ಯಡಿಯೂರಪ್ಪ ವಿರುದ್ಧ ಪೋಕ್ಸೋ ದಾಖಲಿಸಿದ್ದ ಮಹಿಳೆ ಸಾವು
ಬೆಂಗಳೂರು, ಮೇ 27: ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ಬಿ. ಎಸ್. ಯಡಿಯೂರಪ್ಪ ವಿರುದ್ಧ ಲೈಂಗಿಕ ದೌರ್ಜನ್ಯದ ದೂರು ದಾಖಲಿಸಿದ್ದ ಮಹಿಳೆ ಸಾವನ್ನಪ್ಪಿದ್ದಾರೆ. ಈ ದೂರಿನ ಹಿನ್ನಲೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣದ ದಾಖಲಾಗಿತ್ತು, ಸಿಐಡಿ ಪ್ರಕರಣದ ತನಿಖೆ ನಡೆಸುತ್ತಿದೆ.
17 ವರ್ಷದ ತಮ್ಮ ಪುತ್ರಿ ಮೇಲೆ ಯಡಿಯೂರಪ್ಪ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಮಹಿಳೆ ಬೆಂಗಳೂರಿನ ಸದಾಶಿವ ನಗರ ಠಾಣೆಗೆ ದೂರು ನೀಡಿದ್ದರು. ದೂರು ಆಧರಿಸಿ ಮಾರ್ಚ್ 14ರಂದು ಯಡಿಯೂರಪ್ಪ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣದ ದಾಖಲು ಮಾಡಲಾಗಿತ್ತು.

ಯಡಿಯೂರಪ್ಪ ವಿರುದ್ಧ ದೂರು ನೀಡಿದ್ದ ಮಹಿಳೆ ಮೇ 26ರ ಭಾನುವಾರ ಬೆಂಗಳೂರಿನ ಹುಳಿಮಾವು ಪ್ರದೇಶದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಉಸಿರಾಟದ ತೊಂದರೆಯ ಕಾರಣ ಮಹಿಳೆ ಆಸ್ಪತ್ರೆಗೆ ಭೇಟಿ ನೀಡಿದ್ದರು.
53 ವರ್ಷದ ಮಹಿಳೆ ಚಿಕಿತ್ಸ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಪೊಲೀಸ್ ಇಲಾಖೆ ಮೂಲಗಳ ಮಾಹಿತಿ ಪ್ರಕಾರ ಮಹಿಳೆ ಶ್ವಾಸಕೋಶ ಕ್ಯಾನ್ಸರ್‌ನಿಂದ ಬಳಲುತ್ತಿದ್ದಳು. ಮಹಿಳೆಗೆ 17 ವರ್ಷದ ಪುತ್ರಿ ಇರುವುದು ಬಿಟ್ಟರೆ ಕುಟುಂಬದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಸಿಐಡಿ ತನಿಖೆ: ಸಹಾಯ ಕೇಳಲು ಹೋದಾಗ ಬಿ. ಎಸ್. ಯಡಿಯೂರಪ್ಪ ಡಾಲರ್ಸ್ ಕಾಲೋನಿ ನಿವಾಸದಲ್ಲಿ ತಮ್ಮ 17 ವರ್ಷದ ಪುತ್ರಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಮಹಿಳೆ ಸದಾಶಿವ ನಗರ ಠಾಣೆಗೆ ದೂರು ನೀಡಿದ್ದರು.
ಈ ದೂರು ಆಧರಿಸಿ ಮಾರ್ಚ್ 14ರಂದು ಯಡಿಯೂರಪ್ಪ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣದ ದಾಖಲು ಮಾಡಲಾಗಿತ್ತು. ಮಾರ್ಚ್ 15ರಂದು ಕರ್ನಾಟಕ ಸರ್ಕಾರ ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾವಣೆ ಮಾಡಿತ್ತು.
ಪ್ರಕರಣದ ತನಿಖೆ ಆರಂಭಿಸಿದ್ದ ಸಿಐಡಿ ಅಧಿಕಾರಿಗಳು ಮಹಿಳೆ ಮತ್ತು ಸಂತ್ರಸ್ತ ಬಾಲಕಿಯ ಹೇಳಿಕೆಯನ್ನು ಸಿಆರ್‌ಪಿಸಿಯ ಸೆಕ್ಷನ್ 164ರ ಅಡಿ ದಾಖಲಿಸಿಕೊಂಡಿದ್ದರು. ಬಿ. ಎಸ್. ಯಡಿಯೂರಪ್ಪ ಸಹ ಸಿಐಡಿ ಕಛೇರಿಗೆ ತೆರಳಿ ಧ್ವನಿಯ ಮಾದರಿಯನ್ನು ಪರೀಕ್ಷೆಗೆ ನೀಡಿದ್ದರು.
ಯಡಿಯೂರಪ್ಪ ಅವರ ಡಾಲರ್ಸ್ ಕಾಲೋನಿ ನಿವಾಸಕ್ಕೆ ಫೆಬ್ರವರಿ 2, 2024ರಂದು ಭೇಟಿ ನೀಡಿದಾಗ ದೌರ್ಜನ್ಯ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ರಾಜ್ಯದ ರಾಜಕೀಯ ವಲಯದಲ್ಲಿ ಈ ಪ್ರಕರಣದ ಚರ್ಚೆಗೆ ಕಾರಣವಾಗಿತ್ತು.
ಈ ದೂರಿನ ಕುರಿತು ಬಿ. ಎಸ್. ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದರು, "ಅನ್ಯಾಯವಾಗಿದೆ. ನ್ಯಾಯ ಕೊಡಿಸಿ ಎಂದು ತಾಯಿ, ಮಗಳು ಹಲವು ಸಲ ನನ್ನ ಬಳಿ ಬಂದಿದ್ದರು. ಅವರನ್ನು ಪೊಲೀಸ್ ಆಯುಕ್ತರ ಬಳಿ ಕಳಿಸಿಕೊಟ್ಟಿದ್ದೆ. ಆದಾದ ಮೇಲೆ ನನ್ನ ವಿರುದ್ಧ ಏನೇನೋ ಆರೋಪ ಮಾಡಿದರು" ಎಂದು ಹೇಳಿದ್ದರು.
ಮಾರ್ಚ್ 16ರಂದು ದೇಶದಲ್ಲಿ ಲೋಕಸಭೆ ಚುನಾವಣೆ ದಿನಾಂಕ ಘೋಷಣೆಗೊಂಡಿತು. ಯಡಿಯೂರಪ್ಪ ವಿರುದ್ಧದ ಪ್ರಕರಣವನ್ನು ಸರ್ಕಾರ ಸಿಐಡಿ ತನಿಖೆಗೆ ವಹಿಸಿತು.












Click it and Unblock the Notifications