ಮೋದಿಯ ಅನುಸರಿಸಿದ ಯಡಿಯೂರಪ್ಪ: ಬಜೆಟ್ ಗೆ ಸಲಹೆ ನೀಡಲು ಮನವಿ
ಬೆಂಗಳೂರು, ಜನವರಿ 09: ಕೇಂದ್ರ ಬಜೆಟ್‌ಗೆ ಸಲಹೆ ನೀಡುವಂತೆ ಪ್ರಧಾನಿ ಮೋದಿ ಅವರು ಮನವಿ ಮಾಡಿದ ಬೆನ್ನಲ್ಲೇ ಸಿಎಂ ಯಡಿಯೂರಪ್ಪ ಸಹ ರಾಜ್ಯ ಬಜೆಟ್‌ಗೆ ಸಲಹೆ ನೀಡಿರೆಂದು ಜನರಲ್ಲಿ ಮನವಿ ಮಾಡಿದ್ದಾರೆ.
ಮಾರ್ಚ್ 5 ರಂದು ಮಂಡಿಸಲಿರುವ ರಾಜ್ಯ ಬಜೆಟ್ ಅನ್ನು ಸಮಾಜದ ಎಲ್ಲಾ ವರ್ಗದ, ಸ್ತರದ ಹಾಗೂ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ಸಾಕಾರಕ್ಕೆ ಪೂರಕವಾಗಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದಿರುವ ಯಡಿಯೂರಪ್ಪ, ಇದಕ್ಕೆ ಜನರು ತಮ್ಮ ಸಲಹೆಗಳನ್ನು ನೀಡಬೇಕು ಎಂದು ಹೇಳಿದ್ದಾರೆ.
ಮುಖ್ಯಮಂತ್ರಿಗಳು ಈಗಾಗಲೇ ಇಲಾಖಾವಾರು ಪ್ರಮುಖರು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ಆರಂಭಿಸಿದ್ದಾರೆ. ರಾಜ್ಯ ಬಜೆಟ್ ಸರ್ವಸ್ಪರ್ಶಿಯಾಗುವಂತೆ ಮಾಡುವ ನಿಟ್ಟಿನಲ್ಲಿ ನಿರಂತರ ಚಿಂತನೆ ನಡೆಸಿರುವ ಮುಖ್ಯಮಂತ್ರಿಗಳು ವಿವಿಧ ಕ್ಷೇತ್ರಗಳಲ್ಲಿನ ಅವಶ್ಯಕತೆಗಳನ್ನು ಗಮನದಲ್ಲಿರಿಸಿ ಬಜೆಟ್ ರೂಪಿಸುವ ಆಶಯ ಹೊಂದಿದ್ದಾರೆ.

ಆದ್ದರಿಂದ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ರಾಜ್ಯ ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳು ಮತ್ತು ನೀಡಬೇಕಾದ ಆದ್ಯತೆ ಗಳನ್ನು ನೇರವಾಗಿ ಮುಖ್ಯಮಂತ್ರಿಗಳ ಗಮನಕ್ಕೆ ತರಬಹುದಾಗಿದೆ. ಇದಕ್ಕಾಗಿ ಮುಖ್ಯಮಂತ್ರಿ ಗಳ ರಾಜಕೀಯ ಕಾರ್ಯದರ್ಶಿಗಳು ವಿಶೇಷ ಮುತುವರ್ಜಿ ವಹಿಸಿ ಜನರ ಅಪೇಕ್ಷೆಗೆ ಪೂರಕವಾಗಿ ಸ್ಪಂದಿಸಲಿದ್ದಾರೆ.
ಆದ್ದರಿಂದ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯವಾಗಿರುವ ವ್ಯಕ್ತಿಗಳು ಹಾಗೂ ಸಂಘಟನೆಗಳು ತಮ್ಮ ಸಲಹೆಗಳನ್ನು ಶಂಕರಗೌಡ ಪಾಟೀಲ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಕೊಠಡಿ ಸಂಖ್ಯೆ 305, ಮೂರನೇ ಮಹಡಿ, ವಿಧಾನಸೌಧ, ಬೆಂಗಳೂರು ಇಲ್ಲಿಗೆ ಕಳುಹಿಸಬಹುದಾಗಿದೆ. ಜನವರಿ 31 ರ ಒಳಗಾಗಿ ಸಲಹೆಗಳು ವಿಳಾಸವನ್ನು ತಲುಪಬೇಕಾಗಿದೆ.












Click it and Unblock the Notifications