ಯಾಸಿನ್ ಭಟ್ಕಳ್ ಜೊತೆ ಸಂಬಂಧವಿಲ್ಲ : ಯಶೋಧಾ

ಶನಿವಾರ ಉಡುಪಿಯ ಉಪ್ಪಿನಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಯಶೋಧಾ, "ಯಾಸೀನ್ ಭಟ್ಕಳ್ ಹಾಗೂ ನನಗೆ ಯಾವುದೇ ಸಂಬಂಧವಿಲ್ಲ. ನನ್ನ ಮೇಲೆ ವೈಯಕ್ತಿಕ ದ್ವೇಷ ಸಾಧಿಸಲು ನನ್ನ ಅತ್ತೆ, ಮಾವ, ನಾದಿನಿ ಇಂತಹ ಆರೋಪ ಮಾಡುತ್ತಿದ್ದಾರೆ" ಎಂದು ಹೇಳಿದ್ದಾರೆ. ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ ಎಂದು ಹೇಳಿದ್ದಾರೆ. [ಯಾರು ಯಾಸಿನ್ ಭಟ್ಕಳ?]
ಯಶೋಧಾ ತೀರ್ಥಹಳ್ಳಿಯ ನಿವಾಸಿಯಾದ ಮಂಜುನಾಥ್ ಅವರನ್ನು ವಿವಾಹವಾಗಿದ್ದರು. ಕೆಲವು ತಿಂಗಳ ಹಿಂದೆ ನೇಪಾಳಗಡಿಯಲ್ಲಿ ಬಂಧಿತನಾದ ಇಂಡಿಯನ್ ಮುಜಾಹಿದ್ದೀನ್ ಸಹ ಸಂಸ್ಥಾಪಕ ಯಾಸಿನ್ ಭಟ್ಕಳ್ ತೀರ್ಥಹಳ್ಳಿಗೆ ಬಂದಿದ್ದ ಮತ್ತು ಮಂಜುನಾಥ್ ಅವರ ಮನೆಯಲ್ಲಿ 15 ದಿನ ವಾಸ್ತವ್ಯ ಹೂಡಿದ್ದ ಎಂಬ ಅಂಶಗಳು ಶುಕ್ರವಾರ ಬಹಿರಂಗವಾಗಿದ್ದವು.
ಯಾಸಿನ್ ಭಟ್ಕಳ್ ಮಂಜುನಾಥ್ ಅವರ ಮನೆಯಲ್ಲಿದ್ದಾಗಲೇ ಅವರು ಸಾವನ್ನಪ್ಪಿದ್ದರು. ನಂತರ ಯಶೋಧಾ ಯಾಸಿನ್ ಜೊತೆ ಓಡಿ ಹೋಗಿದ್ದಾಳೆ ಎಂದು ಮಂಜುನಾಥ್ ತಂದೆ-ತಾಯಿ ಶುಕ್ರವಾರ ಆರೋಪ ಮಾಡಿದ್ದರು. ಇಂತಹ ಆರೋಪ ಅಲ್ಲಗಳೆದಿರುವ ಯಶೋಧಾ ಯಾಸಿನ್ ಭಟ್ಕಳ್ ನೇಪಾಳದಲ್ಲಿ ಬಂಧಿತನಾದಾಗ ಮಾಧ್ಯಮಗಳಲ್ಲಿ ಅವರ ಚಿತ್ರನೋಡಿ ಇವನು ನಮ್ಮ ಮನೆಗೆ ಬಂದಿದ್ದ ಎಂದು ತಿಳಿಯಿತು.
ನನಗೆ ಯಾಸಿನ್ ಭಟ್ಕಳ್ ಜೊತೆ ಯಾವುದೇ ಸಂಪರ್ಕವಿಲ್ಲ, ನನ್ನ ಮೇಲೆ ದ್ವೇಷ ಸಾಧಿಸುತ್ತಿರುವ ಅತ್ತೆ, ಮಾವ ಹಾಗೂ ನಾದಿನಿಯರು ಈ ರೀತಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ಇದರಿಂದ ನನಗೆ ತುಂಬಾ ನೋವಾಗಿದೆ ಎಂದು ಯಶೋಧಾ ಸಷ್ಟನೆ ನೀಡಿದ್ದಾರೆ.
ಪತಿ ಮಂಜುನಾಥ್ ಮರಣದ ನಂತರ ನಾನು ಓಡಿಹೋಗಿಲ್ಲ. ನನ್ನ ಮೇಲೆ ಕೀಳುಮಟ್ಟದ ಆರೋಪ ಮಾಡಿದವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ. ನನಗೆ ಕಾನೂನಿನಲ್ಲಿ ನಂಬಿಕೆ ಇದೆ, ಸತ್ಯಕ್ಕೆ ಜಯ ಸಿಗುತ್ತೆ ಎಂದು ಯಶೋಧಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications