Karnataka Next CM: ಸಿದ್ದರಾಮಯ್ಯ ಬಳಿಕ ಇವರಿಗೆ ಸಿಎಂ ಸ್ಥಾನ: ಡಿಕೆಶಿಗೆ ಯತೀಂದ್ರ ಶಾಕ್
ರಾಜ್ಯ ಕಾಂಗ್ರೆಸ್‌ನಲ್ಲಿ ಕುರ್ಚಿ ಕದನ ಬೂದಿ ಮುಚ್ಚಿದ ಕೆಂಡದಂತಿದೆ. ಡಿ.ಕೆ.ಶಿವಕುಮಾರ್ ಅವರು ಕೂಡ ಮುಂದಿನ ಸಿಎಂ ನಾನೇ ಎನ್ನುವ ವಿಶ್ವಾಸದಲ್ಲಿದ್ದಾರೆ. ಡಿಕೆಶಿ ಮಾತ್ರವಲ್ಲದೆ ಹಲವರು ಈ ಕುರ್ಚಿ ಮೇಲೆ ಕಣ್ಣಿಟ್ಟಿದ್ದಾರೆ. ಸಿದ್ದರಾಮಯ್ಯ ಅವರು ಪೂರ್ಣಾವಧಿ ಸಿಎಂ ನಾನೇ ಎಂದು ಘೋಷಿಸಿದ್ದಾರೆ. ಇದರ ನಡುವೆ ರಾಜ್ಯ ರಾಜಕಾರಣದಲ್ಲಿ ಅಚ್ಚರಿಯ ಬೆಳವಣಿಗೆ ನಡೆದಿದೆ. ಸಿದ್ದರಾಮಯ್ಯ ಪುತ್ರ ಯತೀಂದ್ರ ಅವರೇ ಮುಂದಿನ ಸಿಎಂ ಯಾರು? ಎಂದು ಪರೋಕ್ಷವಾಗಿ ಘೋಷಣೆ ಮಾಡಿದ್ದು, ಡಿಕೆ ಶಿವಕುಮಾರ್ ಅವರಿಗೆ ಶಾಕ್ ನೀಡಿದ್ದಾರೆ.
ಸದ್ಯ ಸಿಎಂ ಕುರ್ಚಿಗೆ ಕಾಂಗ್ರೆಸ್‌ನಲ್ಲಿ ಹಲವು ಆಕಾಂಕ್ಷಿಗಳಿದ್ದಾರೆ. ಈ ಪೈಕಿ ಡಿಕೆ ಶಿವಕುಮಾರ್, ಸತೀಶ್ ಜಾರಕಿಹೊಳಿ, ಜಿ.ಪರಮೇಶ್ವರ್, ಎಂಬಿ ಪಾಟೀಲ್ ಸೇರಿ ಹಲವರು ರೇಸ್‌ನಲ್ಲಿರುವುದು ಗೊತ್ತೇ ಇದೆ. ಆದರೆ ಡಿಕೆ ಶಿವಕುಮಾರ್ ಅವರು ಮುಂದೆ ಸಿಎಂ ಆಗೋದು ಫಿಕ್ಸ್ ಎಂಬ ಮಾತುಗಳು ಕೇಳಿಬಂದಿದ್ದವು. ಇದರ ನಡುವೆ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ಸಂಚಲನ ಸೃಷ್ಟಿಸಿದೆ.
ಇಂದು ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಯತೀಂದ್ರ ಈ ವಿಚಾರ ಪ್ರಸ್ತಾಪಿಸಿದ್ದಾರೆ. ಮುಂದಿನ ಸಿಎಂ ಯಾರಾಗುತ್ತಾರೆ? ಎಂಬುದನ್ನೂ ಪರೋಕ್ಷವಾಗಿ ಘೋಷಣೆ ಮಾಡಿದ್ದಾರೆ. "ನನ್ನ ತಂದೆ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಜೀವನದ ಅಂತಿಮ ಘಟ್ಟದಲ್ಲಿದ್ದಾರೆ. ಈ ಹಂತದಲ್ಲಿ ಅವರಿಗೆ ಬಲವಾದ ಸಿದ್ಧಾಂತ ಹಾಗೂ ಪ್ರಗತಿಪರ ಮನಸ್ಥಿತಿ ಇರುವ ನಾಯಕನ ಅಗತ್ಯವಿದೆ. ಅವರಿಗೆ ಸಿದ್ದರಾಮಯ್ಯ ಅವರು ಮಾರ್ಗದರ್ಶಕರಾಗಬಹುದು" ಎಂದಿದ್ದಾರೆ.

ಆ ಮನಸ್ಥಿತಿಯ ನಾಯಕನ ಅಗತ್ಯವಿದೆ
"ಸತೀಶ್ ಜಾರಕಿಹೊಳಿ ಅವರು ಕಾಂಗ್ರೆಸ್ ಪಕ್ಷದ ಸಿದ್ಧಾಂತವನ್ನು ಎತ್ತಿಹಿಡಿಯಬಲ್ಲ ಹಾಗೂ ಪಕ್ಷವನ್ನು ಮುನ್ನಡೆಸಬಲ್ಲ ವ್ಯಕ್ತಿ. ಸತೀಶ್ ಜಾರಕಿಹೊಳಿಯವರು ಆ ಜವಾಬ್ದಾರಿ ವಹಿಸಿಕೊಳ್ಳಲು ಸಮರ್ಥರು. ಕಾಂಗ್ರೆಸ್ ಪಕ್ಷದ ಸಿದ್ಧಾಂತದಲ್ಲಿ ನಂಬಿಕೆ ಇಟ್ಟುಕೊಂಡಿರುವ ಎಲ್ಲ ನಾಯಕರಿಗೆ ಅವರು ಮಾದರಿ, ನಮ್ಮನ್ನು ಅವರು ಮುನ್ನಡೆಸುವ ನಂಬಿಕೆ ಇದೆ. ಅಂತಹ ತತ್ವ ಹಾಗೂ ಬದ್ಧತೆ ಇರುವ ನಾಯಕರು ಸಿಗುವುದು ಅಪರೂಪ. ಅಂತಹ ಕೆಲಸವನ್ನು ಸತೀಶ್ ಜಾರಕಿಹೊಳಿ ಅವರು ಮಾಡುತ್ತಿದ್ದಾರೆ. ಅವರ ಕೆಲಸಗಳು ಇದೇ ರೀತಿ ಮುಂದುವರಿಯಲಿ" ಎಂದು ಯತೀಂದ್ರ ಹೇಳಿದ್ದಾರೆ.
ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಸಿಎಂ ಕುರ್ಚಿಯ ಅಧಿಕಾರದ ಒಪ್ಪಂದ ನಡೆದಿದೆ ಎಂಬ ಮಾತುಗಳು ಜೋರಾಗಿ ಕೇಳಿಬಂದಿದ್ದವು. ಹೈಕಮಾಂಡ್ ಸೂಚನೆ ಮೇರೆಗೆ ಯಾರೂ ಕೂಡ ಸಿಎಂ ಬದಲಾವಣೆ ವಿಚಾರ ಪ್ರಸ್ತಾಪ ಮಾಡಬಾರದು ಎಂದು ಖಡಕ್ ಆಗಿ ಹೇಳಿತ್ತು. ಹೀಗಾಗಿ ಸಿಎಂ ಕುರ್ಚಿ ಮೇಲೆ ಬಲವಾಗಿ ಕಣ್ಣಿಟ್ಟಿರುವ ಡಿಕೆ ಶಿವಕುಮಾರ್ ಅವರಿಗೆ ಯತೀಂದ್ರ ಶಾಕ್ ನೀಡಿದ್ದು, ಸತೀಶ್ ಜಾರಕಿಹೊಳಿ ಅವರೇ ಮುಂದಿನ ಸಿಎಂ ಎನ್ನುವ ಪರೋಕ್ಷ ಸಂದೇಶ ರವಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ.












Click it and Unblock the Notifications