈ ಕುರಿತು ಅವರು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪತ್ರವನ್ನು ಬರೆದಿದ್ದಾರೆ.
ಉತ್ತರ ಪ್ರದೇಶದಲ್ಲಿ ನಾಲ್ಕು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಯೋಗಿ ಆದಿತ್ಯನಾಥ್ ಪ್ರವಾಹ, ರಕ್ಷಣಾ ಕಾರ್ಯಾಚರಣೆಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಅವರು ಮಹಾಕುಂಭಮೇಳದಲ್ಲಿ ಪಾಲ್ಗೊಳ್ಳುತ್ತಿಲ್ಲ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಬರೆದ ಪತ್ರದಲ್ಲಿ ಯೋಗಿ ಆದಿತ್ಯನಾಥ್ ಈ ಕುರಿತು ವಿವರಣೆ ನೀಡಿದ್ದಾರೆ. ಶನಿವಾರ ಬೆಳಗ್ಗೆಯೇ ಭಾನುವಾರ ಯೋಗಿ ಆದಿತ್ಯನಾಥ್ ಆಗಮಿಸುವುದಿಲ್ಲ ಎಂಬ ಸುದ್ದಿಗಳು ಹಬ್ಬಿತ್ತು. ಮುಖ್ಯಮಂತ್ರಿಗಳಿಗೆ ಪತ್ರ ಬರೆದ ಬಳಿಕ ಅದು ಖಚಿತವಾಗಿದೆ.
ಶುಕ್ರವಾರ ಶ್ರೀ ಶ್ರೀ ಶ್ರೀ ಮಲೈ ಮಹದೇಶ್ವರ ಮಹಾ ಕುಂಭಮೇಳ ಮಹೋತ್ಸವ ಆರಂಭಗೊಂಡಿತ್ತು. ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷರು ಸ್ವಾಮಿ ಮುಕ್ತಿದಾನಂದ ಜೀ ಮಹಾರಾಜ್, ಕಾಗಿನೆಲೆ ಕನಕಗುರು ಪೀಠ ಶ್ರೀ ಶ್ರೀ ಶಿವಾನಂದಪುರಿ ಸ್ವಾಮೀಜಿ, ಬೇಬಿ ಮಠ ಮತ್ತು ಚಂದ್ರವನ ಆಶ್ರಮ ಶ್ರೀ ಶ್ರೀ ಡಾ.ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಸೇರಿದಂತೆ ಅನೇಕ ಸ್ವಾಮೀಜಿಗಳು ಪಾಲ್ಗೊಂಡಿದ್ದರು.
ಅಬಕಾರಿ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ, ರೇಷ್ಮೆ, ಯುವಸಬಲೀಕರಣ ಹಾಗೂ ಕ್ರೀಡಾ ಸಚಿವರಾದ ಡಾ. ನಾರಾಯಣಗೌಡ, ಉನ್ನತ ಶಿಕ್ಷಣ ಸಚಿವ ಡಾ. ಸಿ. ಎನ್ ಅಶ್ವಥ್ ನಾರಾಯಣ, ಮುಜರಾಯಿ ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಮುಂತಾದವರು ಭಾಗವಹಿಸಿದ್ದರು.
ಮಹಾಕುಂಭಮೇಳದ ಅಂಗವಾಗಿ ಶುಕ್ರವಾರ ಸಂಜೆ ಕೆ. ಆರ್. ಪೇಟೆಯ ತ್ರಿವೇಣಿ ಸಂಗಮದಲ್ಲಿ ವಿಶೇಷ ಗಂಗಾರತಿ ಆಯೋಜಿಸಲಾಗಿತ್ತು. ವಾರಾಣಾಸಿಯಿಂದ ಆಗಮಿಸಿದ್ದ ಗಂಗಾರತಿ ಮಾಡುವ ಆಗಮಿಕರು ಹೇಮಾವತಿ, ಲಕ್ಷ್ಮಣ ತೀರ್ಥ, ಕಾವೇರಿ ನದಿಯ ಸಂಗಮದಲ್ಲಿ ವಿಶೇಷವಾಗಿ ಗಂಗಾರತಿ ನೆರವೇರಿಸಿದ್ದರು.












Click it and Unblock the Notifications