ವರಿಷ್ಠರ ಶಾಕ್ : ಬಿಎಸ್ವೈಗೆ ನೋ, ರಾಮದೇವ್ ಗೆ ಎಸ್
ನವದೆಹಲಿ, ಮಾ 22 : ಬೀದರ್ ಲೋಕಸಭಾ ಕ್ಷೇತ್ರಕ್ಕೆ ತನ್ನ ಪರಮಾಪ್ತ ಸೂರ್ಯಕಾಂತ ನಾಗಮಾರಪಲ್ಲಿಗೆ ಟಿಕೆಟ್ ನೀಡಬೇಕೆನ್ನುವ ಯಡಿಯೂರಪ್ಪ ಒತ್ತಡಕ್ಕೆ ವರಿಷ್ಠರು ಸೊಪ್ಪು ಹಾಕದೇ, ಯೋಗಗುರು ಬಾಬಾ ರಾಮದೇವ್ ಬೆಂಬಲಿಗ ಭಗವಂತ ಖೂಬಾಗೆ ಟಿಕೆಟ್ ನೀಡಿದ್ದಾರೆ.
ತನ್ನ ಮತ್ತಿಬ್ಬರು ಪರಮಾಪ್ತರಾದ ಬಸವರಾಜು ಮತ್ತು ಶೋಭಾ ಕರಂದ್ಲಾಜೆಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದ ಯಡಿಯೂರಪ್ಪ ಬೀದರ್ ಕ್ಷೇತ್ರದ ಅಭ್ಯರ್ಥಿಯ ವಿಚಾರದಲ್ಲಿ ಮಾತ್ರ ತೀವ್ರ ಹಿನ್ನಡೆ ಅನುಭವಿಸುವಂತಾಗಿದೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಸೂರ್ಯಕಾಂತ್ ನಾಗಮಾರಪಲ್ಲಿಗೆ ಟಿಕೆಟ್ ನೀಡಲೇ ಬೇಕೆಂದು ಪಟ್ಟು ಹಿಡಿದಿದ್ದ ಯಡಿಯೂರಪ್ಪ ಅವರಿಗೆ ವರಿಷ್ಠರು ಶಾಕ್ ನೀಡಿದ್ದಾರೆ. ಜೊತೆಗೆ ಗುರುಪಾದಪ್ಪ ನಾಗಮಾರಪಲ್ಲಿಗೆ ಟಿಕೆಟ್ ನೀಡಲು ಶಿಫಾರಸು ಮಾಡಿದ್ದ ರಾಜ್ಯ ಬಿಜೆಪಿ ಘಟಕಕ್ಕೂ ವರಿಷ್ಠರು ಶಾಕ್ ನೀಡಿದ್ದಾರೆ. (ಬೀದರ್ ನಿಂದ ಖೂಬಾಗೆ ಬಿಜೆಪಿ ಟಿಕೆಟ್)
ರಾಜ್ಯ ಬಿಜೆಪಿ ಘಟಕದ ಶಿಫಾರಸು ಪಟ್ಟಿಯಲ್ಲಿ ಭಗವಂತ ಖೂಬಾ ಅವರ ಹೆಸರೇ ಇರಲಿಲ್ಲ. ಕೊನೆಯ ಹಂತದವರೆಗೂ ಮತ್ತು ಆಯ್ಕೆ ಸಮಿತಿಯ ಸಭೆಯಲ್ಲೂ ಖೂಬಾ ಹೆಸರು ಪ್ರಸ್ತಾಪವಾಗಿರಲಿಲ್ಲ. ಆದರೆ, ಒಂದು ಕಡೆಯಿಂದ ಬಾಬಾ ರಾಮದೇವ್ ಕಡೆಯಿಂದ ಒತ್ತಡ ಹೇರುತ್ತಿದ್ದ ಖೂಬಾ ಕೊನೆಗೂ ಸೈಲೆಂಟ್ ಆಗಿ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಬೀದರ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿರುವ ಭಗವಂತ ಖೂಬಾ, ಬಾಬಾ ರಾಮದೇವ್ ಅವರ ಬೆಂಬಲಿಗ. ಇತ್ತ ಸೂರ್ಯಕಾಂತ, ಗುರುಪಾದಪ್ಪ ನಾಗಮಾರಪಲ್ಲಿ ಮತ್ತು ಪ್ರಕಾಶ್ ಖಂಡ್ರೆ ಟಿಕೆಟಿಗೆ ಹರಸಾಹಸ ಪಡುತ್ತಿದ್ದರೆ, ರಾಮದೇವ್ ಮೂಲಕ ಖೂಬಾ ನಿರಾಯಾಸವಾಗಿ ಟಿಕೆಟ್ ಪಡೆದುಕೊಂಡಿದ್ದಾರೆ.
ಸೂರ್ಯಕಾಂತ ಬೆಂಬಲಿಗರ ದಾಂಧಲೆ, ರಾಮದೇವ್ ಸಿಟ್ಟು ತಣ್ಣಗಾಗಿಸುವ ತಂತ್ರ. ಮುಂದೆ ಓದಿ..

ಕೆಜೆಪಿ ವಿಲೀನಕ್ಕೆ ವಿರೋಧ ವ್ಯಕ್ತ
ಕೆಜೆಪಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದ ಗುರುಪಾದಪ್ಪ ನಾಗಮಾರಪಲ್ಲಿ, ಪಕ್ಷವನ್ನು ಬಿಜೆಪಿ ಜೊತೆ ವಿಲೀನಗೊಳಿಸಲು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಯಡಿಯೂರಪ್ಪ ಒತ್ತಾಯಕ್ಕೂ ಮಣಿಯದೇ, ಸ್ವಲ್ಪ ದಿನ ರಾಜಕೀಯದಿಂದಲೇ ದೂರವಿದ್ದರು. ನಂತರ ಪುತ್ರ ಸೂರ್ಯಕಾಂತ ನಾಗಮಾರಪಲ್ಲಿಗೆ ಲೋಕಸಭಾ ಚುನಾವಣೆಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಯಡಿಯೂರಪ್ಪ ಭರವಸೆ ನೀಡಿದ ನಂತರ ತಣ್ಣಗಾಗಿದ್ದರು.

ರಾಜ್ಯ ಬಿಜೆಪಿ ಘಟಕದಲ್ಲಿ ಅಪಸ್ವರ
ಆದರೆ ಸೂರ್ಯಕಾಂತ ನಾಗಮಾರಪಲ್ಲಿಗೆ ಟಿಕೆಟ್ ನೀಡುವಂತೆ ಶಿಫಾರಸು ಮಾಡಲು ರಾಜ್ಯ ಬಿಜೆಪಿ ಘಟಕ ತಯಾರಿರಲಿಲ್ಲ. ಬದಲಿಗೆ ಹಿರಿಯ ಮುಖಂಡ ಗುರುಪಾದಪ್ಪ ನಾಗಮಾರಪಲ್ಲಿಗೆ ಟಿಕೆಟ್ ನೀಡುವಂತೆ ವರಿಷ್ಠರಿಗೆ ಶಿಫಾರಸು ಮಾಡಿತ್ತು. ಇದಕ್ಕೆ ವರಿಷ್ಠರ ಜೊತೆಗಿನ ಆಯ್ಕೆ ಸಮಿತಿಯ ಸಭೆಯಲ್ಲಿ ಸೂರ್ಯಕಾಂತಗೇ ಟಿಕೆಟ್ ನೀಡಬೇಕೆಂದು ಯಡಿಯೂರಪ್ಪ ಪಟ್ಟು ಹಿಡಿದಿದ್ದರು.

ವರಿಷ್ಠರ ಅಚ್ಚರಿಯ ನಡೆ
ಅಭ್ಯರ್ಥಿಗಳ ಆಯ್ಕೆಯ ವಿಚಾರದಲ್ಲಿ ರಾಜ್ಯ ಬಿಜೆಪಿ ಘಟಕದಲ್ಲಿ ಭಿನ್ನಮತ ಮತ್ತು ಗೊಂದಲ ಇರುವುದನ್ನು ಸೂಕ್ಷ್ಮವಾಗಿ ಗಮನಿಸಿದ ವರಿಷ್ಠರು ಇಬ್ಬರ ಒತ್ತಡಕ್ಕೂ ಮಣಿಯದೇ, ಬಾಬಾ ರಾಮದೇವ್ ಬೆಂಬಲಿತ ಅಭ್ಯರ್ಥಿ, ಬಿಇ ಪದವೀಧರ ಭಗವಂತ ಖೂಬಾಗೆ ಟಿಕೆಟ್ ನೀಡಿತು.

ಬಾಬಾ ರಾಮದೇವ್
ಬಾಬಾ ರಾಮದೇವ್ ತನ್ನ ಬೆಂಬಲಿಗ ನಿಶಿಕಾಂತ್ ಯಾದವ್ ಅವರಿಗೆ ಪಾಟಲೀಪುತ್ರ ಕ್ಷೇತ್ರದಿಂದ ಟಿಕೆಟ್ ನೀಡುವಂತೆ ಬಿಜೆಪಿ ವರಿಷ್ಠರನ್ನು ಕೇಳಿದ್ದರು. ಆದರೆ ಬಿಜೆಪಿ, ನಿಶಿಕಾಂತ್ ಅವರಿಗೆ ಟಿಕೆಟ್ ನೀಡಿರಲಿಲ್ಲ. ಇದರಿಂದ ಬಾಬಾ ಬಿಜೆಪಿ ಮೇಲೆ ಸಿಟ್ಟಾಗಿದ್ದರು. ಈಗ ಬಾಬಾ ರಾಮದೇವ್ ಅವರ ಮತ್ತೊಬ್ಬ ಬೆಂಬಲಿಗೆ ಭಗವಂತ ಖೂಬಾಗೆ ಟಿಕೆಟ್ ನೀಡುವ ಮೂಲಕ ಬಾಬಾ ಅವರನ್ನು ಸಮಾಧಾನ ಪಡಿಸುವ ತಂತ್ರ ಇದಾಗಿದೆ ಎನ್ನಲಾಗುತ್ತಿದೆ.

ಸೂರ್ಯಕಾಂತ ಬೆಂಬಲಿಗರ ದಾಂಧಲೆ
ಕೊನೆ ಕ್ಷಣದವರೆಗೂ ಟಿಕೆಟ್ ಲಭಿಸುವ ಗ್ಯಾರಂಟಿಯಲ್ಲಿದ್ದ ಸೂರ್ಯಕಾಂತ ಅವರಿಗೆ ವರಿಷ್ಠರ ನಿರ್ಧಾರದಿಂದ ತೀವ್ರ ನಿರಾಶೆಯಾಗಿದೆ. ಅವರ ಬೆಂಬಲಿಗರು ಬೀದರ್ ಜಿಲ್ಲಾ ಬಿಜೆಪಿ ಕಚೇರಿಯ ಮೇಲೆ ಕಲ್ಲು ತೂರಿ ತಮ್ಮ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ನನಗೆ ಟಿಕೆಟ್ ತಪ್ಪಿದರೆ ನೀವು ನರೇಂದ್ರ ಮೋದಿಗೆ ದ್ರೋಹ ಮಾಡಿದಂತಾಗುತ್ತದೆ ಎಂದು ಸೂರ್ಯಕಾಂತ, ಬಿಜೆಪಿ ವರಿಷ್ಠರಿಗೆ ಎಚ್ಚರಿಕೆ ನೀಡಿದ್ದಾರೆ.

ಜೆಡಿಎಸ್ ಗಾಳ
ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಟಿಕೆಟ್ ವಂಚಿತರಾದವರ ಮೇಲೆ ಕಣ್ಣಿಟ್ಟಿರುವ ಜೆಡಿಎಸ್, ಈಗ ಸೂರ್ಯಕಾಂತ್ ಅವರಿಗೆ ಬಲೆ ಬೀಸಿದೆ ಎನ್ನಲಾಗುತ್ತಿದೆ. ಬಿಜೆಪಿಯಿಂದ ಕೊನೆ ಕ್ಷಣದಲ್ಲಿ ಬಿಫಾರಂ ಬರದೇ ಇದ್ದಲ್ಲಿ ಸೂರ್ಯಕಾಂತ್ ಜೆಡಿಎಸ್ ಟಿಕೆಟಿನಿಂದ ಸ್ಪರ್ಧಿಸುವ ಸಾಧ್ಯತೆ ಇಲ್ಲದಿಲ್ಲ.












Click it and Unblock the Notifications