1 ಕೋಟಿ ರುಪಾಯಿ ಮೌಲ್ಯದ ಕಾರು ಖರೀದಿಸಿದ್ರಾ ಸಿದ್ದರಾಮಯ್ಯ? ಇಲ್ಲಿದೆ ನಿಜವಾದ ಸಂಗತಿ
ಕರ್ನಾಟಕ ಸಿಎಂ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮುನ್ನವೇ 1 ಕೋಟಿ ರುಪಾಯಿ ಮೌಲ್ಯದ ಟೊಯೊಟಾ ವೆಲ್‌ಫೈರ್ ಐಷಾರಾಮಿ ಕಾರನ್ನು ಖರೀದಿಸಿದ್ದಾರೆ ಎಂದು ಭಾರಿ ಸುದ್ದಿಯಾಗಿತ್ತು. ಸಮಾಜವಾದಿ ಸಿದ್ದರಾಮಯ್ಯ ಅಧಿಕಾರಕ್ಕೆ ಬರುತ್ತಿದ್ದಂತೆ ಐಷಾರಾಮಿ ಕಾರನ್ನು ಖರೀದಿ ಮಾಡಿದ್ದಾರೆ ಎಂದು ಹಲವರು ಟೀಕೆ ಕೂಡ ಮಾಡಿದ್ದರು.
ವಿಡಿಯೋ ಮಾಡಿದ ವ್ಯಕ್ತಿ ಡ್ರೈವರ್ ಜೊತೆ ಮಾತನಾಡುತ್ತಾ "ನೂತನ ಸಿಎಂ ಅವರಿಗೆ ಕಾರು ಡೆಲಿವರಿ ಕೊಡಲು ಹೋಗ್ತಾ ಇದ್ದೀರಾ, ಸಿದ್ದರಾಮಯ್ಯ ಅವರನ್ನು ಮೀಟ್ ಮಾಡಿಕೊಂಡು ಬನ್ನಿ, ನಮ್ಮ ಕಡೆಯಿಂದ ಕೂಡ ಶುಭ ಹಾರೈಕೆ ತಿಳಿಸಿ" ಎಂದು ಹೇಳಿರುವುದನ್ನು ನೋಡಬಹುದು.

ಆದರೆ ಇದರ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಇದೆಲ್ಲಾ ಸುಳ್ಳು ಸುದ್ದಿ ಎಂದು ಹೇಳುವ ಮೂಲಕ, ವಿವಾದಕ್ಕೆ ಅಂತ್ಯ ಹಾಡಿದ್ದಾರೆ. ಯತೀಂದ್ರ ನೀಡಿದ ಸ್ಪಷ್ಟನೆಯೊಂದಿಗೆ ಸಿದ್ದರಾಮಯ್ಯ ಯಾವುದೇ ಐಷಾರಾಮಿ ಕಾರನ್ನು ಖರೀದಿ ಮಾಡಿಲ್ಲ ಎನ್ನುವ ವಿಚಾರ ಸ್ಪಷ್ಟವಾಗಿದೆ.
ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ ಬೆನ್ನಲ್ಲೇ ಹಲವರು ಸುಳ್ಳು ಸುದ್ದಿ ಹಬ್ಬಿಸುವವರ ಕಿಡಿ ಕಾರಿದ್ದಾರೆ. ಈ ರೀತಿ ಯಾವ ಆಧಾರ ಇಲ್ಲದೆ ಸುಳ್ಳು ಸುದ್ದಿ ಹಬ್ಬಿಸಿದರೆ ಕ್ರಮ ತೆಗೆದುಕೊಳ್ಳಬೇಕು, ಸಿದ್ದರಾಮಯ್ಯ ಅವರ ಹೆಸರು ಕೆಡಿಸಲು ಈ ರೀತಿ ಸುದ್ದಿ ಹಬ್ಬಿಸಲಾಗಿದೆ ಎಂದು ಟ್ವಿಟರ್ ನಲ್ಲಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಬಳಿ ಇದೆ ದುಬಾರಿ ಕಾರು
ಸಿದ್ದರಾಮಯ್ಯ ಬಳಿ ಒಂದೂವರೆ ಕೋಟಿ ಮೌಲ್ಯದ ಕಪ್ಪು ಬಣ್ಣದ ಬೆಂಜ್ ಕಾರು ಇದೆ. ಹೆಬ್ಬಾಳ ಶಾಸಕ ಬೈರತಿ ಸುರೇಶ್ ಸಿದ್ದರಾಮಯ್ಯ ಅವರಿಗೆ 2019ರಲ್ಲಿ ದುಬಾರಿ ಬೆಲೆಯ ಐಷಾರಾಮಿ ಕಾರನ್ನು ಉಡುಗೊರೆಯನ್ನಾಗಿ ನೀಡಿದ್ದರು. ಸಿದ್ದರಾಮಯ್ಯ ನಿವಾಸ ಕಾವೇರಿಯಲ್ಲಿ ಕಾರನ್ನು ಹಸ್ತಾಂತರ ಮಾಡಲಾಗಿತ್ತು. ಇದೇ ಕಾರಿನಲ್ಲಿ ಅವರು ಮೊನ್ನೆ ಬೆಂಗಳೂರಿನಲ್ಲಿ ವಿಮಾನ ನಿಲ್ದಾಣದಿಂದ ತಮ್ಮ ನಿವಾಸಕ್ಕೆ ಆಗಮಿಸಿದ್ದರು. ಇದಕ್ಕೂ ಮುನ್ನ ಅಭಿಮಾನಿಯೊಬ್ಬರು 70 ಲಕ್ಷ ಬೆಲೆ ಬಾಳುವ ಹುಬ್ಲೊಟ್ ವಾಚ್ ಉಡುಗೊರೆಯಾಗಿ ನೀಡಿದ್ದು ಕೂಡ ವಿವಾದ ಸೃಷ್ಟಿಸಿತ್ತು.
ಪ್ರಮಾಣ ವಚನ ಸ್ವೀಕರಿಸಿದ ಸಿದ್ದರಾಮಯ್ಯ
ಮೇ 20 ರಂದು ಸಿದ್ದರಾಮಯ್ಯ ಕರ್ನಾಟಕದ 24ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಎರಡನೇ ಬಾರಿಗೆ ಅವರು ರಾಜ್ಯದ ಸಿಎಂ ಆಗಿದ್ದು, ಜನಪರ ಆಡಳಿತ ನೀಡುವ ಭರವಸೆ ನೀಡಿದ್ದಾರೆ. ಅಹಿಂದ ನಾಯಕನಿಗೆ ಪಕ್ಷಾತೀತವಾಗಿ ಎಲ್ಲರೂ ಅಭಿನಂದನೆ ಸಲ್ಲಿಸಿದ್ದಾರೆ.
ಸರ್ಕಾರ ರಚನೆಯಾದ ಮೊದಲನೇ ಕ್ಯಾಬಿನೇಟ್‌ನಲ್ಲೇ ಕಾಂಗ್ರೆಸ್ ನೀಡಿದ್ದ 5 ಗ್ಯಾರಂಟಿಗಳ ಜಾರಿಗೆ ಅನುಮೋದನೆ ನೀಡಲಾಗಿದೆ. ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಡಿಕೆ ಶಿವಕುಮಾರ್ ಕೂಡ ಜನರಿಗೆ ನೀಡಿದ ಆಶ್ವಾಸನೆಗಳನ್ನು ಈಡೇರಿಸುವ ಹೊಣೆ ನಮ್ಮ ಮೇಲಿದೆ ಎಂದು ಹೇಳಿದ್ದರು.












Click it and Unblock the Notifications